ಕೆ. ನರಸಿಂಹಮೂರ್ತಿ
ಕೆ. ನರಸಿಂಹಮೂರ್ತಿ
ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ವಿಮರ್ಶಕರಲ್ಲಿ ಕೆ. ನರಸಿಂಹಮೂರ್ತಿ ಒಬ್ಬರು. ಐಎಎಸ್ ಓದಿ ದಕ್ಷ ಅಧಿಕಾರಿಗಳಾಗಿದ್ದರೂ ಅವರು ಕನ್ನಡ ಸಾಹಿತ್ಯಲೋಕಕ್ಕೆ ಆಪ್ತಾರಾಗಿದ್ದರು.
ನರಸಿಂಹಮೂರ್ತಿ 1919ರ ಮೇ 12 ರಂದು ಕೋಲಾರ ಜಿಲ್ಲೆಯ ಗೌರಿಬಿದನೂರಿನ ಬಳಿಯ ಮಂಚೇನಹಳ್ಳಿಯಲ್ಲಿ ಜನಿಸಿದರು. ತಂದೆ ರೆವಿನ್ಯೂ ಇನ್‌ಸ್ಪೆಕ್ಟರಾಗಿದ್ದ ಕೃಷ್ಣಮೂರ್ತಿ. ತಾಯಿ ಸಾವಿತ್ರಮ್ಮ.
ನರಸಿಂಹಮೂರ್ತಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು. ಫೋರ್ಟ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸಂಸ್ಕೃತ ಪಂಡಿತರಾಗಿದ್ದ ಸೀತಾರಾಮ ಶಾಸ್ತ್ರಿಗಳು ಕಾಳಿದಾಸನ ಕೃತಿಯನ್ನು ವಿವರಿಸುತ್ತಿದ್ದ ರೀತಿಯಿಂದ ಸಾಹಿತ್ಯದತ್ತ ಆಸಕ್ತಿ ಚಿಗುರಿತು. ತಾತನ ಮನೆಯಲ್ಲಿದ್ದ ಇಂಗ್ಲಿಷ್, ಸಂಸ್ಕೃತ ಮತ್ತು ಕನ್ನಡ ಪುಸ್ತಕಗಳ ಓದು ಇವರ ಸಾಹಿತ್ಯ ದಾಹವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದವು.
ನರಸಿಂಹಮೂರ್ತಿ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ಬರೆದ ಕಥೆ ‘ಬೆಳೆದಲ್ಲೇ ಉಳಿದಿದ್ದರೆ’ ಕೃತಿಗೆ ಬಹುಮಾನ ಬಂತು. ಸಾಹಿತ್ಯ ಪರಿಷತ್ತು ನಡೆಸಿದ ವಿಮರ್ಶಾ ಸ್ಪರ್ಧೆಯಲ್ಲಿ ‘ಕನ್ನಡದ ಸಣ್ಣ ಕಥಾ ಸ್ವರೂಪ’ ಲೇಖನಕ್ಕೆ ದ್ವಿತೀಯ ಬಹುಮಾನ ಬಂತು. ಇದನ್ನು ಡಾ. ಎ.ಆರ್.ಕೃಷ್ಣಶಾಸ್ತ್ರಿಗಳು ಮೆಚ್ಚಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸಿದಾಗ ವಿದ್ವಾಂಸರುಗಳ ಗಮನ ಸೆಳೆಯಿತು. ಎಂ.ಆರ್. ಶ್ರೀನಿವಾಸಮೂರ್ತಿ ಅವರು ಅದನ್ನು ಜಾಣ ಪರೀಕ್ಷೆಗೆ ಪಠ್ಯವಾಗಿಸಿದರು.
ನರಸಿಂಹಮೂರ್ತಿ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಓದುವಾಗ ಪ್ರಿನ್ಸಿಪಾಲ್ ರಾಲೋ ಅವರ ಮೆಚ್ಚಿನ ಶಿಷ್ಯರಾಗಿದ್ದರು. ಬಿ.ಎ. ಆನರ್ಸ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. 1943ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಅಡಿಗರು, ಕೆ.ಎಸ್. ನರಸಿಂಹಸ್ವಾಮಿ, ಆರ್.ಕೆ. ನಾರಾಯಣ್ ಅವರುಗಳ ಸ್ನೇಹ ದೊರಕಿತು.
1956ರಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ದಕ್ಷ ಅಧಿಕಾರಿಗಳಾಗಿ ಹೆಸರು ಮಾಡಿದರು.
ನರಸಿಂಹಮೂರ್ತಿ ಅವರು ಅಡಿಗರ ‘ಚಂಡಮದ್ದಲೆ’, ರಾಮಚಂದ್ರಶರ್ಮರ ‘ಏಳು ಸುತ್ತಿನ ಕೋಟೆ’ಗೆ ಮುನ್ನುಡಿ ಬರೆದರು. ಸಾಹಿತ್ಯ ಪರಿಷತ್ತಿಗಾಗಿ ‘ಅತ್ಯುತ್ತಮ ಸಣ್ಣಕಥೆಗಳ ಸಂಗ್ರಹ’ ಸಂಪಾದಿಸಿಕೊಟ್ಟರು. ಅಶೋಕ ವಿಜಯ (ಖಂಡಕಾವ್ಯ), ಪ್ರಿಯದರ್ಶಿನಿ ಮತ್ತು ಇತರ ಕಥೆಗಳು, ದೇವುಡು ನರಸಿಂಹಶಾಸ್ತ್ರಿಗಳ ಕೃತಿ ಸಮೀಕ್ಷೆ,ಆಡಳಿತಗಾರನ ಡೈರಿಯಿಂದ ಮತ್ತು ಹಲವಾರು ವಿಮರ್ಶಾಗ್ರಂಥಗಳನ್ನು ಪ್ರಕಟಿಸಿದರು. ವಿಶ್ವದ ಹಲವು ಭಾಷೆಗಳ ಅತ್ಯುತ್ತಮ ಕೃತಿಗಳನ್ನು ಕನ್ನಡಿಗರಿಗೆ ಕನ್ನಡಪ್ರಭ ಪತ್ರಿಕೆಯ ‘ಸಾಹಿತ್ಯಲೋಕ’ ಅಂಕಣದ ಮೂಲಕ ಪರಿಚಯಿಸಿದರು.
ನರಸಿಂಹಮೂರ್ತಿ ಅವರು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ಆಧುನಿಕ ಭಾರತೀಯ ಸಾಹಿತ್ಯ ಕನ್ನಡ ಭಾಷೆಯ ಸಂಪಾದಕತ್ವ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಕಟಿಸುತ್ತಿದ್ದ ಚಂದನ ಮತ್ತು ಅನಿಕೇತನ ಪತ್ರಿಕೆಗಳ ಸಂಪಾದಕತ್ವವನ್ನೂ ನಿರ್ವಹಿಸಿದ್ದರು.
ಬೆಂಗಳೂರಿನಲ್ಲಿ ನೀನಾಸಂ ಸಾಹಿತ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಸರಳತೆಯೇ ಮೂರ್ತಿವತ್ತಂತಿದ್ದ ಕೆ. ನರಸಿಂಹಮೂರ್ತಿ ಅವರ ಜೊತೆ ಇದ್ದು ಅವರ ವಿದ್ವತ್ಪೂರ್ಣ ಮಾತುಗಳನ್ನು ಕೇಳುವ ಸೌಭಾಗ್ಯ ನನಗೆ ದಕ್ಕಿತ್ತು.
ನರಸಿಂಹಮೂರ್ತಿ ಅವರು 1999ರ ಜೂನ್ 12 ರಂದು ಈ ಲೋಕವನ್ನಗಲಿದರು.
On the birth anniversary of great scholar, writer and administrator K. Narasimha Murthy
ಕಾಮೆಂಟ್‌ಗಳು