ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಪಿ. ಪ್ರಕಾಶ್


 ಎಂ. ಪಿ. ಪ್ರಕಾಶ್


ಎಂ. ಪಿ. ಪ್ರಕಾಶ್ ಕರ್ನಾಟಕದ ರಾಜಕಾರಣದಲ್ಲಿದ್ದು, ಸಾಂಸ್ಕೃತಿಕ ಮತ್ತು ಸಮಾಜಮುಖಿ ನೆಲೆಗಳಲ್ಲಿ ಪ್ರಸಿದ್ಧಿ ಪಡೆದಿದ್ದವರು.  

ಮಠದ ಪಾಟೀಲ್ ಪ್ರಕಾಶ್ ಬಳ್ಳಾರಿ ಜಿಲ್ಲೆಯ ನಾರಾಯಣದೇವರ ಕೆರೆ ಗ್ರಾಮದಲ್ಲಿ  1940ರ ಜುಲೈ 11ರಂದು ಜನಿಸಿದರು. ಮಾಗಳ ಎಂಬುದು ಪ್ರಕಾಶರ ತಾಯಿಯ ತವರೂರು. ನಾರಾಯಣ ದೇವರಕೆರೆ ಅವರ ಹುಟ್ಟೂರು.  ಆದರೂ  ’ಹೂವಿನ ಹಡಗಲಿ’ ಅವರಿಗೆ ತವರಿನಷ್ಟು ಪ್ರೀತಿ. ನಾರಾಯಣ ದೇವರಕೆರೆ, ಹೂವಿನ ಹಡಗಲಿ, ಹೊಸಪೇಟೆ, ಬಳ್ಳಾರಿ, ಬೆಂಗಳೂರುಗಳಲ್ಲಿ ಓದಿ ಬಿ. ಎ. ಮತ್ತು ಎಂ. ಎ ಪದವಿಗಳನ್ನು ಗಳಿಸಿದರು.‍ ಕಾನೂನಿನ (ಎಲ್.ಎಲ್.ಬಿ) ಪದವಿಯನ್ನು ಮುಂಬೈನಲ್ಲಿ  ಪಡೆದರು. 1963ರಲ್ಲಿ ರುದ್ರಾಂಬ ಅವರನ್ನು ವಿವಾಹವಾದರು. 

ಪ್ರಕಾಶ್ 1964ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ತಮ್ಮ ಸಹಪಾಠಿಗಳಾಗಿದ್ದ  ಮಾಜಿ ಶಾಸಕ ಟಿ. ಸೋಮಪ್ಪ, ಮಾಜಿ ಸಚಿವ ಇ.ಟಿ. ಶಂಭುನಾಥ ಅವರ ಜತೆಗೂಡಿ ’ಕಿತ್ ಅಂಡ್ ಕಿನ್ ಸಂಘ’ ಸ್ಥಾಪನೆ ಮಾಡಿದರು. ಹೂವಿನಹಡಗಲಿಯನ್ನು ರಾಜ್ಯದಲ್ಲಿ ಗುರುತಿಸುವಂತಹ ಊರನ್ನಾಗಿ ಮಾಡಿದರು. 

ಪ್ರಕಾಶ್ ಅವರಿಗ 1978ರಲ್ಲಿ  ವಿಧಾನಸಭೆಗೆ, 1979ರಲ್ಲಿ ವಿಧಾನಪರಿಷತ್ತಿಗೆ  ಪ್ರವೇಶಿಸುವ  ಯತ್ನಕ್ಕೆ ಸೋಲಾಯಿತು. 1983ರಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದರು. ಆಗಿನ ರಾಮಕೃಷ್ಣ ಹೆಗ್ಗಡೆಯವರ ಮಂತ್ರಿಮಂಡದಲ್ಲಿ, ಸಾರಿಗೆ ಮತ್ತು ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದರು.  ಮುಂದೆ ಎಸ್. ಆರ್. ಬೊಮ್ಮಾಯಿ, ಎಚ್. ಡಿ. ದೇವೇಗೌಡ, ಜೆ. ಹೆಚ್. ಪಟೇಲ್, ಧರಮ್ ಸಿಂಗ್ ಮತ್ತು ಕುಮಾರಸ್ವಾಮಿ ಅವರುಗಳ ಮಂತ್ರಿಮಂಡಲಗಳಲ್ಲಿ ಕಾರ್ಮಿಕ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಕಾನೂನು ಮತ್ತು ಸಂಸದೀಯ ವ್ಯವಹಾರ, ಕಂದಾಯ ಮತ್ತು ಮುಜರಾಯಿ ಮುಂತಾದ ಖಾತೆಗಳನ್ನು ನಿರ್ವಹಿಸಿದರಲ್ಲದೆ , ಉಪಮುಖ್ಯಮಂತ್ರಿಗಳಾಗಿ ಸಹಾ ಕಾರ್ಯನಿರ್ವಹಿಸಿದರು. ಪುನಃ ಸೋಲು, ಒಡಕು ರಾಜಕಾರಣ ಮತ್ತು ಸಿದ್ಧಾಂತಗಳ ನೆಲೆಗಳ ಜಾಡಿನಲ್ಲಿ ಎಲ್ಲಿರಬೇಕು ಎಂಬ ದ್ವಂದ್ವಗಳಲ್ಲಿ ಪುನಃ ಕಾಂಗ್ರೆಸ್ ಸೇರಿದ್ದರು.

ಎಂ.ಪಿ. ಪ್ರಕಾಶ್ ಅವರು  ನಾಟಕ, ಕ್ರೀಡೆ, ಮತ್ತಿತರ ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಆಸಕ್ತರಾಗಿದ್ದರು. ರಂಗಭೂಮಿಯಲ್ಲಿ ಮೇರು ಕಲಾವಿದರಾಗಿದ್ದ ತಮ್ಮ ದೊಡ್ಡಪ್ಪ, ಕೊಟ್ರಗೌಡರ ಪ್ರಭಾವಕ್ಕೊಳಗಾಗಿ ಹುಚ್ಚಿ ಕರಿಯಲ್ಲಪ್ಪ ಮತ್ತು ಕೆಲ ಯುವಕರೊಡಗೂಡಿ 60ರ ದಶಕದಲ್ಲಿ ಹಡಗಲಿಯಲ್ಲಿ ’ರಂಗಭಾರತಿ' ಎಂಬ ರಂಗತಂಡವನ್ನು ಹುಟ್ಟುಹಾಕಿದ್ದರು.  ಈ ಸಂಸ್ಥೆ, ದೇಶದ ನಾನಾರಾಜ್ಯಗಳಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶಿಸಿತ್ತು. ಈ ಮೂಲಕ  ಅವರು ಅದರ ಸ್ಥಾಪಕ ಅಧ್ಯಕ್ಷರಾಗಿ, ನಟರಾಗಿ, ನಿರ್ದೇಶಕರಾಗಿ ಪರಿಪಕ್ವ ರಂಗಕರ್ಮಿ ಎಂದು ಸಾಬೀತುಪಡಿಸಿದ್ದರು. ರಂಗಶಿಬಿರವನ್ನೂ ಆಯೋಜಿಸಿದ್ದರು.  ಸಿನಿಮಾದಲ್ಲೂ ನಟಿಸಿದ್ದರು.

ಎಂ. ಪಿ. ಪ್ರಕಾಶರು ಪುಸ್ತಕ ಪ್ರೇಮಿ. ಓದುವ ಮತ್ತು ಬರೆಯುವ ಗೀಳು ಅವರಲ್ಲಿ ವಿಪರೀತವಾಗಿತ್ತು. ಮನೆಯಲ್ಲಿ ಅಪಾರ ಪುಸ್ತಕಗಳ ಸಂಗ್ರಗವನ್ನಿಟ್ಟುಕೊಂಡಿದ್ದರು.

ಎಂ. ಪಿ. ಪ್ರಕಾಶರು ಹಲವಾರು ಅನುವಾದ ಕೃತಿಗಳನ್ನು ರಚಿಸಿದ್ದರು. ಇವುಗಳಲ್ಲಿ ಪ್ರೀತಿಯೇ ದೇವರು ಮತ್ತು ಇತರ ಕಥೆಗಳು, ಸೂರ್ಯಶಿಖಾರಿ,  ಡೊಮಿಂಗೋ ಪಿಯಾಸ್ ಕಂಡ ವಿಜಯನಗರ, ಅಲೆಕ್ಸಾಂಡರ್ ಜೆ. ಗ್ರೀನ್ ಲಾ ಮತ್ತು ಕಾಲಿನ್ಗ್ಸ್ ಕಂಡ ವಿಜಯನಗರ, ಚುನಾವಣಾ ಸುಧಾರಣೆಗಳು (ಮೂಲ: ರಾಮಕೃಷ್ಣ ಹೆಗಡೆ), ನನ್ನ ಜೀವನ ಮತ್ತು ರಾಜಕೀಯ (ಎಸ್. ನಿಜಲಿಂಗಪ್ಪ ಅವರ ಆತ್ಮಕಥನ ಅನುವಾದ) ಮುಂತಾದವು ಸೇರಿವೆ.  

ಕಳಿಂಗ ಸೂರ್ಯ,  ಥೈಲ್ಯಾಂಡ್ ಪ್ರವಾಸ, ಅಮೇರಿಕಾ ಪ್ರವಾಸ ಮುಂತಾದವು ಪ್ರಕಾಶ್ ಅವರ ಪ್ರವಾಸ ಬರಹಗಳು.

ರಂಗಾಯಣದ ಕುಸುಮಬಾಲೆ: ಒಂದು ಅನುಭವ, ಯಾರ ತಲೆದಂಡ?, ಯಾತಕ್ಕೆ ಮಳೆ ಹೋದವೋ ಮುಂತಾದವು ಪ್ರಕಾಶ್ ಅವರ ಸಾಂಸ್ಕೃತಿಕ ಬರಹಗಳು. ಒಂದು ಕೋಟಿ ರುಪಾಯಿ ಹಗರಣ, ಕೊರಳಿಗೆ ಉರುಳಾಡುತ್ತಿರುವ ಡನ್ಕೆಲ್ ಪ್ರಸ್ತಾಪ, ಮೂಲೆಗುಂಪಾದ ರೋಜಗಾರ್ ಮುಂತಾದವು ಅವರ ರಾಜಕೀಯ ಬರಹಗಳು.

ಎಂ. ಪಿ. ಪ್ರಕಾಶ್ ಅವರು 1971ರಿಂದ 81ರವರೆಗೆ ಜೆ.ಬಿ.ಆರ್ ಕಾಲೇಜ್ ನ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. 'ಹೂವಿನ ಹಡಗಲಿ'ಯಲ್ಲಿ ಜನಪದ ಕಲೆಗಳಾದ 'ಯಕ್ಷಗಾನ', 'ಬಯಲಾಟ', ಪ್ರದರ್ಶಿಸಿ, 2002ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿ  ಆ ಪ್ರದೇಶದ ಅಭಿವೃದ್ಧಿಯ ಹರಿಕಾರರೆಂದು ಹೆಸರಾದರು. ಸಿಂಗಟಾಲೂರು ನೀರಾವರಿ ಯೋಜನೆ ಚಾಲನೆಮಾಡಿದರು. ಹಿಂದುಳಿದ ಪ್ರದೇಶದಲ್ಲಿ 'ಸರಕಾರಿ ಇಂಜಿನಿಯರಿಂಗ್ ಕಾಲೇಜ್' ಸ್ಥಾಪಿಸಿದರು. 'ಪಾಲಿಟೆಕ್ನಿಕ್' ಆರಂಭವಾಯಿತು. ಪೋಲೀಸ್ ತರಬೇತಿ ಕೆಂದ್ರದ ಸ್ಥಾಪನೆಯಾಯಿತು.
ಕೊಯಿಲಾರಗಟ್ಟಿ ಗ್ರಾಮದ ಹತ್ತಿರ ಚಂಡೀಗರ್ ನಗರದ ಮಾದರಿಯಲ್ಲಿ ದೊಡ್ಡ ನಗರ ನಿರ್ಮಾಣದ ಕಲ್ಪನೆಯಿತ್ತು. ಕರ್ನಾಟಕದ ಎರಡನೆಯ ರಾಜಧಾನಿ ಮಾಡುವ ಸಾಹಸದ ಕೆಲಸದ ಆರಂಭವಾಯಿತು. ಉದ್ಯಾನವನದ ನಿರ್ಮಾಣಕಾರ್ಯವನ್ನು ಆರಂಭಿಸಿದರು.

ಎಂ.ಪಿ. ಪ್ರಕಾಶ್ ಅವರು 2011ರ  ಫೆಬ್ರವರಿ 9ರಂದು ನಿಧನರಾದರು.

On the birth anniversary of a cultural face in politics M. P. Prakash 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ