ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಾರತಿ ಹಾಡ್ಜ್‍ಕಿನ್


ಡಾರತಿ ಹಾಡ್ಜ್‍ಕಿನ್

ಡಾರತಿ ಹಾಡ್ಜ್‍ಕಿನ್ ಕ್ರೋಫುಟ್ ಬ್ರಿಟಿಷ್ ರಸಾಯನ ಮತ್ತು ಸ್ಫಟಿಕವಿಜ್ಞಾನಿ. ಅವರು ಪ್ರಮುಖ ಜೀವವೈಜ್ಞಾನಿಕ ಅಣುಗಳ ಸಂರಚನೆಗಳನ್ನು ಎಕ್ಸ್-ಕಿರಣ ತಂತ್ರಗಳಿಂದ ನಿರ್ಧರಿಸಿದ್ದಕ್ಕಾಗಿ ರಸಾಯನವಿಜ್ಞಾನ ನೊಬೆಲ್ ಪುರಸ್ಕಾರ ಗಳಿಸಿದರು.

ಡಾರತಿ ಹಾಡ್ಜ್‍ಕಿನ್ ಅವರು ಪೆನಿಸಿಲಿನ್, ಜೀವಸತ್ವ ಡಿ, ಬಿ-12 ಮತ್ತು ಇನ್‍ಸುಲಿನ್ ಇವೇ ಮೊದಲಾದ 100ಕ್ಕೂ ಹೆಚ್ಚಿನ ಅಣುಗಳ ಒಟ್ಟಾರೆ ಆಕಾರ ಹಾಗೂ ಪರಮಾಣು ಜೋಡಣಾ ಕ್ರಮವನ್ನು ಎಕ್ಸ್-ಕಿರಣಗಳನ್ನು ಉಪಯೋಗಿಸಿ ಪತ್ತೆಹಚ್ಚಿದವರು. ಪ್ರಮುಖ ವಿಶ್ಲೇಷಣ ಸಾಧನದ ಸ್ತರಕ್ಕೆ ಎಕ್ಸ್-ಕಿರಣ ಸ್ಫಟಿಕವಿಜ್ಞಾನ ಒಯ್ದದ್ದು ಇವರ ಇನ್ನೊಂದು ಸಾಧನೆ.

ಡಾರತಿ ಹಾಡ್ಜ್‍ಕಿನ್ 1910 ಮೇ 12ರಂದು ಕೈರೋದಲ್ಲಿ ಜನಿಸಿದರು. ಇಂಗ್ಲೆಂಡಿನ ಜಾನ್ ಲೆಮ್ಯಾನ್ ಸ್ಕೂಲ್, ಬೆಕ್‍ಲೆಸ್‍ನಲ್ಲಿ ಶಾಲಾಶಿಕ್ಷಣ ಮುಗಿಸುವ ವೇಳೆಗಾಗಲೇ (1928) ರಸಾಯನ ಹಾಗೂ ಜೀವರಸಾಯನ ವಿಜ್ಞಾನದಲ್ಲಿ ಇವರಿಗೆ ಆಸಕ್ತಿ ಮೂಡಿತು. ಸಮರ್‍ವಿಲ್ಲೆ ಕಾಲೇಜ್, ಆಕ್ಸ್‍ಫರ್ಡ್‍ನಲ್ಲಿ ಶಿಕ್ಷಣ ಮುಂದುವರಿಸಿ (1928-32), ಸ್ನಾತಕ ಪದವಿ ಗಳಿಸಿದರು. ಅಧ್ಯಾಪಕರಿಂದ ಪ್ರೇರಿತರಾಗಿ ಸ್ಫಟಿಕವಿಜ್ಞಾನದತ್ತ ಒಲವು ಮೂಡಿಸಿಕೊಂಡರು. 

ಮುಂದೆ ಡಾರತಿ ಹಾಡ್ಜ್‍ಕಿನ್ ಸಂಶೋಧನ ಸಹಾಯಕಿಯಾಗಿ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡರು. ಆಕ್ಸ್‍ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ತಲಾ ಒಂದೊಂದು ವರ್ಷ ಸಂಶೋಧನ ಫೆಲೋಶಿಪ್ ಪ್ರಾಪ್ತಿಯಾಯಿತು. ಕೊಲೆಸ್ಟಿರಾಲ್ ಅಯೋಡೈಡ್ ಅಣುವಿನ ವಿಶ್ಲೇಷಣೆಯೊಂದಿಗೆ (1934) ಆವಿಷ್ಕಾರಗಳ ಸರಣಿಯಾರಂಭಿಸಿದರು.
ಇವರ ಆವಿಷ್ಕಾರಗಳಿಂದ ಮನುಕುಲಕ್ಕೆ ಆದ ಲಾಭ ಅಮೂಲ್ಯ. ಉದಾ: ಬಿ-12 ಜೀವಸತ್ವದ ಸಂರಚನೆಯ ಆವಿಷ್ಕಾರದಿಂದಾಗಿ ಕೆಂಪು ರಕ್ತಕಣೋತ್ಪಾದನೆಗೆ ಕಬ್ಬಿಣವನ್ನು ಮಾನವ ದೇಹ ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಅರ್ಥವಾಯಿತು, ಕೆಲವು ಬಗೆಯ ರಕ್ತಹೀನತೆಯನ್ನು ತಡೆಗಟ್ಟಲು ಸಾಧ್ಯವಾಯಿತು. ಅನೇಕ ಪ್ರತಿಜೈವಿಕಗಳ ಸೃಷ್ಟಿ ಸಾಧ್ಯವಾದದ್ದು ಪೆನಿಸಿಲಿನ್ ಸಂರಚನೆಯ ಆವಿಷ್ಕಾರದಿಂದಾಗಿ. ಇನ್‍ಸುಲಿನ್‍ನ ಮೂರು ಆಯಾಮ ಸಂರಚನೆಯನ್ನು ಆವಿಷ್ಕರಿಸಿದ್ದು ಸಿಹಿಮೂತ್ರ ರೋಗ ನಿಯಂತ್ರಣ ವಿಧಾನ ರೂಪಣೆಗೆ ಕಾರಣವಾಯಿತು.

ಡಾರತಿ ಹಾಡ್ಜ್‍ಕಿನ್ ಡಾಕ್ಟೊರೇಟ್ ಪದವಿ ಗಳಿಕೆಯ ಅನಂತರ ವೃತ್ತಿಜೀವನದ ಬಹುಭಾಗವನ್ನು ಆಕ್ಸ್‍ಫರ್ಡ್ ಮತ್ತು ಸಮರ್‍ವಿಲ್ಲೆಗಳಲ್ಲಿ ಕಳೆದರು. ಆರಂಭದಲ್ಲಿ ಸಮರ್‍ವಿಲ್ಲೆಯಲ್ಲಿ ಅಫೀಶಿಯಲ್ ಫೆಲೊ ಹಾಗೂ ನ್ಯಾಚುರಲ್ ಸೈನ್ಸ್‍ನ ಟ್ಯೂಟರ್ ಆಗಿ ಮಹಿಳಾ ಕಾಲೇಜುಗಳಲ್ಲಿ ರಸಾಯನವಿಜ್ಞಾನ ಬೋಧನೆ ಮಾಡಿದ ಅವರು, ತದನಂತರ (1946) ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ ಹಾಗೂ ಡೆಮಾನ್‍ಸ್ಟ್ರೇಟರ್ ಆದರು.  ಮುಂದೆ ಎಕ್ಸ್-ಕಿರಣ ಸ್ಫಟಿಕವಿಜ್ಞಾನದ ರೀಡರ್ (1956) ಆದರು.  ನಂತರ ರಾಯಲ್ ಸೊಸೈಟಿಯ ವೂಲ್ಫ್‍ಸನ್ ಸಂಶೋಧನ ಪ್ರಾಧ್ಯಾಪಕಿ (1960) ಹುದ್ದೆ ನಿರ್ವಹಿಸಿದರು.

ಡಾರತಿ ಹಾಡ್ಜ್‍ಕಿನ್ ಅವರ ಸಾಧನೆಗಳ ಅಗಾಧತೆಗೆ ಮನ್ನಣೆಯ ರೂಪದಲ್ಲಿ ರಾಯಲ್ ಸೊಸೈಟಿ ಸದಸ್ಯತ್ವ (1947), ರಾಯಲ್ ನೆದರ್‍ಲೆಂಡ್ಸ್ ಅಕಾಡೆಮಿ ಆಫ್ ಸೈನ್ಸಸ್‍ನ ಪರಕೀಯ ಸದಸ್ಯತ್ವ (1956), ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅ್ಯಂಡ್ ಸೈನ್ಸಸ್‍ನ ಸದಸ್ಯತ್ವ (1958), ಆರ್ಡರ್ ಆಫ್ ಮೆರಿಟ್ ಪುರಸ್ಕಾರ (1965) (ಫ್ಲಾರೆನ್ಸ್ ನೈಟಿಂಗೇಲ್ ಬಳಿಕ ಈ ಪ್ರಶಸ್ತಿ ಗಳಿಸಿದ ಎರಡನೆಯ ಮಹಿಳೆ) ಇವೇ ಮೊದಲಾದ ಗೌರವಗಳು ಸಂದವು. 

ಇಂಗ್ಲೆಂಡಿನ ಮಾಜಿ ಪ್ರಧಾನಿ ಮಾರ್ಗರೆಟ್ ತ್ಯಾಚರ್ ಡಾರತಿ ಹಾಡ್ಜ್‍ಕಿನ್ ಅವರ ವಿದ್ಯಾರ್ಥಿಯಾಗಿದ್ದದ್ದು ಹಾಗೂ ಇವರ ಕೊನೆಯ ಮಗ ಭಾರತದಲ್ಲಿ ಒಂದು ವರ್ಷ ಪ್ರಿಯೂನಿವರ್ಸಿಟಿ ಅಧ್ಯಯನ ಮಾಡಿದ್ದು ಮತ್ತು ವ್ಯಾಸಂಗಾನಂತರ ಭಾರತದಲ್ಲಿ ಕೆಲಸ ಮಾಡಿದ್ದು ಆಕಸ್ಮಿಕಗಳು.

ಮಹಾನ್ ಸಾಧಕಿ ಡಾರತಿ ಹಾಡ್ಜ್‍ಕಿನ್ 1994ರ ಜುಲೈ 29ರಂದು ನಿಧನರಾದರು. 

On the birth anniversary of great Nobel Laureate scientist Dorothy Hodgkin whose contributions are helping mankind


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ