ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಕ್ರಮ್ ಸೇಠ್


 ವಿಕ್ರಮ್ ಸೇಠ್


ವಿಕ್ರಮ್ ಸೇಠ್ ಭಾರತದ ಪ್ರಸಿದ್ದ ಇಂಗ್ಲಿಷ್ ಭಾಷಾ ಸಾಹಿತಿ. 

ವಿಕ್ರಮ್ ಸೇಠ್ 1952ರ ಜೂನ್ 20ರಂದು ಕೋಲ್ಕೊತ್ತಾದಲ್ಲಿ ಜನಿಸಿದರು.   ತಂದೆ ಪ್ರೇಮ್ ನಾಥ್ ಸೇಠರು ಬಾಟಾ ಷೂ ಕಂಪನಿಯಲ್ಲಿ ಅಧಿಕಾರಿಗಳಾಗಿದ್ದರು.  ತಾಯಿ ಲೀಲಾ ಸೇಠ್ ಬ್ಯಾರಿಸ್ಟರ್ ಪದವಿ ಪಡೆದು ದೇಶದ ಮೊದಲ ನ್ಯಾಯಮೂರ್ತಿಯಾಗಿ ದೆಹಲಿ ಹೈಕೋರ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇ ಅಲ್ಲದೆ ರಾಜ್ಯವೊಂದರ ಹೈಕೋರ್ಟಿನ ಪ್ರಧಾನ ನ್ಯಾಯಾಧೀಶರಾದ ಪ್ರಥಮ ಮಹಿಳೆ ಎಂಬ ಗೌರವ ಪಡೆದವರಾಗಿದ್ದಾರೆ.

ವಿಕ್ರಮ್ ಸೇಠ್ ಪಾಟ್ನಾದ ಸೈಂಟ್ ಗ್ಸೇವಿಯರ್ ಹೈಸ್ಕೂಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಡೆಹ್ರಾಡೂನಿನ 'ದ ಡೂನ್ ಸ್ಕೂಲ್' ಸೇರಿದರು. ಅಲ್ಲಿ ಅವರು 'ದ ಡೂನ್ ಸ್ಕೂಲ್ ವೀಕ್ಲಿ' ಶಾಲಾ ಪತ್ರಿಕೆಯ ಸಂಪಾದಕತ್ವ ನಿರ್ವಹಿಸುತ್ತಿದ್ದರು. ಕ್ರೀಡೆ, ಬರವಣಿಗೆ, ಗಾಯನ, ಓದು ಎಲ್ಲದರಲ್ಲೂ ಮುಂದಾಗಿದ್ದರು. ಅಲ್ಲಿ ಭೂಗೋಳದ ಶಿಕ್ಷಕರಾಗಿದ್ದ ಪರ್ವತಾರೋಹಣ ಮತ್ತು ಸಂಗೀತ ಪ್ರಿಯರಾಗಿದ್ದ ಗುರುದಯಾಳ್ ಸಿಂಗ್ ಅವರು ಬಾಲಕ ವಿಕ್ರಮ್ ಸೇಠನಲ್ಲಿದ್ದ ವಿಶೇಷತೆ ಗಮನಿಸಿ, ಸಾಹಸ ಪ್ರವೃತ್ತಿ, ಧೈರ್ಯ ಮನೋಭಾವನೆ, ಪಾಶ್ಚಿಮಾತ್ಯ ಸಂಗೀತದ ಒಲವು ಇತ್ಯಾದಿಗಳು ಆತನಲ್ಲಿ ಮೊಳೆಯಲು ಪ್ರೇರಣೆ ಆದರು. ಮುಂದೆ ವಿಕ್ರಮ್ ಸೇಠ್ ಇಂಗ್ಲೆಂಡಿನ ಟಾನ್‍ಬ್ರಿಡ್ಜ್ ಶಾಲೆಯಲ್ಲಿ  'ಎ-ಲೆವೆಲ್' ಪೂರೈಸಿದರು. ನಂತರ ಕೇಂಬ್ರಿಡ್ಜಿನ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ವ್ಯಾಸಂಗ ಮಾಡಿದರು. ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆ ತೊಡಗಿದರಾದರೂ ಪೂರ್ಣಗೊಳಿಸಲು ಆಸಕ್ತಿ ವಹಿಸಲಿಲ್ಲ.  ವಿಕ್ರಮ್ ಸೇಠ್ ವೆಲ್ಷ್, ಜರ್ಮನ್‌, ಫ್ರೆಂಚ್‌, ಇಂಗ್ಲೀಷ್‌, ಚೈನೀಸ್,  ಉರ್ದು ಸೇರಿದಂತೆ ಅನೇಕ ಭಾಷೆಗಳಲ್ಲಿ ಪರಿಣತಿ ಪಡೆದಿದ್ದಾರೆ.‍

ವಿಕ್ರಮ್ ಸೇಠ್ 1980ರಲ್ಲಿ 'ಮ್ಯಾಪಿಂಗ್ಸ್’ ಎಂಬ ಕವನ ಸಂಕಲನ ಬರೆದರು. 1986ರಲ್ಲಿ ವಿಕ್ರಮ್  ‘ದಿ ಗೋಲ್ಡ್‌ನ್‌ ಗೇಟ್‌’ ಕಾದಂಬರಿಯನ್ನು ಬರೆದರು. 1993ರಲ್ಲಿ  ಪ್ರಕಟಗೊಂಡ ಅವರ 1349 ಪುಟಗಳ 'ಎ ಸ್ಯೂಟಬಲ್‌ ಬಾಯ್‌' ಕಾದಂಬರಿ ಎಲ್ಲೆಡೆ ಗಮನ ಸೆಳೆದು ಅವರಿಗೆ ಪ್ರತಿಷ್ಠಿತ ಡಬ್ಲ್ಯೂ.ಎಚ್. ಸ್ಮಿತ್ ಲಿಟರರಿ ಪ್ರಶಸ್ತಿಯನ್ನೂ ತಂದಿತು.  ಇದು ಬಿಬಿಸಿಯಲ್ಲಿ ಕಿರುಧಾರಾವಾಹಿ ರೂಪಕವಾಗಿಯೂ ಪ್ರಸಿದ್ಧಿ ಪಡೆಯಿತು.

ವಿಕ್ರಮ್ ಸೇಠ್ ಅವರ ಕಾದಂಬರಿಗಳಲ್ಲಿ ದಿ ಗೋಲ್ಡನ್ ಗೇಟ್, ಎ ಸೂಟಬಲ್ ಬಾಯ್,  ಎನ್ ಈಕ್ವಲ್ ಮ್ಯೂಸಿಕ್  ಮುಂತಾದವು ಸೇರಿವೆ.

ವಿಕ್ರಮ್ ಸೇಠ್ ಅವರ ಕವಿತಾ ಸಂಕಲನಗಳಲ್ಲಿ ಮ್ಯಾಪ್ಪಿಂಗ್ಸ್, ದ ಟೇಲ್ ಆಫ್ ಮೆಲನ್ ಸಿಟಿ, ದ ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್, ಆಲ್ ಯು ಹೂ ಸ್ಲೀಪ್ ಟುನೈಟ್,  ತ್ರೀ ಚೈನೀಸ್ ಪೊಯಟ್ಸ್,  ಅಟ್ ಈವನಿಂಗ್,ದ ಫ಼್ರಾಗ್ ಅಂಡ್ ದ ನೈಟಿಂಗೇಲ್, ಸಮ್ಮರ್ ರೆಕ್ವೀಮ್, ಎ ಡಾಕ್ಟರ್ಸ್ ಜರ್ನಲ್ ಎಂಟ್ರಿ ಮುಂತಾದವು ಸೇರಿವೆ.

ವಿಕ್ರಮ್ ಸೇಠ್ ಮಕ್ಕಳಿಗಾಗಿ 'ಬೀಸ್ಟ್ಲಿ ಟೇಲ್ಸ್ ಫ್ರಮ್ ಹಿಯರ್ ಅಂಡ್ ದೇರ್' ಎಂಬ ಕಥಾನಕದಲ್ಲಿ ಪ್ರಾಣಿಗಳ ಕುರಿತಾದ ಹತ್ತು ಕಥೆಗಳನ್ನು ಮೂಡಿಸಿದ್ದಾರೆ.

'ಫ್ರಮ್ ಹೆವೆನ್ ಲೇಕ್' ಎಂಬುದು ವಿಕ್ರಮ್ ಸೇಠ್ ಅವರ ಸಿನ್‍ಕಿಯಾಂಗ್ ಇಂದ ಟಿಬೆಟ್‍ವರೆಗಿನ (ಚೀಣಾ, ನೇಪಾಳ್, ಟಿಬೆಟ್ ಪ್ರದೇಶಗಳ) ಪ್ರವಾಸ ಕಥನ.  ಇಂಗ್ಲಿಷ್ ನ್ಯಾಷನಲ್ ಒಪೇರಾಗಾಗಿ ಗ್ರೀಕ್ ಜಾನಪದದ 'ಏರಿಯನ್ ಅಂಡ್ ದ ಡಾಲ್ಫಿನ್' ರಂಗರೂಪಕ ರಚಿಸಿಕೊಟ್ಟಿದ್ದಾರೆ. 

ವಿಕ್ರಮ್ ಸೇಠ್ ಅವರಿಗೆ ಥಾಮಸ್ ಕುಕ್ ಟ್ರಾವೆಲ್ ಬುಕ್ ಪ್ರಶಸ್ತಿ, 'ದ ಹಂಬಲ್ ಅಡ್ಮಿನಿಸ್ಟ್ರೇಟರ್ಸ್ ಗಾರ್ಡನ್' ಕೃತಿಗೆ ಕಾಮನ್ವೆಲ್ತ್ ಕಾವ್ಯಪ್ರಶಸ್ತಿ, ದಿ ಗೋಲ್ಡನ್ ಗೇಟ್' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ,  'ಎ ಸೂಟಬ್ಲ್ ಬಾಯ್' ಕೃತಿಗೆ ಡಬ್ಲು ಹೆಚ್ ಸ್ಮಿತ್ ಲಿಟೆರರಿ ಅವಾರ್ಡ್, 'ಎನ್ ಈಕ್ವಲ್ ಮ್ಯೂಸಿಕ್' ಕೃತಿಗೆ ಕ್ರಾಸವರ್ಡ್ ಬುಕ್ ಅವಾರ್ಡ್, ಕಮಾಂಡರ್ ಆಫ್ ದ ಆರ್ಡರ್  ಅಫ್ ಬ್ರಿಟಿಶ್ ಎಂಪೈರ್, ಪ್ರವಾಸಿ ಭಾರತೀಯ ಸಮ್ಮಾನ್, ಪದ್ಮಶ್ರೀ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

On the birthday of popular writer Vikram Seth, CBE, FRSL.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ