ಸುಮತೀಂದ್ರ ನಾಡಿಗ
ಸುಮತೀಂದ್ರ ನಾಡಿಗ
ಸುಮತೀಂದ್ರ ನಾಡಿಗರು ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಹೆಸರಾಗಿದ್ದಾರೆ.
ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ 1935ರ ಮೇ 4ರಂದು ಜನಿಸಿದರು.
ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾಡಿಗರು ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ಅಮೆರಿಕದ ಫಿಲೆಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. 1985ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪಡೆದುಕೊಂಡ ನಾಡಿಗರು ತಮ್ಮ ಪ್ರೌಢ ಪ್ರಬಂಧಕ್ಕಾಗಿ ಆರಿಸಿಕೊಂಡಿದ್ದ ವಿಷಯ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ಸುಮುತೀಂದ್ರ ನಾಡಿಗರು ವಿಶೇಷವಾದ ಅಧ್ಯಯನ ನಡೆಸಿದ್ದರು.
ಅಧ್ಯಾಪನದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ನಿರಂತರ ಸೇವೆ ಸಲ್ಲಿಸಿದ್ದ ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ‘ಜಡ ಮತ್ತು ಚೇತನ’, ‘ಪಂಚಭೂತಗಳು’, ‘ನಟರಾಜ ಕಂಡ ಕಾಮನಬಿಲ್ಲು’, ‘ಕುಹೂ ಗೀತ’, ‘ತಮಾಷೆ ಪದ್ಯಗಳು’, ‘ದಾಂಪತ್ಯ ಗೀತ’, ‘ಭಾವಲೋಕ’, ‘ಉದ್ಘಾಟನೆ’, ‘ಕಪ್ಪು ದೇವತೆ’ ಮತ್ತು ‘ನಿಮ್ಮ ಪ್ರೇಮಕುಮಾರಿಯ ಜಾತಕ’ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಇವುಗಳ ಪೈಕಿ ‘ಪಂಚಭೂತಗಳು’ ಮತ್ತು ‘ದಾಂಪತ್ಯ ಗೀತ’ ಪ್ರಮುಖವಾಗಿದ್ದು, ಇಂಗ್ಲಿಷ್ ಮತ್ತು ಭಾರತದ ಹಲವು ಪ್ರಾಂತೀಯ ಭಾಷೆಗಳಿಗೆ ಅನುವಾದಗೊಂಡಿವೆ.
‘ಮೌನದಾಚೆಯ ಮಾತು’, ‘ನಾಲ್ಕನೆಯ ಸಾಹಿತ್ಯ ಚರಿತ್ರೆ’, ‘ಮತ್ತೊಂದು ಸಾಹಿತ್ಯ ಚರಿತ್ರೆ’, ‘ಅಡಿಗರು ಮತ್ತು ನವ್ಯಕಾವ್ಯ’, ‘ವಿಮರ್ಶೆಯ ದಾರಿಯಲ್ಲಿ’, ‘ಹೀಗೊಂದು ಸಾಹಿತ್ಯ ಚರಿತ್ರೆ’, ‘ಇನ್ನೊಂದು ಸಾಹಿತ್ಯ ಚರಿತ್ರೆ’, ‘ವಿಮರ್ಶೆಯ ದಾರಿಯಲ್ಲಿ’, ‘ಕಾವ್ಯ ಎಂದರೇನು?’ ಮುಂತಾದವು ನಾಡಿಗರ ವಿಮರ್ಶಾ ಕೃತಿಗಳು. ‘ಗಿಳಿ ಮತ್ತು ದುಂಬಿ’, ‘ಕಾರ್ಕೋಟಕ’, ‘ಸ್ಥಿತಪ್ರಜ್ಞ’ ಎಂಬ ಕಥಾ ಸಂಕಲನಗಳನ್ನು ಹೊರತಂದಿದ್ದ ನಾಡಿಗರ ‘ಆಯ್ದ ಕಥೆಗಳು’ ಎಂಬ ಕೃತಿ ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯವಾಗಿತ್ತು. ಮಕ್ಕಳ ಸಾಹಿತ್ಯದಲ್ಲೂ ವಿಪುಲ ಕೃಷಿ ನಡೆಸಿದ್ದ ನಾಡಿಗರು, ‘ಡಕ್ಕಣಕ್ಕ ಡಕ್ಕಣ’, ‘ಧ್ರುವ ಮತ್ತು ಪ್ರಹ್ಲಾದ’, ‘ದಿಡಿಲಕ್ ದಿಡಿಲಕ್’, ‘ಗೂಬೆಯ ಕಥೆ’, ‘ಇಲಿ ಮದುವೆ’, ‘ಗಾಳಿಪಟ’, ‘ಸಾಹಸ(ಸರಣಿ ಕತೆಗಳು)’ ಮುಂತಾದ ಕೃತಿಗಳನ್ನೂ, ‘ಹನ್ನೊಂದು ಹಂಸಗಳು’ ಎಂಬ ಮಕ್ಕಳ ನಾಟಕವನ್ನೂ ಬರೆದಿದ್ದರು.
ಸುಮತೀಂದ್ರ ನಾಡಿಗರ 'ಕಾವ್ಯವೆಂದರೇನು?' ಕೃತಿಯು ‘ಕವಿತೆ ಬರೆಯುವುದು ಹೇಗೆ?’ ಎನ್ನುವುದನ್ನು ಕುರಿತ ಕೆಲವು ಉಪಯುಕ್ತ ಸೂಚನೆಗಳನ್ನು ಒಳಗೊಂಡಿರುವ ಕೃತಿ. ಕಾವ್ಯದ ಹಾದಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿರುವ ತರುಣ ಕವಿಗಳಿಗೆ, ನಾಡಿಗರು ಹೇಳಿದ ಹಲವು ಮೌಲಿಕವಾದ ‘ಮೊದಲ ಪಾಠ’ಗಳು ಇಲ್ಲಿವೆ. ಕವಿ ಎಂದರೇನು? ಕವಿತೆಯ ಪರಿಕರಗಳು ಯಾವುವು? ಕವಿಯ ಅನುಭವದ ಸ್ವರೂಪವೇನು? ಕವಿತೆಯೊಂದನ್ನು ಅರ್ಥ ಮಾಡಿಕೊಳ್ಳುವುದು, ಆಸ್ವಾದಿಸುವುದು, ವಿಶ್ಲೇಷಿಸುವುದು ಹೇಗೆ? – ಇತ್ಯಾದಿ ಹಲವು ಹತ್ತು ಸಂಗತಿಗಳನ್ನು ನಾಡಿಗರು ತಮ್ಮ ಸ್ವಾನುಭವದ ಮೂಲಮಾನದಲ್ಲಿ, ಅತ್ಯಂತ ಆತ್ಮೀಯವಾಗಿ ಹಾಗೂ ತಿಳಿಯಾಗಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಯವಾಗಿದೆ.
ಅನುವಾದ ಕ್ಷೇತ್ರದಲ್ಲೂ ನಾಡಿಗರದು ದೊಡ್ಡ ಹೆಸರು. ‘ರಾಧಾನಾಥ್ ರಾಯ್’, ‘ಸಿಂಧಿ ಸಾಹಿತ್ಯ ಚರಿತ್ರೆ’, ಚಾರ್ಲ್ಸ್ ಡಿಕನ್ಸನ ‘ಹಾರ್ಡ್ ಟೈಮ್ಸ್’ (ವೇಣುಗೋಪಾಲ ಸೊರಬ ಅವರೊಂದಿಗೆ), ಅರಿಷ್ಟೋಫೇನನ ‘ಬರ್ಡ್ಸ್’, ರಸ್ಕಿನ್ನನ ‘ಅನ್ ಟು ದಿಸ್ ಲಾಸ್ಟ್’, ಸ್ಟ್ರಿಂಡ್ ಬರ್ಗನ ‘ಮಿಸ್ ಜೂಲಿ’, ಲೋನೆಸ್ಕೊನ ‘ ಬೊಕ್ಕ ತಲೆಯ ರಾಜಕುಮಾರಿ’ ಮುಂತಾದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿರುವುದಲ್ಲದೆ, ಬಂಗಾಳಿ ಭಾಷೆಯಿಂದ ರವೀಂದ್ರನಾಥ ಟಾಗೋರರ ‘ತಿನ್ ಸಂಗಿ’, ನರೇಂದ್ರನಾಥ ಚಕ್ರವರ್ತಿಯವರ ‘ಉಲಂಗ್ ರಾಜಾ’, ಬಂಗಾಳದ ಕವಿತೆಗಳು ಮುಂತಾದವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ ಸಮುತೀಂದ್ರ ನಾಡಿಗರ ಪ್ರಮುಖ ಕೃತಿಗಳೆಂದರೆ ‘Selected poems of Gopalaksirhna Adiga’, ವೀರಪ್ಪ ಮೊಯ್ಲಿಯವರ ಕಾದಂಬರಿ ಅನುವಾದಿತ ‘On to the Great Beyond’, ಪಿ. ಶ್ರೀನಿವಾಸ ರಾವ್ ಅವರೊಂದಿಗೆ ‘The Buddha Smile’, ‘A House of Thousand Doors’, ‘Poems of G. S. Shivarudrappa’, ‘20th Century Kannada Poetry with an introduction by Nissim Ezekiel’, ‘Selected Kannada Short Stories and Jnanapeeth Laureatres of Karnataka (with L. S. Seshagiri Rao)’, ‘Roots and Wings (Poems of P. Sreenivasa Rao)’, ‘Complete works of P. Sreenivasa Rao’, ‘Critical Studies of S. L. Bhyrappa's Works’ ಮುಂತಾದವು.
ಸುಮತೀಂದ್ರ ನಾಡಿಗರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದರು. 1996-1999 ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷರಾಗಿದ್ದ ನಾಡಿಗರನ್ನು ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಭಾರತದ ಹಲವಾರು ಭಾಷೆಗಳನ್ನು ಬಲ್ಲಿದರಾಗಿದ್ದ ನಾಡಿಗರಿಗೆ (ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ) ಭಾರತೀಯ ಸಾಹಿತ್ಯದ ಅತ್ಯಂತ ನಿಕಟ ಪರಿಚಯವಿತ್ತು.
ಈ ಮಹಾನ್ ಸಾಧಕ ಸುಮತೀಂದ್ರ ನಾಡಿಗರು 2018ರ ಆಗಸ್ಟ್ 7ರಂದು ಈ ಲೋಕವನ್ನಗಲಿದರು.
On the birth anniversary of poet and critic Sumatheendra R. Nadig
ಕಾಮೆಂಟ್‌ಗಳು