ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚೆನ್ನವೀರ ಕಣವಿ


ಚೆನ್ನವೀರ ಕಣವಿ

ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಖ್ಯಾತರಾದವರು. 

ಚೆನ್ನವೀರ ಕಣವಿ, ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಸುಸಂಸ್ಕೃತ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.  ತಾಯಿ ಪಾರ್ವತೆವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು.  ಧಾರವಾಡದಲ್ಲಿ ಹೈಸ್ಕೂಲಿನಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ ಅವರ ಅಭ್ಯಾಸ ನಡೆಯಿತು.  ಅವರ ಪತ್ನಿ ದಿವಂಗತೆ ಶಾಂತಾದೇವಿ ಅವರು ಕೂಡ ಸಾಹಿತ್ಯ ಸಂಸ್ಕೃತಿಯ ಒಲವುಳ್ಳ ದೊಡ್ಡ ಮನೆತನದಿಂದ ಬಂದವರು.  ಕಣವಿಯವರು ನಿರಂತರ ಧಾರವಾಡದಲ್ಲೇ ನೆಲೆ ನಿಂತವರು.  ಕಣವಿಯವರ ವೃತ್ತಿ ಜೀವನ ಕರ್ನಾಟಕ ವಿಶ್ವವಿದ್ಯಾಲಯದಲ್ಲೇ ಪ್ರಾರಂಭವಾಯಿತು.  ಪ್ರಸಾರಂಗದ ನಿರ್ದೇಶಕರಾಗಿ ಸಹಾ ಕೆಲಸ ಮಾಡಿದ್ದರು.  

ಸುಮಾರು  ಏಳು ದಶಕಗಳ ಸಮೀಪದ  ದೀರ್ಘಕಾಲದಿಂದ  ಚೆನ್ನವೀರ ಕಣವಿಯವರು ನಿಷ್ಠೆಯಿಂದ ಸಾಹಿತ್ಯ ಸಾಧನೆ ಮಾಡಿಕೊಂಡು ಬಂದಿದ್ದರು.  ವಿಮರ್ಶೆಯನ್ನು ಅವರು ಬರೆದಿದ್ದಾರಾದರೂ ಪ್ರಧಾನವಾಗಿ ಅವರು ಕವಿ.  

ಚೆನ್ನವೀರ ಕಣವಿಯವರು ಕವಿಯಾಗಿ ಪ್ರಕಟವಾಗಿದ್ದು ನವೋದಯದ ‘ನಡುಹಗಲ’ ಕಾಲದಲ್ಲಿ.  ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಕಾವ್ಯ ಹೊಸದಾಗಿ ಕಾವ್ಯರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲ ಅದು.  ಕಣವಿ ಅವರ ಪ್ರಾರಂಭದ ರಚನೆಗಳಲ್ಲಿ ಇಂಥ ಪ್ರಭಾವಗಳ ನೆಲೆಯನ್ನು ಗುರುತಿಸಬಹುದಾಗಿದ್ದು, ಅವರ ಕಾವ್ಯದಲ್ಲಿ ರಮ್ಯಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡುಬರುತ್ತವೆ.  1949ರಲ್ಲಿ ಪ್ರಕಟವಾದ ‘ಕಾವ್ಯಾಕ್ಷಿ’, 1950ರಲ್ಲಿ ಪ್ರಕಟವಾದ ‘ಭಾವಜೀವಿ’ ಸಂಗ್ರಹಗಳಲ್ಲಿ ಈ ಎಲ್ಲ ಅಂಶಗಳನ್ನೂ ಗುರುತಿಸಬಹುದು.

1953ರಲ್ಲಿ ಕಣವಿಯವರ ಮೂರನೆಯ ಸಂಗ್ರಹ ‘ಆಕಾಶಬುಟ್ಟಿ’ ಪ್ರಕಟವಾಯಿತು.  ಈ ಸಂಗ್ರಹದಲ್ಲಿ ಕಣವಿ ಅವರ ಆಸಕ್ತಿಗಳು ವಿಸ್ತಾರಗೊಳ್ಳುತ್ತಿರುವ ಸೂಚನೆಗಳಿವೆ.  ಸಾಮಾಜಿಕತೆ ಈ ಸಂಗ್ರಹದಲ್ಲಿ ಗುರುತಿಸಲೆಬೇಕಾದ ಬಹುಮುಖ್ಯ ಅಂಶವಾಗಿದೆ.  ಸಮಾಜದ ದೋಷಗಳನ್ನು ಕವಿ ಇಲ್ಲಿ ವ್ಯಗ್ರರಾಗಿ ಟೀಕೆಗೆ ಗುರಿ ಮಾಡುತ್ತಾರೆ.  ವ್ಯಂಗ್ಯದ ಧಾಟಿ ಇಂಥ ಸಂದರ್ಭಗಳಲ್ಲಿ ಮುಖ್ಯವಾಗುತ್ತದೆ.  ಬಸವರಾಜ ಕಟ್ಟೀಮನಿ, ನಿರಂಜನ, ಎಕ್ಕುಂಡಿ ಮೊದಲಾದವರ ಸ್ನೇಹ ಸಂಪರ್ಕ ಮತ್ತು ಆಗ ಪ್ರಚಲಿತವಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿ ಅವರನ್ನು ಪ್ರಭಾವಿಸಿರಬಹುದು.  ಆಕಾಶಬುಟ್ಟಿ ಸಂಗ್ರಹದಲ್ಲಿರುವ ಪ್ರಜಾಪ್ರಭುತ್ವ ಎಂಬ ಕವಿತೆಯನ್ನು ನಾವಿಲ್ಲಿ ವಿಶೇಷವಾಗಿ ನೆನೆಯಬೇಕು.  ಪ್ರತಿಮಾನಿಷ್ಠವಾದ ಈ ಕವಿತೆ ಕಣವಿ ಅವರ ಮುಂದಿನ ಕಾವ್ಯದ ಮುನ್ಸೂಚನೆಯಂತಿದೆ.

1954ರಲ್ಲಿ ಗೋಪಾಲಕೃಷ್ಣ ಅಡಿಗರ ‘ಚಂಡೆ ಮದ್ದಳೆ’ ಪ್ರಕಟವಾಗಿ ನವ್ಯಮಾರ್ಗ ಅಧಿಕೃತವಾಗಿ ಉದ್ಘಾಟಿತವಾಯಿತು.  ವಿಶೇಷವಾಗಿ ರೋಮ್ಯಾಂಟಿಕ್ ಮನೋಧರ್ಮದ ಚೆನ್ನವೀರಕಣವಿ ಅವರು ಈ ಹೊಸ ಕಾವ್ಯ ಸಂದರ್ಭದೊಂದಿಗೆ ಬೇರೊಂದು ರೀತಿಯಲ್ಲಿ ಸಂಘರ್ಷಕ್ಕೆ ತೊಡಗಿದ್ದೇ ಅವರ ಕಾವ್ಯಜೀವನದ ಮುಂದಿನ ಅಧ್ಯಾಯ.  ಅಡಿಗರ ನವ್ಯ ಮಾರ್ಗದೊಂದಿಗೆ ಕಣವಿ ಅವರ ಸಂಬಂಧ ಅನ್ಯೋನ್ಯವಾದುದಾಗಿರಲಿಲ್ಲ.  ಅಡಿಗರ ಕಾವ್ಯ ಪ್ರವಾಹದಲ್ಲಿ ಪೂರ್ತಿಯಾಗಿ ಕೊಚ್ಚಿ ಹೋಗದಷ್ಟು ಕಣವಿ, ಜಿ.ಎಸ್.ಎಸ್ ಮತ್ತು ಕೆ.ಎಸ್. ನ ಅವರು ಸಾಧಿಸಿಕೊಂಡಿದ್ದರು.  ಹೀಗಾಗಿಯೇ ಅಡಿಗರ ಅನುಯಾಯಿಗಳಿಗಿಂತ ಭಿನ್ನವಾಗಿ ಇವರು ಕಾವ್ಯ ಸೃಷ್ಟಿಸುವುದು ಸಾಧ್ಯವಾಯಿತು.  ಭಾಷೆಯ ದೃಷ್ಟಿಯಿಂದ, ಲಯದ ದೃಷ್ಟಿಯಿಂದ, ಅನುಭವವನ್ನು ನಿಷ್ಠುರವಾಗಿ ಶೋಧಿಸಬೇಕೆಂಬ ದೃಷ್ಟಿಯಿಂದ ಇವರು ನವ್ಯವನ್ನು ಒಪ್ಪಿಕೊಂಡರು.  ಆದರೆ ಆಗ ನವ್ಯದಲ್ಲಿ ವಿಶೇಷವಾಗಿ ಕಾಣುತ್ತಿದ್ದ ನಿರಾಶಾಭಾವ, ಏಕಾಕಿತನದ ನೋವು, ಕಾಮದ ವಿಜ್ರಂಭಣೆ, ವ್ಯಂಗ್ಯದ ಆಟಾಟೋಪಗಳನ್ನೂ ಇವರು ಅನುಮಾನಿಸಿದರು.  ಬದುಕನ್ನು ಸ್ನೇಹ, ಪ್ರೀತಿ, ವಾತ್ಸಲ್ಯ, ಸಹನಶೀಲತೆ ಮೊದಲಾದ ಮೌಲ್ಯಗಳನ್ನು ಆಶ್ರಯಿಸಿ ಸಹ್ಯವಾಗಿಸುವುದು ಸಾಧ್ಯವಿದೆ ಎಂಬುದು ಕಣವಿ ಅವರ ನಿಲುವಾಗಿತ್ತು.  ಇವರು ತಮ್ಮ ಕಹಿಯನ್ನು ಸಾಮಾಜಿಕ ನೆಲೆಯಲ್ಲಿ ವ್ಯಕ್ತಪಡಿಸುತ್ತಾರೆ.  ಆದರೆ ವೈಯಕ್ತಿಕ ನೆಲೆಯಲ್ಲಿ ಮನಸ್ಸು ಕಹಿಮಾಡಿಕೊಳ್ಳದೆ ಆರ್ದ್ರರಾಗಿ ಪ್ರವರ್ತಿಸುತ್ತಾರೆ.  ‘ನಿನಗೆ ನೀನೇ ಗೆಳೆಯ ನಿನಗೆ ನೀನೇ’ ಎಂದು ಅಡಿಗರಂತೆ ಕಣವಿ ಅವರು ಬರೆಯುವುದನ್ನು ನಾವು ಕಲ್ಪಿಸುವುದೇ ಸಾಧ್ಯವಿಲ್ಲ.  ದಾಂಪತ್ಯವನ್ನು ಕುರಿತು, ಮಕ್ಕಳನ್ನು ಕುರಿತು, ನಿಸರ್ಗವನ್ನು ಕುರಿತು, ಅಷ್ಟೇಕೆ ಪ್ರಾಣಿಪಕ್ಷಿಗಳನ್ನು ಕುರಿತು ಕಣವಿ ಅವರು ಬರೆದಿರುವ ಕವಿತೆಗಳನ್ನು ನೋಡಿದರೆ, ಅವರು ಹೇಗೆ ಅಡಿಗರಿಂದ ಭಿನ್ನವಾಗಿ ಬರೆಯುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.  “ನವ್ಯಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ ಮುಖತೆ, ಸಾಮಾಜಿಕ ಎಚ್ಚರ, ವ್ಯಂಗ್ಯ – ವಿಡಂಬನೆಗಳನ್ನು ಕಣವಿ ಅವರ ಕವಿತೆ ಹಿಡಿದುಕೊಂಡಿತಾದರೂ, ಕಣವಿಯವರು ತಮ್ಮ ವ್ಯಕ್ತಿತ್ವದ ಮೂಲದ್ರವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಟಿ, ಮಾನವೀಯತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಬಿಟ್ಟುಕೊಡಲಿಲ್ಲ” ಎಂದು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು ಈ ಅಂಶವನ್ನು ತುಂಬಾ ಚೆನ್ನಾಗಿ ಗುರುತಿಸಿದ್ದಾರೆ.

1960ರಲ್ಲಿ ‘ಮಣ್ಣಿನ ಮೆರವಣಿಗೆ’ ಪ್ರಕಟವಾಗುವ ವೇಳೆಗೆ ಕಣವಿಯವರ ಕಾವ್ಯವ್ಯಕ್ತಿತ್ವ ಸಾಕಷ್ಟು ಮಾಗಿತ್ತು.  ನಿಸರ್ಗಪ್ರಿಯತೆ ಈ ಸಂಗ್ರಹದಲ್ಲಿ ಕೊಂಚ ಕಡಿಮೆಯಾಗಿ, ವಿಡಂಬನೆಯ ಜೋರು ಹೆಚ್ಚಾಗಿದೆ.  ಆದರೆ ಬಹು ಮುಖ್ಯ ಅಂಶವೆಂದರೆ ಕೆಲವು ಮೂಲಭೂತವಾದ ಮತ್ತ ಸಾರ್ವಕಾಲಿಕ ಎನ್ನಬಹುದಾದ ವಸ್ತುಗಳನ್ನು ತಮ್ಮ ವೈಯಕ್ತಿಕ ಅನುಭವದ ನೆಲೆಯಲ್ಲಿ ಕಣವಿ ಅವರು ಆಳವಾಗಿ ಶೋಧಿಸತೊಡಗುತ್ತಾರೆ.  ಈ ಶೋಧನೆ 1965ರಲ್ಲಿ ಪ್ರಕಟಗೊಂಡ  ‘ನೆಲಮುಗಿಲು’ ಸಂಗ್ರಹದಲ್ಲೂ ಮುಂದುವರೆಯುತ್ತದೆ.  ‘ಮಣ್ಣಿನ ಮೆರವಣಿಗೆ’, ‘ಶಿಶು ಕಂಡ ಕನಸು’, ‘ಕಾಲ ನಿಲ್ಲುವುದಿಲ್ಲ’ ಮೊದಲಾದವು ಈ ನೆಲೆಯಲ್ಲಿ ಬಂದ ಕಣವಿ ಅವರ ಮಹತ್ವದ ಪ್ರಯೋಗಗಳಾಗಿವೆ.  ‘ಕಾಲ ನಿಲ್ಲುವುದಿಲ್ಲ’ ಕವಿತೆಯಲ್ಲಿ ನಾಗರಿಕತೆಯ ಇತಿಹಾಸವನ್ನೇ ಕಣವಿ ಅವರು ಪ್ರತಿಮೀಕರಿಸಿದ್ದಾರೆ.  ಇಡೀ ಕವಿತೆ ಕಾಲದೊಂದಿಗೆ ಸಾಗಿ ಬಂದ ಮನುಷ್ಯನ ಗತಿಶೀಲವಾದ ಬದುಕಿನ ಹೋರಾಟದ ಅಭಿವ್ಯಕ್ತಿ ಆಗಿದೆ.  ಜೊತೆಗೆ ಸಾಹಿತ್ಯ ಪರವಾದ ಅರ್ಥವೂ ಕವಿತೆಗಿದೆ.  ತಮ್ಮ ವೈಯಕ್ತಿಕ ಕಾವ್ಯದ ಮತ್ತು ಬದುಕಿನ ನಿಲುವುಗಳನ್ನು ಕಣವಿ ವ್ಯಕ್ತಪಡಿಸಿದ್ದಾರೆ.  ಇದಕ್ಕೆ ಉದಾಹರಣೆಯಾಗಿ ‘ಕಾಲ ನಿಲ್ಲುವುದಿಲ್ಲ’ ಕವನದ ಈ ಸಾಲುಗಳನ್ನು ಗಮನಿಸಬಹುದು. 

ಮಾಡಿ ಉಂಡಿದ್ದೇವೆ ನಮನಮಗೆ ಸೇರಿದ ಅಡಿಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನ ಸತ್ವ ಕಡಿಮೆ
ಇದ್ದ ಶಕ್ತಿಯಲ್ಲಿ ತುಸುದೂರ ನಡೆದಿದ್ದೇವೆ
ರೂಢಿಯಾಗಿದೆ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ  

ಈ ಕಾಲದಲ್ಲಿ ಕಣವಿ ಅವರು ಬರೆದ ‘ಅಪರಾವತಾರ’ದಂಥ ಕವಿತೆಗಳಲ್ಲಿ  ರಾಜಕೀಯ ಭ್ರಷ್ಟಾಚಾರದ ಬಗ್ಗೆ ಕಠೋರವಾದ ವ್ಯಂಗ್ಯ ಕಂಡುಬರುತ್ತದೆ, ನಿಜ.  ಆದರೆ ರಾಷ್ಟ್ರಜೀವನದಲ್ಲಿ ಯೋಗ್ಯವಾದ ರಾಜಕೀಯ ನಡೆಗಳನ್ನು ಒಪ್ಪಿ, ಮುಜುಗರವಿಲ್ಲದೆ ಆ ಬಗ್ಗೆ ಹೃದಯ ಬಿಚ್ಚಿ ಅವರು ಬರೆದದ್ದು ವಿಶೇಷವಾಗಿದೆ.  ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಅಡಿಗರ ಕವಿತೆಯೊಂದಿಗೆ ಕಣವಿ ಅವರ ‘ರಾಷ್ಟ್ರದ ಕರೆ’, ‘ಇಂದೇ ಸೀಮೋಲ್ಲಂಘನ’, 'ನೆಹರೂ ಶ್ರದ್ಧಾಂಜಲಿ’, ‘ಭಾರತ ಸುಪುತ್ರನ ಕೊನೆಯ ಬಯಕೆ’ ಮೊದಲಾದ ಪದ್ಯಗಳನ್ನು ಹೋಲಿಸಿ ನೋಡಿದಾಗ ಈ ಇಬ್ಬರು ಕವಿಗಳ ಮನೋಧರ್ಮದ ಅಂತರ ಸ್ಪಷ್ಟವಾಗುತ್ತದೆ.

ಸಾನೆಟ್ಟಿನ ಕಾವ್ಯಬಂಧ ಕಣವಿ ಅವರಿಗೆ ಪ್ರಿಯವಾದುದು.  ‘ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯಪ್ರಕಾರ ಸಾನೆಟ್’ ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೆ ಹೇಳಿಕೊಂಡಿದ್ದಾರೆ. “ಕಣವಿಯವರು ತಮ್ಮ ತತ್ವಜ್ಞಾನವನ್ನೆಲ್ಲಾ, ಜೀವನದ ಮೇಲಿದ್ದ ತಮ್ಮ ಭರವಸೆಯನ್ನೆಲ್ಲಾ ಈ ಸುನೀತದಲ್ಲಿ ಅತ್ಯಂತ ಪ್ರಭಾವಿಯಾಗಿ ಮಿಡಿಸಿದ್ದಾರೆ” ಎಂಬ ಶಾಂತಿನಾಥ ದೇಸಾಯಿಯವರ ಮಾತು ಇಲ್ಲಿ ಉಲ್ಲೇಖನೀಯ.  ಕಷ್ಟಸಾಧ್ಯವಾದ ಈ ಕಾವ್ಯಬಂಧವನ್ನು ವಶಪಡಿಸಿಕೊಂಡ ಕಣವಿ ಚೆಲುವಾದ ಅನೇಕ ಸುನೀತಗಳನ್ನು ರಚಿಸಿದ್ದಾರೆ.  ಈ ದೃಷ್ಟಿಯಿಂದ ತಮ್ಮ ಸುನೀತಗಳ ಮೂಲಕ ಕಣವಿ, ಕನ್ನಡಕ್ಕೆ ಮಹತ್ವದ ಕಾವ್ಯಕಾಣಿಕೆಯನ್ನು ನೀಡಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು.  ಶಾಂತಿನಾಥ ದೇಸಾಯಿ ಅವರು ಉಲ್ಲೇಖಿಸಿರುವ ಹಾಗೆ “ಸ್ವಾತಂತ್ರ್ಯ ಸಂಗ್ರಾಮದಂಥ ಸಾರ್ವಜನಿಕ ವಿಷಯದ ಮೇಲೆ ಬರೆಯುವ ಪ್ರಸಂಗ ಬಂದಾಗಲಾಗಲಿ, ಗಾಂಧಿ, ಶಾಸ್ತ್ರಿ, ಶ್ರೀ ಅರವಿಂದರಂತಹ ಮಹಾತ್ಮರ ಬಗ್ಗೆ ಬರೆಯಬೇಕಾದಾಗಲಾಗಲಿ, ಇನ್ನೂ ಹತ್ತಿರದ ಹಿರಿಯರಾದ ಬೇಂದ್ರೆ, ಮುಗಳಿ, ತೀ.ನಂ.ಶ್ರೀ ಮುಂತಾದ ಆತ್ಮೀಯರ ಬಗ್ಗೆ ಬರೆಯುವ ಪ್ರಸಂಗ ಬಂದಾಗಲಾಗಲಿ ಕಣವಿಯವರಿಗೆ ಸಾನೆಟ್ಟು ಒಂದು ಅತ್ಯಂತ ಪ್ರಭಾವಿಯಾದ ಅಭಿವ್ಯಕ್ತಿ ಮಾಧ್ಯಮವಾಯಿತು.“

ಕವಿತೆ ಜನತೆಗೆ ತಲುಪುವುದು ಅಗತ್ಯ ಎಂದು ಬಯಸುತ್ತಾ ಬಂದ ಕವಿಗಳಲ್ಲಿ ಕಣವಿ ಅವರೂ ಒಬ್ಬರು.  ಅವರು ರಚಿಸಿರುವ ಗೀತೆಗಳನ್ನು ಈ ದೃಷ್ಟಿಯಿಂದ ನೋಡಬೇಕು.  ಇಲ್ಲಿ ಅವರ ಗಂಭೀರ ಕಾವ್ಯದ ಆಸಕ್ತಿಗಳೇ ಸರಳರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತವೆ.  ಕಾವ್ಯಬಂಧದಲ್ಲಿ ಅರ್ಥಪುಷ್ಟಿಗಿಂತ ನಾದ ಮಾಧುರ್ಯಕ್ಕೆ ಹೆಚ್ಚು ಒತ್ತು ಬೀಳುತ್ತದೆ.  ಗೀತೆಗಳ ಸ್ವರೂಪವೇ ಅದು.  ಭಾವ ಮತ್ತು ನಾದಗಳಲ್ಲಿ ರಮಿಸಲಾಗದ ಮನಸ್ಸು ಪಾಯಶಃ ಗೀತೆಗಳ ರಚನೆಗೆ ಸಮರ್ಥವಾಗುವುದಿಲ್ಲ.  ಕಣವಿ ಅವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಹುಗಳು ವಿಶೇಷವಾಗಿ ಕಂಡುಬರುತ್ತವೆ.  ‘ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವುವು ಸೂರ್ಯನವರೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಮೊದಲಾದ  ಅವರ ಜನಪ್ರಿಯ ಗೀತೆಗಳನ್ನು ಈ ದೃಷ್ಟಿಯಿಂದಲೇ ಲಕ್ಷಿಸಬೇಕಾಗುತ್ತದೆ.  ಇಂಥ ರಚನೆಗಳನ್ನು ಸಾಪೇಕ್ಷ ಕಾವ್ಯ ಎಂದು ಪು.ತಿ.ನ ಕರೆಯುತ್ತಾರೆ.  ಪು.ತಿ.ನ, ಕೆ.ಎಸ್.ನ, ಜಿ.ಎಸ್.ಎಸ್ ಮೊದಲಾದವರು ಬೆಳೆಸಿಕೊಂಡು ಬಂದಿರುವ ಈ ಗೀತರಚನಾ ಪರಂಪರೆಗೆ ಕಣವಿ ಅವರದ್ದೂ ಬೆಲೆಯುಳ್ಳ ಕಾಣಿಕೆಯಾಗಿದೆ.

ಐವತ್ತು ವರ್ಷಗಳ ಕಾಲ ಕಾವ್ಯ ಸಲ್ಲಿಸಿದ ನಂತರದಲ್ಲಿ ಕೂಡಾ  ‘ಶಿಶಿರದಲ್ಲಿ ಬಂದ ಸ್ನೇಹಿತ’ ಅಂತಹ ಕವನ ಸಂಕಲನಗಳಲ್ಲಿ ಕಣವಿಯವರ ಯಾವುದೇ ಅಬ್ಬರವಿಲ್ಲದ ಮೆಲುದನಿಯ ಕವಿತೆಗಳಿವೆ.  ಕವಿಯ ಕಾವ್ಯಜೀವನದ ಮಾಗುವಿಕೆ ಈ ಕವಿತೆಗಳಲ್ಲಿ ತನಗೆ ತಾನೇ ಸ್ಪಷ್ಟವಾಗುವ ಅಂಶ.  ಮಳಲು ಹಾಡುತ್ತದೆ, ಹಲ್ಲಿಗಳ ಸಹವಾಸ, ಕನಸಿನ ಗೊಮ್ಮಟ, ಈಗಿನ ಮಕ್ಕಳು ಅಂತಹ ಕವಿತೆಗಳು ಕೊಡುವ ಚಿತ್ರಗಳು ಹೊಸವು.  ಅಂತರಂಗದ ಗತಿಗೆ ಹೊರ ಜಗತ್ತಿನ ಸಂಗತಿಗಳು ಅಪ್ರಯತ್ನಕವೆಂಬಷ್ಟು ಸಹಜವಾಗಿ, ಪ್ರತೀಕವಾಗಿ ನಿಲ್ಲುವ ಬಗೆಯಿಂದ ಇವು ಸಹಜ ಕಾವ್ಯದ ಮಾದರಿಗಳಾಗಿವೆ.  

ಒಟ್ಟಾರೆ, ಏಳು  ದಶಕಗಳ ಸಮೀಪದ  ತಮ್ಮ ಕಾವ್ಯೋದ್ಯೋಗದಲ್ಲಿ ಕಣವಿಯವರು ಶ್ರೇಷ್ಠವಾದ ಅನೇಕ ಕವಿತೆಗಳನ್ನು ಬರೆದು ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹು ಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಲೋಕೋತ್ತರ ಸ್ಫುರಿತಗಳು ಅವರ ಕಾವ್ಯದಲ್ಲಿ ಆಗಾಗ ಕಾಣುವುದಾದರೂ, ಅವರು ವಿಶೇಷವಾಗಿ ‘ಸಾಮಾನ್ಯ’ದ ಆರಾಧಕರಾದ ಕವಿ.  ಅವರ ಕಾವ್ಯದಲ್ಲಿ ನಾವು ಕೇಳುವುದು ಅವಧೂತನ ವಾಣಿಯನ್ನಲ್ಲ; ಸದ್ಗ್ರಹಸ್ಥನೋಬ್ಬನ ಸಮಾಧಾನದ ಧ್ವನಿಯನ್ನು.  ಇದ್ದುದರಲ್ಲೇ ಬದುಕನ್ನು ಹಿತವಾಗಿಸಿಕೊಂಡು ನೆಮ್ಮದಿಯಿಂದ ಬದುಕುವ ಅಗತ್ಯವನ್ನು ಅವರ ಕಾವ್ಯ ಒತ್ತಿ ಹೇಳುತ್ತಿದೆ.  ‘ಮೂರುಗಳಿಗೆಯ ಬಾಳು ಮಗಮಗಿಸುತಿರಲಿ’ ಎಂಬುದು ಅವರ ಹಾರೈಕೆ.   ಅದಮ್ಯ ಜೀವನಪ್ರೀತಿಯ ಕಣವಿ ಅವರ ಕಾವ್ಯ, ನೋವು  ನಲಿವುಗಳನ್ನು ಸಮತೂಕದಲ್ಲಿ ಧಾರಣ ಮಾಡಿದೆ.  ಸಮಾಧಾನವೇ ಅದರ ಸ್ಥಾಯೀ ಅಂತಃಸತ್ವವಾಗಿದೆ.  

‘ಜೀವಧ್ವನಿ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಮಹಾನ್ ಗೌರವಗಳು ಚೆನ್ನವೀರ ಕಣವಿಯವರಿಗೆ ಸಂದಿದ್ದವು.  

ಶ್ರೇಷ್ಠ ಮಾನವೀಯ ಗುಣ, ಸರಳ ಸಜ್ಜನಿಕೆ, ತಮ್ಮ ಸಮಕಾಲೀನ ಕವಿಗಳ ಬಗ್ಗೆ ನಿರ್ಮತ್ಸರದ ಗೌರವ ಪ್ರೀತಿ ಇವುಗಳೆಲ್ಲದರಿಂದ ನಮ್ಮ ಶ್ರೇಷ್ಠ ಕನ್ನಡ ಸಾಂಸ್ಕೃತಿಕ ಪರಂಪರೆಯ ಹಿರಿಯರಾಗಿ ಕನ್ನಡ ನಾಡಿಗೆ ಮಾರ್ಗದರ್ಶಕರಂತಿದ್ದವರು ಚೆನ್ನವೀರ ಕಣವಿ.  ಅವರು 2022ರ ಫೆಬ್ರುವರಿ 16ರಂದು ಈ ಲೋಕವನ್ನಗಲಿದರು. ಆದರೆ ಅವರ ಕೊಡುಗೆ ಬತ್ತಲಾರದ ಅಮೃತವಾಹಿನಿ. 

(ಆಧಾರ:  ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ ಡಾ.ಚೆನ್ನವೀರ ಕಣವಿ ಅವರ ಕುರಿತ ಬರಹ)

Chennaveera Kanavi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ