ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ವೀರಣ್ಣ


 ಸಿ. ವೀರಣ್ಣ


ಡಾ. ಸಿ. ವೀರಣ್ಣ ಸಾಮಾಜಿಕ ಚಿಂತಕರಾಗಿ, ಜನಪರ ನಿಲುವಿನ ಲೇಖಕರಾಗಿ, ಸಾಹಿತ್ಯ ಚರಿತ್ರಕಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರಾಗಿದ್ದಾರೆ.
 
ವೀರಣ್ಣ  1942ರ ಜೂನ್ 15ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ಜನಿಸಿದರು.  ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ತಾಲ್ಲೂಕಿನಲ್ಲಿ ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದರು. ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿಯ (1967) ಜೊತೆ ಐಚ್ಛಿಕ ಕನ್ನಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೇ   ಅತಿಹೆಚ್ಚು ಅಂಕ ಗಳಿಸಿ "ಪ್ರೊ.ಎ.ಆರ್. ಕೃಷ್ಣಶಾಸ್ತ್ರಿ ಸ್ಮಾರಕ ಸುವರ್ಣ ಪದಕ" ಪಡೆದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು (1969). ವಿದ್ಯಾರ್ಥಿಜೀವನದ ಉದ್ದಕ್ಕೂ "ಅಜೇಯ ವಾಕ್ಪಟು" ಎಂಬ ಪ್ರಶಂಸೆ ಗಳಿಸಿ ಶಾಲಾಕಾಲೇಜುಗಳ ಚರ್ಚಾಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳು, ಪಾರಿತೋಷಕಗಳನ್ನು ಗಳಿಸಿದ್ದರು.
 
ವೀರಣ್ಣ ಅವರು ಮೊದಲು ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ಎರಡು ವರ್ಷಗಳ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ತಮ್ಮ ನೆಚ್ಚಿನ ಗುರುಗಳಾದ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನ ಸಹಾಯಕರಾಗಿ (1971) ನೇಮಕಗೊಂಡರು. ಮುಂದೆ ಅಲ್ಲೇ ಕನ್ನಡ ಅಧ್ಯಾಪಕರೂ ಆಗಿ ಎಂ.ಎ. ವಿದ್ಯಾರ್ಥಿಗಳಿಗೆ ಬೋಧನೆ ಮುಂದುವರೆಸಿದರು. ವೀರಣ್ಣ ಅವರು  ಡಾ. ಹಂಪ ನಾಗರಾಜಯ್ಯ ಅವರ ಮಾರ್ಗದರ್ಶನದಲ್ಲಿ "ಕನ್ನಡ ಕಾವ್ಯ ಕಂಡ ಹೆಣ್ಣು" ಎಂಬ ಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು. ನಂತರ ಸಹಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕರಾದ ಅವರ ಮೂರುದಶಕಗಳ ಅಧ್ಯಾಪನದಲ್ಲಿ, ಅವರ ಸಿರಿಕಂಠದಲ್ಲಿ ಹಳಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನವನ್ನು ಕೇಳಿರುವ ಹಲವಾರು ವರ್ಷಗಳ ವಿದ್ಯಾರ್ಥಿಗಳು "ಸಿ. ವೀರಣ್ಣ ಸರ್ ಪಾಠವನ್ನು ಎಂದೂ ಮರೆಯುವಂತಿಲ್ಲ" ಎಂದು
ನೆನಪಿಸಿಕೊಳ್ಳುತ್ತಾರೆ. ‘ಕನ್ನಡ ಅಧ್ಯಯನ ಕೇಂದ್ರ'ದ ನಿರ್ದೇಶಕರೂ ಆಗಿದ್ದ ವೀರಣ್ಣ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಮತ್ತು ಮುದ್ರಣಾಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
 
ವೀರಣ್ಣ ಅವರ ಸಾಹಿತ್ಯಕೃಷಿಯು ಸಾಹಿತ್ಯ ಚರಿತ್ರೆ, ಸಂಶೋಧನೆ, ನಾಟಕ, ವಿಮರ್ಶೆ, ಕಾವ್ಯ ಪ್ರಕಾರಗಳನ್ನು ಒಳಗೊಂಡಿದೆ. ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಬೆಳೆದ ಎಲ್ಲ ವೈಚಾರಿಕ ಚಳವಳಿಗಳ ಆಶಯಗಳೊಂದಿಗೆ ವೀರಣ್ಣ ಅವರು ಗುರುತಿಸಿಕೊಂಡರು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಆದಾಗ ಅದನ್ನು ವಿರೋಧಿಸಿ "ಕಟ್ಟೆಮನೆ ಲಚ್ಮಕ್ಕನ ಪುರಾಣ" ಎಂಬ ಮಾರ್ಮಿಕ ಖಂಡಕಾವ್ಯವನ್ನು ಬರೆದರು. 
 
ತುರ್ತು ಪರಿಸ್ಥಿತಿಯ ಸಂದರ್ಭದಲ್ಲೇ ಪ್ರಕಟವಾದ ವೀರಣ್ಣ ಅವರ ಕವಿತಾ ಸಂಕಲನ "ಮೂಡಲ ದನಿ" (1976) ಸರ್ವಾಧಿಕಾರವನ್ನು ವಿರೋಧಿಸುವ ಕವನಗಳನ್ನು ಒಳಗೊಂಡಿದೆ. ವೀರಣ್ಣ ಅವರು ಆ ಸಮಯದಲ್ಲೇ ಆರಂಭವಾದ "ಸಮುದಾಯ" ರಂಗ ಸಂಘಟನೆ ಮತ್ತು ಚಳವಳಿಯ ಜೊತೆಗೂ ಸೇರಿದರು. "ಸಮುದಾಯ" ತನ್ನ ಮೊದಲ ಪ್ರಯೋಗವಾಗಿ ಪ್ರಸನ್ನ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದ "ಹುತ್ತವ ಬಡಿದರೆ" (ರಚನೆ: ಕೆ.ವಿ. ನಾರಾಯಣ) ನಾಟಕಕ್ಕೆ, ಸರ್ವಾಧಿಕಾರವನ್ನು ಪ್ರಶ್ನಿಸುವ ಕೆಲವು ಹಾಡುಗಳನ್ನು ಬರೆದರು. (ಬಿ.ವಿ. ಕಾರಂತರು ಸಂಗೀತ ನೀಡಿದ್ದ ಅವು ಈಗಲೂ ಜನಪ್ರಿಯ ರಂಗಗೀತೆಗಳಾಗಿ ಉಳಿದಿವೆ). ಅಲ್ಲದೆ ಈ ನಾಟಕದಲ್ಲಿ ವೀರಣ್ಣ ಸೂತ್ರಧಾರನಾಗಿ ಪಾತ್ರ ವಹಿಸಿದರು. "ಸಮುದಾಯ"ದ ಎರಡನೇ ರಂಗ ಪ್ರಯತ್ನಕ್ಕೆ ಬರ್ಟೋಲ್ಟ್ ಬ್ರೆಕ್ಟ್ ನ "ತಾಯಿ" ನಾಟಕವನ್ನು (ಅದರ ಪ್ರಥಮ ಪ್ರಯೋಗ ಮೇ 18, 1976) ವೀರಣ್ಣ  ಅನುವಾದ ಮಾಡಿಕೊಟ್ಟರು. ಮುಂದೆ 1978ರಲ್ಲಿ ಅದು ಪುಸ್ತಕ ರೂಪದಲ್ಲಿ ಪ್ರಕಟವಾಯಿತು. 1979ರಲ್ಲಿ ಆರಂಭವಾದ ಬಂಡಾಯ ಸಾಹಿತ್ಯ ಚಳವಳಿಯ ವೈಚಾರಿಕ ಆಶಯಗಳ ಜೊತೆ ವೀರಣ್ಣ ಅವರು ಸಕ್ರಿಯವಾಗಿ ಗುರುತಿಸಿಕೊಂಡರು.  
 
ಹೊಸ ರೀತಿಯ ಶಿಶುಗೀತೆಗಳ ಸಂಗ್ರಹವಾದ ವೀರಣ್ಣ ಅವರ "ಮುದ್ದುಮರಿ ಮುದ್ದುಗೆ" ಮತ್ತು ಮಕ್ಕಳ ನಾಟಕ "ನೆಲಮುಟ್ಟಿದ ಹೊಟ್ಟೆಪ್ಪ" (1979) ಮಕ್ಕಳಿಗೆ ಹೊಸ ಸಾಮಾಜಿಕ ವಿಷಯಗಳನ್ನು ತಿಳಿಸಿದವು. 1983ರಲ್ಲಿ ಪ್ರಕಟವಾದ ಅವರ "ಮಾರ್ಕ್ಸ್ ವಾದ, ತತ್ವಶಾಸ್ತ್ರ  ಮತ್ತು ಸಾಹಿತ್ಯ" ಮತ್ತು "ಸಾಹಿತ್ಯ ಮತ್ತು ಸಮುದಾಯ" ಗಂಭೀರ ಅಧ್ಯಯನಗಳಾಗಿ ಮಾನ್ಯವಾಗಿವೆ.
 
ಗ್ರಾಮೀಣ ಪ್ರದೇಶದಲ್ಲಿ ಬೆಳೆದ ವೀರಣ್ಣ ಅವರಿಗೆ ಜನಪದಹಾಡು, ಕಥೆ ಮತ್ತು ಆರಾಧನೆಗಳ ಪರಿಚಯ ಚೆನ್ನಾಗಿತ್ತು. ಜಾನಪದವನ್ನು ಎಂ.ಎ. ತರಗತಿಗೆ ಬೋಧಿಸುತ್ತಿದ್ದ ಅವರು, ಹಳ್ಳಿಯ ಜನಪದ ಹಾಡುಗಾರರಿಂದ ಅನೇಕ ಹಾಡುಗಳನ್ನು ಸಂಗ್ರಹಿಸಿ ಧ್ವನಿಮುದ್ರಣ ಮಾಡಿಕೊಂಡರು. ವೀರಣ್ಣನವರು, ತಮ್ಮ ಹಳ್ಳಿ ಹಣಬೆಯಲ್ಲಿ ಬಾಲ್ಯದಿಂದ ಕೇಳಿದ್ದ ಅದ್ಭುತ ಜನಪದ ಕಥೆಗಾರ ಮುನಿಯಪ್ಪ ಅವರೊಬ್ಬರಿಂದಲೇ ಇಪ್ಪತ್ತೆರಡು ಕಥೆಗಳನ್ನು ಸಂಗ್ರಹಿಸಿದರು. "ಒಬ್ಬನೇ ಹೇಳಿದ ಇಪ್ಪತ್ತೆರಡು ಜನಪದ ಕಥೆಗಳು" ಸಂಕಲನ (೧೯೭೪) ಆ ದೃಷ್ಟಿಯಿಂದ ಮತ್ತು ಕಥೆಗಾರನ ವಿಸ್ತೃತ ಸಂದರ್ಶನದಿಂದ ಕನ್ನಡ ಜಾನಪದದಲ್ಲಿ ವಿಶಿಷ್ಟ ಸಂಗ್ರಹವೆನಿಸಿತು. ಬೆಂಗಳೂರು ದೂರದರ್ಶನ ಪ್ರಸಾರ ಮಾಡಿದ "ಸಿರಿಗಂಧ" ಜಾನಪದ ಧಾರಾವಾಹಿಯಲ್ಲಿ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಮೂವತ್ತಕ್ಕೂ ಹೆಚ್ಚು ವಾರಗಳ ಎಪಿಸೋಡ್ಗಳಿಗೆ ವೀರಣ್ಣ ಸಾಹಿತ್ಯ ರಚಿಸಿಕೊಟ್ಟರು. "ಸಿರಿಗಂಧ" ಜಾನಪದ ಧಾರಾವಾಹಿಗೆ ಅವರು ಬರೆದ ಶೀರ್ಷಿಕೆ ಗೀತೆ ಬಹಳ ಜನಪ್ರಿಯವಾಗಿದ್ದು ಈಗಲೂ ಗಾಯಕರಿಗೆ ಪ್ರಿಯವಾಗಿದೆ.
 
ವಚನ ಸಾಹಿತ್ಯವನ್ನು ವಿಭಿನ್ನ ನಿಟ್ಟಿನಲ್ಲಿ ಮೂಡಿಸಿದ ವೀರಣ್ಣನವರ "ಹನ್ನೆರಡನೇ ಶತಮಾನದ ಕಾಯಕಜೀವಿಗಳ ಚಳವಳಿ" (1980) ಕೃತಿ ವಚನ ಸಾಹಿತ್ಯ ಕುರಿತ ನೂತನ ವೈಚಾರಿಕ ವಿಶ್ಲೇಷಣೆಗೆ ದಾರಿ ಮಾಡಿತು. ಈ ಪುಸ್ತಕ ಹಿಂದಿ ಭಾಷೆಗೂ ಅನುವಾದಗೊಂಡಿದೆ. ವೀರಣ್ಣ ಅವರು ಸಂಪಾದಿಸಿರುವ "ಬಸವಣ್ಣನ ವಚನಗಳು" (2009) ಪುಸ್ತಕದಲ್ಲಿ ಆಸಕ್ತ ಓದುಗರಿಗಾಗಿ ಆಯ್ದ ಮುಖ್ಯ ವಚನಗಳ ಸಾಮಾಜಿಕ ವ್ಯಾಖ್ಯಾನವಿದೆ. ವೀರಣ್ಣನವರು ಸಂಪಾದಿಸಿದ "ಪರ್ಯಾಯ ಸಂಸ್ಕೃತಿ ವಚನ ಸಂಪುಟ"ವನ್ನು 'ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು' ಪ್ರಕಟಿಸಿದೆ (2013). ನಂತರ ವೀರಣ್ಣ ಅವರು ಮಾಡಿರುವ ಕಾಯಕಜೀವಿಗಳ ಚಳವಳಿಯ ಅಧ್ಯಯನದ ಮೊತ್ತವಾಗಿ ಪ್ರಕಟವಾಗಿರುವ "ಕಾಯಕಜೀವಿಗಳ ಪರ್ಯಾಯ ಸಂಸ್ಕೃತಿ" ಪುಸ್ತಕ (2014) ವಿದ್ವಾಂಸರ ಗಮನ ಸೆಳೆದಿದೆ.
 
ಪ್ರತಿಭಟನೆಯನ್ನೇ ಕಾವ್ಯವಸ್ತು ಮತ್ತು ಆಶಯವನ್ನು ಪ್ರಧಾನವಾಗಿ ಇಟ್ಟುಕೊಂಡ "ಕನ್ನಡ ಪ್ರತಿಭಟನೆ ಕಾವ್ಯ" ಎಂಬ ಅಪರೂಪದ ಕವಿತೆಗಳ ಸಂಕಲನ ವೀರಣ್ಣ ಅವರ ಸಂಪಾದಕತ್ವದಲ್ಲಿ ರೂಪುಗೊಂಡು ಹಂಪನಾ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡಿದೆ.   
 
ಸಾಹಿತ್ಯ ಚರಿತ್ರಕಾರರಾಗಿ ಡಾ. ಸಿ. ವೀರಣ್ಣ ಅವರು ಸಾವಿರ ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಆಯಾಕಾಲ ಘಟ್ಟದ  ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ  ವಿಶ್ಲೇಷಿಸಿ ಬರೆದಿರುವ "ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ" ಗ್ರಂಥಮಾಲಿಕೆ ಯೋಜನೆಯ ಪ್ರಥಮ,  ದ್ವಿತೀಯ ಮತ್ತು ತೃತೀಯ ಸಂಪುಟಗಳು ವಿದ್ವತ್ ಲೋಕಕ್ಕೆ ಸುಪರಿಚಿತವಾಗಿವೆ. ಈ 'ಕನ್ನಡ ಸಾಹಿತ್ಯಚರಿತ್ರೆ ಯೋಜನೆ'ಯ 'ಪ್ರಾಚೀನ ಸಾಹಿತ್ಯ' ಕುರಿತ ಪ್ರಥಮ ಸಂಪುಟವನ್ನು (1986) ಬಿಡುಗಡೆ ಮಾಡಿದ್ದ ಸಾಹಿತ್ಯಚರಿತ್ರಕಾರ ಡಾ. ರಂ.ಶ್ರೀ. ಮುಗಳಿ ತಮ್ಮ ಶಿಷ್ಯನ ಬರವಣಿಗೆಯನ್ನು ಕೊಂಡಾಡಿದ್ದರು. ಡಾ. ಹಾ.ಮಾ. ನಾಯಕರು ಈ ಸಾಹಿತ್ಯ ಚರಿತ್ರೆಯ ಬರವಣಿಗೆ "ಹೊಸಹಾದಿ, ಹೊಸ ಹೊರಡುವಿಕೆ" ಎಂದು ಗುರುತಿಸಿದ್ದರು.
 
'ಮಧ್ಯಕಾಲೀನ ಸಾಹಿತ್ಯ' ಕುರಿತ ದ್ವಿತೀಯ ಸಂಪುಟವನ್ನು(2011) ಬಿಡುಗಡೆ ಮಾಡಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಸಾಹಿತ್ಯದ ಅಧ್ಯಯನಕ್ಕೆ ಇಂಥ ಚಿಂತನೆಯ ಮಾದರಿ ಅವಶ್ಯಕ ಎಂದು ಹೇಳಿದ್ದರು. ಕ್ರಿ.ಶ. 850 ರಿಂದ ಕ್ರಿ.ಶ. 1850 ರವರೆಗಿನ ಒಂದು ಸಾವಿರ ವರ್ಷಗಳ ಕನ್ನಡ ಸಾಹಿತ್ಯವನ್ನು ಸಮುದಾಯ ಸಂಸ್ಕೃತಿಯ ನೆಲೆಯಲ್ಲಿ ಈ ಗ್ರಂಥಗಳು ವ್ಯಾಖ್ಯಾನಿಸುತ್ತವೆ. ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿರುವ ಈ ಎರಡು ಸಂಪುಟಗಳು ಏಳು ಮುದ್ರಣಗಳನ್ನು ಕಂಡಿದ್ದು ವಿದ್ವಾಂಸರು ಮತ್ತು ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಮೂರನೆಯ ಸಂಪುಟವನ್ನು ಕಳೆದ ವರ್ಷ ಡಾ. ವೀರಣ್ಣ ರಾಜೂರ ಅವರು ಬಿಡುಗಡೆ ಮಾಡಿ, ಅಧ್ಯಯನದ ವಿಸ್ತಾರವನ್ನು ಗುರುತಿಸಿ ಪ್ರಶಂಸೆ ಮಾಡಿದರು. ಎಲ್ಲ ಕಾಲಾವಧಿಯ ಅನೇಕ ಅಲಭ್ಯ ಕೃತಿಗಳ ಶೋಧನೆ, ಎಲ್ಲ ಮುದ್ರಿತ ಕೃತಿಗಳ ಸಂಗ್ರಹ, ಪ್ರತಿಯೊಂದು ಕೃತಿಯ ವಿವರವಾದ ಅಧ್ಯಯನ, ನಂತರ ವ್ಯಾಖ್ಯಾನ, ವಿಶ್ಲೇಷಣೆ - ಹೀಗೆ ಅಪಾರ ಶ್ರಮ ಬೇಡುವ ಈ ಯೋಜನೆಯ ನಾಲ್ಕು, ಐದು, ಆರು ಮತ್ತು ಏಳನೆಯ ಸಂಪುಟಗಳ ಬರವಣಿಗೆ ಮುಗಿದಿದ್ದು ಮುದ್ರಣಕ್ಕೆ ಸಿದ್ಧವಾಗುತ್ತಿವೆ.  
 
ಸಾವಿರ ವರ್ಷಗಳ ಕನ್ನಡ ಸಾಹಿತ್ಯವನ್ನು ಲಿಂಗಾಧಾರಿತ ಸಾಮಾಜಿಕ ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನವೇ ವೀರಣ್ಣ ಅವರ ಪಿಎಚ್.ಡಿ. ಸಂಪ್ರಬಂಧದ ಪ್ರಕಟಣೆ "ಕನ್ನಡ ಕಾವ್ಯ ಕಂಡ ಹೆಣ್ಣು" (1999). ದಮನಿಸುವ ಶಕ್ತಿಗಳಿಗೆ ಶರಣಾದರೂ ಹೆಣ್ಣಿನ ಚೈತನ್ಯದ ಮೂಲಸ್ರೋತ ಬಹುಮುಖಿ ಆಗಿರುವುದನ್ನೂ ಅವಳ ಪ್ರತಿರೋಧದ ಸ್ವರೂಪವನ್ನೂ ಇಲ್ಲಿ ಗುರುತಿಸಲಾಗಿದೆ.
 
ಮಹಾಭಾರತ ಮಹಾಕಾವ್ಯ ಕೇವಲ ಒಂದು ಕಾವ್ಯವಲ್ಲ, ಶತಮಾನಗಳ ಜನಮಾನಸದ ಸಮಷ್ಟಿ ಅಭಿವ್ಯಕ್ತಿ ಮತ್ತು ನಾಡಿನ ವ್ಯಕ್ತಿತ್ವ ಎಂದು ಭಾವಿಸಿರುವ ವೀರಣ್ಣ ಅವರು, ಮಹಾಭಾರತ ಕುರಿತು ನಡೆಸಿರುವ ಹೊಸ ದೃಷ್ಟಿಕೋನದ ಅಧ್ಯಯನವೇ "ಮಹಾಭಾರತ ಮಂಥನ" (2006).
 
ವೀರಣ್ಣನವರು  ಅನುವಾದಿಸಿರುವ ಬ್ರೆಕ್ಟ್'ನ "ತಾಯಿ" ನಾಟಕ ಹಲವು ರಂಗಪ್ರಯೋಗಗಳನ್ನು ಕಂಡು ಅಪೂರ್ವ ಯಶಸ್ಸು ಗಳಿಸಿದ್ದಲ್ಲದೆ  ಪಠ್ಯಪುಸ್ತಕವೂ ಆಗಿತ್ತು. ವಿದ್ಯೆ, ಶಿಕ್ಷಣ ಮತ್ತು ಜಾತಿವ್ಯವಸ್ಥೆಯ ಸಂಕೀರ್ಣತೆಯನ್ನು ಶೋಧಿಸುವ "ಕಪಿಲ" ನಾಟಕ (2005) ರಂಗಪ್ರಯೋಗಗಳಿಂದ ಮನ್ನಣೆ ಗಳಿಸಿರುವುದಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ತರಗತಿಗೆ ಪಠ್ಯ ಪುಸ್ತಕವಾಗಿತ್ತು.  ಇವಲ್ಲದೆ, "ದಳವಾಯಿ ಎಚ್ಚಮನಾಯಕ", "ನಿರಂತರ ಭಾರತ", "ಮೃತ್ಯುಂಜಯ" (ನಿರಂಜನರ ಕಾದಂಬರಿ ಆಧಾರಿತ), "ಸಾವಿರದವಳು", "ಜನತೆಯ ರಾಜ ಶಾಹೂ", "ಮಾನವತಾವಾದಿ ಗೌತಮಬುದ್ಧ" , “ಭೈರವಿ ಕೆಂಪೇಗೌಡ" (ಎಚ್.ಎಲ್. ನಾಗೇಗೌಡರ ಕಾದಂಬರಿ ಆಧಾರಿತ ), "ರುದ್ರ ಭಾರತ" ನಾಟಕಗಳನ್ನು ವೀರಣ್ಣ ಅವರು ಬರೆದಿದ್ದಾರೆ.  ಇವುಗಳಲ್ಲಿ "ಜನತೆಯ ರಾಜ ಶಾಹೂ" ನಾಟಕ ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಿಗೂ ಅನುವಾದಗೊಂಡಿದೆ. ಹತ್ತು ನಾಟಕಗಳ ಸಮಗ್ರ ಸಂಕಲನವೂ ಸದ್ಯದಲ್ಲೇ ಪ್ರಕಟವಾಗಲಿದೆ.
 
ತಮಿಳಿನ ಖ್ಯಾತ ಕವಿ ತಿರುಕ್ಕುರಳ್ ಚಿಂತನೆ ತಿಳಿಸುವ "ತಿರುಕ್ಕುರಳ್ ಸಾರ", ತೆಲುಗಿನ ಪ್ರಸಿದ್ಧ ಕವಿ ವೇಮನನ ಚಿಂತನೆ ತಿಳಿಸುವ "ವೇಮನವಾಣಿ", "ಶೈವ ಪರಂಪರೆಯ ಕವಿ ರಾಘವಾಂಕ",  "ಬುದ್ಧ, ಬಸವ, ಅಂಬೇಡ್ಕರ್- ಸಮಾನಚಿಂತನೆ", "ದೇವಚಂದ್ರನ ರಾಜಾವಳಿ ಕಥಾಸಾರದ ಜನಪದ ಕಥೆಗಳು" ಇವು ವೀರಣ್ಣ ಅವರ ಇನ್ನಿತರ ಕೃತಿಗಳಲ್ಲಿ ಸೇರಿವೆ.
 
ಪ್ರೊ. ಎನ್ ಬಸವಾರಾಧ್ಯ ಅವರು ಪರಿಷತ್ತಿನ ಅಧ್ಯಕ್ಷರಾದಾಗ ಡಾ. ವೀರಣ್ಣ ಅವರು ಗೌರವ ಕಾರ್ಯದರ್ಶಿಗಳಾಗಿ ನೇಮಕಗೊಂಡು ಅನೇಕ ಯೋಜನೆಗಳ ಯಶಸ್ವೀ ನಿರ್ವಹಣೆಗೆ ಕಾರಣರಾದರು. ನಂತರ 2008ರಲ್ಲಿ ವೀರಣ್ಣ ಅವರು ಸಮಾನ ಮನಸ್ಕರ ಜೊತೆಗೂಡಿ "ಕರ್ನಾಟಕ ಸಾಹಿತ್ಯ ಪರಿಷತ್ತು" ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ಹಲವಾರು ಪರ್ಯಾಯ ಸಂಸ್ಕೃತಿ ಶಿಬಿರಗಳ ಆಯೋಜನೆ, ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳ ಸಂಘಟನೆ, ವಿಚಾರ ಸಂಕಿರಣಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು, ಚಿಂತನ ಮಂಥನಗಳು ಮುಂತಾದುವನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ನಡೆಸುತ್ತಿದೆ. 

ಡಾ. ಸಿ. ವೀರಣ್ಣ ಅವರು 2004ರಲ್ಲಿ ನಡೆದ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷತೆ ವಹಿಸಿದ್ದರು. ನಂತರ 2018 ರಲ್ಲಿ ಹೊಸಕೋಟೆಯಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮತ್ತು 2021ರಲ್ಲಿ ಹೆಬ್ಬಾಳದಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಗೌರವವನ್ನು ಪಡೆದಿದ್ದಾರೆ. 
 
ವೀರಣ್ಣನವರಿಗೆ ಅವರ ಸಾಹಿತ್ಯ ಕೊಡುಗೆಗಳಿಗಾಗಿ 2023 ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ. ಅವರ "ಕನ್ನಡ ಸಾಹಿತ್ಯ - ಚಾರಿತ್ರಿಕ ಬೆಳವಣಿಗೆ"ಯ ಮೊದಲ ಸಂಪುಟಕ್ಕೆ ಮೈಸೂರು ವಿಶ್ವವಿದ್ಯಾನಿಲಯದ "ತೀನಂಶ್ರೀ ಪುಸ್ತಕ ಬಹುಮಾನ", "ಕನ್ನಡ ಸಾಹಿತ್ಯ - ಚಾರಿತ್ರಿಕ ಬೆಳವಣಿಗೆ" ಯ ಎರಡನೇ ಸಂಪುಟಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ (2012), ರಂಗಭೂಮಿಗೆ ನೀಡಿದ ಕೊಡುಗೆಗಳಿಗಾಗಿ  ಕರ್ನಾಟಕ ನಾಟಕ ಅಕಾಡೆಮಿಯ 'ರಂಗಗೌರವ', `ಗೊರುಚ ಶರಣಸಾಹಿತ್ಯ ಪ್ರಶಸ್ತಿ’, 'ಮೈಕೋ ಬಾಷ್ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
 
ಸಾಹಿತ್ಯದಂತೆ ಕೃಷಿಯಲ್ಲೂ ಅಪಾರ ಆಸಕ್ತಿ ಹೊಂದಿರುವ ವೀರಣ್ಣ ಅವರು ಬೆಂಗಳೂರಿನ ಸಮೀಪ ಇರುವ ತಮ್ಮ`ಸಿರಿಗಂಧವನ’ ಫಾರಂನಲ್ಲಿ  ದಶಕಗಳಿಂದ ವಿಭಿನ್ನ ಕೃಷಿ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಮಳೆ ನೀರು ಸಂಗ್ರಹಿಸಲು ಒಂದು ಕೆರೆ ನಿರ್ಮಿಸಿರುವ ಅವರು, ಮೊದಲಿನ ಕೊಳವೆ ಬಾವಿಗಳಿಂದ ನೀರು ಎತ್ತಲು ಸೌರಶಕ್ತಿ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. ತೆಂಗು, ಅಡಿಕೆ, ಕಾಫಿ, ಏಲಕ್ಕಿ, ಮೆಣಸು, ಮಾವು, ಬಾಳೆ, ನೇರಳೆ, ಸೀಬೆ, ನಿಂಬೆ, ಡ್ರ್ಯಾಗನ್ಫ್ರೂಟ್, ಹೊಂಗೆ, ತೇಗ, ಮಹಾಗನಿ ಮತ್ತು ಇನ್ನೂ ಹಲವಾರು ಸೇರಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ವೈವಿಧ್ಯಮಯ ಗಿಡ ಮರ ಬಳ್ಳಿಗಳನ್ನು ಬೆಳೆಸಿ ವೀರಣ್ಣ ಅವರು ಆ ಪ್ರದೇಶದಲ್ಲಿ ಒಂದು 'ಹಸಿರುದ್ವೀಪ’ ವನ್ನೇ ನಿರ್ಮಿಸಿದ್ದಾರೆ.    
 
ನಾಡಿನ ಹಿರಿಯ ವಿದ್ವಾಂಸರೂ, ನಮ್ಮೆಲ್ಲರನ್ನೂ ಅಕ್ಕರೆಯಿಂದ ಕಾಣುವ ಪೂಜ್ಯರೂ ಆದ ಡಾ. ಸಿ. ವೀರಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
 
ಕೃತಜ್ಞತೆ: Poornima Rajarao🌷🙏

On the birthday of great scholar and writer Prof. C. Veeranna Sir🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!