ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂತ ತ್ಯಾಗರಾಜರು


 ಸಂತ ತ್ಯಾಗರಾಜರು


ಇಂದು ಸಂತ ತ್ಯಾಗರಾಜರು ಜನಿಸಿದ ದಿನ.

ಶ್ರೀ ತ್ಯಾಗರಾಜರು ಕರ್ನಾಟಕ ಸಂಗೀತ ಪದ್ಧತಿಯ ಪ್ರಮುಖ ರಚನಕಾರರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳು  ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಪ್ರಖ್ಯಾತರು. ಶ್ರೀರಾಮನ ಪರಮ ಭಕ್ತರಾದ ತ್ಯಾಗರಾಜರಿಗೆ, ಶ್ರೀರಾಮಚಂದ್ರ ಪ್ರಭುವನ್ನು ಎಷ್ಟು ಬಣ್ಣಿಸಿದರೂ ಸಾಲದು ಎಂದು ಹೇಳುವುದಕ್ಕಿಂತ, ಬಹುಶಃ ಶ್ರೀರಾಮಚಂದ್ರ ಪ್ರಭುವಿಗೇ ಅವರಿಂದ ಎಷ್ಟು ವಿಧದಲ್ಲಿ ಹಾಡಿಸಿಕೊಂಡರೂ ಮತ್ತಷ್ಟು ಬೇಕಿನಿಸುತ್ತಿತ್ತೇನೋ ಎಂಬ ಭಾವ ಅವರ ಸಂಗೀತ ಕೃತಿಗಳ ಗಾನವನ್ನು ಆಲಿಸುವ ಶ್ರೋತೃವಿನ ಅಂತರಾಳಕ್ಕೆ ಅನಿಸುತ್ತದೆ. 

1767ರ ಮೇ 4ರಂದು  (ಕೆಲವು ಚರಿತ್ರಜ್ಞರ ಪ್ರಕಾರ 1759ರ ಮೇ 4ರಂದು) ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ ರಾಮಬ್ರಹ್ಮಮ್ ಮತ್ತು ಸೀತಮ್ಮನವರ ಪುತ್ರರಾಗಿ ತ್ಯಾಗರಾಜರು ಜನಿಸಿದರು. ಇವರ ಅಜ್ಜ ಗಿರಿರಾಜ ಕವಿ ತಂಜಾವೂರಿನ ಆಸ್ಥಾನದಲ್ಲಿ ಕವಿ ಮತ್ತು ಸಂಗೀತಗಾರರಾಗಿದ್ದರು. ತ್ಯಾಗರಾಜರ ಮೊದಲ ಪತ್ನಿ ಪಾರ್ವತಮ್ಮ.  ಇವರ ನಿಧನದ ನಂತರ ಕಮಲಾಂಬಾ ಅವರನ್ನು ಮದುವೆಯಾದರು.

ತ್ಯಾಗರಾಜರು ಸಂಗೀತದ ಮೊದಲ ಶಿಕ್ಷಣವನ್ನು ಶ್ರೀ ಸೊಂಟಿ ವೆಂಕಟರಮಣಯ್ಯನವರಿಂದ ಪಡೆದರು. ದೇವರನ್ನು ಅನುಭವಿಸುವ ದಾರಿಯಾಗಿ ಸಂಗೀತವನ್ನು ಕಂಡ ತ್ಯಾಗರಾಜರು ರಾಗ ಮತ್ತು ತಾಳಬದ್ಧ ಸಂಗೀತಕ್ಕಿಂತ ಭಾವಪೂರ್ಣ ಸಂಗೀತಕಕ್ಕೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು. 13ನೆಯ ವಯಸ್ಸಿನಲ್ಲಿಯೇ ತಮ್ಮ ಕೃತಿಗಳಲ್ಲಿ ಒಂದಾದ 'ನಮೋ ನಮೋ ರಾಘವ' ಕೃತಿಯನ್ನು ರಚಿಸಿದರು. ಇವರ  'ಎಂದರೋ ಮಹಾನುಭಾವುಲು' ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರು.

ದಕ್ಷಿಣ ಭಾರತದ ಎಲ್ಲ ಮುಖ್ಯ ದೇವಸ್ಥಾನಗಳಿಗೆ ಭೇಟಿಯಿತ್ತ ತ್ಯಾಗರಾಜರು ಅಲ್ಲಿನ ದೇವದೇವತೆಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳುನೂರು ಕೃತಿಗಳನ್ನು ರಚಿಸಿರುವ ತ್ಯಾಗರಾಜರು ಕರ್ನಾಟಕ ಸಂಗೀತದ ಮಹಾಪುರುಷರೆಂದು ಪರಿಗಣಿತರಾಗಿದ್ದಾರೆ.

ತ್ಯಾಗರಾಜರು ತಮ್ಮ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು ತ್ಯಾಗರಾಜರೇ. ಘನರಾಗಗಳಾದ ನಾಟ, ಗೌಳ, ಆರಭಿ, ವರಾಳಿ ಮತ್ತು ಶ್ರೀ ರಾಗಗಳಲ್ಲಿ ಇವರು ರಚಿಸಿರುವ ವಿಶೇಷ ಕೃತಿಸಮೂಹವು ಘನರಾಗ ಪಂಚರತ್ನ ಎಂದು ಪ್ರಸಿದ್ಧಿಪಡೆದಿದೆ.  ಹೀಗೆಯೇ ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಮತ್ತು ಶ್ರೀರಂಗಂನ ರಂಗನಾಥನಮೇಲೆ ಇವರು ರಚಿಸಿರುವ ಐದೈದು ಕೃತಿಗಳ ಗುಂಪುಗಳು, ತಿರುವೊಟ್ರಿಯೂರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನಕೃತಿಗಳೆಂದೇ ಪ್ರಸಿದ್ಧವಾಗಿವೆ.

ತ್ಯಾಗರಾಜರು ತಮ್ಮ ಕಡೆಗಾಲದವರೆಗೂ ಕೃತಿಗಳನ್ನು ರಚಿಸುತ್ತಲೇ ಸಾಗಿದ್ದರೆಂದು ತಿಳಿದುಬರುತ್ತದೆ. ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ಅವರು ತಮ್ಮ ಜೀವನದ ಕಡೆಯ ಹತ್ತು ದಿನಗಳಲ್ಲಿ ರಚಿಸಿದರೆಂದು ಅಭಿಪ್ರಾಯ ಪಡಲಾಗಿದೆ.

ತ್ಯಾಗರಾಜರು ಚಿಕ್ಕಂದಿನಲ್ಲಿ, ತಮ್ಮ ತಾಯಿ ಹಾಡುತ್ತಿದ್ದ ಪುರಂದರದಾಸರ ದೇವರನಾಮಗಳಿಂದ ಪ್ರಭಾವಿತರಾಗಿದ್ದರೆಂದು ಹೇಳಲಾಗಿದೆ. ಇವರ ಹಲವು ಕೃತಿಗಳು ಪುರಂದರದಾಸರ ಕೆಲವು ಪದಗಳಲ್ಲಿ ಇರುವ ಭಾವನೆಯನ್ನೇ ವ್ಯಕ್ತ ಪಡಿಸುವುದು ಗಮನಾರ್ಹ. ಉದಾಹರಣೆಗೆ ರೇವಗುಪ್ತಿ ರಾಗದ 'ಗ್ರಹಬಲಮೇಮಿ' ಎಂಬ ಕೃತಿ ಪುರಂದರರ 'ಸಕಲ ಗ್ರಹಬಲ ನೀನೆ' ಎಂಬ ರಚನೆಯನ್ನು ಹೋಲುತ್ತಿದ್ದರೆ, ಜಿಂಗಲ ರಾಗದ 'ಅನಾಥುಡನು ಗಾನು' ಎಂಬ ರಚನೆ ಪುರಂದರ ದಾಸರ 'ನಿನ್ನಂಥ ತಾಯಿ ಎನಗುಂಟು ನಿನಗಿಲ್ಲ' ಎಂಬ ಉಗಾಭೋಗದ ಭಾವನೆಯನ್ನೇ ಹೇಳುತ್ತದೆ. ತ್ಯಾಗರಾಜರು ತಮ್ಮ ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ, ಪುರಂದರದಾಸರನ್ನು ಸ್ಮರಿಸಿದ್ದಾರೆ.

ತ್ಯಾಗರಾಜರ ಭಕ್ತಿ ಶ್ರೇಷ್ಠತೆಯು  ನಾದೋಪಾಸನೆಯ ಹಾದಿಯಲ್ಲಿ ಹರಿದು ಅವರನ್ನು ಮುಕ್ತಿ ಪದವಿಗೇರಿಸಿತು. ನಾದೋಪಾಸನೆಯಿಂದಲೂ ಮುಕ್ತಿಯನ್ನು ಗಳಿಸಬಹುದೆಂಬ ನಿಶ್ಚಲವಾದ ನಂಬಿಕೆಯನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪರಮೇಶ್ವರನನ್ನು ನಾದಶರೀರಿಯೆಂದು ವರ್ಣಿಸಿದ್ದಾರೆ (ನಾದ ತನುಮನಿಶಂ-ಚಿತ್ತ ರಂಜನಿ). ನಾದವಿದ್ಯೆ ಹರಿಹರಬ್ರಹ್ಮಾದಿಗಳಿಗೂ ಮಾನ್ಯವಾದದ್ದು ಎಂಬುದಾಗಿ ಕೀರ್ತಿಸಿದ್ದಾರೆ (ನಾದೋಪಾಸಚೇ-ಬೇಗಡ). ನಾದದಲ್ಲಿ ಲೀನವಾಗುವುದೇ ಬ್ರಹ್ಮಾನಂದ ಎಂದು ಕೀರ್ತಿಸಿದ್ದಾರೆ. (ನಾದಲೋಲುಡೈ-ಕಲ್ಯಾಣ ವಸಂತ). ಸಂಗೀತ ಜ್ಞಾನದಿಂದ ಇಹಪರಗಳೆರಡನ್ನೂ ಸಾಧಿಸಬಹುದೆಂದು ಸಾರಿದ್ದಾರೆ (ಸಂಗೀತಶಾಸ್ತ್ರ ಜ್ಞಾನಮು-ಮುಖಾರಿ). ಸಂಗೀತವಿಲ್ಲದೆ ಮೋಕ್ಷವಿಲ್ಲ ಎಂದು ಕೊರಳೆತ್ತಿ ಘೋಷಿಸಿದ್ದಾರೆ (ಮೋಕ್ಷಮು ಗಲದಾ-ಸಾರಮತಿ).

ತ್ಯಾಗರಾಜರ ಆಡುಭಾಷೆ ತೆಲುಗು. ಅವರ ರಚನೆಗಳಲ್ಲಿ ಬಹುಭಾಗ ತೆಲುಗು ಭಾಷೆಯವು. ಸಂಸ್ಕೃತ ಭಾಷೆಯಲ್ಲಿಯೂ ಅವರದು ಪ್ರಗಲ್ಭವಾದ ಪಾಂಡಿತ್ಯ. ಸಂಸ್ಕೃತದಲ್ಲಿ ರಚಿತವಾಗಿರುವ ಅವರ ಕೃತಿಗಳೂ ಗಣನೀಯ. ಜಗದಾನಂದಕಾರಕ (ನಾಟ), ಸಾಮಜವರಗಮನ (ಹಿಂದೋಳ), ಸುಜನ ಜೀವನ (ಖಮಾಚ್), ಈಶ ಪಾಹಿ ಮಾಂ (ಕಲ್ಯಾಣಿ), ಕ್ಷೀರಸಾಗರ ವಿಹಾರ (ಆನಂದ ಭೈರವಿ), ನಾದತನುಮನಿಶಂ (ಚಿತ್ತರಂಜನಿ), ನಿರವದಿs ಸುಖದ (ರವಿಚಂದ್ರಿಕಾ), ದೇವಾದಿ ದೇವ (ಸಿಂಧುರಾಮಕ್ರಿಯ), ದೇಹಿ ತವಪದಭಕ್ತಿಂ (ಶಹನ), ಗಿರಿರಾಜಸುತಾತನಯ (ಬಂಗಾಳ), ಪಾಹಿ ರಾಮದೂತ (ವಸಂತವರಾಳಿ) ಇವೇ ಮೊದಲಾದವು ಅವರ ಪ್ರಸಿದ್ಧವಾದ ಸಂಸ್ಕೃತ ರಚನೆಗಳಲ್ಲಿ ಕೆಲವು.

ತ್ಯಾಗರಾಜರು ಶ್ರೀರಾಮನ ದರ್ಶನವನ್ನು ಪಡೆದು ಕೃತಕೃತ್ಯರಾದವರೆಂಬುದು ಅವರದೇ ಆದ ಗಿರಿಪೈನೆಲಕೇನ-ಶಹನ, ಭವನುತ-ಮೋಹನ, ಪರಮಾತ್ಮುಡು-ವಾಗದಿsಶ್ವರಿ, ಪರಿತಾಪಮು-ಮನೋಹರಿ, ಕನುಗೊಂಟನಿ-ಬಿಲಹರಿ ಮುಂತಾದ ಕೆಲವು ರಚನೆಗಳಿಂದ ತಿಳಿದುಬರುತ್ತದೆ. ತಮ್ಮ ನಿರ್ಯಾಣ ಸಮಯ ಸಮೀಪಿಸುತ್ತಿರುವದನ್ನರಿತ ತ್ಯಾಗರಾಜರು ನಾದಬ್ರಹ್ಮಾನಂದರೆಂಬ ಆಶ್ರಮನಾಮದಿಂದ ಸನ್ಯಾಸದೀಕ್ಷೆಯನ್ನು ಸ್ವೀಕರಿಸಿ, ಪರಾಭವ ಸಂವತ್ಸರ ಪುಷ್ಯ ಬಹುಳ ಪಂಚಮಿ 1847 ಜನವರಿ 6ರಂದು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿ ವಿಶ್ವಾತ್ಮನಲ್ಲಿ ಲೀನವಾದರು.

ಕರ್ನಾಟಕ ಸಂಗೀತಕ್ಕೆ ತ್ಯಾಗರಾಜರ ಕಾಣಿಕೆಯ ನೆನಪಾಗಿ ಪ್ರತಿ ವರ್ಷ ತಿರುವಯ್ಯಾರಿನಲ್ಲಿ ಪುಷ್ಯ ಬಹುಳ ಪಂಚಮಿಯಂದು (ಜನವರಿ ಅಥವ ಫೆಬ್ರವರಿ ತಿಂಗಳುಗಳ ಸಮಯ) "ತ್ಯಾಗರಾಜ ಆರಾಧನೆ" ಉತ್ಸವ ನಡೆಯುತ್ತದೆ.  ಇತ್ತೀಚಿನ ವರ್ಷಗಳಲ್ಲಿ ಈ ಸಂಬಂಧವಾಗಿ ಹಲವಾರು ದಿನಗಳ ಸಂಗೀತ ಕಚೇರಿಗಳು ನಡೆಯುತ್ತವಾದರೂ ತ್ಯಾಗರಾಜರ ಆರಾಧನೆಯದಿನ ಅಸಂಖ್ಯಾತ ಸಂಗೀತಗಾರರು ಒಟ್ಟಾಗಿ ಸೇರಿ ನಡೆಸುವ ಗೋಷ್ಠಿಗಾನದಲ್ಲಿ ಮೂಡಿಬರುವ ಪಂಚರತ್ನಕೃತಿಗಳನ್ನು ಕೇಳುವುದು ಮೈಜುಮ್ಮೆನಿಸುವಂತಹ ಅನುಭವವನ್ನು ನೀಡುವಂತದ್ದು. ನಮ್ಮ ಶ್ರೀರಂಗಪಟ್ಟಣದಲ್ಲಿ ನಡೆಯುವ ತ್ಯಾಗರಾಜ ಆರಾಧನೆಯೂ ಪ್ರಸಿದ್ಧಿ ಪಡೆದಿದೆ.  ಇದಲ್ಲದೆ ಭಾರತದಲ್ಲಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ತ್ಯಾಗರಾಜರ ಸ್ಮರಣೆಯ ಕಾರ್ಯಕ್ರಮಗಳು ನಡೆಯುತ್ತವೆ.  ಅವರ ಗಾನಲಹರಿಯಂತೂ ದಕ್ಷಿಣ ಭಾರತೀಯ ಪರಂಪರೆಯ ತನು ಮನಗಳಲ್ಲಿ ಚಿರಸ್ಥಾಯಿ. 

ತ್ಯಾಗರಾಜರನ್ನು ನೆನೆವಾಗ ತಿರುವಯ್ಯಾರಿನಲ್ಲಿ ಅವರ ಸ್ಮರಣೆಗೊಂದು ಉತ್ತಮ ನೆಲೆ ಕಲ್ಪಿಸಿದ ಬೆಂಗಳೂರು ನಾಗರತ್ನಮ್ಮನವರೂ ನೆನಪಾಗುತ್ತಾರೆ.

On the birth anniversary great saint of music Tyagaraja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ