ಜಿ. ಕೆ. ಐತಾಳ್
ಜಿ. ಕೆ. ಐತಾಳ್
ಜಿ. ಕೆ. ಐತಾಳ್ ಎಂದು ಪರಿಚಿತರಾದ ಗೋಪಾಲಕೃಷ್ಣ ಐತಾಳರು ಸಾಹಿತ್ಯ, ಜಾನಪದ, ರಂಗಭೂಮಿ ಹೀಗೆ ಹಲವಾರು ಪ್ರಕಾರಗಳಲ್ಲಿ ಸಕ್ರಿಯರಾಗಿದ್ದವರು.
ಗೋಪಾಲಕೃಷ್ಣ ಐತಾಳರು ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ 1951ರ ಜೂನ್ 25ರಂದು ಜನಿಸಿದರು. ತಾಯಿ ಲಕ್ಷ್ಮೀದೇವಿ. ತಂದೆ ರಂಗಪ್ರೇಮಿ ಸೂರ್ಯನಾರಾಯಣ ಐತಾಳರು ವೃತ್ತಿ ನಿರತ ನಾಟಕ ಕಂಪನಿಗಳನ್ನು ಆಹ್ವಾನಿಸಿ ಕುಂದಾಪುರದ ಸುತ್ತಮುತ್ತ ನಾಟಕಾಭಿರುಚಿ ಬೆಳೆಯುವಂತೆ ಮಾಡಿದ್ದಲ್ಲದೆ ಕೋಟೇಶ್ವರದಲ್ಲಿ ‘ಶ್ರೀಲಲಿತಾ ಕಲಾಪ್ರೇಮಿ ನಾಟಕ ಮಂಡಲಿ’ ಮತ್ತು ಕುಂದಾಪುರದಲ್ಲಿ ‘ರೂಪರಂಗ’ ಸಂಸ್ಥೆಯನ್ನು ಸ್ಥಾಪಿಸಿದರು. ಇವು ರಂಗ ಕಲಾವಿದರಿಗೆ ಅಪಾರ ಮಾನ್ಯತೆ ತಂದು ಕೊಟ್ಟ ಸಂಸ್ಥೆಗಳೆನಿಸಿವೆ. ಗೋಪಾಲಕೃಷ್ಣ ಐತಾಳರಿಗೆ ಕಲೆ ಹಾಗೂ ಸಾಹಿತ್ಯ ಪ್ರಕಾರದ ಅಭಿರುಚಿ ತಂದೆಯಿಂದ ಬಂದ ಬಳುವಳಿ.
ಗೋಪಾಲಕೃಷ್ಣ ಐತಾಳರ ಪ್ರಾರಂಭಿಕ ಶಿಕ್ಷಣ ಕೋಟೇಶ್ವರದಲ್ಲಿ ನಡೆದು, ಕುಂದಾಪುರದ ಭಂಡಾರ್ಕರ್ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದರು. ಮಂದೆ ಉದ್ಯೋಗಿಯಾಗಿ ಕರ್ನಾಟಕ ಬ್ಯಾಂಕಿಗೆ ಸೇರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಐತಾಳರು ಬ್ಯಾಂಕಿಂಗ್ ದುಡಿಮೆಯೊಂದಿಗೆ ಹವ್ಯಾಸಿ ಬರಹಗಾರರಾಗಿ ಬೀರಿದ ಪರಿಣಾಮ ಮಹತ್ವದ್ದು. ಅವರು ಮಂಗಳೂರಿನ ಅಂದಿನ ನವಭಾರತ ಪತ್ರಿಕೆಗೆ ಬರೆದ ಲೇಖನಮಾಲೆ ‘ಕಡಲ ತಡಿಯ ಕಲಾವಿದರು’. ಇವರ ಬರಹಗಳು ಅಲಕ್ಷ್ಯಕ್ಕೆ ಒಳಗಾಗಿದ್ದ ಗುಡಿಕಾರ, ಪಾಣಾರ, ಕುಶಲ ಕರ್ಮಿಗಳ ಕಾಷ್ಠ ಶಿಲ್ಪ ಕಲೆಗೆ ಮಾನ್ಯತೆ ದೊರೆಯುವಂತೆ ಮಾಡಿದವು. ನೆನೆಗುದಿಗೆ ಬಿದ್ದಿದ ‘ನಂದಳಿಕೆ ಮುದ್ದಣ ಸ್ಮಾರಕಕ್ಕೆ ಮುಕ್ತಿ ಎಂದು?’ ಎಂದು ಲೇಖನ ಬರೆದು ಸ್ಮಾರಕ ನಿರ್ಮಾಣಕ್ಕೆ ಜೀವ ತಂದರು. ನಿರ್ಲಕ್ಷಿತ ದೇವಸ್ಥಾನವಾದ ಕೋಟೇಶ್ವರದ ಶಿಥಿಲ ‘ನಿರೇಶ್ವಾಲ್ಯ ಶ್ರೀ ಮಹಾಲಿಂಗೇಶ್ವರ ದೇವಾಲಯ’ ಎಂದು ಉದಯವಾಣಿಗೆ ಲೇಖನ ಬರೆದಾಗ ಜನರ ನಾಡಿ ಮಿಡಿದು ಸಾರ್ವಜನಿಕರು ಭಾಗಿಯಾಗಿ ದೇವಾಲಯ ಜೀರ್ಣೋದ್ಧಾರ ಕಂಡಿತು. ಹೀಗೆ ಸಾರ್ವಜನಿಕರನ್ನು ಎಚ್ಚರಿಸುವ ಹಲವಾರು ಲೇಖನಗಳನ್ನು ಬರೆದು ಜಾಗೃತಿ ಉಂಟುಮಾಡಿ ಲೇಖಕನೊಬ್ಬನ ಸಾಮಾಜಿಕ ಜವಾಬ್ದಾರಿ ಏನೆಂದು ತೋರಿಸಿಕೊಟ್ಟರು. ಇದಲ್ಲದೆ ಲೇಖಕರ ಬರಹಗಳೇ ಕಲಾವಿದರ ಬಾಳಿಗೆ ಹೇಗೆ ಬೆಳಕಾಗಬಲ್ಲವು ಎಂಬುದಕ್ಕೆ , ಯಕ್ಷಗಾನ ಕಲಾವಿದ ಐರೋಡಿ ರಾಮಗಾಣಿಗ, ಉದ್ಯಾವರ ಮಾಧವ ಆಚಾರ್ಯರ ಬಗ್ಗೆ ಲೇಖನ ಬರೆದಾಗ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದದ್ದು; ನಾಟಕ ನಿರ್ದೇಶಕರಾದ ನಕ್ಕತ್ತಾಯ, ಆನಂದ ಬಸ್ರೂರು, ರಾಮದಾಸ್, ರಾಮಕೃಷ್ಣ ಕಲ್ಯಾಣಿ, ವಸಂತ ಬನ್ನಾಡಿ ಇವರುಗಳ ಬಗ್ಗೆ ಬರೆದಾಗ ನಾಟಕ ಅಕಾಡಮಿ ಪ್ರಶಸ್ತಿ ದೊರೆತದ್ದು; ಗೊಂಬೆಯಾಟದವರ ಬಗ್ಗೆ ಬರೆದಾಗ ಉಪ್ಪಿನ ಕುದ್ರು, ದೇವಣ್ಣಕಾಮತ್ ಬಳಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತದ್ದು ಕಾಕತಾಳೀಯವಲ್ಲ. ಹೀಗೆ ಹಲವಾರು ಪ್ರಕಾರದ ಕಲಾವಿದರ ಬಗ್ಗೆ ಪತ್ರಿಕೆಗೆ ಬರೆದಾಗ ಪ್ರಚಾರ, ಪ್ರೋತ್ಸಾಹ ಸಿಕ್ಕಿ, ಕಲಾವಿದರಿಗೆ ಮಾನ್ಯತೆ ದೊರೆಯಲು ಸಹಕಾರಿಯಾಗಿತ್ತು.
ಗೋಪಾಲಕೃಷ್ಣ ಐತಾಳರು ಬರೆದ ಹಲವಾರು ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟವಾಗಿದ್ದು, ಆಯ್ದ ಕಥಾ ಸಂಕಲನ ‘ಕಡಲ ತಡಿಯ ಕಥೆಗಳು’ ಪ್ರಕಟವಾಗಿದೆ. ಇವರಿಗೆ ಸಣ್ಣ ಕತೆಗಳ ಸ್ಪರ್ಧೆಯಲ್ಲಿ ಹಲವಾರು ಬಹುಮಾನಗಳೂ ಸಂದವು. ‘ಸಮರ್ಪಣ,’ ‘ಕಾಟುಮೂಲೆ ಎಸ್ಟೇಟ್’ ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ; ಅನುವಾದಿತ ಕಾದಂಬರಿ ‘ಮಿನುಗು ಮಿನುಗೆಲೆ ನಕ್ಷತ್ರ’ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ; ‘ಮೇರಾ ಭಾರತ್ ಮಹಾನ್’ ಕಾದಂಬರಿಯು ಉದಯವಾಣಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. 'ಕುಜ' ಕಾದಂಬರಿಯು ತುಷಾರ ಮಾಸ ಪತ್ರಿಕೆಯ ವಿಂಶತಿ ಕಾದಂಬರಿ ಸ್ಪರ್ಧೆಯಲ್ಲಿ (೧೯೯೩) ಬಹುಮಾನಗಳಿಸಿದ್ದಲ್ಲದೆ, ಕಾದಂಬರಿ ಕ್ಷೇತ್ರಕ್ಕಾಗಿ ಅ.ನ.ಕೃ. ಅವರ ಹೆಸರಿನಲ್ಲಿ ಸ್ಥಾಪನೆಗೊಂಡ ಮೊಟ್ಟ ಮೊದಲ ಪ್ರಶಸ್ತಿಯನ್ನು (1996 ) ಗಳಿಸಿತು.
ಜಿ. ಕೆ. ಐತಾಳರು ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದು ಹೊಸನಗರದಲ್ಲಿ ನಡೆದ ಅಖಿಲ ಕರ್ನಾಟಕ ನಾಟಕ ಸ್ಪರ್ಧೆ(1978)ಯಲ್ಲಿ ‘ನಾವಿಲ್ಲದಾಗ’ ನಾಟಕಕ್ಕೆ 9 ಪ್ರಶಸ್ತಿಗಳು, 1979 ರಲ್ಲಿ ‘ಗುಡ್ ಬೈ ಡಾಕ್ಟರ್ ಗೆ’ ಮೂರು ಪ್ರಶಸ್ತಿಗಳು, 1980ರಲ್ಲಿ ‘ಥ್ಯಾಂಕ್ಯೂ ಮಿ. ಗ್ಲಾಡ್’ ನಾಟಕಕ್ಕೆ 6 ಪ್ರಶಸ್ತಿಗಳು ಸಂದಿದ್ದವು.
ಜಿ. ಕೆ. ಐತಾಳರು ಸಂಪಾದಿಸಿರುವ ಕೃತಿಗಳೆಂದರೆ ಕುಂದಾಪುರ ತಾಲ್ಲೂಕು 2ನೆಯ ಸಾಹಿತ್ಯ ಸಮ್ಮೇಳನದ ಸಂಚಿಕೆ – ‘ಕೊಡಿ’, ಮುದ್ದಣ ಸ್ಮಾರಕ ಮಿತ್ರಮಂಡಲಿಗಾಗಿ ‘ಮನೋರಮಾ’, ಚೇತನ ಕಲಾರಂಗದ ರಜತೋತ್ಸವಕ್ಕಾಗಿ ‘ಸಂಕೇತ’; ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಸಂದರ್ಭದ ‘ಅಮೃತ’, ಕರ್ನಾಟಕ ಬ್ಯಾಂಕಿನ ಅಮೃತಮಹೋತ್ಸವದ ಸ್ಮರಣ ಸಂಚಿಕೆ ಮುಂತಾದವು ಸೇರಿವೆ. 197ರಲ್ಲಿ ಚೇತನ ಕಲಾರಂಗದ ಸ್ಥಾಪಕ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದು, ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು, ಉಚಿತ ದಂತ ಚಿಕಿತ್ಸಾ ಶಿಬಿರಗಳು, ಉಚಿತ ಗ್ರಂಥಾಲಯ ವ್ಯವಸ್ಥೆ, ಶಾಲಾ ಕಾಲೇಜುಗಳಿಗೆ ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ, ಶಾಲಾ ಕಾಲೇಜುಗಳಿಗೆ ಪೀಠೋಪಕರಣಗಳು ಹಾಗೂ ಸಭಾಭವನ ನಿರ್ಮಾಣ, ತಮ್ಮ ಮಾತೋಶ್ರೀಯವರ ನೆನಪಿಗಾಗಿ ಕೋಟೇಶ್ವರ ಜ್ಯೂನಿಯರ್ ಕಾಲೇಜಿನಲ್ಲಿ ಪ್ರತಿವರ್ಷ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹೀಗೆ ಹಲವು ಹತ್ತು ಕಾರ್ಯಕ್ರಮಗಳನ್ನೂ ರೂಪಿಸಿ ನಿರಂತರ ಕ್ರಿಯಾಶೀಲರಾಗಿದ್ದರು.
ಜಿ. ಕೆ. ಐತಾಳರಿಗೆ 2002ರಲ್ಲಿ ಜೀವಮಾನದ ಸಾಧನೆಗಾಗಿ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ (ಬೆಂಗಳೂರು) ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳದ ಸಾಹಿತ್ಯೋತ್ಸವ ಸಂದರ್ಭದಲ್ಲಿ ವೀರೇಂದ್ರ ಹೆಗಡೆಯವರಿಂದ ಸನ್ಮಾನ, ಉದಯ, ಚಂದನ ಟಿ.ವಿ. ವಾಹಿನಿಗಳಲ್ಲಿ ಇವರ ಸಂದರ್ಶನ, ಕೇರಳ-ಕರ್ನಾಟಕ ಸ್ನೇಹಸೇತು ಸುಹೃದ್ವೇದಿ ಸಂಘಟನೆಯಿಂದ (2006) ಶಿವರಾಮಕಾರಂತ ಪ್ರಶಸ್ತಿ, ಮಣಿಪಾಲ್ ಜೇಸೀಸ್, ಕುಂದಾಪುರ ಜೇಸಿಸ್ ಸಂಸ್ಥೆಗಳಿಂದ ಜಿಲ್ಲೆಯ ಪ್ರತಿಭಾನ್ವಿತ ತರುಣನೆಂಬ ಗೌರವ, ಹೀಗೆ ಹಲವಾರು ಸಂಘ ಗೌರವಗಳು ಸಂದಿದ್ದವು.
ಜಿ. ಕೆ. ಐತಾಳರು 2019ರ ಸೆಪ್ಟೆಂಬರ್ 19ರಂದು ಈ ಲೋಕವನ್ನಗಲಿದರು.
On the birth anniversary of writer anc social worker G. K. Aithal
ಕಾಮೆಂಟ್‌ಗಳು