ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಲಾ ಸೇನ್


 ಮಾಲಾ ಸೇನ್


ಮಾಲಾ ಸೇನ್ ಬರಹಗಾರ್ತಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು. ಅವರು ಬ್ರಿಟಿಷ್ ಏಷ್ಯನ್ ಮತ್ತು ಬ್ರಿಟಿಷ್ ಬ್ಲ್ಯಾಕ್ ಪ್ಯಾಂಥರ್ಸ್ ಚಳುವಳಿಗಳಲ್ಲಿ ಹೆಸರಾಗಿದ್ದರು.  ಅವರ ಫೂಲನ್ ದೇವಿ ಜೀವನಧಾರಿತ ‘ಬ್ಯಾಂಡಿಟ್ ಕ್ವೀನ್' ಕೃತಿ ಪ್ರಸಿದ್ಧಗೊಂಡಿತ್ತು.

ಮಾಲಾ ಸೇನ್ ಉತ್ತರಾ ಖಾಂಡದ ಮುಸ್ಸೂರಿಯಲ್ಲಿ 1947ರ ಜೂನ್ 3ರಂದು ಜನಿಸಿದರು. ತಂದೆ ಲೆಫ್ಟಿನೆಂಟ್ ಜನರಲ್ ಲಿಯೋನೆಲ್ ಪ್ರೋತೀಪ್ ಸೇನ್. ತಾಯಿ ಕಲ್ಯಾಣಿ ಗುಪ್ತಾ. 1953ರಲ್ಲಿ ಅಪ್ಪ ಅಮ್ಮನ ವಿಚ್ಛೇದನದ ನಂತರ ತಂದೆಯ ಬಳಿ ಬೆಳೆದರು. ಡೆಹ್ರಾಡೂನಿನ ಶಾಲೆಯಲ್ಲಿ ಓದಿದ ನಂತರ, ಮುಂಬೈನಲ್ಲಿ ಗೃಹವಿಜ್ಞಾನವನ್ನು ಅಧ್ಯಯನ ಮಾಡಿದರು. 1965ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಗಳಿಸಿದ ಫಾರೂಕ್ ಧೋಂಡಿ ಜೊತೆಗೆ ಇಂಗ್ಲೆಂಡಿಗೆ ಹೋದರು. ಮುಂದೆ ಈ ಜೋಡಿ ವಿವಾಹವಾಗಿ, ವಿಚ್ಛೇದನಗೊಂಡರೂ ಗೆಳೆತನದಿಂದ ಕೆಲಸಮಾಡಿದರು. 

ಮಾಲಾ ಸೇನ್ ಇಂಗ್ಲೆಂಡಿನಲ್ಲಿ ಕೆಲಸ ಮಾಡುತ್ತಾ ಲೀಸೆಸ್ಟರ್‌ನಲ್ಲಿರುವ ಭಾರತೀಯ ಕಾರ್ಖಾನೆಯ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದರು. 'ರೇಸ್ ಟುಡೆ' ಪತ್ರಿಕೆಯಲ್ಲಿ ಬರೆಯುತ್ತಾ, ಲಂಡನ್ನಿನಲ್ಲಿರುವ  ಬಾಂಗ್ಲಾದೇಶಿಗರು ಬೆಡ್ ಸ್ಪೇಸ್ ವಸತಿ ನಿಲಯಗಳಲ್ಲಿ ವಾಸಿಸುತ್ತ, ಹೇಗೆ ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾರೆಂದು ವರದಿ ಮಾಡಿದರು. ಅವಿವಾಹಿತರಿಗೆ ಮನೆ ಪಡೆಯಲು ಇದ್ದ ತೊಡಕು ನಿವಾರಿಸಲು ಧೋಂಡಿ ಮತ್ತು ಇತರ ಕಾರ್ಯಕರ್ತರೊಂದಿಗೆ ಸೇರಿ 'ಬಂಗಾಳಿ ಹೌಸಿಂಗ್ ಆಕ್ಷನ್ ಗ್ರೂಪ್' ಸ್ಥಾಪಿಸಿದರು, ಇದರಿಂದ ಪೂರ್ವ ಲಂಡನ್ನಿನ ಬಾಂಗ್ಲಾದೇಶಿ ಸಮುದಾಯಕ್ಕೆ ಸುರಕ್ಷಿತವಾಗಿ ವಾಸಿಸುವ 'ಬ್ರಿಕ್ ಲೇನ್' ಸ್ಥಾಪನೆಗೊಂಡಿತು.  ಬ್ರಿಟಿಷ್ ಬ್ಲ್ಯಾಕ್ ಪ್ಯಾಂಥರ್ಸ್ ಚಳವಳಿಯ ಸಕ್ರಿಯ ಸದಸ್ಯರಾಗಿದ್ದ  ಇವರು ರೇಸ್ ಟುಡೆ ಕಲೆಕ್ಟಿವ್ ಸಂಘಟನೆಯ ಆರಂಭಿಕ ಸದಸ್ಯರೂ ಆಗಿದ್ದರು. 

ಮಾಲಾ ಸೇನ್ ಅವರು ಫೂಲನ್ ದೇವಿ ಕುರಿತಾಗಿ 11 ವರ್ಷಗಳ ಅವಧಿಯಲ್ಲಿ ನಡೆಸಿದ ಸಂಶೋಧನೆಯ ಮೇರೆಗೆ 'ಬ್ಯಾಂಡಿಟ್ ಕ್ವೀನ್'  ಕೃತಿ ಪ್ರಕಟಿಸಿದರು.  ಇದು ಚಲನಚಿತ್ರವೂ ಆಗಿದೆ. ಫೂಲನ್ ದೇವಿಯ ಜೀವನದ ಹಿನ್ನೆಲೆಯನ್ನು ಸಂಶೋಧಿಸುವ ಸಂದರ್ಭದಲ್ಲಿ, ಗ್ರಾಮೀಣ ಭಾರತದಲ್ಲಿ ಮಹಿಳೆಯರ ಮೇಲಾಗುವ ಹಿಂಸೆಗಳ ಕುರಿತಾದ "ಡೆತ್ ಬೈ ಫೈರ್: ಸತಿ, ಡೌರಿ ಡೆತ್ ಅಂಡ್ ಫೀಮೇಲ್ ಇನ್ಫ್ಯಾಂಟಿಸೈಡ್ ಇನ್ ಮಾಡ್ರನ್ ಇಂಡಿಯಾ" ಕೃತಿಯನ್ನು 2001ರಲ್ಲಿ ಪ್ರಕಟಿಸಿದರು.

ಮಾಲಾ ಸೇನ್  2011ರ ಮೇ 21ರಂದು ಮುಂಬೈನಲ್ಲಿ ನಿಧನರಾದರು.ಆ ಸಮಯದಲ್ಲಿ ಅವರು ಭಾರತದಲ್ಲಿ ಎಚ್ಐವಿ ಪೀಡಿತ ಮಹಿಳೆಯರ ಕುರಿತಾದ ಕೃತಿ ರಚಿಸುತ್ತಿದ್ದರು.

On the writer and activist Mala Sen

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ