ಎಪಿಜೆ ಅಬ್ದುಲ್ ಕಲಾಂ
ಭಾರತರತ್ನ ಎ ಪಿ ಜೆ ಅಬ್ದುಲ್ ಕಲಾಂ
ಪ್ರಸಕ್ತ ತಲೆಮಾರಿನ ಜನಕ್ಕೆ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಪ್ರಪ್ರಥಮವಾಗಿ ನೆನಪಾಗುವ ಹೆಸರುಗಳಲ್ಲಿ ಭಾರತದ ಮಾಜಿ ರಾಷ್ಟ್ರಪತಿ, ಮಹಾನ್ ವಿಜ್ಞಾನಿ, ಚಿಂತಕ, ಭಾರತರತ್ನ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಮುಖರು. ಈ ದೇಶಕ್ಕೆ ಹತ್ತು ಹಲವು ರಾಷ್ಟ್ರಪತಿಗಳು ಆಗಿ ಹೋಗಿದ್ದಾರೆ. ಮಾಜಿ ಆದಾಕ್ಷಣ ಈ ರಾಷ್ಟ್ರಪತಿಗಳು ನಮ್ಮ ನೆನಪಿನಿಂದ ಅಳಿಸಿ ಹೋಗಿದ್ದಾರೆ. ಆದರೆ ಮಾಜಿಯಾದ ಬಳಿಕವೂ ಈ ದೇಶದ ಹೃದಯ ಸಿಂಹಾಸನವನ್ನಾಳಿದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು. ಇಂದು ಅವರ ಸಂಸ್ಮರಣಾ ದಿನ.
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು 1931ರ ಅಕ್ಟೋಬರ್ 15ರಂದು ರಾಮೇಶ್ವರಂನಲ್ಲಿ ಜನಿಸಿದರು.
ತಮ್ಮ ಕೊನೆಯ ದಿನದವರೆವಿಗೂ ನಮ್ಮ ದೇಶಿಗರೊಂದಿಗೆ ಒಂದಾಗಿ ಬೆರೆತಿದ್ದ ಈ ಶ್ರೇಷ್ಠ ಮಹಾನುಭಾವರ ಬಗ್ಗೆ ಏನೇ ಹೇಳಿದರೂ ಕಡಿಮೆ ಎಂಬ ಭಾವ ಹೃದಯವನ್ನಾವರಿಸುತ್ತದೆ. ಕಲಾಂ ಅವರನ್ನು ನೆನೆದಾಗಲೆಲ್ಲಾ ಮನಸ್ಸು ಮೂಕವಾಗುತ್ತದೆ. ಇಂತಹ ಮಹಾನುಭಾವರನ್ನು ನಮ್ಮ ಕಾಲದಲ್ಲಿ ಕರುಣಿಸಿದಕ್ಕಾಗಿ, ಭಕ್ತಿ ಗೌರವಗಳಿಂದ ಕಣ್ಣಿಗೆ ಕಾಣದ ದೇವರಲ್ಲಿ ಕೃತಾರ್ಥ ಭಾವ ಮೂಡುವಂತಹ ಭಾವ ಹೃದಯಗಳಲ್ಲಿ ತುಂಬಿ ತೂಗುತ್ತದೆ. ಅವರಲ್ಲಿದ್ದ ನಯ ವಿನಯ, ಪ್ರೀತಿ, ಗೌರವ, ನೈತಿಕತೆ, ಕಾರ್ಯಶ್ರದ್ಧೆ, ವಿವೇಕ, ದೇಶಭಕ್ತಿ, ಲೋಕಹಿತ ದೃಷ್ಟಿ, ಜ್ಞಾನ, ತೇಜಸ್ಸು ಎಲ್ಲ ಎಲ್ಲವೂ ಹಿತವಾಗಿ ಮನದಲ್ಲಿ ಬಂದು ನಿಲ್ಲುತ್ತದೆ.
ದೈಹಿಕವಾಗಿ ಈ ಮಹಾನುಭಾವರು 2015 ಜುಲೈ 27ರಂದು ನಮ್ಮನ್ನಗಲಿದರು. ದೇಹ ಅಶಾಶ್ವತ. ಆದರೆ ಅವರ ಚೇತನ ಅಮರ. ಅವರ ಬದುಕು ನಮ್ಮ ಬದುಕನ್ನು ಕಿಂಚಿತ್ತಾದರೂ ಪ್ರೇರೇಪಿಸುತ್ತಿರಲಿ. ಇಂತಹ ಮಹಾನುಭಾವರು ಮುಂದೆ ಕೂಡಾ ಹೆಚ್ಚು ಹೆಚ್ಚು ಉದಯಿಸುತ್ತಿರಲಿ, ಈ ವಿಶ್ವಸಂಕುಲವನ್ನು ನಿತ್ಯವಿಕಸನದತ್ತ ಪ್ರಚೋದಿಸುತ್ತಿರಲಿ.
On Remembrance Day of great scientist, President of India and unbelievably a great human being Bharata Ratna Dr. A P J Abdul Kalam
ಕಾಮೆಂಟ್‌ಗಳು