ಸುಶ್ರುತ ದೊಡ್ಡೇರಿ
ಸುಶ್ರುತ ದೊಡ್ಡೇರಿ
ಸುಶ್ರುತ ದೊಡ್ಡೇರಿ ಇಂದಿನ ಯುವಪಡೆಯ ಹೂದೋಟದಲ್ಲಿ ನಸುನಗುವಿನಿಂದ ಕಂಗೊಳಿಸುವ ಹೂವಿನಂತಹ ಚೆಲುವಿನ ಬರಹಗಾರ. ಅವರ ನಸುನಗೆಯಂತೆಯೇ ಅವರ ಲಲಿತ ಬರಹಗಳೂ, ಕವಿತೆಗಳೂ ಸೌಗಂಧಯುಕ್ತ ಮತ್ತು ಆಕರ್ಷಣೀಯ.
ಮೇ 12 ಸುಶ್ರುತ ದೊಡ್ಡೇರಿ ಅವರ ಜನ್ಮದಿನ. ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು. ಬೆಂಗಳೂರಿನಲ್ಲಿ ಉದ್ಯೋಗಿ.
ಸುಶ್ರುತ ದೊಡ್ಡೇರಿ ನನಗೆ ತಿಳಿದಂತೆ ಕನ್ನಡದಲ್ಲಿ ಬ್ಲಾಗ್ ಲೋಕ ಪ್ರಾರಂಭಗೊಂಡ ಕಾಲದಿಂದ ಸಕ್ರಿಯವಾಗಿ ಬರೆಯುತ್ತ ಬಂದವರು. 'ಪ್ರಣತಿ’ ಸಂಸ್ಥೆಯಿಂದ ಸಾಹಿತ್ಯ-ಸಂಸ್ಕೃತಿ-ಪ್ರಕೃತಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವವರು. ‘ಚಿತ್ರಚಾಪ’ (ಗೆಳೆಯರ ಜತೆ), ‘ಹೊಳೆಬಾಗಿಲು’ (ಲಲಿತ ಪ್ರಬಂಧಗಳು), ‘ಬ್ಲಾಗಿಸು ಕನ್ನಡ ಡಿಂಡಿಮವ’ (ಸಹ-ಸಂಪಾದಿತ) ಅವರ ಪ್ರಕಟಿತ ಕೃತಿಗಳು. ‘ಮೌನಗಾಳ’ ಇವರ ಬ್ಲಾಗು.
‘ಸುಶ್’ ಅಂತಲೇ ಹೆಸರಾದ ಸುಶ್ರುತಾ ದೊಡ್ಡೇರಿ ಲಲಿತ ಪ್ರಬಂಧಕ್ಕೆ ‘ಕನ್ನಡಪ್ರಭ-ಅಂಕಿತ ಪುಸ್ತಕ ಜಂಟಿ ಪುರಸ್ಕಾರ ಪಡೆದವರು. ಅವರ ಲಲಿತ ಪ್ರಬಂಧಗಳ ಸಂಕಲನ ‘ಹೊಳೆಬಾಗಿಲು’ ಕನ್ನಡ ಸಾಹಿತ್ಯ ಪರಿಷತ್ ಪುಸ್ತಕ ಬಹುಮಾನ ಗಳಿಸಿತು. ಅವರ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ಮತ್ತು ವಿಶೇಷಾಂಕಗಳಲ್ಲಿ ನಲಿದಿವೆ.
ಸುಶ್ರುತ ದೊಡ್ಡೇರಿ ಅವರ ಬರಹಗಳಲ್ಲಿ ಆಪ್ತತೆಯ ಹಸನ್ಮುಖದ ವಿಸ್ತಾರದ ಜೊತೆ ಜೊತೆಗೆ ಮಾನವ ಸಂಬಂಧಗಳ ಆಳವಾದ ಸಂವೇದನೆಗಳ ಸೂಕ್ಷ್ಮಾತಿಸೂಕ್ಷ್ಮಗಳನ್ನರಸುವ ಪಾತಾಳ ಗರಡಿಯೇ ಇದೆ. ಇದಕ್ಕೊಂದು ಉದಾಹರಣೆ ಅವರ 'ಕಂಪನ' ಎಂಬ ಈ ಕವಿತೆ:
-ಕಂಪನ-
ನೀವು ಗಮನಿಸಿದ್ದೀರೋ ಇಲ್ಲವೋ
ವಿಲ್ ಬರೆಸುವವರ ಕೈ ಸಣ್ಣಗೆ ನಡುಗುತ್ತಿರುತ್ತದೆ
ಅಂಬಾಸಿಡರ್ ಕಾರಿನ ಗೇರಿನಂತೆ
ಅವರ ಬಳಿ ಗಟ್ಟಿಯಾಗಿ ಮಾತಾಡಬೇಡಿ
ಗಾಜಿನ ಕವಚದ ಅವರ ಹೃದಯ
ಫಳ್ಳನೆ ಒಡೆದು ಹೋಗಬಹುದು
ಕುರ್ಚಿಗೊರಗದೆ ಕೂತು ತುಸುವೆ ಬಾಗಿ
ಮೆಲುದನಿಯಲವರಾಡುವ ಮಾತು ಕೇಳಿಸಿಕೊಳ್ಳಿ:
ಅಷ್ಟೆಲ್ಲ ಮಾಡಿದರೂ ತನ್ನನು ತಾತ್ಸಾರ ಮಾಡುವ
ಹಿರಿಮಗನ ಬಗೆಗಿನ ಅವರ ಅಸಮಾಧಾನ
ವಿದೇಶದಲ್ಲಿದ್ದರೂ ಆಗೀಗ ಫೋನು ಮಾಡುವ
ಕಿರಿಮಗನೆಡೆಗೆ ಅದೇನೋ ಅಭಿಮಾನ
ಈಗಾಗಲೇ ಹಿಸ್ಸೆ ತೆಗೆದುಕೊಂಡು ಬೇರಾಗಿರುವ
ಮಧ್ಯದ ಮಗನ ಬಗ್ಗೆ ಸಿಡುಕು
ಹೆಣ್ಣುಮಕ್ಕಳನ್ನೆಲ್ಲ ಒಳ್ಳೇ ಕಡೆ ಸೇರಿಸಿದ್ದೇನೆ
ಎನ್ನುವಾಗ ನೆಮ್ಮದಿಯ ಸಣ್ಣನಗೆ
ಯಾವುದಕ್ಕೂ ಟಿಶ್ಯೂ ರೆಡಿಯಿಟ್ಟುಕೊಂಡಿರಿ:
ನಾಲ್ಕು ವರ್ಷದ ಹಿಂದೆ ಗತಿಸಿದ
ಹೆಂಡತಿಯ ಬಗ್ಗೆ ಹೇಳುವಾಗ
ಫಕ್ಕನೆ ಕಣ್ಣೀರೂ ಉಕ್ಕೀತು
ಆ ಟಿಶ್ಯೂವನ್ನೇನು ಅವರು ಬಳಸುವುದಿಲ್ಲ
ಮಂಜುಗಟ್ಟಿದ ಕನ್ನಡಕ ತೆಗೆದು
ತಮ್ಮದೇ ಕರವಸ್ತ್ರದಿಂದ ಒರೆಸಿಕೊಂಡು...
ನಿಮ್ಮ ಕತೆ ಬೇಡ, ಆಸ್ತಿ ವಿಲೇವಾರಿ ಬಗ್ಗೆ
ಹೇಳಿ ಸಾಕು ಅಂತೆಲ್ಲ ರೇಗಬೇಡಿ
ರಿಟೈರಾದ ದಿನ ಸಹೋದ್ಯೋಗಿಗಳು
ಹಾರ ಹಾಕಿ ಮಾಡಿದ ಸನ್ಮಾನದ ಬಗ್ಗೆ
ಅವರಿಗೆ ಹೇಳಿಕೊಳ್ಳಬೇಕಿದೆ, ಕೇಳಿಸಿಕೊಳ್ಳಿ
ಕೆಲಸ ಮುಗಿಸಿ ನಿಮ್ಮ ಕಚೇರಿಯಿಂದ
ಹೊರಟಾಗ ಅವರ ಜತೆಗೇ ತೆರಳಿ
ಮೆಟ್ಟಿಲು ಇಳಿಯುವಾಗ ಕೈ ಹಿಡಿದುಕೊಳ್ಳಿ
ಬೇಡ ಬೇಡ ಎನ್ನುತ್ತಲೇ ವಾಲುದೇಹವನ್ನು
ಸಂಬಾಳಿಸಿಕೊಳ್ಳುತ್ತ ಕೈಚೀಲದಲ್ಲಿನ
ಕಾಗದ ಪತ್ರಗಳನ್ನು ಜೋಪಾನ ಮಾಡುತ್ತಾ...
ಆಮೇಲವರು ರಸ್ತೆಯ ತಿರುವಿನಲ್ಲಿ
ಕರಗಿಹೋಗುವರು ಪಶ್ಚಿಮದ ರವಿಯ ಹಾಗೆ
ನೀವು ವಾಪಸು ಕಚೇರಿಗೆ ಬಂದಾಗ
ಅರೆ, ಅದ್ಯಾಕೆ ನಿಮ್ಮ ಕೈ ಸಣ್ಣಗೆ ನಡುಗುತ್ತಿದೆ
ಅದ್ಯಾಕೆ ಹಾಗೆ ನಿರ್ವಾತವನ್ನು ತುಂಬಿಸಿಬಿಡುವವರ ಹಾಗೆ
ಹಳೆಯ ಹಿಂದಿ ಹಾಡುಗಳಿಗೆ ತಡಕಾಡುತ್ತಿದ್ದೀರಿ
ಎಂದೂ ಇಲ್ಲದವರು ಅದ್ಯಾಕೆ ಲಗುಬಗೆಯಿಂದ ಹೆಂಡತಿಗೆ
ಫೋನು ಮಾಡಿ ಏನು ಮಾಡ್ತಿದೀ ಅಂತೆಲ್ಲ ವಿಚಾರಿಸ್ತಿದೀರಿ
ಅದ್ಯಾಕೆ ಮಕ್ಕಳ ಫೋಟೋಗಳನ್ನು
ಸ್ಕ್ರಾಲ್ ಮಾಡಿ ಮಾಡಿ ನೋಡುತ್ತಿದ್ದೀರಿ
ಅದ್ಯಾಕೆ ಹಾಗೆ ನೀರು ಕುಡಿಯುತ್ತಿದ್ದೀರಿ
ಅದ್ಯಾಕೆ ಅದ್ಯಾಕೆ...
ನನ್ನನ್ನು ಸೆಳೆದ ಸುಶ್ರುತ ದೊಡ್ಡೇರಿ ಅವರ ಮತ್ತೊಂದು ಸಮಸ್ತವನ್ನೂ ಬೆಸೆವ ಚಿಂತನೆ:
ಬೀಳಾಕಾಶ ಬೋರು ಎನಿಸಿ
ತಂತಿಗಳನು ಎಳೆದರು
ತಂತಿ ಸಾಲದೆಂದುಕೊಂಡು
ಹಕ್ಕಿಯೆರಡು ಬಂದವು
ಬೆಸೆದ ತಂತಿ ಬೆಸೆದ ಹಕ್ಕಿ
ಹಿಂದೆ ಅಗಾಧ ಆಗಸ
ಚಿತ್ರ ರಚಿತ ರೀತಿ ನೋಡಿ
ಬಯಲಿಗಾಯ್ತು ಸಂತಸ
ಪಕ್ಕಿಗಾನಕಿಲ್ಲಿ ತಂತಿ
ಪಕ್ಕವಾದ್ಯವಾಗಿ ಮಿಡಿದ
ರೀತಿ ಕಂಡು ಸುತ್ತಲಿರುವ
ಮರಗಿಡಗಳು ತೂಗಿವೆ
ಖಾಲಿಗೊಂದು ಅರ್ಥ ಬಂದ
ಮೌನವಳಿದು ಗಾನ ಹರಿದ
ರಂಗಮಂಚಕೀಗ ಮಳೆಯು
ಇಳಿದು ತಾನು ಬರಲಿದೆ
ಕೊಡೆಯ ಹಿಡಿದ ನೀವೆಲ್ಲರು
ಗಗನಮುಖಿಗಳಾಗಿ ಬಂದು
ಉಚಿತವಾಗಿ ಖಚಿತಖುಷಿಯ
ಪಡೆದುಕೊಂಡು ಹೋಗಿರಿ
ಸುಶ್ರುತ ದೊಡ್ಡೇರಿ ಅವರ ಬರಹಗಳು ತಮ್ಮದು ಇನ್ನೊಬ್ಬರದು ಎಂಬ ಬ್ಲಾಗ್ ಮೇರೆಗಳಿಲ್ಲದೆ World Wide Web ಅಲ್ಲಿ ಯಾವುದೇ ಮೇರೆ ಇಲ್ಲದೆ, ಆದರೆ ಮೇರೆ ಮೀರದಂತೆ ಅನೇಕ ಕಡೆ ಕಂಗೊಳಿಸಿರುವುದನ್ನು ಕಂಡಿದ್ದೇನೆ. ಬೆಂಗಳೂರಿನ ಸಮಾರಂಭಗಳಲ್ಲಿ ಅವರನ್ನು ಕಂಡಾಗ ಅವರು ಎಲ್ಲರನ್ನೂ ಆಪ್ತವಾಗಿ ಮಾತಾಡಿಸುವ ರೀತಿ ಆಕರ್ಷಣೀಯವೆನಿಸುತ್ತದೆ.
ಎಲ್ಲರಿಗೂ ಪ್ರಿಯರಾದ ಆತ್ಮೀಯ ಸಂವೇದನಾಶೀಲ ಬರಹಗಾರ ಸುಶ್ರುತ ದೊಡ್ಡೇರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ಮತ್ತು ಅವರ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday to ever happy boy Sushrutha Dodderi
ಕಾಮೆಂಟ್‌ಗಳು