ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸದಾಶಿವ್


 ಸದಾಶಿವ್ ಅಮ್ರಾಪುರ್‌ಕರ್


ಸದಾಶಿವ್ ಅಮ್ರಾಪುರ್‌ಕರ್ ಚಲನಚತ್ರರಂಗದ ಉತ್ತಮ ನಟರಲ್ಲೊಬ್ಬರೆನಿಸಿದ್ದವರು.

ಸದಾಶಿವ್ ಅಮ್ರಾಪುರ್‌ಕರ್ 1950ರ ಮೇ 11ರಂದು ಅಹಮದ್‌ನಗರದಲ್ಲಿ ಜನಿಸಿದರು.  ಗಣೇಶ್ ಕುಮಾರ್ ನರ್ವೋಡ್ ಇವರ ಮುಂಚಿನ ಹೆಸರು. ಆಪ್ತರಿಗೆಲ್ಲ ಮೆಚ್ಚಿನ ‘ತಾತ್ಯಾ’ ಆಗಿದ್ದ ಅವರು ಎಳೆಯ ವಯಸ್ಸಿನಿಂದಲೇ ಸಮಾಜ ಸೇವೆಯ ಬಗ್ಗೆ ಆಸಕ್ತಿ ಹೊಂದಿದ್ದರು, ದುರ್ಬಲ ವರ್ಗದವರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು. ಹೈಸ್ಕೂಲ್ ಗೆಳತಿ ಸುನಂದಾ ಕರ್ಮಾರ್ಕರ್ ಅವರನ್ನು ವಿವಾಹವಾಗಿದ್ದ ಸದಾಶಿವ ಅಮ್ರಾಪುರ್‌ಕರ್, ಶಾಲಾ-ಕಾಲೇಜು ದಿನಗಳಲ್ಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದರು. 

ಸದಾಶಿವ್ ಅಮ್ರಾಪುರ್‌ಕರ್ 1974ರಲ್ಲಿ 'ರಂಗ್ ಬಿ ರಂಗಿ ದುನಿಯಾ' ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಆರಂಭದಲ್ಲಿ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. 1983ರಲ್ಲಿ ತೆರೆ ಕಂಡಿದ್ದ ಗೋವಿಂದ ನಿಹಲಾನಿ ಅವರ ‘ಅರ್ಧ್ ಸತ್ಯ’ ಇವರ ಚೊಚ್ಚಲ ಬಾಲಿವುಡ್ ಚಿತ್ರ. ಈ ಚಿತ್ರದಲ್ಲಿ ಅತ್ಯುತ್ತಮ ಪೋಷಕ ಪಾತ್ರದ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಸಂದಿತು. ಹೀಗೆ ಅವರಿಗೆ ಖಳನಟರಾಗಿ ಅವಕಾಶಗಳು ಅರಸಿಬಂದವು.

1991ರಲ್ಲಿ ತೆರೆ ಕಂಡ ಸೂಪರ್ ಹಿಟ್ ಚಿತ್ರ, ಸಂಜಯ್ ದತ್ ನಾಯಕನಾಗಿ ಅಭಿನಯಿಸಿದ ‘ಸಡಕ್’ ಚಿತ್ರದ ನಿರ್ದಯಿ ಹಿಜಡಾ ಪಾತ್ರಕ್ಕಾಗಿ ಸದಾಶಿವ್ ಅವರಿಗೆ ‘ಅತ್ಯುತ್ತಮ ವಿಲನ್’ ಪ್ರಶಸ್ತಿ ಸಂದಿತು. 1993ರಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಮೊದಲ ಬಾರಿಗೆ ವಿಲನ್ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಆ ಚೊಚ್ಚಲ ಪ್ರಶಸ್ತಿಗೆ ಸದಾಶಿವ್ ಆಯ್ಕೆಯಾಗಿದ್ದು ವಿಶೇಷ.

‘ಆಂಖೇ’, ’ಇಷ್ಕ್’, ‘ಮಿ.ಇಂಡಿಯಾ’, ‘ಕೂಲಿ ನಂ.1', 'ಗುಪ್ತ್: ದ ಹಿಡನ್ ಟ್ರುಥ್’ ಅವರು ನಟಿಸಿದ ಇತರ ಪ್ರಮುಖ ಚಿತ್ರಗಳಲ್ಲಿ ಸೇರಿವೆ. 2012ರಲ್ಲಿ ಬಿಡುಗಡೆಯಾದ ‘ಬಾಂಬೇ ಟಾಕೀಸ್’ ಸದಾಶಿವ್ ಅಮ್ರಾಪುರ್‌ಕರ್ ಅವರ ಕೊನೆಯ ಚಿತ್ರ. 

ಡೇವಿಡ್ ಧವನ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸದಾಶಿವ್ 90ರ ದಶಕಗಳಲ್ಲಿ ಕಾಮಿಡಿ ಪಾತ್ರಗಳತ್ತ ಹೆಚ್ಚು ಗಮನ ಹರಿಸಿದ್ದು, ‘ಆಂಖೇ’, ‘ಆಂಟಿ ನಂ. 1’, ‘ಕೂಲಿ ನಂ.1’ ಮೊದಲಾದ ಚಿತ್ರಗಳಲ್ಲಿ ನಟ ಗೋವಿಂದ ಜತೆ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಆದಾಗ ಸದಾಶಿವ್  ಮರಾಠಿ ಚಿತ್ರಗಳತ್ತ ತೆರಳಿದರು.

ತಮ್ಮ ಕೊನೆಯ ವರ್ಷಗಳಲ್ಲಿ ಚಿತ್ರದ ಆಯ್ಕೆಯಲ್ಲಿ ನಿಗಾ ವಹಿಸಿದ್ದ ಸದಾಶಿವ್ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಸದಾಶಿವ್ ಅಮ್ರಾಪುರ್‌ಕರ್ ಹಿಂದಿ, ಮರಾಠಿ, ಬೆಂಗಾಳಿ, ಒರಿಯಾ, ಹರ್ಯಾಣ ಭಾಷೆಗಳು ಸೇರಿ ಒಟ್ಟು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಬಾಲಿವುಡ್‌ನಲ್ಲಿಯೇ ಸುಮಾರು 180 ಚಿತ್ರಗಳಲ್ಲಿ ಖಳನಟ, ಪೋಷಕ ನಟ ಮತ್ತು ಹಾಸ್ಯನಟರಾಗಿ ವೈವಿಧ್ಯತೆ ತೋರಿದ್ದರು.

ಸದಾಶಿವ್ ಅಮ್ರಾಪುರ್‌ಕರ್ 2014ರ ನವೆಂಬರ್ 3ರಂದು ಈ ಲೋಕವನ್ನಗಲಿದರು.

On the birth anniversary of great actor Sadashiv Amrapurkar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ