ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಡಿ. ರಾನಡೆ


 ರಾಮಚಂದ್ರ ದತ್ತಾತ್ರೇಯ ರಾನಡೆ


ಆರ್. ಡಿ.‍ರಾನಡೆ ಅವರು ತತ್ವಜ್ಞಾನಿಗಳಾಗಿ ಪ್ರಸಿದ್ಧರು. ಇವರ ಪೂರ್ಣ ಹೆಸರು ರಾಮಚಂದ್ರ ದತ್ತಾತ್ರೇಯ ರಾನಡೆ. ತಮ್ಮ ನಿಕಟವರ್ತಿಗಳಲ್ಲಿ ಮತ್ತು ಶಿಷ್ಯವೃಂದದಲ್ಲಿ ಇವರು ಗುರುದೇವ ಎಂದು ಖ್ಯಾತರಾಗಿದ್ದರು. 

ಆರ್. ಡಿ.‍ರಾನಡೆ 1886ರ ಜುಲೈ 3ರಂದು ಜಮಖಂಡಿಯಲ್ಲಿ ಹುಟ್ಟಿದರು. ಕುಶಾಗ್ರಮತಿಗಳಾಗಿದ್ದ ಇವರು ಗಣಿತಶಾಸ್ತ್ರದಲ್ಲಿ ಬಿ.ಎ.(1907) ಮತ್ತು ತತ್ತ್ವಶಾಸ್ತ್ರದಲ್ಲಿ ಎಂ.ಎ.(1914) ಪದವಿ ಪಡೆದರು. ಇವರಿಗೆ ಗ್ರೀಕ್ ಹಾಗೂ ಸಂಸ್ಕೃತ ಭಾಷೆಗಳ ಮೇಲೆ ಅಸಾಧಾರಣ ಪ್ರಭುತ್ವವಿತ್ತು.

ರಾನಡೆ 1914-24ರ ಅವಧಿಯಲ್ಲಿ ಡೆಕ್ಕನ್ ಎಜುಕೇಷನ್ ಸಂಸ್ಥೆಯ ಫರ್ಗ್ಯೂಸನ್ ಹಾಗೂ ವಿಲ್ಲಿಂಗ್ಡನ್ ವಿದ್ಯಾಲಯಗಳಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಅನಂತರ ತೀವ್ರ ಅನಾರೋಗ್ಯದ ಕಾರಣದಿಂದ ನೌಕರಿಯನ್ನು ಬಿಟ್ಟು ಬಿಜಾಪುರ ಜಿಲ್ಲೆಯ ನಿಂಬಾಳ ಎಂಬ ಹಳ್ಳಿಯಲ್ಲಿ ನೆಲೆಸಿದರು. ಮತ್ತೆ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ (1927-45) ಅದೇ ವಿಶ್ವವಿದ್ಯಾಲಯದ ಉಪಕುಲಪತಿಯಾದರು (1945-46). ಅಲಹಾಬಾದ್ ವಿಶ್ವವಿದ್ಯಾಲಯ ಇವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತು.

ರಾಮಚಂದ್ರ ದತ್ತಾತ್ರೇಯ ರಾನಡೆ ಅವರಿಗೆ ಆಧ್ಯಾತ್ಮದತ್ತ ಹೆಚ್ಚಿನ ಒಲವು. ಇದು ಇವರ ತಾಯಿ ಪಾರ್ವತಿದೇವಿ ಅವರಿಂದ ಬಂದ ಬಳುವಳಿಯಾಗಿತ್ತು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಇಂಚಗೇರಿಯ ಸಂಪ್ರದಾಯದ ಉಮದಿ ಭಾವುಸಾಹೇಬ ಎಂಬ ಗುರುಗಳಿಂದ ನಾಮದೀಕ್ಷೆಯನ್ನು ಪಡೆದು ನಿಷ್ಠೆಯಿಂದ ಸಾಧನೆಯನ್ನು ಮಾಡಿ ಆತ್ಮಸಾಕ್ಷಾತ್ಕಾರವನ್ನು ಪಡೆದರು. ರಾನಡೆ ಅವರ ತತ್ತ್ವದರ್ಶನ ಅದ್ವೈತ ಪರಂಪರೆಯದು. ಇವರ ದರ್ಶನವನ್ನು ಅನುಭಾವ ಮಾರ್ಗದ ಅದ್ವೈತ ಎಂದೂ, ಆನಂದವಾದ ಎಂದೂ, ಸಾಕ್ಷಾತ್ಕಾರವಾದ ಎಂದೂ ವಿಶ್ಲೇಷಿಸಲಾಗುತ್ತಿದೆ. ನೈತಿಕತೆ ಹಾಗೂ ನಾಮಸ್ಮರಣೆ ಇವು ಇವರ ಪ್ರಕಾರ ಸಾಕ್ಷಾತ್ಕಾರ ಮಾರ್ಗದಲ್ಲಿ ಮಹತ್ತ್ವದ ಅಂಗಗಳು. ರಾನಡೆಯವರ ಶಿಷ್ಯವೃಂದ ಅಪಾರ. ಜಾತಿ ಮತಗಳನ್ನು ಪರಿಗಣಿಸದೆ ಎಲ್ಲರನ್ನೂ ಸಮಾನ ಭಾವದಿಂದ ಕಾಣುತ್ತಿದ್ದ ಇವರು ಸಹಸ್ರಾರು ಜನರಿಗೆ ನಾಮದೀಕ್ಷೆಯನ್ನು ಕೊಟ್ಟಿದ್ದರು.

ಎ ಕನ್‍ಸ್ಟ್ರಕ್ಟಿವ್ ಸರ್ವೆ ಆಫ್ ಉಪನಿಷದಿಕ್ ಫಿಲಾಸಫಿ(1962), ಮಿಸ್ಟಿಸಿಸಂ ಇನ್ ಮಹಾರಾಷ್ಟ್ರ(1933), ಪಾಥ್ ವೇ ಟು ಗಾಡ್ ಇನ್ ಹಿಂದಿ ಲಿಟರೇಚರ್(1954), ದಿ ಭಗವದ್ಗೀತ ಅಸ್ ಎ ಫಿಲಾಸಫಿ ಆಫ್ ಗಾಡ್ ರಿಯಲೈಸೇಷನ್(1959), ಪಾಥ್ ವೇ ಟು ಗಾಡ್ ಇನ್ ಕನ್ನಡ ಲಿಟರೇಚರ್(1960), ವೇದಾಂತ ಅಸ್ ಎ ಕಲ್ಮಿನೇಷನ್ ಆಫ್ ಇಂಡಿಯನ್ ಫಿಲಾಸಫಿಕಲ್ ಥಾಟ್(1970) ಇವು ರಾಮಚಂದ್ರ ದತ್ತಾತ್ರೇಯ ರಾನಡೆ ಅವರ ಗ್ರಂಥಗಳು.

ರಾಮಚಂದ್ರ ದತ್ತಾತ್ರೇಯ ರಾನಡೆ ಅವರು 1957ರ  ಜೂನ್ 6ರಂದು ನಿಂಬಾಳದಲ್ಲಿ ನಿಧನರಾದರು. ಇವರ ಸಹಯೋಗದಿಂದ ನಿಂಬಾಳ ಒಂದು ಪವಿತ್ರಕ್ಷೇತ್ರವಾಗಿದ್ದು ಅನೇಕ ಆಧ್ಯಾತ್ಮಿಕ ಸಾಧಕರನ್ನು ಆಕರ್ಷಿಸುತ್ತಿದೆ.

Great  philosopher Dr R. D. Ranade 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ