ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಶೇಖರ್


 ಚಂದ್ರಶೇಖರ್


ವಿದ್ವಾನ್ ಚಂದ್ರಶೇಖರ್ ಪಿಟೀಲು ವಾದಕರಾಗಿ ಹೆಸರಾಗಿದ್ದವರು.

ಚಂದ್ರಶೇಖರ್ 1937ರ ಜುಲೈ 3ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸುಬ್ಬಾಭಟ್ಟರು. ತಾಯಿ ಶೇಷಮ್ಮ. ಓದಿದ್ದು ಎಸ್‌.ಎಸ್‌.ಎಲ್‌.ಸಿ.ವರೆಗೆ.  ಸಂಗೀತದಲ್ಲಿ ಹುಟ್ಟಿದ ಆಸಕ್ತಿಯಿಂದ ಅಯ್ಯನಾರ್ ಕಲಾ ಶಾಲೆಯಲ್ಲಿ ಆನೂರು ರಾಮಕೃಷ್ಣರವರಲ್ಲಿ ಪಿಟೀಲುವಾದನ ಕಲಿತರು. ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ಗಳಿಸಿ ವಿದ್ವತ್‌ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದರು. 

ಚಂದ್ರಶೇಖರ್ ಹಲಸೂರಿನಲ್ಲಿ ನಡೆದ ತ್ಯಾಗರಾಜ ಸಂಗೀತೋತ್ಸವದಲ್ಲಿ ಪ್ರಥಮ ಕಚೇರಿ ನಡೆಸಿದರು. ಮದರಾಸು ಮ್ಯೂಸಿಕ್‌ ಅಕಾಡೆಮಿ, ಕರ್ನಾಟಕ ಗಾನ ಕಲಾ ಪರಿಷತ್‌, ಬೆಂಗಳೂರಿನ ಗಾಯನ ಸಮಾಜ,  ಭದ್ರಾವತಿ, ಧರ್ಮಸ್ಥಳ ಮುಂತಾದ ಅನೇಕ ಕಡೆಗಳಲ್ಲಿ ಪ್ರಧಾನ ಪಿಟೀಲುವಾದನ ಕಾರ್ಯಕ್ರಮ ನೀಡಿದ್ದರಲ್ಲದೆ ಅನೇಕ ಮಹಾನ್ ಸಂಗೀತ ವಿದ್ವಾಂಸರಿಗೆ ಪಿಟೀಲುವಾದನ  ಸಹಕಾರ ನೀಡಿದ್ದರು. ಆಕಾಶವಾಣಿಯ ದಕ್ಷಿಣವಲಯ ಸಂಗೀತ ಕಚೇರಿ ಮತ್ತು ದೂರದರ್ಶನದಲ್ಲೂ ಹಲವಾರು ಬಾರಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 

ಚಂದ್ರಶೇಖರ್ ರಮಣಾಂಜಲಿ ತಂಡದೊಡನೆ ಎಂಟು ಬಾರಿ ವಿದೇಶ ಪ್ರವಾಸ ಮಾಡಿದ್ದರು. ಯೂರೋಪಿನ ಬಹುತೇಕ ಪ್ರಮುಖ ನಗರಗಳು, ಅಮೆರಿಕಾ, ‌ ಮುಂತಾದೆಡೆ ಪಿಟೀಲು ವಾದನದ ಪ್ರಾತ್ಯಕ್ಷಿಕೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. 

ಚಂದ್ರಶೇಖರ್ ಅವರಿಗೆ ಅಯ್ಯನಾರ್ ಪ್ರೌಢ ಸಂಗೀತ ಕಲಾ ಶಾಲೆಯಿಂದ ಗೌರವ ಪ್ರಶಸ್ತಿ, ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಶಸ್ತಿ, ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ ಸೇರಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಗೌರವಗಳು ಸಂದಿದ್ದವು. 

ವಿದ್ವಾನ್ ಚಂದ್ರಶೇಖರ್ 1998ರ ಅಕ್ಟೋಬರ್ 1ರಂದು ಈ ಲೋಕವನ್ನಗಲಿದರು.

On the birth anniversary of violinist Vidwan Chandrashekhar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ