ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾರದಾ

 

ಶಾರದಾ

ಶಾರದಾ ಚಲನಚಿತ್ರ ಕ್ಷೇತ್ರದ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಅವರು ಮೂರು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದವರು. ಪ್ರಧಾನವಾಗಿ ತೆಲುಗು, ಮಲಯಾಳಂ ಚಿತ್ರರಂಗದಲ್ಲಿದ್ದ ಅವರು ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿಯೂ  ನಟಿಸಿದ್ದಾರೆ. ರಾಷ್ಟ್ರೀಯ ಶ್ರೇಷ್ಠ ನಟಿ ಪ್ರಶಸ್ತಿಗೆ ಊರ್ವಶಿ ಪ್ರಶಸ್ತಿ ಎಂಬ ಹೆಸರಿದ್ದ ಕಾರಣ, ಅದನ್ನು ಗಳಿಸಿದ ಅವರು ಊರ್ವಶಿ ಶಾರದಾ ಎಂದೇ ಖ್ಯಾತರು.

ಶಾರದಾ  ಅವರ ಮೊದಲ ಹೆಸರು ಸರಸ್ವತಿ ದೇವಿ.  ಅವರು 1945ರ ಜೂನ್ 25 ರಂದು ಆಂಧ್ರಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ಜನಿಸಿದರು.  ಪೋಷಕರಾದ ವೆಂಕಟೇಶ್ವರ ರಾವ್ ಮತ್ತು ಸತ್ಯವತಿ ದೇವಿ ಅವರು ಕೃಷಿಕ ಕುಟುಂಬಕ್ಕೆ ಸೇರಿದವರು. ಸರಸ್ವತಿ ದೇವಿ ಬಾಲ್ಯದಲ್ಲಿಯೇ ಮದ್ರಾಸಿಗೆ ಬಂದು ಅಜ್ಜಿ ಕನಕಮ್ಮನೊಂದಿಗೆ ವಾಸವಾಗಿದ್ದರು.  

ಸರಸ್ವತಿ ದೇವಿ ಆರನೇ ವಯಸ್ಸಿನಲ್ಲಿ ನೃತ್ಯ ಕಲಿಯಲು ಪ್ರಾರಂಭಿಸಿದರು. ದಸರಾ ಮತ್ತು ಇತರ ಸಂದರ್ಭಗಳಲ್ಲಿನ ವೇದಿಕೆಗಳಲ್ಲಿ ಮತ್ತು ದೇವಾಲಯಗಳ ಉತ್ಸವಗಳಲ್ಲಿ ಅವರು ನೃತ್ಯ ಪ್ರದರ್ಶನ ನೀಡುತ್ತಿದ್ದರು.

ಸರಸ್ವತಿ ದೇವಿ ದೊಡ್ಡವರಾದ ನಂತರ ತೆಲುಗು ರಂಗಭೂಮಿಯಲ್ಲಿ ನಟಿಸಲು ಪ್ರಾರಂಭಿಸಿದರು. ತೆಲುಗಿನ 'ಕನ್ಯಾಶುಲ್ಕಂ' ಚಿತ್ರದಲ್ಲಿ ಚಿಕ್ಕ ಪಾತ್ರದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಪುನಃ ರಂಗಭೂಮಿಗೆ ಮರಳಿದರು.  'ರಕ್ತ ಕಣ್ಣೀರು' ತಮಿಳು ನಾಟಕದ ತೆಲುಗು ಆವೃತ್ತಿಯಲ್ಲಿ ಪ್ರಮುಖ ಪಾತ್ರವನ್ನು ಮಾಡಿದರು. ಈ ನಾಟಕ ನೂರಾರು ಬಾರಿ ಪ್ರದರ್ಶನಗೊಂಡಿತು.

1959 ರಲ್ಲಿ, ಸರಸ್ವತಿ ದೇವಿ ಶಾರದಾ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಮಹಾನ್ ನಿರ್ಮಾಪಕ ಎಲ್.ವಿ. ಪ್ರಸಾದ್ ಅವರ ಬಳಿ ಕಾಂಟ್ರಾಕ್ಟ್  ಪಡೆದರು. ಎಲ್.ವಿ. ಪ್ರಸಾದ್ ಅವರ ಚಿತ್ರಗಳಲ್ಲಿ ತಮಗೆ ನಟಿಸಲು ಅವಕಾಶ ದೊರೆಯದಿದ್ದರೂ ಅವರ ತರಬೇತಿಯೇ ತಮ್ಮನ್ನು  ಬೆಳೆಸಿತು ಎಂಬುದು ಶಾರದಾ ಅವರ ಭಕ್ತಿಯುತ ಮಾತು. 

ಶಾರದಾ ಅವರಿಗೆ ಮೊದಲ ಪ್ರಸಿದ್ಧಿ ಅಕ್ಕಿನೇನಿ ನಾಗೇಶ್ವರ ರಾವ್ ಅಭಿನಯದ 'ಇದ್ದರು ಮಿತ್ರುಲು' ಚಿತ್ರಕ್ಕೆ ಬಂತು. ಈ ಚಿತ್ರ ಅಪಾರ ಯಶಸ್ಸು ಗಳಿಸಿತು. ಈ ಚಿತ್ರದಲ್ಲಿನ ಅಭಿನಯದಿಂದ  ಗಮನ ಸೆಳೆದ ಶಾರದಾ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಅವಕಾಶಗಳನ್ನು ಪಡೆದರು.

1965ರ ವರ್ಷವು ಶಾರದಾ ಅವರ ವೃತ್ತಿಜೀವನವನ್ನು ಬದಲಾಯಿಸಿತು. ಮಲಯಾಳಂ ಚಿತ್ರರಂಗದಲ್ಲಿ ಶಕುಂತಲಾ, ಮುರಪ್ಪೆನ್ನು, ಉದ್ಯೋಗಸ್ಥ ಮುಂತಾದ ಚಿತ್ರಗಳಲ್ಲಿನ ಅಭಿನಯದಿಂದ ಅಲ್ಲಿ ಜನಪ್ರಿಯರಾದರು. ನಂತರ, ಅವರು ಮಲಯಾಳಂ ಚಿತ್ರಗಳತ್ತ ಹೆಚ್ಚು ಗಮನ ಹರಿಸಿ, ಇತರ ಭಾಷೆಗಳ ಕೆಲವು ಚಿತ್ರಗಳಲ್ಲಿ ಮಾತ್ರಾ ಪಾತ್ರಗಳನ್ನು ನಿರ್ವಹಿಸಿದರು. 

1966 ರಲ್ಲಿ 'ಇದ್ದಿಂತೆ ಆತ್ಮವು' ಸೇರಿದಂತೆ ವಿವಿಧ ಚಲನಚಿತ್ರಗಳಲ್ಲಿನ ಶಾರದಾ ಅವರ ಅಭಿನಯಕ್ಕಾಗಿ 1967ರಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿಯ ರೂಪದಲ್ಲಿ ಮನ್ನಣೆ ಬಂದಿತು. 1969ರಲ್ಲಿ, 'ತುಲಾಭಾರಂ'ನಲ್ಲಿನ ಅಭಿನಯಕ್ಕಾಗಿ ಅವರು ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. ಸ್ವಯಂವರಂ (1972, ಮಲಯಾಳಂ) ಮತ್ತು ನಿಮಜ್ಜನಂ (1978, ತೆಲುಗು) ಚಿತ್ರಗಳಿಗಾಗಿ ಅವರು ಇನ್ನೂ 2 ಬಾರಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು. ಅವರು ಒಂದು ಬಾರಿ ಅತ್ಯುತ್ತಮ ನಟನೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ ಕೂಡಾ ಗಳಿಸಿದರು. ಶಾರದಾ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಆಂಧ್ರ ಪ್ರದೇಶ ಸರ್ಕಾರದಿಂದ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿಯನ್ನು ಸಹಾ ಗಳಿಸಿದರು.

1993ರ ನಂತರ ಶಾರದಾ ಅವರು ಆಯ್ದ ಕೆಲವೇ ಚಿತ್ರಗಳನ್ನು ಮಾತ್ರಾ ಒಪ್ಪಿಕೊಳ್ಳತೊಡಗಿದರು. ಮಜತುಲ್ಲಿಕ್ಕಿಲುಕ್ಕಂ (2002, ಮಲಯಾಳಂ), ರಪ್ಪಕಲ್ (2005, ಮಲಯಾಳಂ), ನಾಯ್ಕಾ (2011, ಮಲಯಾಳಂ) ಮತ್ತು ಸ್ಟಾಲಿನ್ (2006, ತೆಲುಗು) ಅವರ ಮುಂದಿನ ಕೆಲವು ಚಲನಚಿತ್ರಗಳು. 

ಶಾರದಾ ಅವರು ಕನ್ನಡದಲ್ಲಿಯೂ ವಾಲ್ಮೀಕಿ, ಮಾತು ತಪ್ಪದ ಮಗ, ತಾಯಿ ಮಮತೆ, ಪ್ರಳಯ ರುದ್ರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಶಾರದಾ ಅವರು ಲೋಟಸ್ ಚಾಕೊಲೇಟ್ಸ್ ಹೆಸರಿನ ಚಾಕೊಲೇಟ್ ತಯಾರಿಕಾ ಸಂಸ್ಥೆ ಹೊಂದಿದ್ದಾರೆ. ಅವರು ತಮ್ಮ ಸ್ಥಳೀಯ ಪಟ್ಟಣವಾದ ತೆನಾಲಿಯಿಂದ ತೆಲುಗು ದೇಶಂ ಪಕ್ಷದ ಟಿಕೆಟ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.

ಶಾರದಾ ಅವರು ತಮ್ಮ ಪಾತ್ರಗಳಲ್ಲೆಲ್ಲ ಪರಕಾಯ ಪ್ರವೇಶ ಮಾಡುವ ರೀತಿ ಶ್ರೇಷ್ಠ ರೀತಿಯದ್ದು.

On the birth anniversary of great actress Sharadha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ