ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುರೈಯ


 ಸುರೈಯ


ಸುರೈಯ ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ, ಗಾಯಕಿ ಮತ್ತು ನೃತ್ಯ ಸಂಯೋಜಕಿ.

ಸುರೈಯ 1929ರ ಜೂನ್ 15ರಂದು ಕರಾಚಿಯಲ್ಲಿ ಜನಿಸಿದರು. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಸಿಗಲಿಲ್ಲ. ಹತ್ತನೆಯ ವಯಸ್ಸಿಗೆ ಅಭಿನಯಕ್ಕೆ ತೊಡಗಿದರು. ಹದಿನೈದನೆಯ ವರ್ಷಕ್ಕೆ ಪ್ರಸಿದ್ಧ ತಾರೆಯಾದರು. 

ಸುರೈಯ ಗುರು ಮುಖೇನ ಕಲಿಯದಿದ್ದರೂ ಶಾಸ್ತ್ರೀಯ ಸಂಗೀತವನ್ನು ಹಾಡಬಲ್ಲವರಾಗಿದ್ದರು. ಈಕೆ ಪ್ರಸಿದ್ಧ ಗಾಯಕ ಸೈಗಲರ ಮಧುರ ಗಾನಕ್ಕೆ ಮರುಳಾಗಿದ್ದರು. ಕಾನನ್-ಬಾಲಾ ಖುರ್ಷೀದರ ಹಾಡುಗಳೂ ಎಳವೆಯಲ್ಲಿ ಈಕೆಯ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನುಂಟುಮಾಡಿದ್ದವು.

ಸುರೈಯ ನಟಿಸಿದ ಮೊದಲ ಚಿತ್ರ ಮಮತಾಜ್ ಮಹಲ್ (1941). ಶಾರದಾ (1942) ಚಿತ್ರಕ್ಕೆ ಹಾಡಿದರು. ಪಂಚೀ ಜಾ ಪೀಚೇ ರಹಾ ಬಚಪನ್ ಮೇರಾ ಎಂಬ ಗೀತೆ ಪ್ರಸಿದ್ಧಿಯಾಯಿತು. ಹಮಾರಿ ಬಾತ್ ಎಂಬ ಚಿತ್ರಕ್ಕೆ ನೃತ್ಯ ಸಂಯೋಜಿಸಿದರು. ಇದು ಪ್ರಖ್ಯಾತಿ ಪಡೆಯಿತು. 1948-49ರಲ್ಲಿ ಈಕೆ ನಟಿಸಿದ ಪ್ಯಾರ್ ಕಿ ಜೀತ್, ಬಡೀ ಬೆಹನ್ ಮತ್ತು ದಿಲ್ಲಗಿ ಈ ಮೂರೂ ಚಿತ್ರಗಳೂ ಒಳ್ಳೆಯ ಹೆಸರನ್ನೂ ಹಣವನ್ನೂ ತಂದು ಕೊಟ್ಟವು; ಆ ಕಾಲಕ್ಕೆ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದ್ದರು. 

ಸುರೈಯ ಅವರು ಸೊಹ್ರಾಬ್ ಮೋದಿಯವರ 'ಮಿರ್ಜಾಗಾಲಿಬ್' ಚಿತ್ರದಲ್ಲಿ ಗಾಲಿಬ್‍ನ ಹೆಂಡತಿಯಾಗಿ ಅಮೋಘವಾಗಿ ನಟಿಸಿದ್ದರು. ಈಕೆಯ ಅಭಿನಯವನ್ನು ಈ ಚಿತ್ರ ನೋಡಿದ ಜವಾಹರಲಾಲ್ ನೆಹರೂ ಪ್ರಶಂಸಿಸಿದ್ದರು. 'ಅನ್ಮೋಲ್‍ಘಡಿ’ ಈಕೆ ನಟಿಸಿದ ಇನ್ನೊಂದು ಪ್ರಖ್ಯಾತ ಚಿತ್ರ. 1948ರಲ್ಲಿ ಜೆ.ಕೆ. ನಂದಾ ಅವರ ‘ಪರವಾನ’ ಎಂಬ ಚಿತ್ರದಲ್ಲಿ ಸೈಗಲ್‍ರೊಡನೆ ಅಭಿನಯಿಸಿದ್ದರು. ಈ ಚಿತ್ರವೂ ಪ್ರಸಿದ್ಧಿಯಾಗಿ ಆ ಕಾಲಕ್ಕೆ ಶತದಿನೋತ್ಸವ ಆಚರಿಸಿತು. ಈಕೆಯ ಶ್ರೇಷ್ಠ ಅಭಿನಯಕ್ಕಾಗಿ ಬಂಗಾರದ ಪದಕ ನೀಡಿ ಸನ್ಮಾನಿಸಲಾಯಿತು (1950). 

ಸಾಹಿತ್ಯ ಕೃತಿಗಳ ಓದು, ಸಂಗೀತ, ಉಮರ್‍ ಖಯ್ಯಾಮ್‍ನ ರುಬಾಯತ್ ಗಾಯನ ಸುರೈಯ ಅವರ ಹವ್ಯಾಸಗಳಾಗಿದ್ದುವು. ಇವರು 2004ರ ಜನವರಿ 31ರಂದು ಮುಂಬೈನಲ್ಲಿ ನಿಧನರಾದರು.

On the birth anniversary of actress and singer Suraiya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ