ಕಲ್ಗುಂಡಿ ನವೀನ್
ಕಲ್ಗುಂಡಿ ನವೀನ್
ಕಲ್ಗುಂಡಿ ನವೀನ್ ಅವರು ಶಿಕ್ಷಕ, ಪರಿಸರ ಪ್ರಿಯ, ಬರೆಹಗಾರ, ಸಮಾಜಮುಖಿ ಕಾರ್ಯಕರ್ತ... ಹೀಗೆ ಬಹುಮುಖಿಯಾಗಿ ಸಕ್ರಿಯರು.
ಜೂನ್ 3, ಕಲ್ಗುಂಡಿ ನವೀನ್ ಅವರ ಹುಟ್ಟುಹಬ್ಬ. ಅವರ ಮೂಲ ಊರು ಅರಸಿಕೆರೆಯ ಬಳಿಯ ಕಲ್ಗುಂಡಿಯಾದರೂ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ತಂದೆ ನಿವೃತ್ತ ಶಿಕ್ಷಕರಾದ ಸತ್ಯನಾರಾಯಣ. ತಾಯಿ ಗಿರಿಜ. ಈ ತಂದೆ ತಾಯಂದಿರು 82, 75 ರ ಈ ವಯಸ್ಸಿನಲ್ಲಿಯೂ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಲ್ಲಿ ಚಟುವಟುಕೆಯಿಂದಿದ್ದಾರೆ. ಒಂದು ಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ತಂದೆ ತಾಯಿಯರ ಪ್ರಭಾವ ಸಹಜವಾಗಿ ನವೀನ್ ಅವರ ಮೇಲೆ ಆಗಿದೆ. ಇವರು ಓದಿದ್ದು ಬಿ.ಎಸ್ಸಿ. ಇವರು ಸದಾ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ನಡೆಯುತ್ತಿರುವ ಉತ್ಸಾಹಿ. ಪರಿಸರದ ಬಗ್ಗೆ ಕಾಳಜಿ, ಹಕ್ಕಿಗಳ ಬಗ್ಗೆ ಅಧ್ಯಯನ, ಇಂಗ್ಲಿಷಿನಿಂದ ಕನ್ನಡಕ್ಕೆ ಹಾಗೂ ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡುವುದು, ಪೂರ್ಣಪ್ರಮತಿ ಶಾಲೆಯಲ್ಲಿ ಮಕ್ಕಳಿಗೆ ಪರಿಸರ, ಅಧ್ಯಾತ್ಮ, ವೈಜ್ಞಾನಿಕ ವಿಷಯಗಳನ್ನು ಪಾಠ ಮಾಡುವುದು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಇದ್ದಾಗ ತಪ್ಪದೆ ಭಾಗವಹಿಸುವುದು, ಸಾಹಿತಿಗಳೊಂದಿಗೆ ಸಂಪರ್ಕ, ಕನ್ನಡ ಗಣಕ ಪರಿಷತ್ತಿನಲ್ಲಿ ಸೇವೆ ಹೀಗೆ ಇವರ ಕ್ರಿಯಾಶೀಲತೆ ಬಹುತೆರನಾದದ್ದು.
ಕಲ್ಗುಂಡಿ ನವೀನ್ ಅವರು ಕೊರೊನ ಅವಧಿಯಲ್ಲಿ ದಿನಕ್ಕೊಂದರಂತೆ ನೂರು ಪುಸ್ತಕಗಳನ್ನು ಪರಿಚಯಿಸಿದ್ದರು. ಅದು ಈಗಲೂ ವಾರಕ್ಕೊಮ್ಮೆಯಂತೆಯಾದರೂ ತಪ್ಪದೆ ಮುಂದುವರೆಯುತ್ತಿದೆ. ಈ ಪರಿಚಯದಲ್ಲಿ ಎಲ್ಲಾ ವಿಷಯಗಳ ಪುಸ್ತಕಗಳೂ ಇವೆ ಎಂಬುದು ಗಮನಾರ್ಹ ಸಂಗತಿ. ಎಂತಹ ಕ್ಲಿಷ್ಟಕರ ಪರಿಸ್ಥಿತಿಗಳು ಬಂದರೂ ಈ ಕಾಯಕವನ್ನು ಅವರು ನಿಲ್ಲಿಸಿಲ್ಲ. ಜೊತೆಗೆ ನಸುಕು ಪತ್ರಿಕೆಯಲ್ಲಿ ಹಕ್ಕಿಗಳ ಬಗ್ಗೆ ಲೇಖನಗಳನ್ನೂ ಬರೆಯುತ್ತ ಬಂದಿದ್ದಾರೆ.
ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ನವೀನ್ ಅವರು, ವಿಜ್ಞಾನ, ಪರಿಸರ, ನೈತಿಕ, ಧಾರ್ಮಿಕ ವಾತಾವರಣದ ಶಿಕ್ಷಣದೊಂದಿಗೆ ಮಕ್ಕಳಿಗೆ ಪಕ್ಷಿಗಳ ಜೀವನದ ಪರಿಚಯ ಮಾಡಿಕೊಡುವುದರಲ್ಲೂ ಅಪಾರ ಬದ್ಧತೆ ಹೊಂದಿದ್ದಾರೆ. ಸೆಮಿನಾರ್‌ಗಳ ಮೂಲಕವೂ ಇವರು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವುದಿದೆ. ಇವರ ಮನೆ ಒಂದು ಪುಸ್ತಕಗಳ ಭಂಡಾರವೇ ಆಗಿದೆ. ಇವರ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳು ಮತ್ತು ಅಂತರಜಾಲ ಪತ್ರಿಕೆಗಳಲ್ಲಿ ಕಂಗೊಳಿಸುತ್ತ ಬಂದಿವೆ.
ಕಲ್ಗುಂಡಿ ನವೀನ್ ವಿಶ್ವನಾಥ ಸುವರ್ಣ ಅವರ ಪಕ್ಷಿಚಿತ್ರಗಳ 'ಕನ್ನಡ ನಾಡಿನ ಬಣ್ಣದ ಬಾನಾಡಿಗಳು' ಕೃತಿಯಲ್ಲಿ ನಿರೂಪಣೆ ಬರೆದಿದ್ದಾರೆ. 'ಅಂಬಿಗಾ ದಡ ಹಾಯಿಸು' ಎಂಬುದು ಮಹಾನ್ ವಿಜ್ಞಾನ ಬರೆಹಗಾರ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಅವರ ಆತ್ಮಕಥನದ ನಿರೂಪಣೆಯಾಗಿದೆ. ವಿಜ್ಞಾನ ಮತ್ತು ಏರೋಪ್ಲೇನ್ ಚಿಟ್ಟೆ, ಸಾಮಾನ್ಯ ಹಕ್ಕಿಗಳು, ವೈಜ್ಞಾನಿಕ ಮನೋಧರ್ಮ ಮುಂತಾದ ಕೃತಿ ವೈವಿಧ್ಯಗಳಲ್ಲಿಯೂ ಇವರ ಕಾಯಕ ಕಂಗೊಳಿಸಿದೆ. ಇವಲ್ಲದೆ ಅಂಕಣ ಬರಹಗಳು, ಅನುವಾದದ ಕೆಲಸಗಳು, ಭಾಷಣಗಳು, ಶಿಕ್ಷಕವೃತ್ತಿ ಹೀಗೆ ನವೀನ್ ಅವರು ನವನವೀನ ಚಟುವಟಿಕೆಗಳಲ್ಲಿ ಸದಾ ಭಾಗಿ.
ಆತ್ಮೀಯರಾದ ಕಲ್ಗುಂಡಿ ನವೀನ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
ಮಾಹಿತಿ ಕೃತಜ್ಞತೆ: Lrphks Kolar
Happy birthday Kalgundi Naveen 🌷🙏🌷
ಕಾಮೆಂಟ್‌ಗಳು