ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಾ ಸುಧೀಂದ್ರ


 ಸುಮಾ ಸುಧೀಂದ್ರ


ಸಂಗೀತ ಲೋಕದಲ್ಲಿ ಡಾ. ಸುಮಾ ಸುಧೀಂದ್ರ ಅವರದ್ದು ಮಹತ್ವದ ಸಾಧನೆ.  ಸಂಗೀತಜ್ಞರಾಗಿ, ವಿಶ್ವದಲ್ಲಿ ಹೆಸರಾದ ವೀಣಾವಾದಕರಾಗಿ, ಅನ್ವೇಷಕರಾಗಿ, ಸಾಂಸ್ಕೃತಿಕ ಹೋರಾಟಗಾರರಾಗಿ, ಸಂಘಟನಾಕಾರರಾಗಿ, ಆಡಳಿತಕಾರರಾಗಿ, ಗುರುವಾಗಿ ಹೀಗೆ ವಿವಿಧ ನೆಲೆಗಳಲ್ಲಿ ಅವರ ಕಾರ್ಯಕ್ಷೇತ್ರ ವ್ಯಾಪಿಸಿದೆ.

ಸುಮಾ ಸುಧೀಂದ್ರ ಅವರ ಬದುಕಿನ ಎಲ್ಲ ಘಟ್ಟಗಳೂ ಬೆಂಗಳೂರಿನೊಂದಿಗೆ ಬೆಸೆದಿವೆ. ಮನೆಯಲ್ಲಿ ಸಂಗೀತದ ವಾತಾವರಣ ಇದ್ದುದರಿಂದ ಐದು ವರ್ಷದ ಬಾಲ್ಯದಲ್ಲೇ ಸಂಗೀತಾಭ್ಯಾಸ ಆರಂಭಿಸಿದರು.  ಏಳು ವರ್ಷದವರಿದ್ದಾಗ ವೀಣೆ ಕಲಿಯಲಾರಂಭಿಸಿದ ವೀಣಾವಿದುಷಿ ಸುಮಾ ಸುಧೀಂದ್ರ ಅವರ ಸಂಗೀತಯಾನ ಬಹಳ ವೈಶಿಷ್ಟ್ಯಪೂರ್ಣ. ಖ್ಯಾತ ವೈಣಿಕ ವೀಣೆ ರಾಜಾರಾಯರ ಮೈಸೂರು ಪರಂಪರೆ ಮತ್ತು ಆಂಧ್ರದ ಪ್ರಸಿದ್ಧ ವೈಣಿಕ ಚಿಟ್ಟಿಬಾಬು ಅವರ ಪ್ರಯೋಗಶೀಲತೆ, ಈ ಇಬ್ಬರೂ ಗುರುಗಳ ಶಿಕ್ಷಣದ ಅತ್ಯುತ್ತಮ ಅಂಶಗಳನ್ನು ಹದವಾಗಿ ಹೊಂದಿಸಿ ಸುಮಾ ತಮ್ಮದೇ ಆದ ವಾದನಶೈಲಿಯನ್ನು ರೂಪಿಸಿಕೊಂಡರು.  ಚಿಟ್ಟಿಬಾಬು ಅವರಲ್ಲಿ ವೀಣಾವಾದನ ಕಲಿಯುವುದಕ್ಕೆ ಮುಂಚೆ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್  ಪಡೆದ ಸಾಧನೆ ಕೂಡಾ ಅವರದಾಗಿತ್ತು.

ವಿಶ್ವದೆಲ್ಲೆಡೆಯಲ್ಲಿ ಬಹು ಅಪೇಕ್ಷಿತ ಕಲಾವಿದರಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸುಮಾ ಸುಧೀಂದ್ರ ಅವರು ಪ್ರಾತ್ಯಕ್ಷಿಕೆ, ಆಧುನಿಕ ಮತ್ತು ಶಾಸ್ತ್ರೀಯ ರೂಪಗಳಲ್ಲಿ ಬೋಧನೆಗಳಲ್ಲೂ ಹೆಸರಾಗಿದ್ದಾರೆ. ಸಮೂಹ ವೀಣಾವಾದನ ನಿರ್ವಹಣೆಗಳಲ್ಲೂ ಪ್ರಸಿದ್ಧರಾಗಿದ್ದಾರೆ. ಅನ್ವೇಷಕ ಪ್ರವೃತಿಯವರಾದ ಡಾ.ಸುಮಾ ಸುಧೀಂದ್ರ ಅವರು ಶಾಸ್ತ್ರೀಯ ಶುದ್ಧ ಸಂಗೀತಕ್ಕೆ ಪ್ರಮುಖ ಹೆಸರಾಗಿರುವುದರ ಜೊತೆಗೆ ಫ್ಯೂಶನ್ ಸಂಗೀತದವರಿಗೂ ಇಷ್ಟದವರಾಗಿದ್ದಾರೆ. 

ಸುಮಾ ಅವರು  ವಿಶಿಷ್ಟ ತಾಂತ್ರಿಕ ಆವಿಷ್ಕಾರಗಳನ್ನು ತಮ್ಮ ಸಂಗೀತದಲ್ಲಿ ಅಳವಡಿಸುತ್ತಾ ಬಂದಿದ್ದಾರೆ.  ಸುಮಾ ಸುಧೀಂದ್ರ ಅವರು 2001ರಲ್ಲಿ ತಯಾರು ಮಾಡಿ ಪೇಟೆಂಟ್ ಪಡೆದಿರುವ 'ತರಂಗಿಣಿ ವೀಣೆ' ಅತ್ಯಂತ ಸುಧಾರಿತ ವಾದ್ಯವೆನಿಸಿದ್ದು, ಸಾಂಪ್ರದಾಯಿಕ ವೀಣೆಯ ಆಧುನಿಕ ರೂಪವಾಗಿದೆ.  ಈ ವೀಣೆ, ಆಕಾರದಲ್ಲಿ ಪುಟ್ಟದಾಗಿದ್ದು ಸಾಗಿಸಲೂ ಅನುಕೂಲವಾಗಿದೆ. ಬಿದ್ದರೆ ಒಡೆಯುವುದಿಲ್ಲ.  ಇಷ್ಟೆಲ್ಲ ಲಾಭಗಳಿದ್ದೂ ನುಡಿಸಾಣಿಕೆ ಕ್ರಮದಲ್ಲಿ ಯಾವುದೇ ವೆತ್ಯಾಸವಿಲ್ಲದ ಕಾರಣ ಅತ್ಯಂತ ಜನಪ್ರಿಯಗೊಂಡಿದೆ.

ಕಳೆದ ನಾಲ್ಕು ದಶಕಗಳಿಗೂ ಮೀರಿ ಸುಮಾ ಸುಧೀಂದ್ರ ಅವರು ವೀಣೆ ನುಡಿಸುತ್ತ ಬಂದಿದ್ದಾರೆ. ಭಾರತದ ವಿವಿದೆಡೆಗಳಲ್ಲಿ ಅಲ್ಲದೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ವೀಣೆ ಕಛೇರಿ ನೀಡುತ್ತಾ ಬಂದಿದ್ದಾರೆ. ಸುಮಾರು 30 ಸಂಗೀತದ ಆಲ್ಬಂಗಳನ್ನು ಹೊರತಂದಿದ್ದಾರೆ.  ಅನೇಕ ಅಪರೂಪದ ಕೃತಿಗಳೂ ಇದರಲ್ಲಿವೆ. ವಿಶೇಷವಾಗಿ ವೀಣೆ ಶೇಷಣ್ಣ ಅವರದೇ ಸಂಯೋಜನೆಯ ಕೃತಿಗಳು, ಕರ್ನಾಟಕ ಸಂಗೀತದ ತಿಲ್ಲಾನಗಳದ್ದೇ ಪ್ರತ್ಯೇಕ ಸಮೂಹ, ಧ್ಯಾನದ ಕುರಿತಾಗಿ ಮತ್ತು ಫ್ಯೂಷನ್ ಸಂಗೀತ ಹೀಗೆ ವೈವಿಧ್ಯಗಳು ಇದರಲ್ಲಿ ಸೇರಿವೆ.  

ಸುಮಾ ಸುಧೀಂದ್ರ ಅವರು 'ಸಮೂಹ ವೀಣಾವಾದನ' ನಿರ್ವಹಣೆಯಲ್ಲೂ  ಪ್ರಸಿದ್ಧರಾಗಿದ್ದಾರೆ. ಐವತ್ತು, ನೂರು ಕಲಾವಿದೆಯರು ಇಂತಹ ಸಮೂಹ ವೀಣಾವಾದನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವೀಣಾ ಸುನಾದವನ್ನು ಒಟ್ಟಿಗೆ ಹೊರಡಿಸುವ ಕಾರ್ಯಕ್ರಮಗಳು ಶ್ರೋತೃಗಳನ್ನು ಮೋಡಿ ಮಾಡಿವೆ. ಉತ್ತರ ಭಾರತದ ಪ್ರಸಿದ್ಧ ಸಂಗೀತಕಾರರಾದ ವಿಶ್ವಮೋಹನ ಭಟ್, ಷಾಹಿದ್ ಪರ್ವೇಜ್ ಮುಂತಾದ ಅನೇಕ ಕಲಾವಿದರೊಂದಿಗೆ ಜುಗಲ್ಬಂದಿ ಸಂಗೀತ ಕಾರ್ಯಕ್ರಮಗಳನ್ನೂ ನೀಡಿದ್ದಾರೆ.

ಸುಮಾ ಸುಧೀಂದ್ರ ಅವರು ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯೆನ್ಸ್ ಎಂಬ ಸಂಗೀತಕ್ಕೆ ಸಂಬಂಧಿಸಿದ ಯೋಜನೆಯ ನಿರ್ದೇಶಕರಾಗಿದ್ದು, ಇದು ಸಂಗೀತಕ್ಕೆ ಸಂಬಂಧಿಸಿದ ಎಲ್ಲ ವಸ್ತು ವಿಷಯಗಳೂ ಒಂದೇ ಸೂರಿನಡಿಯಲ್ಲಿ ಸಿಗುವಂತಹ ವ್ಯವಸ್ಥೆ ಎನಿಸಿದೆ. ಅವರು ಸಕ್ರಿಯರಾಗಿರುವ 'ಸೆಂಟರ್ ಫಾರ್ ಇಂಡಿಯನ್ ಮ್ಯೂಸಿಕ್ ಎಕ್ಸ್ ಪೀರಿಯೆನ್ಸ್ ಯೋಜನೆ', ಪೂರ್ವ ಪ್ರಾಥಮಿಕದಿಂದ 5 ನೆಯ ತರಗತಿಯ ವರೆಗೆ ಮಕ್ಕಳಿಗೆ ಶಾಲೆಯಲ್ಲಿ ಸಂಗೀತ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು  (Rhapsody and Rhyme) ರೂಪಿಸಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿದೆ.

ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್ ಕಾರ್ಯರೂಪಕ್ಕೆ ಬರುವುದರಿಂದ ತೊಡಗಿ ಇಂದಿನವರೆಗೆ ಸುಮಾ ಸುಧೀಂದ್ರರ ಸೇವೆ ನಿರಂತರವಾಗಿ ಸಾಗುತ್ತ ಬಂದಿದೆ. ಆ ಭವನದ ಕಾರ್ಯಕಾರಿಣಿಯ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸಹಾ ಅವರ ಸೇವೆ ಸಂದಿದೆ.

ದಿನಾ ಶ್ರದ್ಧೆಯಿಂದ ಸಂಗೀತಾಭ್ಯಾಸ ನಡೆಸುವುದರೊಂದಿಗೆ ಸುಮಾ ಸುಧೀಂದ್ರ ಅವರು ವಿಧ್ಯಾರ್ಥಿಗಳಿಗೆ ಸಂಗೀತವನ್ನೂ ಕಲಿಸುತ್ತಾರೆ.  ‘ಮೇಘಾ'‍ ಎಂಬ ಹೆಸರಿನಲ್ಲಿ ರೂಪುಗೊಂಡಿರುವ ಅವರ ತಂಡ ಕರ್ನಾಟಕ ಸಂಗೀತ, ಫ್ಯೂಷನ್, ಜಾಸ್ ಮತ್ತು  ಹಲವು ಪ್ರಾಯೋಗಿಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ.

ಗಾನಕಲಾಶ್ರೀ, ಗಾನಕಲಾಭೂಷಣ, ಕಲೈಮಾಮಣಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸುಮಾ ಸುಧೀಂದ್ರ ಅವರನ್ನು ಅರಸಿ ಬಂದಿವೆ.

Our great musician Suma Sudhindra  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ