ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ.ವಿ. ಸಿಂಧು


 ಪಿ.ವಿ. ಸಿಂಧು


ಪಿ. ವಿ. ಸಿಂಧು ಭಾರತೀಯರ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ. ಒಲಿಂಪಿಕ್ಸ್ , ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ ಪಂದ್ಯಾವಳಿ, 2019ರ ವಿಶ್ವಚಾಂಪಿನ್ಷಿಪ್ ಸೇರಿದಂತೆ ಅವರು ಇದುವರೆಗೆ 15 ವೃತ್ತಿ ಪಂದ್ಯಾವಳಿಗಳನ್ನು ಪ್ರಥಮ ಸ್ಥಾನದಲ್ಲಿ ಗೆದ್ದಿದ್ದಾರೆ. ಪ್ರಸಕ್ತ ವಿಶ್ವದಲ್ಲಿ 7ನೇ  ಅಗ್ರಶ್ರೇಣಿಯಲ್ಲಿದ್ದ ಅವರು 2017ರ ಏಪ್ರಿಲ್ 7ರಂದು ಎರಡನೆಯ ಸ್ಥಾನ ಗಳಿಸಿದ್ದರು. 

ಪುಸರ್ರ್ಲ ವೆಂಕಟ ಸಿಂಧು 1995ರ ಜುಲೈ 5ರಂದು ಹೈದರಾಬಾದ್‍ನಲ್ಲಿ ಜನಿಸಿದರು. ತಂದೆ ಪಿ.ವಿ. ರಮಣ.  ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ವಾಲಿಬಾಲ್ ಆಟಗಾರರಾಗಿ ಖ್ಯಾತರು. ತಂದೆ ಪಿ. ವಿ. ರಮಣ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಗಳಿಸಿದ್ದಾರೆ.‍ 2001ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪುಲ್ಲೇಲ ಗೋಪಿಚಂದ್ ಅವರ ಯಶಸ್ಸು ಮತ್ತು ಸ್ಫೂರ್ತಿ ಬಾಲಕಿ ಸಿಂಧು ಅವರಿಗೆ ಬ್ಯಾಡ್ಮಿಂಟನ್ ಆಟದತ್ತ ಒಲವು ಹರಿಸಿತು.

ಸಿಂಧು ತಮ್ಮ ಎಂಟನೆಯ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದರು. ಮೊದಲಿಗೆ ಅವರು ಸಿಕಂದರಾಬಾದ್ನಲ್ಲಿನ ಭಾರತೀಯ ರೈಲ್ವೆ ಇನ್ಸ್ಟಿಟ್ಯೂಟ್ ಆಫ್ ಸಿಗ್ನಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಸಂಸ್ಥೆಯ ಬ್ಯಾಡ್ಮಿಂಟನ್ ಕೋರ್ಟ್ಗಳಲ್ಲಿ ಮೆಹಬೂಬ್ ಅಲಿ ಅವರ ಮಾರ್ಗದರ್ಶನದೊಂದಿಗೆ ಕ್ರೀಡೆಯ ಮೂಲಭೂತ ಅಂಶಗಳನ್ನು ಕಲಿತರು. ನಂತರ ಪುಲ್ಲೇಲ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡಮಿಗೆ ಸೇರಿದರು. ಸಿಂಧು ವೃತ್ತಿಜೀವನದ ಬಗೆಗೆ 'ದಿ ಹಿಂದು' ಪತ್ರಿಕೆಯ ಸಂವಹನಕಾರರೊಬ್ಬರು, "ಸಿಂಧು ಅವರು ತನ್ನ ಮನೆಯಿಂದ 56 ಕಿಮೀ ದೂರ ಪ್ರಯಾಣ ಮಾಡಿ, ದೈನಂದಿನ ತರಬೇತಿ ಶಿಬಿರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ, ಅಗತ್ಯವಿರುವಷ್ಟೂ ಕಾರ್ಯಕ್ಷಮತೆ ತೋರುವುದು ಮತ್ತು ಶಿಸ್ತುಬದ್ಧವಾದ ಅವರ ಜೀವನವು ಅವರೊಬ್ಬ ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನುವುದನ್ನು ಬಿಂಬಿಸುತ್ತದೆ " ಎಂದು ಹೇಳಿದ್ದರು.  ಈ ಹೇಳಿಕೆಯನ್ನು ಅನುಮೋದಿಸುವ ಗೋಪಿಚಂದ್ ಅವರು "ಸಿಂಧು ಆಟದಲ್ಲಿನ ಅತ್ಯಂತ ಗಮನಾರ್ಹ ಲಕ್ಷಣವೆಂದರೆ, ಆಕೆಯ ಧನಾತ್ಮಕ ವರ್ತನೆ ಮತ್ತು ಕಡೆಯವರೆವಿಗೂ ಹೋರಾಡುವ ಮನೋಭಾವ " ಎನ್ನುತ್ತಾರೆ. 

ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿದ ನಂತರ, ಸಿಂಧು ಹಲವಾರು ಪ್ರಶಸ್ತಿಗಳನ್ನು ಗೆದ್ದರು. 10 ವರ್ಷಗಳ ಒಳಗಿನವರ ವಿಭಾಗದಲ್ಲಿ 5ನೇ ಸರ್ವೋ ಅಖಿಲ ಭಾರತ ಶ್ರೇಣಿಯ ಚಾಂಪಿಯನ್ ಶಿಪ್ ಡಬಲ್ಸ್ ವಿಭಾಗದಲ್ಲಿ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. 13 ವರ್ಷಗಳ ಒಳಗಿನವರ ವಿಭಾಗದಲ್ಲಿ ಪಾಂಡಿಚೇರಿಯಲ್ಲ್ಲಿ ನಡೆದ ಕಿರಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು. ಅಖಿಲ ಭಾರತ ಕೃಷ್ಣ ಖೇತಾನ್ ಟೂರ್ನಮೆಂಟ್ನಲ್ಲಿ ಡಬಲ್ಸ್ನಲ್ಲಿ ಗೆದ್ದರು. 14 ವರುಷದೊಳಗಿನವರ 51ನೆಯ ನ್ಯಾಷನಲ್ ಸ್ಕೂಲ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು.

ಹೀಗೆ ಗೆಲ್ಲುತ್ತಾ ಮುನ್ನಡೆದ ಪಿ. ವಿ. ಸಿಂಧು 2019ರಲ್ಲಿ ವಿಶ್ವ ಚಾಂಪಿಯನ್ ಆಗಿಬಿಟ್ಟರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರರೆಂಬ ಕೀರ್ತಿವಂತೆಯಾದರು.     ಆ ಪಂದ್ಯದಲ್ಲಿ ಪಿ.ವಿ.ಸಿಂಧು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಜಪಾನ್‍ನ ಒಕುಹಾರ ಅವರನ್ನು 21-7, 21-7 ಆಟ‍ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಅದಕ್ಕೆ ಮುಂಚೆ  ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್ ನಲ್ಲಿ ಸಿಂಧು 2013 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2018ರಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 2016ರಲ್ಲಿ ಒಲಿಂಪಿಕ್ಸ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದ ಅತ್ಯಂತ ಕಿರಿಯ  ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾದರು.

ನಮ್ಮ ಹೆಮ್ಮೆಯ ಪಿ. ವಿ. ಸಿಂಧು ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆ.

On the birthday of our great badminton star P. V. Sindhu 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ