ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುರುರಾಜುಲು ನಾಯ್ಡು


 ಆರ್. ಗುರುರಾಜುಲು ನಾಯ್ಡು


ಆರ್. ಗುರುರಾಜುಲು ನಾಯ್ಡು ಕೀರ್ತನ ಕಲಾಕ್ಷೇತ್ರದಲ್ಲಿ ದೊಡ್ಡ ಹೆಸರು. 

ಗುರುರಾಜುಲು ನಾಯ್ಡು ಅವರು ನಾಟಕ ಮತ್ತು ಸಿನಿಮಾರಂಗದಲ್ಲಿಯೂ ತಮ್ಮ ಪ್ರತಿಭೆ ಮತ್ತು ರೂಪಗಳಿಂದ ಹೆಸರಾಗಿದ್ದರು. ಹರಿಕಥೆಗೇ ಹೆಚ್ಚಾಗಿ ಅಂಟಿಕೊಂಡ ಅವರಿಗೆ ಅವರ ತಂದೆಯವರಾದ ರಾಮಸ್ವಾಮಿ ನಾಯ್ಡು ಅವರೇ ಸ್ಪೂರ್ತಿ. ಮೈಸೂರಿನ ಪ್ರಾಥಮಿಕ ಶಾಲೆಯೊಂದರ ಅಧ್ಯಾಪಕರಾಗಿದ್ದ ರಾಮಸ್ವಾಮಿನಾಯ್ಡು ಅನುವಂಶೀಯವಾಗಿ ಬಂದ ಹರಿಕಥಾ ಕಲೆಯನ್ನು ರೂಢಿಸಿಕೊಂಡು ಮೈಸೂರಿನ ಪ್ರಮುಖ ಹರಿಕಥಾ ವಿದ್ವಾಂಸರಾಗಿದ್ದರು. 

ಗುರುರಾಜುಲು ನಾಯ್ಡು 1934ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ರಾಮಸ್ವಾಮಿನಾಯ್ಡು ಮಗನಿಗೆ ಬಿ. ದೇವೇಂದ್ರಪ್ಪನವರ ಶಿಷ್ಯ  ಎಂ.ಎನ್‌. ಗೋವಿಂದಸ್ವಾಮಿ ಅವರ ಬಳಿ ಸಂಗೀತ ಕಲಿಯಲು ಏರ್ಪಾಡು ಮಾಡಿದರು. ಜೊತೆಗೆ ತಾವೇ ಹರಿಕಥಾ ಶಿಕ್ಷಣವನ್ನು ನೀಡಿದರು. ಈ ಎರಡೂ ಉತ್ತಮ ಶಿಕ್ಷಣದ ದೆಸೆಯಿಂದ ಗುರುರಾಜ ತನ್ನ ಐದನೆಯ ವಯಸ್ಸಿಗೇ ಹರಿಕಥೆ ಮಾಡುವ ಸಾಮರ್ಥ್ಯಪಡೆದು ‘ಬಾಲಹರಿದಾಸ’ ಎನಿಸಿದ. ತಂದೆ ರಾಮಸ್ವಾಮಿ ನಾಯ್ಡುರವರ ಕಥಾ-ಕೀರ್ತನ ಕಾರ್ಯಕ್ರಮದಲ್ಲೆಲ್ಲ ಪಾಲ್ಗೊಳ್ಳುತ್ತಿದ್ದ ಗುರುರಾಜ ಅವರ ಅನಾರೋಗ್ಯದ ಸಂದರ್ಭದಲ್ಲಿ ತಾನೇ ಸ್ವತಂತ್ರವಾಗಿ ಕಥೆ ನೀಡುತ್ತಿದ್ದ. ಹೀಗಾಗಿ ಲೌಕಿಕ ವಿದ್ಯಾಭ್ಯಾಸ ಕುಂಠಿತವಾಗಿ ಮಾಧ್ಯಮಿಕ (ಎಲ್‌.ಎಸ್‌.) ಶಾಲಾ ಶಿಕ್ಷಣಕ್ಕೇ ಸೀಮಿತವಾಯಿತು.

ತಂದೆಯವರ ನಿಧನಾನಂತರ ಮೈಸೂರಿನಿಂದ ಬೆಂಗಳೂರಿಗೆ ಬಂದ ಗುರುರಾಜರು  ಭಾರತೀಯ ವಿಮಾನ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅವಕಾಶ ದೊರೆತಾಗಲೆಲ್ಲ ಹರಿಕಥಾ ಕಾರ್ಯಕ್ರಮ ನೀಡುತ್ತಿದ್ದರು. ಒಳ್ಳೆಯ ಕಂಠಶ್ರೀ, ಮಧುರವಾದ ಲಯಬದ್ಧಗಾಯನ, ಅಭಿನಯದ ಪ್ರಾವೀಣ್ಯತೆಯನ್ನು ಕಂಡುಕೊಂಡ ವಿಮಾನಕಾರ್ಖಾನೆಯ ಲಲಿತ ಕಲಾಸಂಘದವರು ತಮ್ಮ ನಾಟಕವೊಂದರಲ್ಲಿ ಗುರುರಾಜುಲು ನಾಯ್ಡುವಿಗೆ ಸ್ವಾಮಿ ವಿವೇಕಾನಂದರ ಪಾತ್ರ ನೀಡಿದಾಗ ಅದನ್ನು ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದರು. ಅಂದು ನಾಟಕಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಸುಬ್ಬಯ್ಯನಾಯ್ಡುರವರಿಗೆ ಗುರುರಾಜುಲು ನಾಯ್ಡುರವರ ವಿವೇಕಾನಂದರ ಪಾತ್ರ ನಿರ್ವಹಣೆ ಬಹು ಮೆಚ್ಚುಗೆಯಾಗಿ ಆತನನ್ನು ತಮ್ಮ ಕಂಪೆನಿಗೆ ಸೇರುವಂತೆ ಆಹ್ವಾನ ನೀಡಿದರು. ಸರಿ ಅಭಿನಯ-ಸಂಗೀತ-ಹರಿಕಥೆಗಳನ್ನೇ ಮೈಗೂಡಿಸಿಕೊಂಡಿದ್ದ ಗುರುರಾಜುಲುನಾಯ್ಡು ತಮ್ಮ ಕೆಲಸಕ್ಕೆ  ವಿದಾಯ ಹೇಳಿ ನಾಯ್ಡುರವರ ಕಂಪೆನಿ ಸೇರಿದರು.  ಗುರುರಾಜುಲು ನಾಯ್ಡು  ಅವರು ಅಭಿನಯಿಸುತ್ತಿದ್ದ ಎಚ್ಚಮನಾಯಕ ನಾಟಕದ ಚಾಂದ್‌ಖಾನ್‌ ಪಾತ್ರ ಮತ್ತು ಭೂಕೈಲಾಸದ ರಾವಣನ ಪಾತ್ರ ಆ ಕಾಲಕ್ಕೆ ಮನೆಮಾತಾಗಿತ್ತು. ಇಷ್ಟಾದರೂ ಪಾರಂಪರ್ಯವಾಗಿ ಬಂದ ಹರಿಕಥಾಕಲೆಯನ್ನು  ಉಪೇಕ್ಷೆ ಮಾಡದೆ, ಅವಕಾಶ ದೊರೆತಾಗಲೆಲ್ಲ ಅದನ್ನು ನಡೆಸುತ್ತಾ ಬಂದರು . ಮುಂದೆ ಸುಬ್ಬಯ್ಯನಾಯ್ಡು ಅವರ ನಿಧನಾನಂತರ ನಾಟಕ ಕಂಪೆನಿ ಮುಚ್ಚಿ ಇವರಿಗೆ ಹರಿಕಥಾಕಲೆಯೇ ಮುಖ್ಯ ಕಸುಬಾಯಿತು.

ಅಂದಿನ ದಿನಗಳಲ್ಲಿ ಸುಬ್ಬಯ್ಯನಾಯ್ಡು ಅವರೊಡನೆ ಪಾಲುದಾರರಾಗಿದ್ದ ಆರ್.ನಾಗೇಂದ್ರರಾಯರು ತಮ್ಮ ಆನಂದಬಾಷ್ಪ ಚಲನಚಿತ್ರದ ಮೂವರ ನಾಯಕರುಗಳ ಪೈಕಿ ಒಬ್ಬ ನಾಯಕನ ಪಾತ್ರಕ್ಕೆ ಗುರುರಾಜುಲುನಾಯ್ಡು ಅವರನ್ನು ಆಯ್ಕೆ ಮಾಡಿ, ತಾವೇ ಅರುಣ್‍ಕುಮಾರ್ ಎಂದು ನಾಮಕರಣ ಮಾಡಿದರು.  ಮುಂದೆ ನಕ್ಕರೆ ಅದೇ ಸ್ವರ್ಗ, ಮಿಸ್‌ ಲೀಲಾವತಿ, ಹಣ್ಣೆಲೆ ಚಿಗುರಿದಾಗ, ಮುಂತಾದ ಚಿತ್ರಗಳಲ್ಲಿನ  ಇವರ ಅಭಿನಯ ಪ್ರಸಿದ್ಧಿ ಪಡೆಯಿತು. ಹೀಗೆ 'ಅರುಣ್‌ ಕುಮಾರ್’ ಹೆಸರು ಪ್ರಸಿದ್ಧಿಯಾಗಿ ‘ಗುರುರಾಜುಲು ನಾಯ್ಡು’ ಹೆಸರು ಮರೆಯಾಯ್ತು ಎಂದು ಜನ ಭಾವಿಸಿದ್ದ ಸಮಯದಲ್ಲಿ ನಾಯ್ಡುರವರು ಮತ್ತೆ ಗುರುರಾಜುಲುನಾಯ್ಡು ಆಗಿ ಕೀರ್ತನ ರಂಗಕ್ಕೆ ಮರುಪ್ರವೇಶ ಮಾಡಿದರು. 

ಗುರುರಾಜುಲುನಾಯ್ಡು ಅವರು ನಾಟಕ -ಸಿನಿಮಾ ಎರಡೂ ವೈಶಿಷ್ಟ್ಯಗಳನ್ನೂ  ಹರಿಕಥೆಯಲ್ಲಿ ಸೇರಿಸಿ ತಮ್ಮ ಉಚ್ಛಕಂಠಶ್ರೀ-ವಾಕ್ಚಾತುರ್ಯಗಳ ಮೂಲಕ ಮತ್ತು ವಿಡಂಬನಾತ್ಮಕ ಉಪಕಥೆಗಳ ಮೂಲಕ ಈ ಕಲೆಯನ್ನು ಜನರಂಜನೀಯವಾಗಿ ಮೂಡಿಸುವುದರಲ್ಲಿ ಯಶಸ್ವಿಯಾದರು. 

ಗುರುರಾಜುಲುನಾಯ್ಡು ಅವರ ಹರಿಕಥೆ ರಾಮೋತ್ಸವ, ಗಣೇಶೋತ್ಸವ, ಅಣ್ಣಮ್ಮದೇವೀ ಉತ್ಸವಗಳಲ್ಲಿ  ಕಾರ್ಯಕ್ರಮ ಆಯೋಜಕರ ಪ್ರಥಮ ಆದ್ಯತೆಯಾಗಿರುತ್ತಿತ್ತು.  ನಾಯ್ಡುರವರದ್ದು ಒಳ್ಳೆಯ ದಷ್ಟಪುಷ್ಟ ವ್ಯಕ್ತಿತ್ವ. ಶುಭ್ರವಾದ ಬಿಳಿ ಕಚ್ಚೆಪಂಚೆ, ಜುಬ್ಬ, ಸೊಂಟಕ್ಕೊಂದು ಕಾವಿ ಉತ್ತರೀಯ ಬಿಗಿದು ಶಿರಸ್ಸಿಲ್ಲಿ ಭೂಷಣವಾಗಿ ಕಾವಿ ಬಣ್ಣದ ಕೋರೆ ಪೇಟವನ್ನು ಧರಿಸಿ ನಿಂತ ಇವರ ಸಿಂಹವಾಣಿ ಜನರನ್ನು ಅಪಾರವಾಗಿ ಸಂವೇದಿಸುತ್ತಿತ್ತು.  ಅಪಾರ ಜನಪ್ರಿಯತೆಯ ಬೇಡಿಕೆಗಳ ಕಾರಣದಿಂದ ಒಂದೇ ದಿನಕ್ಕೆ ಅನೇಕ ಕಥೆಗಳನ್ನೂ ಮಾಡಿದ್ದುಂಟು.

ವ್ಯಕ್ತಿಶಃ ಗುರುರಾಜುಲು ನಾಯ್ಡು ಅತ್ಯಂತ ಸ್ನೇಹಜೀವಿ, ಸದಾ ಹಸನ್ಮುಖಿ, ಅಜಾತ ಶತ್ರು ಎನಿಸಿದ್ದರು. ಇವರ ಶಿಷ್ಯಪರಂಪರೆಯೂ ಅತಿ ದೊಡ್ಡದು. ಬಿ.ಪಿ. ರಾಜಮ್ಮ, ಕನಕದಾಸರು, ಮೈಸೂರು ಸೂರ್ಯನಾರಾಯಣದಾಸರು, ಹಿನ್ನೆಲೆಗಾಯಕಿ ಸಿ.ಕೆ. ರಮಾ, ಅಶ್ವತ್ಥನಾರಾಯಣದಾಸ್‌, ಡಾ. ಕಿರಣ್‌ಕುಮಾರ್, ನಂಜುಂಡಸ್ವಾಮಿ, ವಿಮಲಾನಂದ ದಾಸ್‌, ತುಮಕೂರು ಲಕ್ಷ್ಮಣ್‌ ಅಲ್ಲದೆ ಅವರ ಹೆಣ್ಣು ಮಕ್ಕಳಾದ ಶೋಭಾನಾಯ್ಡು, ಶೀಲಾನಾಯ್ಡು ಎಲ್ಲರೂ ಹೆಸರುವಾಸಿಯಾದರು.

ಗುರುರಾಜುಲು ನಾಯ್ಡು ಅವರಿಗೆ ಕೀರ್ತನ ಕೇಸರಿ, ಕೀರ್ತನ ಸಾಮ್ರಾಟ್‌, ಕೀರ್ಥನ ಕಲಾವಿಚಕ್ಷಣ, ಕೀರ್ತನ ಕಲಾವಸಂತ, ಹರಿಕಥಾಕಲಾಭೂಷಣ ಮುಂತಾದ ಅನೇಕ ಗೌರವಗಳು ಸಂದಿದ್ದವು. 

ಗುರುರಾಜುಲು ನಾಯ್ಡು ಅವರು ಅಖಿಲ ಕರ್ನಾಟಕಕ ಕೀರ್ತನ ಕಲಾಪರಿಷತ್ತಿನ ಕಾರ್ಯದರ್ಶಿಯಾಗಿದ್ದರು. ದಾಸವರೇಣ್ಯ ಪುರಂದರದಾಸರ ಆರಾಧನಾ ಸಮಿತಿಯ ಸಕ್ರಿಯ ಸದಸ್ಯರಾಗಿದ್ದ ಅವರು ಬದುಕಿರುವ ತನಕ ಹಂಪಿಯ ಪುರಂದರೋತ್ಸವದಲ್ಲಿ ತಮ್ಮ ಸೇವೆಯನ್ನು  ಒಮ್ಮೆಯೂ ತಪ್ಪಿಸಿದವರಲ್ಲ.

ಗುರುರಾಜುಲು ನಾಯ್ಡು ಅವರು ತಮ್ಮ ಅತೀವ ಕಾರ್ಯಕ್ರಮಗಳಿಂದ  ಬಳಲಿದರು. 1985ರಲ್ಲಿ ಮಂಡ್ಯದ ಉತ್ಸವವೊಂದರಲ್ಲಿ ಕಥೆ ಮಾಡುತ್ತಿದ್ದಂತೆಯೇ ತೀವ್ರ ಮಿದುಳು ರಕ್ತಸ್ರಾವದಿಂದ ಕುಸಿದರು. ಮತ್ತೆ ಚೇತರಿಸಿಕೊಳ್ಳಲಿಲ್ಲ.  ಕೇವಲ 51ನೇ ವಯಸ್ಸಿನಲ್ಲಿ ತಮ್ಮ ಇಹಲೋಕದ ಪಯಣವನ್ನು ಮುಗಿಸಿದರು.

R. Gururajulu Naidu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ