ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಶಂಕರ ಕುರುಪ್


 ಜಿ. ಶಂಕರ ಕುರುಪ್ 


ಜಿ. ಶಂಕರ ಕುರುಪ್ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲಿಗರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಮಲಯಾಳಂನಲ್ಲಿ ಮಹಾಕವಿಯಾಗಿ, ಪ್ರಬಂಧಕರಾಗಿ,  ವಿಮರ್ಶಕರಾಗಿ, ಭಾಷಾಂತರಕಾರರಾಗಿ ಮಹಾನ್ ಸಾಧನೆ ಮಾಡಿದವರು. ಭಾರತದ ಹಲವು ಭಾಷೆಗಳು ಮತ್ತು ವಿಶ್ವದ ಅನೇಕ ಭಾಷೆಗಳಲ್ಲಿ ಅವರ ಸಾಹಿತ್ಯ ತರ್ಜುಮೆಗೊಂಡಿದೆ.   ನಮ್ಮ ಕನ್ನಡದ ಮಹಾನ್ ವಿದ್ವಾಂಸರಾದ ಎ. ಕೆ. ರಾಮನುಜನ್ ಅವರು ಜಿ. ಶಂಕರ ಕುರುಪ್
ಅವರ ಆಯ್ದ ಕವಿತೆಗಳ ಸಂಕಲನವನ್ನು ಇಂಗ್ಲಿಷಿನಲ್ಲಿ ಪ್ರಕಟಿಸಿದ್ದಾರೆ. 

ಶಂಕರ ಕುರುಪ್  1901ರ ಜೂನ್ 3ರಂದು ಕೊಚ್ಚಿಯ ನಯತೋಡ್ ಎಂಬಲ್ಲಿ ಜನಿಸಿದರು. ಅವರ ತಂದೆ ನೆಲ್ಲಿಕಾಂಬಲ್ಲಿ ವರಿಯುತು ಶಂಕರ ವಾರಿಯರ್. ತಾಯಿ ವಾಡಕಣ್ಣಿ ಮರಾತ್ ಲಕ್ಷ್ಮಿಕುಟ್ಟಿ.  ಅವರ ಒಬ್ಬ ಚಿಕ್ಕಪ್ಪ ಸಂಸ್ಕೃತ ವಿದ್ವಾಂಸ ಮತ್ತು ಜ್ಯೋತಿಷಿಯಾಗಿದ್ದರು.  ಅವರು ಶಂಕರ ಕುರುಪ್ ಅವರ ಸಾಹಿತ್ಯಿಕ ಜೀವನ ರೂಪುಗೊಳ್ಳುವಲ್ಲಿ ಗಮನಾರ್ಹ ಪ್ರಭಾವ ಬೀರಿದರು. 1931ರಲ್ಲಿ ಶಂಕರ ಕುರುಪ್ ಅವರು ತಿರುವಂಚಿಕುಲಂನಲ್ಲಿರುವ ಪುರುತು ವೀಡು ಎಂಬ ಪುರಾತನ ನಾಯರ್ ಕುಟುಂಬದಿಂದ ಸುಭದ್ರಾ ಅಮ್ಮ
ಅವರನ್ನು  ವಿವಾಹವಾದರು.

ಶಂಕರ ಕುರುಪ್ ಅವರು 1921ರಲ್ಲಿ ತಿರುವಿಲ್ವಾಮಲಾದ ಮಾಧ್ಯಮಿಕ ಶಾಲೆಯಲ್ಲಿ ಮಲಯಾಳಂ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ ತ್ರಿಚೂರ್ ಸಮೀಪದ ಸರ್ಕಾರಿ ಸೆಕೆಂಡರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಾದರು. ಮುಂದೆ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಮಲಯಾಳಂ ಪಂಡಿತರಾಗಿ ಕೆಲಸ ಮಾಡಿ 1956ರಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾದರು. 

ಶಂಕರ ಕುರುಪ್ ಅವರ "ಪ್ರಕೃತಿಗೆ ನಮನ" ಎಂಬರ್ಥದ ಪ್ರಥಮ ಕವನ 1918ರಲ್ಲಿ ಅವರು ವಿದ್ಯಾರ್ಥಿಯಾಗಿದ್ದಾಗಲೇ ಪ್ರಕಟಗೊಂಡಿತು. ಅವರ ಪ್ರಥಮ ಕಾವ್ಯ ಸಂಕಲನ ‘ಸಾಹಿತ್ಯ ಕೌತುಕಮ್' 1923ರಲ್ಲಿ ಪ್ರಕಟಗೊಂಡಿತು.  1935ರಲ್ಲಿ ಅವರ 'ಸೂರ್ಯಕಾಂತಿ' ಕೃತಿ ಪ್ರಕಟಗೊಳ್ಳುವ ವೇಳೆಗಾಗಲೇ ಅವರ ಹೆಸರು ಪತ್ರಿಕೆಗಳಲ್ಲದರ ಮೂಲಕ ಮನೆಮಾತಾಗಿತ್ತು.

ಶಂಕರ ಕುರುಪ್ ಅವರು ಕವನ ಸಂಕಲನಗಳು, ಗೀತನಾಟಕ, ಪ್ರಬಂಧಗಳು, ಅನುವಾದಗಳು ಮತ್ತು ವಿಮರ್ಶೆಗಳನ್ನೊಳಗೊಂಡ  ಸುಮಾರು 40 ಕೃತಿಗಳನ್ನು ಪ್ರಕಟಿಸಿದರು. ಇವರು ಮಲಯಾಳ ಭಾಷೆಗೆ ಭಾಷಾಂತರಿಸಿದ ಮುಖ್ಯ ಕೃತಿಗಳೆಂದರೆ ಉಮರ್ ಖಯ್ಯಾಮಾನ "ರೂಬೈಯಾತ್", ಕಾಳಿದಾಸನ "ಮೇಘದೂತ" ಮತ್ತು ರಬೀಂದ್ರನಾಥ ಠಾಗೂರರ ನೊಬೆಲ್ ಪ್ರಶಸ್ತಿ ವಿಜೇತ "ಗೀತಾಂಜಲಿ". ಮಾನವ ಜೀವನದ ಮೇಲೆ ವಿಜ್ಞಾನದ ಪ್ರಭಾವವನ್ನು ಕುರಿತು ಅಧ್ಯಯನ ನಡೆಸಿದ ಇವರು "ವೈಜ್ಞಾನಿಕ ಕವಿ" ಎಂದೂ ಹೆಸರಾದರು. 

ಶಂಕರ ಕುರುಪ್ ಅವರು  ಪಿ.ಜೆ.ಚೇರಿಯನ್ ಅವರ 'ನಿರ್ಮಲ' ಚಿತ್ರಕ್ಕೆ ಗೀತೆಗಳನ್ನು ಬರೆದರು.  ಇದು ಮಲಯಾಳಂ ಚಿತ್ರರಂಗದಲ್ಲಿ ಹಾಡು ಮತ್ತು ಸಂಗೀತವನ್ನು ಹೊಂದಿದ್ದ ಪ್ರಥಮ ಚಲನಚಿತ್ರ. ಇದಲ್ಲದೆ 'ಒರು ಕೂಡಿ ಕಲ್ಲಾನಾಯಿ', 'ಅಭಯಂ', 'ಅಡುತಾಡುತು', 'ಒಲಿಪ್ಪೊರು' ಮುಂತಾದ ಚಿತ್ರಗಳಿಗೂ ಗೀತಗಳನ್ನು ಬರೆದರು.  

ಶಂಕರ ಕುರುಪ್ ಅವರ ಇತರ ಪ್ರಸಿದ್ಧ ಕೃತಿಗಳಲ್ಲಿ ನಿಮಿಶಮ್ (ನಿಮಿಷ),  ಒಡಕುಝಾಲ್ (ಕೊಳಲು) , ಪಾದಿಕಂತೆ ಪಾಟ್ಟು (ಪಯಣಿಗರ ಗೀತೆ), ವಿಶ್ವದ್ರರಣಂ (ವಿಶ್ವದ ಸ್ಥಿತಿ), ಮೂನ್ನರುವಿಯಾಮ್ ಓರು ಪುಝಹ್ಯಾಮ್ (ಮೂರು ತೊರೆಗಳು ಮತ್ತು ಒಂದು ನದಿ) ,  ಜೀವನಾ ಸಂಗೀತಂ, ಸಾಹಿತ್ಯ ಸಂಹಿತಮ್ 3 ಸಂಪುಟಗಳು, ಎಂಟೆ ವೈಲ್
- ಪೆರುಂಥಾಚನ್ ಪ್ರಬಂಧಗಳು, ಗಾಧಿಯೋಪಾಹರಾಮ್ (ಗದ್ಯದೊಂದಿಗೆ ಗೌರವ),  ಮ್ಯೂತಮ್ ಚಿಪ್ಪಿಯಮ್ (ಮುತ್ತು ಮತ್ತು ಸಮುದ್ರಜೀವಿ), ಒರ್ಮಾಯ್ಡ್ ಒಲಾಂಗಲ್ಲಿಲ್ (ನೆನಪಿನ ಅಲೆಗಳು) ಮುಂತಾದವು ಸೇರಿವೆ.

1965ರಲ್ಲಿ ಶಂಕರ ಕುರುಪ್ ಅವರ "ಒದಕ್ಕೂಜಲ್" ಕವನ ಸಂಕಲನಕ್ಕೆ ಜ್ಞಾನಪೀಠದ ಪ್ರಪ್ರಥಮ ಪ್ರಶಸ್ತಿ ಸಂದಿತು. 1967ರಲ್ಲಿ ಸೋವಿಯತ್ ನೆಹರು ಶಾಂತಿ ಪುರಸ್ಕಾರ, 1968ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಸಂದವು. ಕುರುಪ್ ಅವರು ಒಂದು ಅವಧಿಗೆ ರಾಜ್ಯಸಭೆಯ ಗೌರವ ಸದಸ್ಯರಾಗಿದ್ದರು.

ಜಿ. ಶಂಕರ ಕುರುಪ್ ಅವರು 1978ರ ಫೆಬ್ರವರಿ 2ರಂದು ನಿಧನರಾದರು.

On the birth anniversary of first Jnana Pith Awardee G. Sankara Kurup


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ