ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೀತಾರಾಮಶಾಸ್ತ್ರಿ



 ಕೊಣನೂರು ಸೀತಾರಾಮಶಾಸ್ತ್ರಿ


ಕೊಣನೂರು ಸೀತಾರಾಮಶಾಸ್ತ್ರಿಗಳು ಹರಿಕಥಾ ವಿದ್ವಾಂಸರಾಗಿ ಕೀರ್ತನರತ್ನ, ಕೀರ್ತನ ಕೇಸರಿ ಮುಂತಾದ ಗೌರವಗಳಿಂದ ಖ್ಯಾತರಾಗಿದ್ದರು. 

ಸೀತಾರಾಮಶಾಸ್ತ್ರಿಗಳು 1916ರ ಮೇ 22ರಂದು ಕೊಣನೂರಿನಲ್ಲಿ ಜನಿಸಿದರು.  ತಂದೆ ಶ್ರೀಕಂಠ ಶಾಸ್ತ್ರಿಗಳು ಹರಿಕಥಾ ವಿದ್ವಾಂಸರು.  ಕೃಷ್ಣರಾಜ ಒಡೆಯರಿಂದ ಕೀರ್ತನ ಕೇಸರಿ ಬಿರುದು, ಕಿಲ್ಲತ್ತು, ಜೋಡಿಶಾಲುಗಳ ಸನ್ಮಾನ ಗಳಿಸಿದ ಖ್ಯಾತಿವಂತರಾಗಿದ್ದರು. ಸೀತಾರಾಮ ಶಾಸ್ತ್ರಿಗಳು ಐದನೆಯ ವಯಸ್ಸಿಗೆ ಶಾಲೆಗೆ ಸೇರಿದರೂ ಹೈಯರ್‌ ಸೆಕೆಂಡರಿವರೆಗೆ ಮಾತ್ರಾ ವಿದ್ಯಾಭ್ಯಾಸ ನಡೆಯಿತು. ಲೌಕಿಕ ವಿದ್ಯೆಯಲ್ಲಿ ಮನಸ್ಸಾಗದೆ ಪ್ರತಿನಿತ್ಯ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ, ಹರಿಕಥೆಗಳಿಂದ ಪ್ರಭಾವಿತರಾಗಿ ಸಂಗೀತ ಮತ್ತು ಹರಿಕಥೆಗಳ ಕಡೆಗೆ ಮನಸ್ಸುಕೊಟ್ಟರು. ಒಮ್ಮೆ ಗಣೇಶೋತ್ಸವ ಸಂದರ್ಭದಲ್ಲಿ ತಂದೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಾನುಕೂಲವಾದಾಗ ಇವರೇ ಹರಿಕಥಾ ಕಾರ್ಯಕ್ರಮ ನಡೆಸಿಕೊಟ್ಟು, ನೆರೆದಿದ್ದ ಪ್ರೇಕ್ಷಕರಿಂದ ಪ್ರಶಂಸೆ ಪಡೆದರು. ತಂದೆಯವರ ಮಾರ್ಗದರ್ಶನದಂತೆ ಅನೇಕ ಹರಿಕಥಾ ಭಾಗಗಳ ಮನನ ಮಾಡಿಕೊಂಡರು. ಸಂದರ್ಭಕ್ಕೆ ತಕ್ಕಂತೆ ಭಾಮಿನಿಷಟ್ಪದಿ ಕಂದ ಪದ್ಯ, ನವ್ಯಗೀತೆ, ಉರುಟಣೆ ಹಾಡು, ಉಯ್ಯಾಲೆ, ಬಾಗಿಲು ತೆಗೆಯುವ ಹಾಡು, ಜನಪದ ಗೀತೆ, ರಂಗ ಗೀತೆ, ಇಂಗ್ಲಿಷ್ ಹಾಡುಗಳು, ರಾಮಾಯಣ, ಮಹಾಭಾರತ ಕಥಾ ಪ್ರಸಂಗಗಳನ್ನುಪಯೋಗಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. 

ಸೀತಾರಾಮ ಶಾಸ್ತ್ರಿಗಳು ಶೃಂಗೇರಿ ಜಗದ್ಗುರುಗಳ ಅಪೇಕ್ಷೆಯ ಮೇರೆಗೆ ಶ್ರೀಮದ್ ಶಂಕರ ವಿಜಯ ಎಂಬ ಕಥಾ ಭಾಗವನ್ನು ಕೀರ್ತನ ಶೈಲಿಗೆ ಅಳವಡಿಸಿ ರೂಢಿಗೆ ತಂದರು. 

ಗಿರಿಜಾ ಕಲ್ಯಾಣ, ರುಕ್ಮಿಣಿ ಕಲ್ಯಾಣ, ಸೀತಾ ಕಲ್ಯಾಣ, ಶಶಿರೇಖಾ ಪರಿಣಯ, ಶಮಂತಕೋಪಾಖ್ಯಾನ, ದೂರ್ವಾಸಾತಿಥ್ಯ, ಕಿರಾತಾರ್ಜುನೀಯ ಮುಂತಾದುವುಗಳು ಶಾಸ್ತ್ರಿಯವರ ಮೆಚ್ಚಿನ ಹಾಗೂ ಅವರಿಂದ ಜನಮೆಚ್ಚಿದ ಕೀರ್ತನಗಳಾಗಿದ್ದವು. ಗಿರಿಜಾಕಲ್ಯಾಣದಲ್ಲಿ ಗಾಂಭೀರ್ಯ, ಶಶಿರೇಖಾ ಪರಿಣಯದಲ್ಲಿ ಹಾಸ್ಯ, ಹರಿಶ್ಚಂದ್ರದಲ್ಲಿ ಶೋಕ, ಚಂದ್ರಹಾಸ, ರುಕ್ಮಿಣಿ ಕಲ್ಯಾಣದಲ್ಲಿ ಭಕ್ತಿ, ಹೀಗೆ ನವರಸಭರಿತ ಕಥೆಗಳಿಂದ ಪಂಡಿತ ಪಾಮರರನ್ನು  ರಂಜಿಸಿದರು. ಪಕ್ಕವಾದ್ಯ ಕಲಾವಿದರಿಗೂ ಪಾಂಡಿತ್ಯ ಪ್ರದರ್ಶಿಸಲು ಹುರಿದುಂಬಿಸಿ ಸಭಿಕರಿಂದ ಪ್ರಶಂಸೆ ಸಿಗುವಂತೆ ಕಾರ್ಯಕ್ರಮ ನಡೆಸುತ್ತಿದ್ದರು. 

ಕೊಣನೂರು ಸೀತಾರಾಮಶಾಸ್ತ್ರಿಗಳಿಗೆ ಅನೇಕ ಮಠಾಧಿಪತಿಗಳಿಂದ, ರಾಷ್ಟ್ರಪತಿಗಳಾಗಿದ್ದ ವಿ.ವಿ. ಗಿರಿಯವರಿಂದ ಪ್ರಶಂಸೆ ಸಂದಿತು. ಕೀರ್ತನ ರತ್ನ, ಕೀರ್ತನ ಭೂಷಣ, ಅಧ್ಯಾತ್ಮ ರತ್ನ, ಕೀರ್ತನ ಕಲಾ ಕೇಸರಿ, ಕೀರ್ತನ ಕೇಸರಿ ಮುಂತಾದ ಸನ್ಮಾನಗಳೊಡನೆ,  ಚಿನ್ನದ ತೋಡಾ, ಚಿನ್ನದ ಸರ, ಚಿನ್ನದ ಪದಕ, ಚಿನ್ನದ ಉಂಗುರ ಮುಂತಾದ ರೀತಿಯ ಸನ್ಮಾನಗಳು ಸಂದಿದ್ದವು.   

ಕೊಣನೂರು ಸೀತಾರಾಮಶಾಸ್ತ್ರಿಗಳು 1970ರ ಮೇ 28ರಂದು ಈ ಲೋಕವನ್ನಗಲಿದರು.

On birth anniversary of Konanur Seetharama Shastri 

ಕಾಮೆಂಟ್‌ಗಳು

  1. Hari om. Kala pratibhanvitarige koti namanagalu. Parama poojya Sri Sri Shivananda Bharathi Maha swamigalu jagadguru bhagavatpaada parama poojya Sri Sri Aadi shankaraachaarya Advaita peetam peethadhishwara. Naarayana smaraneyondige anugrahadondige hagu Aashirvaadagalu.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ