ಎಸ್. ಕೆ. ನಾಡಿಗ್
ಎಸ್.ಕೆ.ನಾಡಿಗ್
ಎಸ್.ಕೆ.ನಾಡಿಗ್ ಕನ್ನಡದ ಪ್ರಸಿದ್ಧ ವ್ಯಂಗ್ಯಚಿತ್ರಗಾರ ಮತ್ತು ಕಥೆಗಾರರಾಗಿ ಸ್ಮರಣೀಯರಾಗಿದ್ದಾರೆ.
ಎಸ್. ಕೆ. ನಾಡಿಗ್ ಅವರು 1928ರ ಮೇ 6ರಂದು ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಕೃಷ್ಣ ಸ್ವಾಮಿರಾವ್ ನಾಡಿಗ್. ತಾಯಿ ರಾಧಮ್ಮ. ಅವರು ಓದಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಪದವಿಗಾಗಿ.
ಬಾಲ್ಯದಿಂದಲೂ ನಾಡಿಗರಿಗೆ ಗೆರೆಗಳೊಡನೆ ಚೆಲ್ಲಾಟ. ಕೊರವಂಜಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಆರ್. ಕೆ. ಲಕ್ಷ್ಮಣ್‌ರವರ ವ್ಯಂಗ್ಯ ಚಿತ್ರಗಳನ್ನು ನೋಡಿ ನಾಡಿಗರಿಗೂ ವ್ಯಂಗ್ಯಚಿತ್ರ ಮೂಡಿಸಬೇಕೆಂಬ ವಾಂಛೆ ಹುಟ್ಟಿತು. ತಮ್ಮ ಹದಿನೈದನೆಯ ವಯಸ್ಸಿನಲ್ಲೇ ವ್ಯಂಗ್ಯಚಿತ್ರ ಮೂಡಿಸತೊಡಗಿದ ನಾಡಿಗರ ವ್ಯಂಗ್ಯಚಿತ್ರವು ಮೊಟ್ಟ ಮೊದಲಬಾರಿಗೆ ಆಂಗ್ಲ ಪತ್ರಿಕೆ ‘ಮಿನಿ ಮ್ಯಾಗ್’ನಲ್ಲಿ 1947ರ ವರ್ಷದಲ್ಲಿ ಪ್ರಕಟಗೊಂಡಿತು. ನಾಡಿಗರು ಬರೆದ ವ್ಯಂಗ್ಯ ಚಿತ್ರಗಳ ಸಂಖ್ಯೆ ಸುಮಾರು 20,00೦ ಸಂಖ್ಯೆಯನ್ನೂ ಮೀರಿದ್ದು.
ಎಂ.ಎಸ್. ಭರದ್ವಾಜರ ಚಿತ್ರಗುಪ್ತ ಪತ್ರಿಕೆಯಲ್ಲಿ ಮೊದಲು ಫ್ರೊಫ್ ರೀಡರ್ ಹುದ್ದೆ ನಿರ್ವಹಿಸಿದ ನಾಡಿಗರು ಅದೇ ಪತ್ರಿಕೆಯಲ್ಲಿ ಉಪಸಂಪಾದಕರ ಹುದ್ದೆಯನ್ನೂ ಕೆಲಕಾಲ ನಿರ್ವಹಿಸಿದರು. ಮುಂದೆ ಬೆಂಗಳೂರು ಬಿಟ್ಟು ಭದ್ರಾವತಿಯಲ್ಲಿನ ಕಾಗದದ ಕಾರ್ಖಾನೆಯಲ್ಲಿ ನೌಕರಿ ಹಿಡಿದು ಅಧಿಕಾರಿಗಳಾಗಿ ನಿವೃತ್ತರಾದರು. ನೌಕರಿಯಲ್ಲಿದ್ದರೂ ತಮ್ಮ ವ್ಯಂಗ್ಯಚಿತ್ರ ಕಲೆಯನ್ನು ಮುಂದುವರೆಸಿದ ನಾಡಿಗರು ಕೊರವಂಜಿ, ಪ್ರಜಾವಾಣಿ, ಜನಪ್ರಗತಿ, ಶಂಕರ್ಸ್ ವೀಕ್ಲಿ, ಕ್ಯಾರವಾನ್‍ಗಳಲ್ಲಿ ನಿರಂತರವಾಗಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದರು.
ಮನೆ, ಮಕ್ಕಳು, ನೆರೆಹೊರೆ, ರಾಜಕಾರಣಿಗಳ ಸೋಗಲಾಡಿತನ, ಸಮಾಜವನ್ನು ಆವರಿಸುವ ಭ್ರಷ್ಟಾಚಾರ ಹೀಗೆ ನಾಡಿಗರು ಬರೆದ ವ್ಯಂಗ್ಯಚಿತ್ರಗಳು ವೈವಿಧ್ಯಪೂರ್ಣವಾದುದು. ವ್ಯಂಗ್ಯಚಿತ್ರಗಳ ಜೊತೆಗೆ ನೂರಾರು ನಗೆ ಲೇಖನಗಳನ್ನೂ ಬರೆದರು. ವಿನೋದ, ವಿಹಾರ ಅಂಕಣ ಬರಹಗಾರರಾಗಿಯೂ ಪ್ರಸಿದ್ಧಿ ಪಡೆದಿದ್ದರು ಹಲವುಕಾಲ ಉದಯವಾಣಿಯಲ್ಲಿ ಏನಂತೀರಿ? ಕಾಲಂ ಬರಹ ನಿರ್ವಹಿಸುತ್ತಿದ್ದರು.
1954ರಿಂದ 1957ರ ಅವಧಿಯಲ್ಲಿ ನಾಡಿಗರು ಬಣ್ಣದ ಚಿಟ್ಟೆ, ಕನಸಿನೊಳಗೊಂದು ಕನಸು, ಕನ್ನಯ್ಯರಾಮ ಮುಂತಾದ ಕಾದಂಬರಿಗಳ ರಚನೆ ಮಾಡಿದರು. ಕನ್ನಯ್ಯರಾಮ ಕಾದಂಬರಿಯು ಪ್ರಸಿದ್ಧ ನಿರ್ದೇಶಕರಾದ ಎಂ. ಎಸ್. ಸತ್ಯು ಅವರಿಂದ ’ಕನ್ನೇಶ್ವರರಾಮ’ ಚಲನಚಿತ್ರವಾಗಿ ರೂಪುಗೊಂಡಿತು. ಪ್ರಸಿದ್ಧ ಕಲಾವಿದರಾದ ಅನಂತನಾಗ್, ಶಬನಾ ಅಜ್ಮಿ ಮುಂತಾದವರು ನಟಿಸಿ, ಕನ್ನಡ ಮತ್ತು ಹಿಂದೀ ಭಾಷೆಯಲ್ಲಿ ಮೂಡಿಬಂದ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕೂಡಾ ನಾಡಿಗರು ಮೂಡಿಸಿದ್ದರು.
ನಾಡಿಗರ ಕಥೆಯನ್ನಾಧರಿಸಿದ ಕಳ್ಳರು ಕಳ್ಳರು, ಜುಗ್ಗ, ನೀಲಿಕವರ್, ಯಾರೋ ಬಂದರು ಮುಂತಾದ ನಗೆಬರಹಗಳು ಚಿತ್ರೀಕರಣಗೊಂಡು ಬೆಂಗಳೂರು ದೂರದರ್ಶನದಿಂದ ಪ್ರಸಾರಗೊಂಡವು. ಸುಪ್ರಭಾತ ಟಿ.ವಿ. ಚಾನೆಲ್‌ನಲ್ಲಿ ’ನಾಡಿಗರ ನಾಡಿನಲ್ಲಿ’ ವ್ಯಂಗ್ಯಚಿತ್ರ ಪ್ರಸಾರಗೊಂಡವು. 1977ರಲ್ಲಿ ವ್ಯಂಗ್ಯಚಿತ್ರ ರಚನಕಾರರ ಸಂಘ ಸ್ಥಾಪನೆಯಲ್ಲಿ ನಾಡಿಗರು ಪ್ರಮುಖ ಪಾತ್ರ ನಿರ್ವಹಿಸಿದರು. ಮಣಿಪಾಲದ ಶಿಲ್ಪಿ ಟಿ.ಎಂ.ಎ. ಪೈ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ವ್ಯಂಗ್ಯ ಚಿತ್ರಕಾರರ ಸಮ್ಮೇಳನ ನಡೆಸಿ ಹಿರಿಯ ವ್ಯಂಗ್ಯ ಚಿತ್ರಕಾರರನ್ನು ಸನ್ಮಾನಿಸಿದ ಕೀರ್ತಿಗೆ ಭಾಜನರಾದರು. ನಾಡಿಗರು ಮಾರಿಯೊ ಮಿರಾಂಡ, ಯೇಸುದ್ದೀನ್, ಫಡ್ನೀಸ್, ಬಾಪು, ಗೋಪುಲು, ಪ್ರಾಣ್ ಮುಂತಾದ ರಾಷ್ಟ್ರಖ್ಯಾತಿಯ ವ್ಯಂಗ್ಯಚಿತ್ರಕಾರರೊಡನೆ ಜೀವಮಾನಸಾಧನೆಯ ಪ್ರಶಸ್ತಿಯನ್ನು ಕರ್ಣಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣರವರಿಂದ ಸ್ವೀಕರಿಸಿದ್ದರು.
ಮಹಾನ್ ಪ್ರತಿಭಾವಂತರಾದ ನಾಡಿಗರು 2008ರ ನವೆಂಬರ್ 29ರಂದು ಈ ಲೋಕವನ್ನಗಲಿದರು. ಅವರು ಮೂಡಿಸಿದ ರೇಖಾ ಚಿತ್ತಾರಗಳು ಮತ್ತು ಮಾಡಿದ ಕಾಯಕಗಳು ಮುಂದಿನ ಹಲವಾರು ತಲೆಮಾರುಗಳನ್ನು ನಿರಂತರವಾಗಿ ಪ್ರೇರೇಪಿಸುತ್ತಾ ಮುನ್ನಡೆದಿವೆ.
S. K. Nadig
ಕಾಮೆಂಟ್‌ಗಳು