ಅಬ್ದುಲ್ ಬಷೀರ್
ಅಬ್ದುಲ್ ಬಷೀರ್
ಪ್ರೊ. ಜಿ. ಅಬ್ದುಲ್ ಬಷೀರ್ ಕನ್ನಡ ಸಾಹಿತ್ಯಲೋಕದಲ್ಲಿ ವಿವಿಧ ರೀತಿಯಲ್ಲಿ ದುಡಿಯುತ್ತಾ ಬಂದಿದ್ದಾರೆ.
ಅಬ್ದುಲ್ ಬಷೀರ್ ಕನಕಪುರ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ 1947ರ ಮೇ 6ರಂದು ಜನಿಸಿದರು. ತಂದೆ ಅಬ್ದುಲ್ ಗಫೂರ್‌ಸಾಬ್. ತಾಯಿ ಬಿಯಾಂಬಿ. ಬಷೀರ್ ಅವರ ಪ್ರಾಥಮಿಕ ವಿದ್ಯಾಭ್ಯಾಸ ಗಬ್ಬಾಡಿಯಲ್ಲಿ, ಹೈಸ್ಕೂಲು ಹಾರೋಹಳ್ಳಿಯಲ್ಲಿ ಮತ್ತು ಕಾಲೇಜು ವಿದ್ಯಾಭ್ಯಾಸ ಆಚಾರ‍್ಯ ಪಾಠಶಾಲೆಯಲ್ಲಿ ನಡೆಯಿತು. ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿಗಳನ್ನು ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದರು.
ಅಬ್ದುಲ್ ಬಷೀರ್ 1972ರಲ್ಲಿ ಕಲಿತ ಕಾಲೇಜಿನಲ್ಲೇ ಅಧ್ಯಾಪಕರ ವೃತ್ತಿ ಆರಂಭಿಸಿದರು. ಕನ್ನಡ ಪ್ರಾಧ್ಯಾಪಕರಾಗಿ. ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತರಾದರು.
ಅಬ್ದುಲ್ ಬಷೀರ್ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣಾ ಸಲಹಾ ಸಮಿತಿ, ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣ ಸಮಿತಿ, ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ ತರಗತಿ ಸಾಹಿತ್ಯ ಸಮಕ್ಷಮ, ಸಾಹಿತ್ಯ ಸಂಗಮ, ಸಿರಿಗನ್ನಡ, ಸವಿಗನ್ನಡ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕೆ.ವಿ.ಎಸ್.ಸಿ. ಕಡ್ಡಾಯ ಕನ್ನಡ ಪಠ್ಯ ರಚನ ಸಮಿತಿಯ ಸದಸ್ಯರಾಗಿ ಹೀಗೆ ಹಲವಾರು ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಜಾತಿ, ಮತ, ಪಂಥದ ಗೊಡವೆ ಇಲ್ಲದೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೈಂಕರ್ಯ ಮಾಡಿ, ಸಾಂಸ್ಕೃತಿಕ ರಾಯಭಾರಿಯಾಗಿ ನಾಡಿನುದ್ದಗಲಕ್ಕೂ ಸಂಚರಿಸಿದರು. ಬಷೀರ್ ಅವರು ಬಿ.ಎಂ.ಶ್ರೀ ಪ್ರತಿಷ್ಠಾನದ ಪದಾಧಿಕಾರಿಗಳಾಗಿಯೂ ಅಮೂಲ್ಯ ಸೇವೆ ಸಲ್ಲಿಸಿದರು. ಅವರ ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ' ಸಂಪಾದಕರಾಗಿಯೂ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಅಬ್ದುಲ್ ಬಷೀರ್ ಅವರದು ವಿದ್ವತ್‌ಪೂರ್ಣ ಉಪನ್ಯಾಸ. ವ್ಯಾಕರಣ, ಭಾಷೆ, ಕಾವ್ಯ ಮೀಮಾಂಸೆ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಸೇವೆ ಸಂದಿದೆ. ಹಳಗನ್ನಡ ವ್ಯಾಕರಣ ವ್ಯಾಖ್ಯಾನದ ಶಬ್ದಮಣಿ ದರ್ಪಣ ದೀಪಿಕೆ, ಕನ್ನಡ ಭಾಷಾ ಕೃತಿಗಳಾದ ವಾಣಿಜ್ಯ ಕನ್ನಡ ಪರಿಚಯ, ಕನ್ನಡ ಪ್ರವೇಶ ಭಾರತಿ (ಭಾಗ ೧, ೨), ಭಾಷೆ : ಕೆಲವು ವಿಚಾರಗಳು, ಕನ್ನಡ ಕಡ್ಡಾಯ, ಶರಣ ಸಾಹಿತ್ಯ ಚಿಂತನ, ವಾಙ್ಞಯ ವಿಹಾರ, ವಿವೇಕ, ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಹರಿದಾಸ ಸಾಹಿತ್ಯ, ಮೌಲನಾ ಅಬ್ದುಲ್ ಕಲಾಂ ಆಜಾದ್, ಹರಿದಾಸ ಬಡೇ ಸಾಹೇಬರು, ಶಿಕ್ಷಣ ಶಿಲ್ಪಿ ಪ್ರೊ. ಎನ್. ಅನಂತಾಚಾರ್-ಜೀವನಚರಿತ್ರೆ. ಹೊಸ ಅಲೆಗಳು, ಹೊಸಗನ್ನಡ ಕವಿತೆಗಳು-ಸಂಪಾದಿತ ಕವಿತೆಗಳು, ಬಂಧ-ಪ್ರಬಂಧ, ಚಿಂತನ-ಪ್ರಬಂಧ ಸಂಕಲನಗಳು, ಸೆರಗು ಕಣ್ಣೊತ್ತಿ ಅಳುತಾಳೆ-ಜಾನಪದ ಕೃತಿ ಮುಂತಾದ ಅನೇಕ ಕೃತಿಗಳು ಪ್ರಕಟಗೊಂಡಿವೆ. ಬೆಂಗಳೂರಿನ ಆಕಾಶವಾಣಿ, ದೂರದರ್ಶನದಲ್ಲಿ ನೂರಾರು ಚಿಂತನ, ಭಾಷಣ, ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ. ಪತ್ರಿಕೆಗಳಲ್ಲಿನ ಅಂಕಣಗಾರರಾಗಿಯೂ ಅವರು ಪ್ರಸಿದ್ಧರು.
ಅಬ್ದುಲ್ ಬಷೀರ್ ಅವರಿಗೆ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ-ಕನಕಪುರದಲ್ಲಿ ನಡೆದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿವೆ.
ಅಬ್ದುಲ್ ಬಷೀರ್ ಅವರನ್ನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಲವು ಬಾರಿ ಮಾತಾಡಿಸಿ ಸಂತಸಗೊಂಡಿದ್ದೆ. ಇಂದು ಅವರಿಗೆ ಹೀಗೆ ಹುಟ್ಟು ಹಬ್ಬ ಹೇಳುವ ಸೌಭಾಗ್ಯ ಬಂದಿದೆ. ಹಿರಿಯರಾದ ಅಬ್ದುಲ್ ಬಷೀರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of Prof. G. Abdul Rasheed Sir 🌷🙏🌷
ಕಾಮೆಂಟ್‌ಗಳು