ಅನಿತಾ ದೇಸಾಯಿ
ಅನಿತಾ ದೇಸಾಯಿ
ಭಾರತೀಯ ಇಂಗ್ಲಿಷ್ ಲೇಖಕಿ ಅನಿತಾ ದೇಸಾಯಿ ಮೂರು ಬಾರಿ ಬೂಕರ್ ಪ್ರಶಸ್ತಿಯ ಹೊಸ್ತಿಲನ್ನು ಮುಟ್ಟಿ ಅಂತರರಾಷ್ಟ್ರೀಯ ಪ್ರಖ್ಯಾತಿ ಗಳಿಸಿದ್ದಾರೆ.
ಅನಿತಾ ದೇಸಾಯಿ ಅವರು ಬಂಗಾಳಿ ಉದ್ಯಮಿ ಡಿ. ಎನ್. ಮಜುಂದಾರ್ ಮತ್ತು ಜರ್ಮನಿಯ ಟೋನಿ ನೈಮ್ ಅವರ ಮಗಳಾಗಿ 1937ರ ಜೂನ್ 24 ರಂದು ಮಸ್ಸೂರಿಯಲ್ಲಿ ಜನಿಸಿದರು. ಮನೆಯಲ್ಲಿ ಜರ್ಮನ್ ಮಾತನಾಡುತ್ತಿದ್ದರೂ ಹೊರಗೆ ಬೆಂಗಾಳಿ, ಉರ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಅಭ್ಯಾಸವಾಯಿತು.
ಅನಿತಾ ದೇಸಾಯಿ ಅವರು ದೆಹಲಿಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರು. ಏಳನೇ ವಯಸ್ಸಿನಲ್ಲಿ ಇಂಗ್ಲೀಷ್‌ನಲ್ಲಿ ಬರೆಯಲು ಆರಂಭಿಸಿದ ಅವರ ಮೊದಲ ಕಥೆ ಅವರಿಗೆ ಇನ್ನೂ ಒಂಭತ್ತು ವಯಸ್ಸಿರುವಾಗಲೇ ಪ್ರಕಟವಾಗಿತ್ತು.
ಅನಿತಾ ದೇಸಾಯಿ ಅವರು 1957ರಲ್ಲಿ ಮಿರಾಂಡಾ ಹೌಸ್ ಆಫ್ ದಿ ಯೂನಿವರ್ಸಿಟಿ ಆಫ್ ದೆಹಲಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಪದವಿ ಪಡೆದರು. ಇದರ ಮುಂದಿನ ವರ್ಷದಲ್ಲೇ ಅವರು ಅಶ್ವಿನ್ ದೇಸಾಯಿ ಅವರನ್ನು ಮದುವೆಯಾದರು. ಅಶ್ವಿನ್ ದೇಸಾಯಿ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿಯೊಂದರ ನಿರ್ದೇಶಕರಾಗಿದ್ದು, 'ಬಿಟ್ವಿನ್ ಎಟರ್ನಿಟಿಸ್: ಐಡಿಯಾಸ್ ಆನ್ ಲೈಫ್ ಅಂಡ್ ದಿ ಕಾಸ್ಮೋಸ್' ಪುಸ್ತಕವನ್ನು ಬರೆದವರು. ಈ ದಂಪತಿಗಳ ನಾಲ್ಕು ಮಕ್ಕಳಲ್ಲಿ ಬೂಕರ್ ಪ್ರಶಸ್ತಿ ವಿಜೇತ ಕಾದಂಬರಿಗಾರ್ತಿ ಕಿರಣ್ ದೇಸಾಯಿ ಒಬ್ಬರು.
ಅನಿತಾ ದೇಸಾಯಿ ತಮ್ಮ ಮಕ್ಕಳನ್ನು ವಾರಾಂತ್ಯಗಳಲ್ಲಿ ಅಲಿಭಾಗ್ ಬಳಿಯ ತುಲ್ ಎಂಬಲ್ಲಿಗೆ ವಿಶ್ರಾಂತಿ ವಿನೋದಗಳಿಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಅನಿತಾ ಅವರು ರಚಿಸಿದ 'ದಿ ವಿಲೇಜ್ ಬೈ ದಿ ಸೀ' ಕಾದಂಬರಿಗೆ ಬ್ರಿಟಿಷ್ ಚಿಲ್ಡ್ರನ್ಸ್ ರೈಟರ್ಸ್ ಸಮಿತಿಯ 'ಗಾರ್ಡಿಯನ್ ಚಿಲ್ಡ್ರನ್ಸ್ ಫಿಕ್ಷನ್ ಬಹುಮಾನ ಬಂತು.
ಅನಿತಾ ದೇಸಾಯಿ ಅವರು 1958ರಲ್ಲಿ ಪಿ. ಲಾಲ್ ಅವರ ಸಹಯೋಗದಲ್ಲಿ ರೈಟರ್ಸ್ ವರ್ಕ್ಸಶಾಪ್ ಎಂಬ ಪ್ರಕಾಶನ ಸಂಸ್ಥೆ ಸ್ಥಾಪಿಸಿದರು. 'ಕ್ರೈ ದಿ ಪೀಕಾಕ್' ಎಂಬ ತಮ್ಮ ಮೊದಲ ಕಾದಂಬರಿಯನ್ನು 1963ರಲ್ಲಿ ಪ್ರಕಟಿಸಿದರು. 1980ರಲ್ಲಿ ಪ್ರಕಟಿಸಿದ ಅವರ 'ಕ್ಲಿಯರ್ ಲೈಟ್ ಆಫ್ ಡೆ' ಅವರ ಬೆಳವಣಿಗೆಯ ದಿನಗಳು ಮತ್ತು ಬೆಳೆದ ಪರಿಸರದ ಎಳೆಗಳನ್ನೊಳಗೊಂಡಿದೆ.
ಅನಿತಾ ದೇಸಾಯಿ ಅವರು ಉರ್ದು ಕವಿಯೋರ್ವರ ಇಳಿಮುಖದ ದಿನಗಳ ಹಿನ್ನಲೆಯನ್ನೊಳಗೊಂಡಂತ 'ಇನ್ ಕಸ್ಟೊಡಿ' ಕೃತಿಯನ್ನು 1984ರಲ್ಲಿ ಪ್ರಕಟಿಸಿದರು. ಇದು ಬೂಕರ್ ಪ್ರಶಸ್ತಿಯ ಪರಿಗಣನಾ ಪಟ್ಟಿಯಲ್ಲಿ ಮೂಡಿತ್ತು.
ಅನಿತಾ ದೇಸಾಯಿ 1993ರಲ್ಲಿ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೃಜನಶೀಲ ಬರವಣಿಗೆಯ ಶಿಕ್ಷಕಿಯಾದರು. 1999ರಲ್ಲಿ ಬೂಕರ್ ಬಹುಮಾನದ ಅಂತಿಮ ಸುತ್ತಿಗೆ ಪ್ರವೇಶಿಸಿದ ಅವರ ಕಾದಂಬರಿ 'ಫಾಸ್ಟಿಂಗ್, ಫೀಸ್ಟಿಂಗ್' ಅವರ ಜಾಗತಿಕ ಜನಪ್ರಿಯತೆಯನ್ನು ಹೆಚ್ಚಿಸಿತು. ಅವರ
'ದಿ ಜ಼ಿಗ್ ಜ಼ಾಗ್ ವೇ' ಕಾದಂಬರಿ 2004 ರಲ್ಲಿ ಹೊರ ಬಂತು. 2011ರಲ್ಲಿ ಅವರ ಸಣ್ಣ ಕಥೆಗಳ ಸಂಗ್ರಹ 'ದಿ ಆರ್ಟಿಸ್ಟ್ ಆಫ್ ಡಿಸ್ಸಪಿಯರೆನ್ಸ್' ಪ್ರಕಟಗೊಂಡಿತು.
ಅನಿತಾ ದೇಸಾಯಿ ಮೌಂಟ್ ಹೊಲ್ಯೋಕ್ ಕಾಲೇಜ್, ಬರೂಚ್ ಕಾಲೇಜು ಮತ್ತು ಸ್ಮಿತ್ ಕಾಲೇಜುಗಳಲ್ಲಿ ಬೋಧನೆ ಮಾಡಿದರು. ರಾಯಲ್ ಸೊಸೈಟಿ ಆಫ್ ಲಿಟರೇಚರ್, ದಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಲೆಟರ್ಸ್, ಕೇಂಬ್ರಿಡ್ಜಿನ ಗ್ರಿಟನ್ ಕಾಲೇಜು ಮುಂತಾದವುಗಳು ಅನಿತಾ ದೇಸಾಯಿ ಅವರಿಗೆ ಫೆಲೋ ಗೌರವ ನೀಡಿವೆ.
1993ರಲ್ಲಿ, ಅನಿತಾ ದೇಸಾಯಿ ಅವರ ಕಾದಂಬರಿ ‘ಇನ್ ಕಸ್ಟಡಿ’ ಇಂಗ್ಲಿಷ್ ಚಲನಚಿತ್ರವಾಗಿ ಮೂಡಿ ಬಂತು. ಶಾರುಖ್ ಹುಸೈನ್ ಅವರ ಚಿತ್ರಕಥೆಯೊಂದಿಗೆ ಇಸ್ಮಾಯಿಲ್ ಮರ್ಚೆಂಟ್ ನಿರ್ದೇಶಿಸಿ, ಶಶಿ ಕಪೂರ್, ಶಬಾನಾ ಅಜ್ಮಿ ಮತ್ತು ಓಂ ಪುರಿ ಅಭಿನಯಿಸಿದ್ದ ಈ ಚಿತ್ರ ಅತ್ಯುತ್ತಮ ಚಲನಚಿತ್ರಕ್ಕಾಗಿನ ಭಾರತದ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿತು.
ಅನಿತಾ ದೇಸಾಯಿ ಅವರಿಗೆ ವಿನಿಫ್ರೆಡ್ ಹಾಲ್ಟ್ ಬೈ ಸ್ಮಾರಕ ಪ್ರಶಸ್ತಿ, 'ಫೈರ್ ಆನ್ ದಿ ಮೌಂಟೇನ್' ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ದಿ ವಿಲೇಜ್ ಬೈ ದಿ ಸೀ' ಕೃತಿಗೆ ಗಾರ್ಡಿಯನ್ ಚಿಲ್ಡ್ರನ್ಸ್ ಫಿಕ್ಷನ್ಸ್ ಪ್ರಶಸ್ತಿ, ಸಾಹಿತ್ಯಕ ಕೊಡುಗೆಗಾಗಿ ಇಟಲಿಯ ಆಲ್ಬರ್ಟೊ ಮೊರಾವಿಯಾ ಪ್ರಶಸ್ತಿ, ಬೆನ್ಸನ್ ಮೆಡಲ್ ಆಫ್ ರಾಯಲ್ ಸೊಸೈಟಿ ಆಫ್ ಲಿಟರೇಚರ್, ಭಾರತೀಯ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್, ಪದ್ಮಭೂಷಣ ಮುಂತಾದ ಅನೇಕ ಗೌರವಗಳು ಸಂದಿವೆ.
ಅನಿತಾ ದೇಸಾಯಿ ಅವರ ಫೈರ್ ಆನ್ ದಿ ಮೌಂಟೇನ್, ಇನ್ ಕಸ್ಟಡಿ, ಕ್ಲಿಯರ್ ಲೈಟ್ ಆಫ್ ಡೇ ಕಾದಂಬರಿಗಳು ಅವರನ್ನು ಮೂರು ಬಾರಿ ಪ್ರತಿಷ್ಟಿತ ಬೂಕರ್ ಬಹುಮಾನದ ಹೊಸ್ತಿಲವರೆಗೆ ತಲುಪಿಸಿದ್ದವು. ಅವರ ಪುತ್ರಿ ಕಿರಣ್ ದೇಸಾಯಿ 'ದಿ ಇನ್ಹೆರಿಟೆನ್ಸ್ ಆಫ್ ಲಾಸ್' ಕೃತಿಗೆ 2006 ವರ್ಷದ ಬೂಕರ್ ಬಹುಮಾನ ಗಳಿಸಿ ಹೆಸರಾಗಿದ್ದಾರೆ.
On the birth day popular novelist Anitha Desai
ಕಾಮೆಂಟ್‌ಗಳು