ಎಂ. ಆರ್. ಸತ್ಯನಾರಾಯಣ
ಎಂ. ಆರ್. ಸತ್ಯನಾರಾಯಣ
ಕಳೆದರ್ಷ ಆಕಾಶವಾಣಿಯಲ್ಲಿ 'ನುಡಿ ತೇರನೆಳೆದವರು ಬಾನುಲಿ ಕಲಿಗಳು' ಕಾರ್ಯಕ್ರಮವನ್ನು ಕೇಳುತ್ತಿದ್ದಾಗ, ಒಂದು ವಿಭಿನ್ನ ಅನುಭವವಾಯ್ತು.
ತ್ಯಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್
ಎಂಬ ಕಾವ್ಯವಾಚನ ಕಿವಿಗೆ ಬಿದ್ದೊಡನೆ ರೋಮಾಂಚನವಾಯ್ತು. ಎಷ್ಟು ದಿನವಾಗಿತ್ತು ಇಂತಹ ಧ್ವನಿಯನ್ನು ಕೇಳಿ ಎಂದು ಮೈಜುಮ್ಮೆಂದಿತು. ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗೋ ಕೋಗಿಲೆಯಾಗೋ ಹುಟ್ಟಬೇಕು ಎಂಬ ಮಾತು ಹೇಗೋ ಏನೋ, ಆದರೆ ಈ ಕೋಕಿಲಧ್ವನಿಯ ಮೇಲ್ಕಂಡ ಭಾವ ಹೃದಯಕ್ಕೆ ತಟ್ಟಿ ವಾಹ್ ಇಂತಹ ಮಹಾನ್ ಕರ್ನಾಟಕದ ನಾಡಿನಲ್ಲಿ ನಾನೂ ಹುಟ್ಟಿದೆನಲ್ಲ ಎಂಬ ಧನ್ಯತೆ ಹೃದಯದಲ್ಲಿ ತುಂಬಿಬಂತು. ನಾನು ಕೇಳಿದ ಆ ಧ್ವನಿ ಗಮಕ ವಿದ್ವಾನ್ ಎಂ. ಆರ್. ಸತ್ಯನಾರಾಯಣ ಅವರದ್ದು. ಆಕಾಶವಾಣಿಯ ಸುಮತಿ ಅವರು ಮೇಲ್ಕಂಡ ಪ್ರಸ್ತುತಿಯ ಬಗ್ಗೆ ಹೇಳುತ್ತಾ "ಇದು ಸಾಹಿತ್ಯವೋ, ಕಾವ್ಯವೋ, ಗಾಯನವೋ, ವಾಚನವೋ - ಈ ವಾದಗಳಿಗೆ ತೆರೆ ಎಳೆದವರು ಎಂ. ಆರ್. ಸತ್ಯನಾರಾಯಣ" ಎಂದಿರುವ ನುಡಿ ಅನುಪಮವಾದದ್ದು. (ಈ ಕಾರ್ಯಕ್ರಮ ಕೇಳಲೇಬೇಕಾದ್ದು ಹಾಗಾಗಿ ಅಸಕ್ತರಿಗಾಗಿ
ಕೊಂಡಿ ಇಲ್ಲಿದೆ https://youtu.be/L9_fOMlhPgo)
ವಿದ್ವಾನ್ ಎಂ. ಆರ್. ಸತ್ಯನಾರಾಯಣ ಅವರು ಪಂಪ, ಕುಮಾರವ್ಯಾಸ, ಕುವೆಂಪು ಆದಿಯಾಗಿ ಕನ್ನಡದ ಸಮಸ್ತ ಶ್ರೇಷ್ಠ ಕಾವ್ಯ ಪರಂಪರೆಯನ್ನು ಗಮಕ ಮಾಧ್ಯಮದ ಮುಖಾಂತರ ಸಮರ್ಥವಾಗಿ ಪಸರಿಸುತ್ತಾ ಬಂದಿದ್ದಾರೆ. ಅವರ ಅಪಾರ ಸಾಧನೆಗಳ ಬಗ್ಗೆ ಮಾತನಾಡಹೋದರೆ, "ನನಗೆ ನನ್ನನ್ನು ಕಾವ್ಯೋಪಾಸಕ ಎಂದು ಕೊಳ್ಳುವುದರಲ್ಲೇ ಧನ್ಯತೆ" ಎಂದು ವಿನೀತರಾಗುತ್ತಾರೆ.
ಎಂ. ಆರ್. ಸತ್ಯನಾರಾಯಣ ಅವರು 1950ರ ಜೂನ್ 25ರಂದು ಜನಿಸಿದರು. ತಂದೆ ಮಹಾನ್ ಗಮಕಿಗಳೂ, ಕರ್ನಾಟಕ ಗಮಕ ಕಲಾ ಪರಿಷತ್ ಸ್ಥಾಪಕರೂ ಆದ ವಿದ್ವಾನ್. ಎಂ. ರಾಘವೇಂದ್ರ ರಾವ್ ಅವರು.
ಎಂ. ಆರ್. ಸತ್ಯನಾರಾಯಣ ಅವರು ಎಂ.ಎ. ಪದವಿ ಗಳಿಸಿದ ನಂತರದಲ್ಲಿ ಆಕಾಶವಾಣಿಯಲ್ಲಿ ಹಿರಿಯ ಕಾರ್ಯಕ್ರಮ ನಿರ್ವಾಹಕ ಸ್ಥಾನದವರೆಗಿನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಗಮಕ - ಸಾಹಿತ್ಯ - ಸಂಗೀತ ಹಾಗೂ ಗಮಕ - ಸಂಗೀತ ರೂಪಕಗಳ ರಚನಕಾರರಾಗಿ ಎಂ. ಆರ್. ಸತ್ಯನಾರಾಯಣ ಅವರದ್ದು ಮಹತ್ವದ ಕೊಡುಗೆ. ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷರಾಗಿ ಅವರಿದ್ದ ಐದೂವರೆ ವರ್ಷದ ಅಧಿಕಾರಾವಧಿಯಲ್ಲಿ ಎರಡು ಮಕ್ಕಳ ಸಮ್ಮೇಳನಗಳೂ ಸೇರಿ ಐದು ರಾಜ್ಯಮಟ್ಟದ ಸಮ್ಮೇಳನಗಳನ್ನು ನಡೆಸಿದ ಕೀರ್ತಿ ಅವರದು. ಕರ್ನಾಟಕ ರಾಜ್ಯಸರ್ಕಾರವು ಅವರನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಯಾಗಿ ನೇಮಿಸಿದೆ.
ಸತ್ಯನಾರಾಯಣ ಅವರು ಆಕಾಶವಾಣಿಯಲ್ಲಿ ಕಳೆದ 40 ವರ್ಷಗಳಿಂದ ಕಾವ್ಯವಾಚನ ಕಾರ್ಯಕ್ರಮ ಹಾಗೂ ಅನೇಕ ಗಮಕ ರೂಪಕಗಳ ನಿರ್ದೇಶನ ಮಾಡಿದ್ದಾರೆ.
ಅವರು ಆಕಾಶವಾಣಿಗಾಗಿ ನಿರ್ಮಿಸಿದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಲ್ಲಿ
ವಚನ ಸಾಹಿತ್ಯದ ಅಮೃತ ಸಿಂಚನ, ದಾಸಾಮೃತ, ಲೋಕೋಕ್ತಿ, ಕ್ಷೇತ್ರಜ್ಞನ ಪದ, ಅರಿವಿನ ಗುರು– ಅಲ್ಲಮ ರೂಪಕ, ಪಂಪ, ರನ್ನ, ಹರಿಹರ, ರತ್ನಾಕರವರ್ಣಿ ಮುಂತಾದವರ ಶಬ್ದಚಿತ್ರಗಳಲ್ಲಿ
ಕವಿ ಪಾತ್ರ ಹಾಗೂ ಗಮಕ ಗಾಯನ ಮುಂತಾದ ಅನೇಕ ಕಾರ್ಯಕ್ರಮಗಳು ಸೇರಿವೆ.
ಸತ್ಯನಾರಾಯಣ ಅವರು ಕನ್ನಡ ಕವಿಶ್ರೇಷ್ಟರ ಕಾವ್ಯಗಳ ವಾಚನಗಳನ್ನು ಹಂಪಿ, ಆನೆಗುಂದಿ, ಬನವಾಸಿ ಉತ್ಸವಗಳಲ್ಲದೆ ಆನೇಕ ಪ್ರತಿಷ್ಠಿತ
ಸಂಘ ಸಂಸ್ಥೆಗಳಲ್ಲಿ ಹಾಗೂ 2010ರಲ್ಲಿ ನಡೆದ ಕೃಷ್ಣದೇವರಾಯನ 500ನೇ ಜಯಂತಿ ಉತ್ಸವದಲ್ಲಿ ಮಾಡಿದ್ದಾರೆ. ಅನೇಕ
ಕಾವ್ಯಗಾಯನ ಹಾಗು ಉತ್ಸವಗಳಲ್ಲಿ ಭಾಗಿಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರು ಶಿಷ್ಯ ಪರಂಪರೆಯ ಗುರುವಾಗಿ ಎರಡು ಬಾರಿ ಗಮಕ ಕಲೆಯ
ಅಧ್ಯಾಪಕತ್ವ ನಿರ್ವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇವರು ರಚಿಸಿ ನಿರ್ದೇಶಿಸಿದ 'ಪಂಪ ಕಾವ್ಯ ವೈಭವ' ಎಂಬ ಗಮಕ ನೃತ್ಯ ರೂಪಕವು ದೇಶಾದ್ಯಂತ ಪ್ರದರ್ಶಿತಗೊಂಡಿದೆ. ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಪ್ರಸಾರವಾದ ಇವರ ರಚನೆ, ಪರಿಕಲ್ಪನೆ, ನಿರ್ಮಾಣ, ನಿರ್ದೇಶನ 'ಕನ್ನಡದ
ಕಣ್ಮಣಿಗಳು' ಎಂಬುದು ವಿಶಿಷ್ಟ ಬಗೆಯ ಕಾರ್ಯಕ್ರಮವೆನಿಸಿದೆ.
ಸತ್ಯನಾರಾಯಣ ಅವರು ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಗಮಕ ಪ್ರಚಾರಕರಾಗಿ, ಗಮಕದ ಪ್ರತಿನಿಧಿಯಾಗಿ, ಸಂಚಾಲಕರಾಗಿ, ಗಮಕ ಶಿಬಿರಗಳ ವ್ಯವಸ್ಥಾಪಕರಾಗಿ, ಅಕಾಡೆಮಿಯ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಾಯಕ ಕಲಾವಿದರಾಗಿ, ಅಕಾಡೆಮಿಯ ಸದಸ್ಯರಾಗಿ, ಪ್ರಕಟಣೆಗಳ ಸಂಪಾದಕರಾಗಿ ಅಪಾರ ಕೆಲಸ ಮಾಡಿದ್ದಾರೆ. ಅನೇಕ ರಸಗ್ರಹಣ ಶಿಬಿರ, ಹಳಗನ್ನಡ ಕಮ್ಮಟಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ, ಶಾಲಾ ಅಧ್ಯಾಪಕರಿಗೆ ಅನೇಕ ಮಾರ್ಗದರ್ಶಿ ಶಿಬಿರಗಳನ್ನು ನೆರವೇರಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ಕಾವ್ಯ, ವಾಚಕಾಭಿನಯ ಹಾಗೂ ಗಮಕ ಅಧ್ಯಾಪಕರಾಗಿಯೂ ಅವರ ಕೊಡುಗೆ ಸಂದಿದೆ.
ಸತ್ಯನಾರಾಯಣ ಅವರು ದೂರದರ್ಶನ ಚಂದನ ವಾಹಿನಿಯ ಕಾವ್ಯ ಸಂಪುಟವೆಂಬ ಮೂರೂವರೆ ವರ್ಷಗಳ ದೀರ್ಘಕಾಲದ ಸರಣಿಯ ರೂವಾರಿ ಹಾಗೂ ಸರಣಿ ಗಾಯಕರಾಗಿದ್ದರು. ಪಂಪನಿಂದ ಕುಮಾರವ್ಯಾಸನವರೆಗೆ ಕಾವ್ಯ ಪರಂಪರೆಯ ಪ್ರಸಾರ ಮಾಡಿದರು. ಅನೇಕ ಕನ್ನಡ ಅಧ್ಯಾಪಕರ, ವ್ಯಾಖ್ಯಾನಕಾರರ ಪ್ರತಿಭಾ ಸಾಮರ್ಥ್ಯಕ್ಕೆ ಆಕಾಶವಾಣಿ, ದೂರದರ್ಶನ, ಗಮಕ ಕಲಾ ಪರಿಷತ್ ಹಾಗೂ ಇನ್ನಿತರ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ. ದ್ರೌಪದಿ ಸ್ವಯಂವರ ಧ್ವನಿಸುರುಳಿ (2000) ಸಿ.ಡಿ.ಯಲ್ಲಿ. ಲಭ್ಯವಿದೆ. ಕುಪ್ಪಳ್ಳಿಯ ಕುವೆಂಪು ಪ್ರತಷ್ಠಾನದ ಮುಖೇನ 75 ಕಲಾವಿದರನ್ನು ಬಳಸಿ ಕುವೆಂಪು ವಿರಚಿತ ಶ್ರೀರಾಮಾಯಣದರ್ಶನಂ ಮಹಾ ಕಾವ್ಯದ ಗಾಯನ ಮತ್ತು ವ್ಯಾಖ್ಯಾನದ 82 ಗಂಟೆಗಳ ಅವಧಿಯ ಧ್ವನಿಮುದ್ರಣದ ಬೃಹತ್
ಕಾರ್ಯಕ್ರಮದ ನಿರ್ದೇಶನ ಮಾಡಿದ್ದಾರೆ.
ರೂಪಕಗಳ ನಿರ್ಮಾತೃವಾಗಿ ಮಾಯಾಲಾಸ್ಯ, ಶರ್ಮಿಷ್ಠೆ, ಚಿತ್ರಾಂಗದೆ, ಭಕ್ತಿ ಕುಸುಮಾಂಜಲಿ, ವಿಶ್ವೋದ್ಭವ, ವೆಂಕಟೇಶ ವೈಭವ, ಸಮುದ್ರ ಮಂಥನ ಹಾಗೂ ಇನ್ನಿತರ ನೃತ್ಯ ರೂಪಕಗಳ ರಚನೆ ಮಾಡಿ ನಾಡಿನ ಹಿರಿಯ ನೃತ್ಯ ಪಟುಗಳಿಂದ ನೃತ್ಯ ರೂಪಕಗಳ ಪ್ರದರ್ಶನಕ್ಕೆ ಕಾರಣರಾಗಿದ್ದಾರೆ.
ಸತ್ಯನಾರಾಯಣ ಅವರು ಕನಕ -ಪುರಂದರ ಪ್ರಶಸ್ತಿ ಪುರಸ್ಕೃತ ಗಮಕಿ ಎಂ. ರಾಘವೇಂದ್ರ ರಾವ್ ಕುರಿತ ಸಾಕ್ಷ್ಯ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಾಟಕ ನಿರ್ದೇಶನ, ಗಣ್ಯರೊಡನೆ ಸಂದರ್ಶನ, ಎದೆ ತುಂಬಿ ಹಾಡುವೆನು ತೀರ್ಪುಗಾರಿಕೆ ಮುಂತಾದವುಗಳನ್ನೂ ಮಾಡಿದ್ದಾರೆ. ಗಮಕಿ ರಾಘವೇಂದ್ರರಾಯರಿಂದ ಸ್ಥಾಪನೆಗೊಂಡ ಕಾವ್ಯ ಗಾಯನ ಕಲಾ ಮಂದಿರ ಸಂಸ್ಥೆಯ ಕಾರ್ಯದರ್ಶಿಯಾಗಿ ಅನೇಕ ಮಹತ್ವದ ಕಾರ್ಯ ನಡೆಸುತ್ತಿದ್ದಾರೆ.
ಸತ್ಯನಾರಾಯಣ ಅವರ ಬರಹಗಳಲ್ಲಿ
ಬಿಂದೂರಾಯರು, ಗಮಕ ಕಲೆ (ಕನ್ನಡ ಮತ್ತು ಇಂಗ್ಲಿಷ್), ಬಿ. ಶಿವಮೂರ್ತಿಶಾಸ್ತ್ರಿ
ಆಕಾಶವಾಣಿ ಬೆಂಗಳೂರು – ಒಂದು ವಿಸ್ತೃತ ಪರಿಚಯ, ಅನೇಕ ಅಭಿನಂದನಾ ಗ್ರಂಥಗಳಿಗೆ ಲೇಖನ, ಗಮಕಕಲೆ ಹಾಗೂ ವಚನ ಸಾಹಿತ್ಯ ಗ್ರಂಥ, ಕರ್ನಾಟಕ ಸಂಗೀತ, ಮುಂತಾದವು ಸೇರಿವೆ.
ಎಂ. ಆರ್. ಸತ್ಯನಾರಾಯಣ ಅವರ ಕಲಾ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ,ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿಯ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಸ್ವರಕಲಾ ಗೌರವ ಪ್ರಶಸ್ತಿ, ವರ್ಷದ ಕಲಾವಿದ (ಗಾಯನ ಸಮಾಜ) ಗೌರವ, 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಕುಂದಾಪುರ ಡಾ|| ಶಾಂತರಾಮ್ ಪ್ರಶಸ್ತಿ, ತ್ಯಾಗರಾಜ-ಪುರಂದರ ಸಂಗೀತಾ ಸಭಾದ ಕಲಾಜ್ಯೋತಿ ಪ್ರಶಸ್ತಿ, ಅಜಂತಾ ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿದ್ಯಾಸಂಸ್ಥೆಯ ರಾಷ್ಟ್ರರತ್ನ ಪ್ರಶಸ್ತಿ, ಬೆಂಗಳೂರು ದೂರದರ್ಶನ ಚಂದನ ಪ್ರಶಸ್ತಿ, ಗಾನಗಂಗಾ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇಂಡಿಯನ್ ವರ್ಚುಯಲ್ ಅಕಾಡಮಿ ಆಫ್ ಪೀಸ್ ಅಂಡ್ ಎಡುಕೇಷನ್ ಅವರಿಗೆ ಗೌರವ ಡಾಕ್ಟರೇಟ್ ಸಲ್ಲಿಸಿದೆ. ಸತ್ಯನಾರಾಯಣ ಅವರು ಹಲವು ಬಾರಿ ಪ್ರತಿಷ್ಠಿತ ಕುಮಾರವ್ಯಾಸ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಮತ್ತು ಅದರ ಅಧ್ಯಕ್ಷರಾಗಿಯೂ ಗೌರವಾನ್ವಿತರಾಗಿದ್ದಾರೆ.
ವಿದ್ವಾನ್ ಎಂ. ಆರ್. ಸತ್ಯನಾರಾಯಣ ಅವರ ವಿದ್ವತ್ತು, ಸಾಧನೆ, ಕೊಡುಗೆ ಮತ್ತು ಅವರಲ್ಲಿ ಸದಾ ತುಂಬಿರುವ ಕಾವ್ಯಯೋಜನೆಗಳನ್ನು ಇಂತಹ ಒಂದು ಪರಿಚಯ ಲೇಖನದಲ್ಲಿ ತೆರೆದಿಡುವುದು ಅಶಕ್ಯವೆನಿಸುತ್ತಿದೆ. ಅವರ ಪರಿಚಯ ನಮಗಿರುವುದು ಮತ್ತು ಅವರು ಮಾಡುತ್ತಿರುವ ಕನ್ನಡದ ಶ್ರೇಷ್ಠ ಕಾವ್ಯಪರಂಪರೆಯ ಉಳಿವಿಗಾಗಿನ ಕೆಲಸವನ್ನು ಒಂದಿಷ್ಟು ಕೇಳುತ್ತಿರುವುದೂ ನಮ್ಮ ಸೌಭಾಗ್ಯವೇ ಸರಿ. ಅವರು ಆಶಿಸಿರುವ ಕನ್ನಡದ ಕಾವ್ಯಲೋಕ ಕನ್ನಡಿಗರಿಗೆ ಸದಾ ಸಿಗಲಿ. ಅವರ ಮಾರ್ಗದರ್ಶನ ಭಾಗ್ಯ ನಮಗೆಲ್ಲ ಬಹುಕಾಲ ದೊರಕುತ್ತಿರಲಿ ಎಂದು ಆಶಿಸಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ. ನಮಸ್ಕಾರ.
On the birthday of our Great Scholar and Gamaka Vidwan Sathyanarayana M R Sir 🌷🙏🌷
ಕಾಮೆಂಟ್‌ಗಳು