ವಜ್ರಮುನಿ
ವಜ್ರಮುನಿ
ವಜ್ರಮುನಿ ಕನ್ನಡದ ಪ್ರಖ್ಯಾತ ನಟರು.
ವಜ್ರಮುನಿ 1944ರ ಮೇ 11ರಂದು ಜನಿಸಿದರು. ಕನ್ನಡದ ರಾಜ್ ಕುಮಾರ್, ವಿಷ್ಣುವರ್ಧನ, ಅಂಬರೀಶ್ ಅವರೆಲ್ಲಾ ದೊಡ್ಡ ಹೊಡೆದಾಟದ ಹೀರೋಗಳಾಗಿ ವಿಜ್ರಂಭಿಸಿದಾಗ ಅವರುಗಳಿಗೆ ಪ್ರತೀ ಚಿತ್ರದಲ್ಲೂ ಸ್ಪರ್ಧೆನೀಡಿ, ಒಂದಷ್ಟು ರೋಷ ತೋರಿ, ಏಟು ತಿಂದು, ಈ ನಾಯಕನಟರ ಮೆಹನತ್ತನ್ನು ಬೆಳಗಲು ಕಾರಣರಾಗಿ ವಿಜ್ರಂಭಿಸಿದವರು ಹಲವು ಖಳನಟರು. ಅವರಲ್ಲಿ ನಮ್ಮ ಕಾಲದಲ್ಲಿ ಪ್ರಮುಖರಾಗಿದ್ದವರು ತೂಗುದೀಪ ಶ್ರೀನಿವಾಸ್ ಮತ್ತು ವಜ್ರಮುನಿ. ತೂಗುದೀಪ ಶ್ರೀನಿವಾಸ್ ಇದ್ದ ಕಾಲದಲ್ಲಿ ಅವರಿಗೆ ಸರಿಸಮನಾಗಿ ಮತ್ತು ಅವರ ಕಾಲಾನಂತರದಲ್ಲಿ ಏಕಾಮೇವಾದ್ವಿತೀಯರಾಗಿ ಕನ್ನಡ ಚಿತ್ರರಂಗದಲ್ಲಿ ಅಸಂಖ್ಯಾತ ಚಿತ್ರಗಳಲ್ಲಿ ಮೊಳಗಿದವರು ವಜ್ರಮುನಿ.
ವಜ್ರಮುನಿ ರಂಗಭೂಮಿಯ ಬಗ್ಗೆ ಅಪಾರ ಒಲವು ಹೊಂದಿದ್ದರು. ಹಾಗಾಗಿ ಕಾಲೇಜು ಸೇರಿದರೂ ಓದು ಅವರಿಗೆ ರುಚಿಸಲಿಲ್ಲ. ಅವರ ‘ಪ್ರಚಂಡ ರಾವಣ’, 'ಕುರುಕ್ಷೇತ್ರ'ದಂತಹ ನಾಟಕಗಳು ಅತ್ಯಂತ ಯಶಸ್ವಿಯಾಗಿದ್ದವು. ಅವರು ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದಾಗ ಕೂಡಾ ಆಗಾಗ ನಾಟಕಗಳಲ್ಲಿ ಅಭಿನಯಿಸಿ ಬರುತ್ತಿದ್ದರು. ಸಿನಿಮಾ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಪಡೆದು ಸಿನಿಮಾ ಕ್ಷೇತ್ರಕ್ಕೆ ಬಂದರು.
ವಜ್ರಮುನಿಯವರು ಮೊದಲು ನಟಿಸಿದ್ದು ಪುಟ್ಟಣ್ಣ ಕಣಗಾಲರ ‘ಸಾವಿರ ಮೆಟ್ಟಿಲು ಚಿತ್ರಕ್ಕಾಗಿ’. ಹಲವಾರು ಕಾರಣಗಳಿಂದಾಗಿ ಆ ಚಿತ್ರ ಬಿಡುಗಡೆಗೊಳ್ಳಲಿಲ್ಲ. ನಂತರದಲ್ಲಿ ಪುಟ್ಟಣ್ಣ ಕಣಗಾಲರೇ ‘ಮಲ್ಲಮ್ಮನ ಪವಾಡ’ದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ಅವರು ಹಿಂದೆ ನೋಡಿದ್ದೇ ಇಲ್ಲ.
ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರನ ಪಾತ್ರವಿರಲಿ, ಬದುಕು ಬಂಗಾರವಾಯ್ತು ಚಿತ್ರದ ಒಕ್ಕಣ್ಣ ಗೌಡನಾಗಲಿ, ಮಯೂರದ ಚಾರಿತ್ರಿಕ ಪಾತ್ರವಿರಲಿ, ಕಳ್ಳ ಕುಳ್ಳ – ದಾರಿ ತಪ್ಪಿದ ಮಗ – ಶಂಕರ್ ಗುರು ಅಂತಹ ಡಾನ್ ಪಾತ್ರಗಳಾಗಲಿ ವಜ್ರಮುನಿಯವರಿಗೆ ಲೀಲಾಜಾಲವಾಗಿತ್ತು. ಸಾಮಾನ್ಯವಾಗಿ ಬರೀ ಕೈ ಕಾಲು ಆಡಿಸುವುದರಲ್ಲಿ, ಮೊಗವನ್ನು ಕೆಟ್ಟದಾಗಿ ತಿರುಗಿಸುವುದನ್ನೇ ನಟನೆ ಎಂದುಕೊಂಡಿರುವ ಖಳನಟರನ್ನು ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲೂ ಕಾಣಬಹುದು. ಆದರೆ ವಜ್ರಮುನಿಯವರ ಅಭಿನಯದ ವೈಖರಿಯೇ ಬೇರೆಯ ತೆರನಾದದ್ದು. ಅವರ ಮುಖ ಭಾವ, ಕಣ್ಣು, ರೋಷ, ನಗು, ನಡೆ, ದೇಹ ಸಂಚಲನೆ ಎಲ್ಲವೂ ಒಂದಕ್ಕೊಂದು ಸಮನ್ವಯವಾಗುತ್ತಿದ್ದವು.
ಎಲ್ಲಾ ನಟ ನಟಿಯರಿಗೆ ಚಿತ್ರರಂಗದಲ್ಲಿ ಇರುವ ಮಿತಿ ಎಂದರೆ ಸಮಾನ ಪಾತ್ರಗಳ ಪುನರಾವರ್ತನೆ. ಕತೆ ಎಲ್ಲಿ ಪ್ರಾರಂಭವಾಗಿ, ಎಲ್ಲಿ ಮರಸುತ್ತಿ, ಎಲ್ಲಿ ಫೈಟ್ ಆಗಿ, ಎಲ್ಲಿ ಎಲ್ಲಾ ಮುಗಿದ ಮೇಲೆ ಖಳನಟ ಪೋಲಿಸ್ ಕೈಗೆ ಸಿಕ್ಕಿ, ನಾಯಕನಟನ ಮನೆಯಲ್ಲಿ ಫ್ಯಾಮಿಲಿ ಫೋಟೋ ಬರುತ್ತದೆ ಇತ್ಯಾದಿ ಎಲ್ಲವೂ ಸಮಸ್ತ ಪ್ರೇಕ್ಷಕರಿಗೆ ಬಹುಶಃ ಚಿತ್ರಮಂದಿರದಲ್ಲಿ ಕುಳಿತಾಗ ಇರಲಿ, ಚಿತ್ರದ ಹೆಸರು ನೋಡಿಯೇ ತಿಳಿದು ಬಿಟ್ಟಿರುತ್ತದೆ. ಈ ಪರಿಮಿತಿಯಲ್ಲಿ ವಜ್ರಮುನಿಯಂತಹ ಒಬ್ಬ ಕಲಾವಿದ ತನ್ನ ಪ್ರತಿಭೆಯನ್ನು ಜನ ಮಾನಸದಲ್ಲಿ ನೆಲೆಗಾಣಿಸಿರುವುದು ಹೆಚ್ಚುಗಾರಿಕೆಯೇ ಸರಿ.
ಕೇವಲ ಖಳನಟನಾಗಿ ಪಾತ್ರವಲ್ಲದೆ ಮನೋಹರವಾದ ಪೋಷಕ ಪಾತ್ರಗಳಲ್ಲಿ ಚಾರಿತ್ರಿಕ ನಟರಾಗಿ ಸಹಾ ಮನಸೆಳೆದವರು ವಜ್ರಮುನಿ. ‘ಭರ್ಜರಿ ಭೇಟೆ’ ಎಂಬ ಒಂದು ಚಿತ್ರದಲ್ಲಿ ಅವರು ಮುದುಕರಾಗಿ ಅಭಿನಯಿಸಿದ ಪಾತ್ರ ಇನ್ನೂ ನೆನಪಲ್ಲಿದೆ. ಆ ಚಿತ್ರದ ಹಾಡು ‘ಹಕ್ಕಿಗೂಡು ಒಂದು ಮುದ್ದು ಮರಿ ಎರಡು’ ಎಂಬ ಹಾಡಿಗೆ ಅವರ ಅಭಿನಯ ಮರೆಯಲಾಗದ್ದು. ‘ಭಕ್ತಕುಂಬಾರ’ ಚಿತ್ರದಲ್ಲಿ ಸೌಮ್ಯ ಪಾತ್ರದಲ್ಲಿ ಮುದ್ದು ಮುದ್ದಾಗಿ ಕಾಣುವ ಅವರ ಪರಿ ಮತ್ತು ರಾಜ್ ಅವರಿಗೆ ಸಹೃದಯ ಮೈದುನನಾಗಿ ಅವರು ಕಾಣುವ ಆತ್ಮೀಯ ಪಾತ್ರ ಮನಮುಟ್ಟುವಂತದ್ದು. ನಾಗರಹಾವು ಚಿತ್ರದಲ್ಲಿ ‘ಅಮಾವಾಸ್ಯೆ ಸುಬ್ಬ ಹುಣ್ಣಿಮೆ ಕಾಣ್ತವ್ನೆ’ ಅಭಿನಯ ಕೂಡಾ ಹಾಗೆಯೇ ನೆನಪಿನಲ್ಲುಳಿಯುತ್ತದೆ. ‘ರಾಯರು ಬಂದರು ಮಾವನ ಮನೆಗೆ’ ಚಿತ್ರದಲ್ಲಿನ ಒಂದು ಕಡೆ ಪೊಲೀಸ್ ಅಧಿಕಾರಿಯಾದ ಕರ್ತವ್ಯನಿಷ್ಠೆ ಮತ್ತು ಒಬ್ಬ ಸಜ್ಜನ ವ್ಯಕ್ತಿಗೆ ನೀಡಲೇಬೇಕಾದ ಗಲ್ಲು ಶಿಕ್ಷೆಯ ಬಗೆಗಿನ ನೋವು ತೋರ್ಪಡಿಕೆಯ ಅವರ ಸೌಜನ್ಯಯುತ ಅಭಿನಯ ಶ್ರೇಷ್ಠಮಟ್ಟದ್ದು. ಹೀಗೆ ನೋಡಿದಾಗ ಅವರನ್ನು ಎಲ್ಲಾ ತರಹದ ಪಾತ್ರಗಳಲ್ಲೂ ಉಪಯೋಗಿಸುವ ಸಾಧ್ಯತೆಗಳಿದ್ದವು ಎಂಬುದು ವ್ಯಕ್ತವಾಗುತ್ತದೆ.
ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ವಜ್ರಮುನಿ ರಂಗಭೂಮಿ ಮತ್ತು ಚಿತ್ರರಂಗಗಳ ಆಚೆಗೆ ಕೂಡಾ ಸಹಕಾರ ಕ್ಷೇತ್ರಗಳಲ್ಲಿ ಹಲವು ವಿಧದ ಸೇವೆ ಸಲ್ಲಿಸಿದ್ದರು. 2006ರ ವರ್ಷದಲ್ಲಿ ತಮ್ಮ ಆರು ದಶಕಗಳ ಜೀವನವನ್ನು ಮುಗಿಸಿ ಈ ಲೋಕವನ್ನಗಲಿದ ವಜ್ರಮುನಿ ಬಹಳ ಕಾಲ ಕನ್ನಡಿಗರ ಹೃದಯದಲ್ಲಿ ನೆನಪಿನಲ್ಲಿರುತ್ತಾರೆ. ಅವರು ನೆಲೆಸಿದ್ದ ಬೆಂಗಳೂರಿನ ಉತ್ತರಹಳ್ಳಿ ಸಮೀಪದ ಅಂಜನಪುರ ರಸ್ತೆಗೆ, ಅವರ ಅಭಿಮಾನಿಗಳು ‘ವಜ್ರಮುನಿ ರಸ್ತೆ’ ಮತ್ತು ವೃತ್ತಕ್ಕೆ ‘ವಜ್ರಮುನಿ ವೃತ್ತ’ ಎಂದು ಹೆಸರಿಟ್ಟು ಗೌರವ ಸಲ್ಲಿಸಿದ್ದಾರೆ.
ತಮ್ಮ ಜೊತೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದ ವಜ್ರಮುನಿಯವರ ಕುರಿತು ಡಾ. ರಾಜಕುಮಾರ್ ಹೇಳುತ್ತಿದ್ದರು: “ಅವರ ಕಂಠ ಅವರ ಗತ್ತೇ ಬೇರೆ. ಅವರಂಥ ಮತ್ತೊಬ ವಜ್ರಮುನಿಯನ್ನು ತರುವುದಕ್ಕೆ ಆಗುವುದಿಲ್ಲ. ಅದು ಸಾಧ್ಯಾನೂ ಇಲ್ಲ ಬಿಡಿ. ವಜ್ರಮುನಿಗೆ ವಜ್ರಮುನಿಯವರೇ ಸಾಟಿ".
On the birth anniversary of great actor Vajramuni
ಕಾಮೆಂಟ್‌ಗಳು