ಅರ್ಚಕ ವೆಂಕಟೇಶ
ಅರ್ಚಕ ವೆಂಕಟೇಶ
ಅರ್ಚಕ ವೆಂಕಟೇಶ ಪತ್ರಕರ್ತರಾಗಿ ಮತ್ತು ಕನ್ನಡದ ಪ್ರಗತಿಶೀಲ ಸಾಹಿತಿಗಳಲ್ಲಿ ಒಬ್ಬರೆಂದು ಖ್ಯಾತರಾಗಿದ್ದಾರೆ.
ಅರ್ಚಕ ವೆಂಕಟೇಶ 1916ರ ಜುಲೈ 5ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗೋಪಾಲಕೃಷ್ಣಾಚಾರ್ಯ. ತಾಯಿ ರಾಧಾಬಾಯಿ. ವೆಂಕಟೇಶರ ಪೂರ್ವಿಕರು ಅರ್ಚಕ ವೃತ್ತಿ ನಡೆಸಿಕೊಂಡು ಬಂದಿದ್ದರಿಂದ ‘ಅರ್ಚಕ’ ಎಂಬುದು ಅನ್ವರ್ಥನಾಮವಾಗಿ ಇವರ ಹೆಸರಿಗೆ ಸೇರಿಕೊಂಡಿತು. ಹಾವೇರಿ ಜಿಲ್ಲೆಯ ಹತ್ತಿ ಮತ್ತೂರು, ಹಾನಗಲ್ ತಾಲ್ಲೂಕಿನ ಆಲದಕಟ್ಟೆ, ಹಾವೇರಿ, ಬೆಳಗಾವಿಗಳಲ್ಲಿ ಇವರ ವಿದ್ಯಾಭ್ಯಾಸ ಸಾಗಿತು. ಬೆಳಗಾವಿಯಲ್ಲಿದ್ದಾಗಲೇ ಮದುವೆಯಾಯಿತು.
ವೆಂಕಟೇಶ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಕೈ ಬರಹದ ಪತ್ರಿಕೆ ‘ನನ್ನ ನುಡಿ’ ಆರಂಭ ಮಾಡಿದರು. ಶಾಲೆಯ ಮಾಸ್ತರಾಗಿದ್ದ ಜೋಗಳೇಕರ್ ಪಾಂಡು ರಂಗರಾಯರು ಇವರ ಸಾಹಿತ್ಯ ಪ್ರೇರಕರಾದರು. ಬಿ.ಎಂ.ಶ್ರೀ. ಮತ್ತು ಅ.ನ.ಕೃ.ರವರಿಂದ ಕನ್ನಡಕ್ಕಾಗಿ ದುಡಿಯಲು ದೀಕ್ಷೆ ತೊಟ್ಟರು. ಇವರು ಪ್ರಚಂಡ ಭಾಷಣಕಾರರಾಗಿದ್ದರು.
ವೆಂಕಟೇಶ ಅವರು ಬೇಂದ್ರೆಯವರ ಶಿಫಾರಸ್ಸಿನಿಂದ ಸಂಪಾದಕ ಬಿ.ಶಿವಮೂರ್ತಿ ಶಾಸ್ತ್ರಿಗಳ ‘ಶರಣ ಸಾಹಿತ್ಯ’ ಮತ್ತು ‘ಸ್ವತಂತ್ರ ಕರ್ನಾಟಕ’ ಪತ್ರಿಕೆಗೆ ಉದ್ಯೋಗಕ್ಕೆ ಸೇರಿದರು. ಅಲ್ಲಿ ಕೆಲಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ನಂತರ ಎಚ್.ಎ.ಎಲ್. ಕಾರ್ಖಾನೆ ಸೇರಿದರು. ಇದೂ ಸರಿಹೊಂದದೆ ಮರಳಿ ಪತ್ರಿಕೋದ್ಯಮಕ್ಕೆ ಬಂದಾಗ ಮತ್ತೆ ಬೇಂದ್ರೆಯವರ ನೆರವು ದೊರಕಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಸಂಪಾದಕತ್ವದ ‘ವಿಶ್ವಕರ್ನಾಟಕ’ಕ್ಕೆ ಸೇರ್ಪಡೆಗೊಂಡರು. ಹದಿನೈದು ವರ್ಷ ಒಂದೇ ಕಡೇ ದುಡಿದು ಒಂದು ವರ್ಷ ಸಂಪಾದಕರ ಜವಾಬ್ದಾರಿಯನ್ನೂ ನಿರ್ವಹಿಸಿದರು. ಕೊನೆಗೆ ಸಂಯುಕ್ತ ಕರ್ನಾಟಕ ಸೇರಿ ನಿವೃತ್ತಿಯಾಗುವವರೆವಿಗೂ ಸೇವೆ ಸಲ್ಲಿಸಿದರು.
ವೆಂಕಟೇಶ ಅವರು ಅನೇಕ ರೀತಿಯ ಸಾಹಿತ್ಯ ಸಾಧನೆ ಮಾಡಿದ್ದಾರೆ. ಅವರು ಕಥೆ, ಕಾದಂಬರಿ, ನಾಟಕ, ಕವನ, ಮಕ್ಕಳ
ಸಾಹಿತ್ಯ ಸಂಕಲನ ಹೀಗೆ ಎಲ್ಲ ರೀತಿಯ ಕೃತಿಗಳ ಪ್ರಕಟಣೆ ಮಾಡಿದರು. ದಿಲ್ಲಿ ಚಲೋ, ರವಿಶಂಕರ, ಅಸ್ತಿಪಂಜರ ಇವರ ಕಾದಂಬರಿಗಳು. ಧ್ರುವನಕ್ಷತ್ರ, ಜೀವನ ಸಂಗ್ರಾಮ ಇವರ ಕಥಾಸಂಕಲನಗಳು. ಪೂರ್ಣಚಂದ್ರ, ಶಬ್ದ ಶಿಲ್ಪ, ಶಿಲಾಪಕ್ಷಿ, ಸಂಧ್ಯಾರಾಗ ಮುಂತಾದವು ಕಾವ್ಯ ಸಂಕಲನಗಳು. ಇವರ ಮೀರ್ಸಾದಿಕ್, ಪಂಗನಾಮ, ಬ್ಲಾಕ್ಮಾರ್ಕೆಟ್ ಹಿರಣ್ಣಯ್ಯ ಮಿತ್ರ ಮಂಡಲಿಯಿಂದ ಪ್ರದರ್ಶನಗೊಂಡ ರಂಗನಾಟಕಗಳು. ಮಕ್ಕಳ ನಾಟಕಗಳು ಭಾತೃಪ್ರೇಮ, ಪಾನಕ ಕೋಸಂಬರಿ, ಹರಿದ ಚಂದ್ರ, ಪ್ರಹ್ಲಾದನ ಪಾಣಿಪತ್ತು, ಸಾವನದುರ್ಗ, ಜಯ-ವಿಜಯ. ರಾಷ್ಟ್ರ ನೇತಾರರ ನಾಟಕಗಳು ಸ್ವಾಮಿ ವಿವೇಕಾನಂದ, ಸುಭಾಶ್ ಚಂದ್ರ ಬೋಸ್, ಮದನಮೋಹನ ಮಾಳವೀಯ. ರಾಮನ ಕಥೆ, ಭಕ್ತಿಗೀತಾಮೃತ ಇತರ ಮಕ್ಕಳ ಕೃತಿಗಳು. ರಮಣ ಮಹರ್ಷಿ ಜೀವನ ಚರಿತ್ರೆ.
ಅರ್ಚಕ ವೆಂಕಟೇಶ ಅವರು ಪ್ರವಾಸ ಹೋಗಿದ್ದಾಗ 1997ರ ಡಿಸೆಂಬರ್ 20ರಂದು ತಿರುಚೆಂದೂರಿನಲ್ಲಿ ನಿಧನರಾದರು.
On the birth anniversary of Archaka Venkatesh
ಉತ್ತಮ ಮಾಹಿತಿ ಧನ್ಯವಾದಗಳು🙏
ಪ್ರತ್ಯುತ್ತರಅಳಿಸಿ