ಬಿ. ಕೆ. ಸುಮತಿ
ಆಕಾಶವಾಣಿ ನಮ್ಮ ಕಾಲದವರ ಬದುಕನ್ನು ಪ್ರಭಾವಿಸಿದ ಭವ್ಯ ಶಕ್ತಿ. ಆಕಾಶವಾಣಿ ಎಂದರೆ ಅನೇಕ ದಿವ್ಯಧ್ವನಿಗಳ ವ್ಯಕ್ತಿಚಿತ್ರಗಳು ನಮ್ಮ ಕಣ್ಮುಂದೆ ಸಾಲುಗಟ್ಟಿ ನಿಲ್ಲುತ್ತವೆ. ಇಂದಿನ ಯುಗದ ಆಕಾಶವಾಣಿಯನ್ನು ನೆನೆಯುವಾಗ ನನ್ನ ಕಣ್ಮುಂದೆ ಮೂಡುವ ವ್ಯಕ್ತಿ ಬಿ. ಕೆ. ಸುಮತಿ. ಇಂದು ನಮ್ಮ ಸುಮತಿ ಅವರ ಜನ್ಮದಿನ.
ಸುಮತಿ ಅವರ ಬಗ್ಗೆ ಯೋಚಿಸುವಾಗೆಲ್ಲ ನನ್ನಲ್ಲಿ ಮೂಡುವ ಅಕ್ಕರೆಯ ಮಾತು "ನಮಗೂ ಒಂದಿಷ್ಟು ಸಿಗಲಿ ಈ ಸುಮತಿಯ ಸನ್ಮತಿ".
ಸುಮತಿ ನನಗೆ ತಿಳಿದ ಹಾಗೆ ಸುಮಾರು 33 ವರ್ಷಗಳಿಂದ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದಾರೆ. ಭಾಷೆ ಮತ್ತು ಮಾಧ್ಯಮ ಅವರ ಆಸಕ್ತಿ. ನಾನು ಸುಮತಿ ಅವರ ಆಕಾಶವಾಣಿಯ ಅನೇಕ ಧ್ವನಿಮುದ್ರಿತ ಕಾರ್ಯಕ್ರಮಗಳ ರೆಕಾರ್ಡಿಂಗ್ ಕೇಳಿದ್ದೇನೆ. ಸುಮತಿ ಅವರು ನಿರೂಪಣೆ ಮಾಡಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅವರ ಅನೇಕ ಬರಹಗಳನ್ನು ಓದಿದ್ದೇನೆ. ಅವರು ಧ್ವನಿಯಾಗಿರುವ ಕಥೆಗಳ ಆಡಿಯೋ ಕೇಳಿದ್ದೇನೆ. ಅವರಿಂದ ಸಂದರ್ಶನ ಮಾಡಿಸಿಕೊಳ್ಳೋ ಭಾಗ್ಯವೂ ನನ್ನದಾಯ್ತು. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡದಿದ್ದರೂ ಸಂಗೀತದ ಸೀನಿಯರ್ ಉತ್ತೀರ್ಣರಾಗಿ ಅಂತರಂಗಿಕವಾಗಿ ಸಂಗೀತಾಶಯವನ್ನು ತೃಪ್ತಿಕರವಾಗಿಸಿಕೊಂಡವರು. ನವಕರ್ನಾಟಕದ ಯಾವುದೇ ಪ್ರಕಟಣೆಗಳ ಕಾರ್ಯಕ್ರಮದಲ್ಲೂ ಅವರದೇ ನಿರೂಪಣೆ. 'ನಿರೂಪಣೆ, ಮಾತಲ್ಲ ಗೀತೆ’ ಎಂಬ ಕೃತಿಯನ್ನೂ ಅವರು ಪ್ರಕಟಿಸಿದ್ದಾರೆ. 'ಮತಿ ಮಾತು ಬ್ಲಾಗ್' ಎಂಬುದು ಅವರ ಬ್ಲಾಗ್. ಮಾಧ್ಯಮಗಳಲ್ಲಿ ನಾಡಿನ ಕುರಿತಾದ ಪ್ರೀತಿಯ, ಪ್ರವಾಸದ ಅನುಭವಗಳ ಮತ್ತು ವಿವಿಧ ಸಾಮಾಜಿಕ ಆತ್ಮೀಯ ನೆಲೆಗಳ ಬರೆಹಗಳನ್ನು ಆಗಾಗ್ಗೆ ಮೂಡಿಸುತ್ತ ಬಂದಿದ್ದಾರೆ. ಮಾಧ್ಯಮದ ಕುರಿತಾದ ವಿಚಾರಗೋಷ್ಠಿಗಳಲ್ಲೂ ಅವರ ವಿಚಾರ ಮಂಡನೆ ಸಲ್ಲುತ್ತಿದೆ. ಗಗನವಾಣಿ ಎಂಬ 'ಕ್ಲಬ್ ಹೌಸ್' ಸಮೂಹವನ್ನು ಕೂಡಾ ಹಲವು ಆಕಾಶವಾಣಿ ಸಹೋದ್ಯೋಗಿ ಬಂಧುಗಳೊಂದಿಗೆ ನಿರ್ವಹಿಸುತ್ತಾರೆ. 'ಲಕ್ಷ್ಮೀಶ ತೋಳ್ಪಾಡಿ ಅವರ ಭಾರತಯಾತ್ರೆ' ಕುರಿತಾಗಿ ಅವರ ವಿಶ್ಲೇಷಣೆ ಆಡಿಯೋ ಕೇಳಿದಾಗ 'ಓಹ್ ಇವರಲ್ಲಿ-ಇವರ ಧ್ವನಿಯಲ್ಲಿ ಎಷ್ಟು ನವ್ಯ ರೀತಿಯ ಮೌಲ್ಯಯುತ ಸಾಹಿತ್ಯ ಪ್ರವಚನಕಾರರಾಗುವ ಸಾಧ್ಯತೆ ಇದೆ' ಅನಿಸಿತು.
ಸುಮತಿ ಅವರದು ಸುಶ್ರಾವ್ಯ ಇನಿಧ್ವನಿ. ಅವರದ್ದು ದಿವ್ಯಮತಿ. ಆಕೆ ಒಬ್ಬ ಆತ್ಮೀಯ ಸಹೃದಯಿ. ಅವರೊಬ್ಬ ಕುಶಲ ಕರ್ಮಯೋಗಿಣಿ. ಅವರು ಏನನ್ನೇ ಮಾಡಲಿ ಅದರ ಹಿಂದೆ ಅವರ ಕಾರ್ಯಪ್ರೀತಿ, ಕುಶಲತೆ, ಶ್ರದ್ಧೆ ಮತ್ತು ಭಕ್ತಿಗಳು ಎದ್ದು ಕಾಣುತ್ತವೆ. ಅವರದ್ದು ತಾವು ಮಾಡುವ ಕೆಲಸದಲ್ಲಿ ಅಪೂರ್ವ ತನ್ಮಯತೆ.
ಕನ್ನಡದ ಶುದ್ಧ ಬಳಕೆ ಎಂದರೆ ನಮಗೆ ನೆನಪಾಗುವುದು ಅಂದಿನ ಆಕಾಶವಾಣಿ. ಇಲ್ಲಿನ ವಾರ್ತೆಗಳು, ಕವಿಗೋಷ್ಟಿಗಳು, ಹಬ್ಬದ ವಿಶೇಷ ಪ್ರಸಾರಗಳು, ಶ್ರೇಷ್ಟರೊಂದಿಗಿನ ಸಂದರ್ಶನಗಳು, ವಿಜ್ಞಾನ, ಸಾಹಿತ್ಯ, ಉದ್ಯಮ, ಕೃಷಿ, ಶಿಕ್ಷಣ, ಸಂಗೀತ, ನಾಟಕ, ಕ್ರೀಡೆ, ಚಲನಚಿತ್ರ ಮನರಂಜನೆ, ಹೀಗೆ ಏನೆನ್ನೇ ತೆಗೆದುಕೊಂಡರೂ ಆಕಾಶವಾಣಿ ಎಂಬುದು ನಮ್ಮ ಕಾಲದ ಆತ್ಮೀಯ ಒಡನಾಡಿಯಾಗಿತ್ತು ಎಂಬುದು ಮರೆಯಲಾರದ ಸವಿನೆನಪು. ಅದು ಇಂದೂ ತನ್ನ ಸ್ವಾದಿಷ್ಟವನ್ನು ಉಳಿಸಿಕೊಂಡಿದೆ ಅಂದರೆ ಅಲ್ಲಿ ಸುಮತಿ ಅಂತಹ ಕನ್ನಡದ ಕುರಿತಾದ ನಿಷ್ಠಾವಂತರ ಕಾಯಕದಿಂದ.
ಸುಮತಿ ಅವರ ಮೂರು ದಶಕಗಳು ಮೀರಿದ ಆಕಾಶವಾಣಿ ಸೇವೆ ವಿಶಿಷ್ಟ ವ್ಯಾಪ್ತಿಯದು. ಅವರ ಈ ಕಾರ್ಯವ್ಯಾಪ್ತಿಯಲ್ಲಿನ ಸಾಧನೆಗಳಲ್ಲಿ ಕಳಶಪ್ರಾಯವಾದುದು ಆಕಾಶವಾಣಿಯಲ್ಲಿ ಅವರು ಅಪಾರ ಪರಿಶ್ರಮದಿಂದ 52 ವಾರಗಳ ಕಾಲ ಮೂಡಿಸಿದ 'ನುಡಿ ತೇರನೆಳೆದವರು ಬಾನುಲಿ ಕಲಿಗಳು' ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಅನೇಕ ರೀತಿಯ ಶ್ರದ್ಧೆ ಮತ್ತು ಪರಂಪರೆಯ ಕುರಿತಾದ ಗೌರವಗಳನ್ನು ಅಪೇಕ್ಷಿಸುವಂತದ್ದು. ಇತರ ಯಾವುದೇ ಭಾಷೆಗಳಲ್ಲಿ ಇಂತದ್ದು ಆಗದೆ, ಕನ್ನಡದಲ್ಲಾದ ವಿಶಿಷ್ಟ ಸಂಯೋಜನೆ. ಭಾರತದಲ್ಲಿನ ರೇಡಿಯೋ ಯಾನದ ಸುಮಾರು ಒಂದು ಶತಮಾನ ಕಾಲಘಟ್ಟದ ನುಡಿ ಚಿತ್ರಾವಳಿಗೆ, ಆಕಾಶವಾಣಿ ಪ್ರಸಾರ ಹಾದಿಯ ಧ್ವನಿ ವಿಹಾರಕ್ಕೆ ಮತ್ತು ನೆನಪಿನ ಸಂಚಾರಕ್ಕೆ ಇದು ಕನ್ನಡಿಯಾಗಿತ್ತು. ಮಹಾತ್ಮ ಗಾಂಧೀ ಅವರು ಆಕಾಶವಾಣಿಗಾಗಿ ನುಡಿದ ಮಾತುಗಳು ಮತ್ತು ಅವರಿಷ್ಟದ ಪ್ರಾರ್ಥನೆ 'ವೈಷ್ಣವ ಜನತೊ' ಇಂದ, 1947ರ ಪ್ರಥಮ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪಂಡಿತ್ ಜವಹರಲಾಲ್ ನೆಹರೂ ಅವರ ಮಧ್ಯರಾತ್ರಿಯ ಭಾಷಣ; ರಾಷ್ಟ್ರಕವಿ ಕುವೆಂಪು, ವರಕವಿ ದ. ರಾ. ಬೇಂದ್ರೆ, ವರನಟ ರಾಜ್‍ಕುಮಾರ್ ಅವರೊಡನೆ ಸಂದರ್ಶನ ಮುಂತಾದವುಗಳೊಂದಿಗೆ ತೆರೆದುಕೊಂಡ ಪ್ರಥಮ ಸಂಚಿಕೆಯಿಂದಲೇ ಈ ಕಾರ್ಯಕ್ರಮ ಮನಸೆಳೆಯಿತು. ಈ ಕಾರ್ಯಕ್ರಮದ ವಿವಿಧ ಕಂತುಗಳಲ್ಲಿ ಆಕಾಶವಾಣಿಯಲ್ಲಿ ಮೂಡಿಬಂದ ವೈಶಿಷ್ಟ್ಯಗಳಾದ ಬಿನಾಕಾ ಗೀತ್ ಮಾಲಾ, ವಿವಿಧ್ ಭಾರತಿ ಸೊಬಗುಗಳು, ವೀಕ್ಷಕ ವಿವರಣೆ, ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಮಾತು, ಚಿಂತನ, ಭಾಷಣ, ಸಾಹಿತ್ಯ, ವೈವಿಧ್ಯಮಯ, ಸುದ್ಧಿ, ಸಿನಿಮಾ, ನಾಟಕ ಈ ಎಲ್ಲವುಗಳ ರಸಯಾತ್ರೆಯಾಗಿ ಹಿತಮಿತವಾಗಿ ಮೂಡಿತ್ತು. ಆಕಾಶವಾಣಿಯ ಯಾನದ ಎಲ್ಲ ಮಜಲುಗಳನ್ನು ಹೊತ್ತ ಈ ಯಾನ, ವಿಶಿಷ್ಟ ವ್ಯಕ್ತಿಗಳ ಸ್ಮರಣೆಯ ಸುತ್ತಾ ಹೆಣೆಯಲ್ಪಟ್ಟು ಆಕರ್ಷಣೀಯವಾಗಿದ್ದರ ಜೊತೆಗೆ ಶ್ರೋತೃಗಳನ್ನು ಕೂಡಾ ಅವರವರ ಕಾಲಘಟ್ಟದ ಆಕಾಶವಾಣಿಯ ಕಾರ್ಯಕ್ರಮಗಳ ಜೊತೆಗೆ ತಮ್ಮನ್ನು ತಾವು ಕಂಡುಕೊಳ್ಳುವ ಹಾಗೆ ಮಾಡಿತು. ತಮ್ಮ ಸ್ವಂತ ಖರ್ಚಿನಲ್ಲಿ ಸಾಂಸ್ಕೃತಿಕ ಆಸಕ್ತಿ ಶ್ರದ್ಧೆಗಳಿಂದ ಆಕಾಶವಾಣಿಗೆ ಪ್ರಾರಂಭಕೊಟ್ಟ ಎಂ. ಎಸ್. ಗೋಪಾಲಸ್ವಾಮಿ ಅವರಿಂದ ಮೊದಲುಗೊಂಡು, ನೂರಕ್ಕೂ ಹೆಚ್ಚು ಆಕಾಶವಾಣಿಯನ್ನು ಬೆಳೆಸಿದ ಮಹನೀಯರ ವ್ಯಕ್ತಿತ್ವಗಳನ್ನು ಮತ್ತು ಸಾಧನೆಗಳನ್ನು ನಮಗೆ ಈ ಕಾರ್ಯಕ್ರಮ ಆಪ್ತವಾಗಿ ತೆರೆದಿಟ್ಟಿತು. ಇದು 'ನುಡಿತೇರನೆಳೆದವರು ಬಾನುಲಿ ಕಲಿಗಳು' ಎಂಬ ಕೃತಿಯಾಗಿಯೂ ಪ್ರಕಟಗೊಂಡು ಹಸರಾಗಿದೆ.
ಇಂದಿನ ಯುಗದ ಎಫ್ ಎಮ್ ರೇಡಿಯೋ ವಲಯಗಳು, ವಿವಿಧ ಕಿರುತೆರೆಯ ಪ್ರಸಾರವಾಹಿನಿಗಳಲ್ಲಿ ಕಾಡುವ ಕನ್ನಡದ ಪ್ರಸಾರದಲ್ಲಿ ಭಾಷಾ ಶುದ್ಧತೆಯ ಅಭಾವ, ಕರ್ಕಶ ಕಂಗ್ಲಿಷ್ ಬಳಕೆ ಮುಂತಾದವುಗಳ ಕಿರಿಕಿರಿ ಕಾಡುವಾಗ, ಅಂದಿನ ನಮ್ಮ ಯುಗದ ಕನ್ನಡದ ಪರಿಮಳ ಎಷ್ಟು ಸೊಗಸಾಗಿತ್ತು ಎಂಬುದನ್ನು ನೆನಪಿಸುವ ಪಯಣಕ್ಕೆ 'ಈ ನುಡಿತೇರನೆಳೆದವರು ಬಾನುಲಿ ಕಲಿಗಳು' ಕಾರ್ಯಕ್ರಮ ನಮ್ಮನ್ನು ಕೊಂಡೊಯ್ದಿತ್ತು. ಅದೇ ಪರಂಪರೆಗೆ ಖಂಡಿತವಾಗಿ ಸೇರಿಸಬಹುದಾದ ಹೆಸರು ಬಿ. ಕೆ. ಸುಮತಿ. ಈ ಕಾರ್ಯಕ್ರಮದಲ್ಲಿ ಆಕೆಯ ಶ್ರದ್ಧೆ, ಆಳ ಪರಿಜ್ಞಾನ, ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣಾ ಕೌಶಲ್ಯ ಸರ್ವವೇದ್ಯ.
500 ಸಂಚಿಕೆಗಳಮೀರಿ ನಡೆದಿದೆ ಇವರ ಮತ್ತೊಂದು ಪರಿಕಲ್ಪನೆಯ ಕಾರ್ಯಕ್ರಮ 'ಕನ್ನಡ ಕಜ್ಜಾಯ'. 'ಕನ್ನಡ ಕಜ್ಜಾಯ' ಕೇವಲ ಐದು ನಿಮಿಷದಲ್ಲಿ ದಿನವೂ ಒಂದೊಂದು ಕನ್ನಡ ಚಿಂತನ ಕೊಡುವ ವಿನೂತನ ವಿಶಿಷ್ಟ ಕಾರ್ಯಕ್ರಮವಾಗಿದೆ. ಕನ್ನಡ ನಾಡಿನ ವೈಶಿಷ್ಟ್ಯತೆಗಳಾದ ರಾಗಿ ಮುದ್ದೆ, ಮದ್ದೂರು ವಡೆ , ಮೈಸೂರಪಾಕ್ ನಿಂದ ಹಿಡಿದು ಅರಮನೆ, ಗುರುಮನೆ, ಪ್ರವಾಸಿತಾಣ, ಸಾಹಿತ್ಯ, ವಿಜ್ಞಾನ, ವ್ಯಕ್ತಿವಿಚಾರ, ಓದು, ಕ್ರೀಡೆ, ಸಿನಿಮಾ, ಕವಿ, ಕವನ, ಚಿತ್ರ, ಇತಿಹಾಸ, ಚರಿತ್ರೆ, ಪ್ರಕೃತಿ, ಭೂಗೋಳ, ನಾಡು, ನುಡಿ, ಹೀಗೆ ಈ ಕಾರ್ಯಕ್ರಮದಲ್ಲಿ ಎಲ್ಲ ವಿಷಯಗಳ ಸವಿಕಜ್ಜಾಯವಿದೆ. ದಸರಾ ವಿಶೇಷ, ಸ್ವಾತಂತ್ರ್ಯೋತ್ಸವ ವಿಶೇಷ, ಡಾ. ರಾಜ್‍ಕುಮಾರ್ ವಿಶೇಷ ಮುಂತಾದ ವಿಶೇಷ ಸಂಚಿಕೆಗಳೂ ಇದರಲ್ಲಿ ಹೊರಹೊಮ್ಮಿವೆ. 5 ನಿಮಿಷದ ಕಾರ್ಯಕ್ರಮಕ್ಕೆ ಮಾಡಬೇಕಾದ ತಯಾರಿ ಅಪಾರ. ಇಲ್ಲಿ ಸುಮತಿ ಅವರ ಅಪರಿಮಿತ ಪರಿಶ್ರಮವಿದೆ.
ರಾಷ್ಟ್ರೀಯ ಪ್ರಸಾರದಲ್ಲೂ ಸುಮತಿ ಅವರ ರೂಪಕ ಮೂಡಿಬಂದಿದೆ. ನಮ್ಮ ಹೆಮ್ಮೆಯ ಆಕಾಶವಾಣಿಗೆ ಇಂದೂ ನಮ್ಮ ಯುಗದ ಕೊಂಡಿಯಾಗಿರುವ ಬಿ. ಕೆ. ಸುಮತಿ ನಮ್ಮ ಹೆಮ್ಮೆ. ನಮ್ಮ ಮುಂದಿನ ತಲೆಮಾರಂತೂ ಇಂತಹ ಪ್ರತಿಭೆಗಳಿಂದ ಕಲಿಯಬೇಕು ಎಂಬುದು ನನ್ನ ಖಚಿತ ಅಭಿಪ್ರಾಯ.
ಕನ್ನಡದ ನಿಷ್ಠಾವಂತ ಇನಿಧ್ವನಿ, ಸನ್ಮತಿಯ ಆತ್ಮೀಯರಾದ ಬಿ. ಕೆ. ಸುಮತಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
B.K. Sumathi
ಕಾಮೆಂಟ್‌ಗಳು