ಆರ್. ಎನ್. ಶ್ರೀಲತಾ
ಆರ್. ಎನ್. ಶ್ರೀಲತಾ
ವಿದುಷಿ ಡಾ. ಆರ್. ಎನ್. ಶ್ರೀಲತಾ ಅವರು ಸಂಗೀತಗಾರ್ತಿಯಾಗಿ, ಸಂಗೀತ ಶಾಸ್ತ್ರಗಳ ಗ್ರಂಥಕರ್ತೆಯಾಗಿ ಮತ್ತು ಸಂಗೀತ ಪ್ರಾಧ್ಯಾಪಕಿಯಾಗಿ ಹೆಸರಾಗಿದ್ದಾರೆ.
ಶ್ರೀಲತಾ ಅವರು ಕರ್ನಾಟಕ ಸಂಗೀತದ ಕಾಶಿ ಎನಿಸಿರುವ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ 1953ರ ಜೂನ್ 4ರಂದು ಜನಿಸಿದರು. ತಂದೆ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಆರ್. ಕೆ. ನಾರಾಯಣಸ್ವಾಮಿ. ತಾಯಿ ಸಾವಿತ್ರಮ್ಮ. ಇವರ ಸಹೋದರರಾದ ಪದ್ಮಶ್ರೀ ಪುರಸ್ಕೃತ ಆರ್. ಎನ್. ತ್ಯಾಗರಾಜನ್ ಮತ್ತು ಡಾ. ಆರ್. ಎನ್. ತಾರಾನಾಥನ್ ಸಂಗೀತಲೋಕದಲ್ಲಿ ರುದ್ರಪಟ್ನಂ ಸಹೋದರರೆಂದೇ ಪ್ರಸಿದ್ಧಿ.
ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸಂಗೀತದಲ್ಲಿ ಎಂ.ಎ. ಪದವಿ ಪಡೆದ ಶ್ರೀಲತಾ ಅವರು “ಕರ್ನಾಟಕ ಸಂಗೀತದಲ್ಲಿ ಮನೋಧರ‍್ಮ ಸಂಗೀತ ಪ್ರಕಾರಗಳು” ಎಂಬ ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಹೀಗೆ ಸಂಗೀತದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಇವರದು.
ಡಾ. ಶ್ರೀಲತಾ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಪದವಿ ಮತ್ತು ಸ್ನಾತಕ ಪದವಿಗಳಿಗೆ ಸಂಗೀತ ಶಾಸ್ತ್ರ, ಲಕ್ಷ್ಯಗಳ ಬೋಧನೆ ನಡೆಸಿದರು.
ಕಿರಿಯ ವಯಸ್ಸಿನಿಂದಲೇ ತಂದೆಯಿಂದ ಸಂಗೀತ ಪಾಠ ಪಡೆದ ಶ್ರೀಲತಾ, ತಮ್ಮ ಹಿರಿಯ ಸಹೋದರ ಆರ್.ಎನ್. ತ್ಯಾಗರಾಜನ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆದರು. ಅತಿ ಕಿರಿಯ ವಯಸ್ಸಿಗೇ ವೇದಿಕೆ ಏರಿ ಕಚೇರಿ ಮಾಡಿದ ಇವರು ಶಾಲಾ ಕಾಲೇಜು ದಿನಗಳಿಂದಲೂ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸುತ್ತಿದ್ದರು. ಮದರಾಸಿನ ಪ್ರತಿಷ್ಠಿತ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಲ್ಲಿ ಐದು ಪ್ರಥಮ ಬಹುಮಾನಗಳನ್ನು ಗಳಿಸಿ ಅದರ ಗುರುತಾಗಿ ಸಂಗೀತ ದಿಗ್ಗಜ ಎಂ. ಡಿ. ರಾಮನಾಥನ್ ಅವರಿಂದ ಇವರಿಗೆ ತಂಬೂರಿ ಬಹುಮಾನ ಸಂದಿತು. ಚೆನ್ನೈ ಮೂಸಿಕ್ ಅಕಾಡೆಮಿಯಿಂದ ಆರು ಪ್ರಥಮ ಬಹುಮಾನಗಳು ಸಂದಿದ್ದವು.
ಶ್ರಿಲತಾ ಅವರು ಆಕಾಶವಾಣಿ ಮತ್ತು ದೂರದರ್ಶನದ ’ಎ’ ದರ್ಜೆ ಕಲಾವಿದೆ. ಬೆಂಗಳೂರು ದೆಹಲಿ, ಚೆನ್ನೈ ಕೇಂದ್ರಗಳಿಂದ ಅವರ ಕಾರ್ಯಕ್ರಮಗಳು ನಿರಂತರ ಪ್ರಸಾರಗೊಂಡವು. ಭಾರತದ ವಿವಿದೆಡೆಗಳಲ್ಲಿ ಅಲ್ಲದೆ ವಿಶ್ವದ ಅನೇಕ ನಗರಗಳಲ್ಲಿ ಶ್ರೀಲತಾ ಅವರ ಸಂಗೀತ ಕಾರ್ಯಕ್ರಮಗಳು ಜರುಗಿವೆ.
ಕರ್ನಾಟಕ ಸಂಗೀತದಲ್ಲಿ ಮನೋಧರ‍್ಮ ಸಂಗೀತ ಪ್ರಕಾರಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದ ಕುರಿತಾದ ಹಲವು ಸಂಪುಟಗಳು, ದಾಸ ಸಂಕೀರ್ತನೆ, ಸದಾಶಿವ ಬ್ರಹ್ಮೇಂದ್ರರ ಕೃತಿಗಳು, ಮುತ್ತಯ್ಯ ಭಾಗವತರ ಚಾಮುಂಡಾಂಬ ಅಷ್ಟೋತ್ತರ ಶತ ಕೃತಿಗಳು, ಸ್ವಾತಿ ತಿರುನಾಳರ ಕೃತಿಗಳು ಮುಂತಾದ ಅನೇಕ ಮಹತ್ವದ ಗ್ರಂಥಗಳನ್ನು ಡಾ. ಆರ್.ಎನ್. ಶ್ರೀಲತಾ ಪ್ರಕಟಿಸಿದ್ದಾರೆ. ಇದಲ್ಲದೆ ಅವರು ನೂರಾರು ಸಂಗೀತ ಮತ್ತು ಸಂಗೀತಜ್ಞರ ಕುರಿತಾದ ಲೇಖನಗಳನ್ನು ಬರೆದಿದ್ದಾರೆ.
ಕರ್ನಾಟಕ ಕಲಾಶ್ರೀ, ಸಂಗೀತ ಭಾರತೀಯ ಧರ‍್ಮ ಸಮ್ಮೇಳನದ ಸಂಗೀತ ರತ್ನ, ಲಲಿತ ಕಲಾ ಅಕಾಡಮಿಯ ಲಲಿತ ಕಲಾ ರತ್ನ, ತ್ಯಾಗರಾಜ ಭಜನ ಸಭಾದಿಂದ ನಾದ ಜ್ಯೋತಿ, ಸಂಗೀತ ಕಲಾ ತಪಸ್ವಿ, ಭಕ್ತಿ ಭಾರತ ಪ್ರತಿಷ್ಠಾನದಿಂದ ಸಂಗೀತ ಸರಸ್ವತಿ ಮುಂತಾದ ಅನೇಕ ಗೌರವಗಳು ಶ್ರೀಲತಾ ಅವರಿಗೆ ಸಂದಿವೆ.
ವಿದುಷಿ ಡಾ. ಆರ್. ಎನ್. ಶ್ರೀಲತಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birthday of musician and writer Dr. R. N. Srilatha
ಕಾಮೆಂಟ್‌ಗಳು