ಎ. ಪಿ. ಮಾಲತಿ
ಎ. ಪಿ. ಮಾಲತಿ
ನಮ್ಮೆಲ್ಲರ ಆತ್ಮೀಯರಾದ ಎ. ಪಿ. ಮಾಲತಿ ಅವರು ಕನ್ನಡದ ಹಿರಿಯ ಜನಪ್ರಿಯ ಬರಹಗಾರ್ತಿ.
ಮಾಲತಿ ಅವರು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ 1944ರ ಮೇ 6ರಂದು ಜನಿಸಿದರು. ಮುಂದೆ ಧಾರವಾಡದಲ್ಲಿ ತಮ್ಮ ಬಾಲ್ಯವನ್ನು ಕಳೆದು ಶಿಕ್ಷಣ ಪಡೆದರು. ಬಾಲ್ಯದಲ್ಲೇ ಓದು ಮಾಲತಿ ಅವರ ನೆಚ್ಚಿನ ಹವ್ಯಾಸವಾಗಿತ್ತು. ಹೈಸ್ಕೂಲು ತರಗತಿಯಲ್ಲಿ ಕೃಷ್ಣಮೂರ್ತಿ ಪುರಾಣಿಕರ ಭಾಗೀರಥಿ ಕಾದಂಬರಿ ಓದಿ ತೋರಗಲ್ ಟೀಚರ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡರು. ಪುಸ್ತಕ ಮರಳಿಸುವಾಗ “ಏನಾದ್ರೂ ಬರಿ" ಎಂದು ಅವರೇ ಪ್ರೇರೇಪಿಸಿದರು. ವಿದ್ಯಾರ್ಥಿ ಬದುಕಿನಲ್ಲಿ ಮೊದಲು ಬರೆದ ಬರಹ 'ಹುಲಿ ಕೊಂದ ಧೀರ' ಕರ್ಮವೀರ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಎಂಟು ರೂಪಾಯಿ ಸಂಭಾವನೆ ಪಡೆದರು. ತಂದೆ ಗಣೇಶ ಭಟ್ಟರು ಗಾಂಧೀವಾದಿಯಾಗಿದ್ದರಿಂದ ಮನೆಯಲ್ಲಿ ಎಲ್ಲರ ಮೇಲೆ ಮಹಾತ್ಮಾ ಗಾಂಧೀಜಿ ಅವರ ಪ್ರಭಾವ ಹೆಚ್ಚಿತ್ತು.
ಮಾಲತಿ ಅವರು ಕಾಲೇಜು ಶಿಕ್ಷಣ ಮುಗಿಯುವ ಮುನ್ನವೇ ಎ.ಪಿ. ಗೋವಿಂದ ಭಟ್ಟರನ್ನು ಮದುವೆಯಾಗಿ ಪುತ್ತೂರಿಗೆ ಬಂದರು. ಗೋವಿಂದ ಭಟ್ಟರು ಅಧ್ಯಾಪನ ವೃತ್ತಿ ತ್ಯಜಿಸಿ ಕೃಷಿಯನ್ನೇ ಕಾಯಕ ಮಾಡಿಕೊಂಡಿದ್ದರು. ಅವರಿಗೂ ಸಾಹಿತ್ಯ ಸಂಸ್ಕೃತಿಗಳಲ್ಲಿ ಅಪಾರ ಒಲವು. ಮದುವೆಗೆ ಮುಂಚೆ ಮಾಲತಿ ಅವರು ಧಾರವಾಡದಲ್ಲಿ ಬರೆಯುತ್ತಿದ್ದಾಗ, ಸಿನಿಮಾ ನಾಟಕಗಳ ಹುಚ್ಚು ವಿಪರೀತವಿದ್ದ ಕಾಲವದು. ತಮ್ಮ ಸುಬ್ರಾಯ ಭಟ್ ಒಳ್ಳೆಯ ನಟರಾಗಿ, ನಾಟಕಗಳ ಪ್ರದರ್ಶನದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಮಾಲತಿ ಅವರಿಗೆ ಅವರೊಂದಿಗೆ ಕ್ರಿಯಾಶೀಲವಾಗಿ ಕೆಲಸ ಮಾಡಿದ ಅನುಭವವಿತ್ತು. ಇಷ್ಟು ಚಟುವಟಿಕೆಯಿಂದಿದ್ದು ಒಮ್ಮೆಲೆ ಹಳ್ಳಿಗೆ ಬಂದಾಗ ಅಗಾಧವಾದ ಒಂಟಿತನ ಅವರನ್ನು ಕಾಡಿತ್ತು. ಆ ದಿನಗಳಲ್ಲಿ ಬರವಣಿಗೆಯೇ ಹೆಚ್ಚು ಇಷ್ಟವಾಯಿತು. ಕೈತುಂಬಾ ಕೃಷಿ ಕೆಲಸಗಳಿದ್ದರೂ ರಾತ್ರಿ ದೀರ್ಘಕಾಲ ಚಿಮಿಣಿ ದೀಪವಿಟ್ಟು ಕುಳಿತು ಬರೆಯುತ್ತಿದ್ದರು. ಹಾಗೆ ಬರೆದ ಕತೆ-ಲೇಖನಗಳು ಅಂದಿನ ಪತ್ರಿಕೆಗಳಾದ ನವಭಾರತ, ಪ್ರಜಾಮತ, ಕರ್ಮವೀರ, ಸಂಯುಕ್ತ ಕರ್ನಾಟಕ, ದಿನವಾಣಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ಹುರುಪು ಮೂಡಿತು.
ಮಾಲತಿ ಅವರು 15ರ ವಯಸ್ಸಿಗೆ ಎರಡು ಪತ್ತೇದಾರಿ ಕಾದಂಬರಿಗಳನ್ನು ಬರೆದರೂ ಸ್ನೇಹಿತೆಯೊಬ್ಬಳು ಅದನ್ನು ಕಳೆದು ಹಾಕಿದಳು. ಆ ಬಳಿಕ ಬರೆದ ಮೊದಲ ಕಾದಂಬರಿ 1968ರಲ್ಲಿ ಮಂಗಳೂರಿನ ನವಭಾರತ ದಿನಪತ್ರಿಕೆಯಲ್ಲಿ ವಾರದ ಧಾರಾವಾಹಿಯಾಗಿ ಪ್ರಕಟವಾಗಿತ್ತು. 1967ರಲ್ಲಿ ಆರಂಭವಾದ ಮಾಲತಿ ಅವರ ಬರವಣಿಗೆ ಈಗಲೂ ನಿರಂತರವಾಗಿ ಮುಂದುವರಿಯುತ್ತಿದೆ. ಮಾಲತಿ ಅವರಿಗೆ ಕಲಿಯುವ ಉತ್ಸಾಹವೂ ಅಪಾರ. 68ನೆಯ ವಯಸ್ಸಿನಲ್ಲಿ ಡಿಪ್ಲೊಮಾ ಪದವಿಯನ್ನು ಮುಕ್ತ ವಿಶ್ವವಿದ್ಯಾಲಯದಿಂದ ಪಡೆದರು. ಅವರು ಪದವಿಗೆ ಆಯ್ಕೆ ಮಾಡಿಕೊಂಡ ವಿಷಯ “ಕಾದಂಬರಿಗಳ ರಚನಾತ್ಮಕ ಶಿಲ್ಪ".
ಮಾಲತಿ ಅವರಿಗೆ ಸಾಹಿತ್ಯವಲಯದಲ್ಲಿ ಪರಿಚಿತರಾದವರು ಬಂಗಾಲಿ ಲೇಖಕ, ಅನುವಾದಕ ಅಹೋಬಲ ಶಂಕರ್. ಅವರು ಕಾದಂಬರಿಯ ಬರವಣಿಗೆ, ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರು ಅನ್ಯಭಾಷೆಯ ಕೃತಿಗಳನ್ನು ಹೇರಳವಾಗಿ ಓದಲು ಕೊಟ್ಟಿದ್ದರಿಂದ ಮಾಲತಿ ಅವರ ಬರಹದ ದಿಕ್ಕು ದೃಢವಾಗಲು ಅನುಕೂಲವಾಯಿತು.
ಆಧುನಿಕತೆಯ ಪ್ರವೇಶಕ್ಕೆ ಮೊದಲು ಹಳ್ಳಿಗಳು ಹೇಗಿದ್ದವು, ವೈದಿಕ ಮನೆತನದ ತಲೆತಲಾಂತರಗಳಿಂದ ಮೌಲ್ಯಗಳ ಸ್ಥಿತ್ಯಂತರಗಳೇನು, ವಿಭಕ್ತ ಕುಟುಂಬಗಳಾಗಿ ಒಡೆಯುವ ಅವಿಭಕ್ತ ಪರಿಕಲ್ಪನೆ, ನಗರಜೀವನದತ್ತ ಮುಖಮಾಡಿರುವ ಹೊಸ ಪೀಳಿಗೆಯ ಗೊಂದಲ, ಕೃಷಿ ಸಂಸ್ಕೃತಿಯ ಸನಾತನ ಪರಂಪರೆಯಿಂದ ವಿಮುಖರಾಗುವ ವಿದ್ಯಾವಂತ ವರ್ಗ, ಅವರ ಎಡಬಿಡಂಗಿತನ, ಪ್ರಜ್ಞಾಪೂರ್ವಕವಾಗಿ ಅವರು ಕಾಯ್ದುಕೊಳ್ಳುವ ಪ್ರತ್ಯೇಕತೆ, ಈ ಎಲ್ಲ ಅಂಶಗಳು ಮಾಲತಿ ಅವರನ್ನು ಆಳವಾಗಿ ಕಾಡಿವೆ. ಇವೇ ವಿಚಾರಗಳು ಇವರ ಬರಹದಲ್ಲಿಯೂ ಪ್ರತಿಫಲಿಸಿವೆ.
ಮಾಲತಿ ಅವರು ಅರ್ಧಾಂಗಿ, ಆಘಾತ, ಅನಿಶ್ಚಯ, ಅತೃಪ್ತೆ, ಅಲೋಕ, ಹೊಸಹೆಜ್ಜೆ, ಮಿನುಗು ಚುಕ್ಕೆ, ಸರಿದ ತೆರೆ ಸೇರಿದಂತೆ 20 ಕಾದಂಬರಿಗಳು; ಹಳ್ಳಿಗೆ ಬಂದ ಎಳೆಯರು, ಮಹಿಳೆ-ಪರಿವರ್ತನೆಯ ಹಾದಿಯಲ್ಲಿ, ಗ್ರಾಮೀಣ ಮಹಿಳೆಯರು ಮುಂತಾಗಿ 10 ಇತರ ಕೃತಿಗಳನ್ನು; ವಸಂತದ ಹೂವುಗಳು, ಸಂಜೆ ಬಿಸಿಲು ಎಂಬ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕಾರುಣನಿಧಿ ಶ್ರೀ ಶಾರದಾ ಮಾತೆ, ಅನನ್ಯ ಅನುವಾದಕ ಶ್ರೀ ಅಹೋಬಲ ಶಂಕರ ಎಂಬ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಮಾಲತಿ ಅವರ ಆತ್ಮಕತೆ 2018ರಲ್ಲಿ ಪ್ರಕಟಗೊಂಡಿತು. ಮಹಿಳೆ: ಪರಿವರ್ತನೆಯ ಹಾದಿಯಲ್ಲಿ ಎಂಬ ಪುಸ್ತಕ 2018ರಲ್ಲಿ ಬಿಡುಗಡೆಯಾಗಿದೆ.
ಮಾಲತಿ ಅವರ 'ಸುಖದ ಹಾದಿ' ಕೃತಿಗೆ ಕನ್ನಡ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಕನ್ನಡ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಜೀವಮಾನ ಸಾಧನಗಾಗಿ ರಾಜ್ಯ ಪ್ರಶಸ್ತಿ ಸಂದಿದೆ. ನಿರಂಜನ ಪ್ರಶಸ್ತಿ ಬಂದಿದೆ. 'ಅನಿಶ್ಚಯ' ಕಾದಂಬರಿಗೆ ಉತ್ತಮ ಮಹಿಳಾ ಕಾದಂಬರಿಯೆಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಬಹುಮಾನ ಮತ್ತು ತಮ್ಮನರಾವ್ ಅಮ್ಮಿನಬಾವಿ ಸ್ಮಾರಕ ಗ್ರಂಥ ಬಹುಮಾನ ಲಭಿಸಿದೆ. ದೇವ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿ ಹಾಗೂ ಕೊಟ್ಟಾಯಂ ವಿಶ್ವವಿದ್ಯಾಲಯದ ಪಿಯುಸಿಗೆ ಪಠ್ಯಪುಸ್ತಕವಾದವು. ಮಂದಾರ ಕಾದಂಬರಿ ಟೆಲಿಚಿತ್ರವಾಗಿದ್ದು, ಅದು ಧಾರಾವಾಹಿ ರೂಪದಲ್ಲಿ ಪ್ರಸಾರವಾಗಿದೆ. ಮಾಲತಿ ಅವರು 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷತೆ ವಹಿಸುವ ಅವಕಾಶವೂ ಸಂದಿತು. ಲೇಖಕಿಯರು ಮೊದಲ ಬಾರಿಗೆ ನಡೆಸಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು 1994ರಲ್ಲಿ ವಹಿಸಿದ್ದರು.
ಮಾಲತಿ ಅವರಿಗೆ ಶ್ರೀಮಾತೆ ಶಾರದಾ ದೇವಿಯವರ ಜೀವನಚರಿತ್ರೆ ಬರೆದಾಗ “ಜಗತ್ತನ್ನು ಆಳುವುದು ಪ್ರೀತಿ ಮತ್ತು ಮನುಷ್ಯತ್ವದ ಮಾನವೀಯತೆ ಮಾತ್ರ" ಎಂಬ ಮಾತು ಬಹಳ ನಿಜವೆನಿಸಿತು. ಹೀಗೆ ನಿರಂತರ ಜೀವನ ಪ್ರೀತಿಯನ್ನು ತಮ್ಮ ಬದುಕು ಬರಹಗಳ ಮೂಲಕ ಹಂಚುತ್ತಾ ಬಂದಿರುವ ಹಿರಿಯರಾದ ಎ. ಪಿ. ಮಾಲತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Malathi AP Amma 🌷🙏🌷
ಕಾಮೆಂಟ್‌ಗಳು