ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೊರ್ಲಕುಂಟೆ ದಯಾನಂದ್


 ಕೊರ್ಲಕುಂಟೆ ಎಸ್ ದಯಾನಂದ್


ಕೊರ್ಲಕುಂಟೆ ಎಸ್ ದಯಾನಂದ ಬಹುಮುಖಿ ಪ್ರತಿಭೆ. ವ್ಯಂಗ್ಯಚಿತ್ರ, ಗಾಯನ, ಬರೆಹ, ಛಾಯಾಗ್ರಹಣ ಹೀಗೆ ಹಲವು ವೈವಿಧ್ಯಗಳು ಅವರ ಪ್ರತಿಭೆಯಲ್ಲಿವೆ. 

ಮೇ 1, ದಯಾನಂದ ಅವರ ಹುಟ್ಟುಹಬ್ಬ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯ ಕೊರ್ಲಕುಂಟೆ  ಇವರ ಊರು. ತಂದೆ ಸಂಜೀವಪ್ಪ. ತಾಯಿ ಗಂಗಮ್ಮ.  ದಯಾನಂದ ಸಮಾಜಶಾಸ್ರದಲ್ಲಿ ಎಂ. ಎ. ಗಳಿಸಿದ್ದಾರೆ. 

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಕೊರ್ಲಕುಂಟೆ ದಯಾನಂದ ಅವರು ಚಿಕ್ಕ ವಯಸ್ಸಿನಿಂದಲೇ  ಸಾಹಿತ್ಯ ಮತ್ತು ಕಲೆಗಳಲ್ಲಿ ಆಸಕ್ತಿ ಮೂಡಿಸಿಕೊಂಡವರು. ಪ್ರಜಾವಾಣಿಯಲ್ಲಿ  ಭಾನುವಾರದ ಸಾಪ್ತಾಹಿಕ ಪುರವಣಿಯಲ್ಲಿ ಮೂಡಿಬರುತ್ತಿದ್ದ ಪ್ರಾಣ್ ಅವರ ವ್ಯಂಗ್ಯಚಿತ್ರಗಳನ್ನು ನೋಡಿ,  ಹಾಗೆಯೇ ಚಿತ್ರ ಬರೆಯಲು ಕಲಿಯಬೇಕು ಎಂಬ ಬಯಕೆ ಶಾಲಾ ಕಲಿಕೆಯ ದಿನಗಳಲ್ಲೇ ಮೂಡಿತ್ತು.   ಹಾಗೆ ನಾಡಿನ ಹಲವಾರು ವ್ಯಂಗ್ಯಚಿತ್ರಕಾರರು ಬರೆಯುತ್ತಿದ್ದ ವ್ಯಂಗ್ಯಚಿತ್ರಗಳನ್ನು ನೋಡಿ ಇವರಿಗೆ ಬರೆಯಲು ಪ್ರೇರಣೆಯಾಯಿತು. 

ದಯಾನಂದ ಅವರು ಹೈಸ್ಕೂಲ್ ಓದುತ್ತಿದ್ದ ಸಂದರ್ಭದಲ್ಲಿ ಜಾನಪದಗೀತೆ, ಲಾವಣಿ ಚಿತ್ರಗೀತೆಗಳ ಗಾಯನ ಸ್ಪರ್ಧೆಗಳಲ್ಲಿ  ಬಹುಮಾನ ಗಳಿಸುತ್ತಿದ್ದರು. 2003ರಲ್ಲಿ ಕಲಬುರ್ಗಿಯ ಅಜಾದ್ ಯುವ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು.2004ರಲ್ಲಿ ಕನ್ನಡ ಅಭಿವೃದ್ದಿ ಬಳಗ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚುಟುಕು ಸಮ್ಮೇಳನದಲ್ಲಿ  ಚುಟುಕು ರತ್ನ ಪ್ರಶಸ್ತಿ ಪಡೆದಿದ್ದರು. 2009 ರಲ್ಲಿ ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡಗೀತೆ ಹಾಡಿದ ತಂಡದಲ್ಲಿದ್ದರು. ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ಕವಿಗೋಷ್ಠಿಗಳಲ್ಲಿ ಭಾಗಿಯಾಗುತ್ತ ಬಂದರು. ಕೆಲ ವರ್ಷಗಳ ಕಾಲ ಚಿತ್ರದುರ್ಗದ ಆಕಾಶವಾಣಿ ಕೇಂದ್ರದಲ್ಲಿ  ಕೆಲಸ ಮಾಡಿದ್ದರು.

ಕೊರ್ಲಕುಂಟೆ ಎಸ್ ದಯಾನಂದ ಅವರು 2004ರಿಂದ ಮೊದಲ್ಗೊಂಡಂತೆ ಚಿತ್ರದುರ್ಗ ಜಿಲ್ಲೆಯ 'ಸುದ್ದಿಗಿಡುಗ'  ಪತ್ರಿಕೆಯಲ್ಲಿನ 'ಸುದ್ದಿ - ಸುದ್ದಿಗೊಂದು ಗುದ್ದು' ಶೀರ್ಷಿಕೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ಮೂಡಿಸುತ್ತ ಬಂದಿದ್ದಾರೆ. ಕವಿತೆ, ಚುಟುಕಗಳ  ರಚನೆ, ಗಾಯನ, ಛಾಯಾಗ್ರಹಣ ಮುಂತಾದ ಆಸಕ್ತಿಗಳೂ ಅವರೊಂದಿಗಿವೆ.  ಅನೇಕ ಪ್ರಸಿದ್ಧ ಪ್ರದರ್ಶನಗಳಲ್ಲಿ ಇವರು ಕಲಾವಿದರಾಗಿ ಪಾಲ್ಗೊಂಡಿದ್ದಾರೆ. 

ಕೊರ್ಲಕುಂಟೆ ಎಸ್ ದಯಾನಂದ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ