ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 17


 ಗೋಕುಲ ನಿರ್ಗಮನ 17

(ಮಹಾನ್ ಕವಿ ಪುತಿನರಸಿಂಹಾಚಾರ್ಯರ ಕೃತಿ)


(ರಾಧಾಕೃಷ್ಣರ ನೃತ್ಯ ಆನಂದೋನ್ಮಾದದಲ್ಲಿ ಸಾಗುತ್ತಿರುವಾಗ ಅರಸುತ್ತಿದ್ದ ಗೋಪಿಕಾ ಬೃಂದವುನಾಗವೇಣಿ ಮುಂದಾಗಿ ಕ್ರಮೇಣ ನೆರೆದು ರಾಸಕ್ರೀಡೆಗೆ ಆರಂಭವಾಗುತ್ತದೆ )


ನಾಗವೇಣಿ

ಹಾಡು : ರಾಗ ಪೂರ್ವಿಕಲ್ಯಾಣಿ


ಅಕ್ಕೊ ಶ್ಯಾಮ ಅವಳೆ ರಾಧೆ ನಲಿಯುತಿಹರು ಕಾಣಿರೇ || ||

ನಾವೇ ರಾಧೆ ಆವನೆ ಶ್ಯಾಮ ಬೇರೆ ಬಗೆಯ ಮಾಣಿರೇ || . ||


ಎಲ್ಲ ಗೋಪಿಯರು

ಕಲರವದೊಳು ಯಮುನೆ ಹರಿಯೆ

ಸೋಬಾನೆಯ ತರುಗಳುಲಿಯೆ

ತೆರೆದೆದೆಯೊಳು ಹರಸಿದಂತೆ

ಬಾನಿಂ ಜೊನ್ನ ಭೂಮಿಗಿಳಿಯೆ – ಅಕ್ಕೊ ಶ್ಯಾಮ


ಕಂಪ ಬಿಡುವ ದಳಗಳಂತೆ 

ಸುತ್ತಲರಳಿಕೊಳ್ಳಿರೇ

ಒಲುಮೆಗಿಡುವ ಪ್ರಭಾವಳಿಯ

ತೆರದಿ ಬಳಿಸಿ ನಿಲ್ಲಿರೇ – ಅಕ್ಕೊ ಶ್ಯಾಮ -


ಕಡಗ ಕಂಕಣ ಕಿಣಕಿಣೆಯೆನೆ 

ಮಅಡಿಗೆ ಇರುಳೆ ಝಣರೆನೆ

ಎದೆನುಡಿತಕೆ ಚುಕ್ಕಿ ಮಿಡಿಯೆ

ಕೊಳಲನೂದಿ ಕುಣಿವನೆ – ಅಕ್ಕೊ ಶ್ಯಾಮ


ನಮ್ಮ ಮನವ ಕೋದು ಮಾಲೆ

ಗೈದು ಮುಡಿಯುತಿಹನೆನೆ

ಮಾಧವನೂದುವ ಮಧುರಗಾನ 

ಎದೆಯ ಹಾಯ್ವುದಾ ಎನೆ – ಅಕ್ಕೊ ಶ್ಯಾಮ


ನೋಡಿ ತಣಿಯೆ ಹಾಡಿ ತಣಿಯೆ 

ಲೇಸನಾಡಿ ತಣಿಯೆನೇ-

ಕುಣಿದು ತಣಿಯೆ ದಣಿದೂ ತಣಿಯೆ ತಣಿವಿಲ್ಲದೆ ನಲಿವೆನೆ ಅಕ್ಕೊ ಶ್ಯಾಮ -


ನಾಗವೇಣಿ

ರಾಗ - ಮುಖಾರಿ

ಸುಗ್ಗಿ ಬರೆ ಬನ ಥಟ್ಟನೊಟ್ಟು ಹೂ ಬಿಡುವಂತೆ

ಹಿರಿತೇಜ ಕಿಡಿಗರಿಯ ಕೆದರುತಿರುವಂತೆ 

ರಾಧೆ ಶ್ಯಾಮರು ಕೂಡೆ ಉಕ್ಕುವೀ ಉತ್ಕರ್ಷ ಕೋಡಿಗೊಂಡಿತೊ ನಮ್ಮೊಳೆನೆ ನಲ್ಮೆಯಾಯ್ತು


ರಾಧೆ

ರಾಗ - ಭೈರವಿ

ಹಿಗ್ಗಿದೆ ಮನ - ತಗ್ಗಿದೆ ನಾಣ್

ಎದ್ದಿದೆ ಜಾಣ್ - ಸ್ವಾಗತ ನಿಮಗೆ

ಎಂದಿನಂತೆ ಇಲ್ಲೀ ದಿನ

ಎನಗೊಬ್ಬಳಿಗಲ್ಲಿವನಿನ 

ದೈವಂ ನಮಗೆ

(ರಾಸಪೂಜಾನೃತ್ಯ ಮೊದಲಾಗುತ್ತದೆ.)


ರಾಧೆ

ನಂದನಂದನಾ - ಗೆಲ್ಲು

ಗೋಕುಲಾನಂದನಾ – ಪ॥

ಬೃಂದಾವನದೊಳು ನಮ್ಮನು 

ಚಿರಮಿಂತೆಯೆ ನಲಿನಲಿಸುತ ||.||


ಬೆಳಕು ಬೆಳಕು ಕೂಡುತೊಂದೆ

ಪ್ರಭೆಯಾಗುವ ತೆರದಿ ಬೆರೆದು

ಸಖಿಯರೊಡನೆ ನಾನೆತ್ತುವ

ಅರ್ತಿಯಾರತಿಯನು ಕೊಂಡು

ನಂದನಂದನಾ - ಗೆಲ್ಲು 

ಗೋಕುಲಾನಂದನಾ


ಎಲ್ಲ ಗೋಪಿಯರು

ರಾಗ - ಶಾಹನ

ಒಡಲೊಳಿಟ್ಟ ನೇಹದಂತೆ

ಮುಡಿದು ಮೀಸಲಾದ ಸುಮದ

ಮಾಲೆಗಳನೆ ನಿನಗೊಪ್ಪಿಸೆ

ತಂದಿರುವೆವು ಮುಡಿಯೈ ಇವ – ನಂದನಂದನಾ


ರಾಗ – ಕಲ್ಯಾಣಿ

ಆತುರ ಕೆಂಡವೆನೆ ಆಸೆಯೆ ಅಗಿಲೆನ್ನೆ

ನಿನ್ನನು ಕಾಂಬೀ 

ನಲವೇ ಗಂಧವೆನೆ ನಲಿವೇ ಪೂಜೆಯನೆ 

ನಿನ್ನೆಡೆ ಹರಿವೀ

ನರುಗಂಪಿನ ನಮ್ಮೊಲವಿನ ಧೂಪಾರತಿ ಸ್ವೀಕರಿಸುತ 

ಹಾಲ್ಗಡಲೊಳು ಹರಿಯಂದದಿ ಎಂದುಮಿಂತೆ ನಲಿನಲಿದಿರು ನಂದನಂದನಾ


ರಾಗ - ಮೋಹನ

ಹಿತ್ತಿಲ ಸೀಬೆ ಗಿಣಿ ಕಚ್ಚಿದ ದಾಳಿಂಬೆ 

ಅತ್ತೆ ಕಂಡರಬ್ಬ ಎನುವ ಬಾಳೆ ಸೀನಿಂಬೆ ನಿನ್ನನೆ ನೆನೆಯುತ ಕಡೆದೀ ಸಂಜೆಯ ನವನೀತ 

ಮರೆಸಿ ಕರಿದ ಕಚ್ಚಾಯಗಳಿವೆ ಕೋ ನಿನಗೆನುತ 

ಅಕ್ಕರೆಯೀ ನೈವೇದ್ಯಗಳೆಲ್ಲವ ನೀನೊಪ್ಪಿಸಿಕೊಂ

ಡೆಮ್ಮ ಮನದ ಹಸಿವೆಯೆಲ್ಲ ಹಿಂಗಿ ಹೋಗುವಂತೆ ಹರಸು - 

ನಂದನಂದನಾ

(ಗೋಪಾಲಕರು ಬಂದು ನೆರೆದುಕೊಳ್ಳುತ್ತಾರೆ.)


ಗೋಪಾಲಕರು

ರಾಗಮೋಹನ


ಹಾಹೂಹಾ ಹಾಹೂಹಾ ಅಹಹಹಾ ಹೂ ಊಹಾ ಊಹಾ ಉಹುಹುಹ್ಹಾ ಉಹುಹೂನಾಚುವರೆಮ್ಮುಗ್ಗಡಣೆಗೆ ಹಾಹಾ ಹೂಹೂ ಅರ್ಥದ ಸಂಗವನುಳಿದಿಹ ನುಡಿಯಲ್ಲವೆ ಬಹಳ ಚೆನ್ನ 

ಆಸೆಭಯಗಳಿಲ್ಲದೊಲುಮೆ ಲಲ್ಲೆಯಲ್ಲೆ ನುತಿಸೆ ನಿನ್ನ -ನಂದನಂದನಾ


ರಾಗ – ಮಧ್ಯಮಾವತಿ -

ತುತ್ತುರಿಗಳ ಟೆರಿಟ್ಟಿರಿರಿ ಶಂಖಂಗಳ ಭೋಂಭೋಂ 

ಮದ್ದಳೆಗಳ ಧೋಂಧೋಂ ಜಾಗಟೆಗಳ ಢಣಣೋಂ ತಕೃತ್ತತೃತ್ತಕಿಟತಕೃದ್ಧಿಗಿಟತಕೃದ್ಧಿಗಿತೋಂತಳಾಂಗು ತಳಾಂಗು ತಕಿಟತ್ತಳಾಂಗುತದ್ಧಳಿರೋಂ

ಗೆಜ್ಜೆಯ ಝಲಿ ಝಲಿ ಝಲ್

ತಾಳದ ಝಲ್ಲರಿ ಝಲ್

ಚವರಿಯ ಕೈ ಬಳೆ ಚಿಲಿಚಿಲಿ

ಉಲಿದಾಡಲು ಪರಿಪರಿಯಲಿ

ಭವವನುಳಿದು ನಿನ್ನ ಭಾವಕೇರಿ ಹಾರ್ವ ಹಕ್ಕಿಯಂತೆ

ಹೃದಯ ಮನದ ರೆಕ್ಕೆಯಿಂತು ಬಡಿವ ದನಿಗೆ ಮುದಂಗೊಂಡು - ನಂದನಂದನಾ

ಎಲ್ಲರೂ

ರಾಗ : ಆನಂದಭೈರವಿ

ಆಸೆವೇಗದಿಂದ ಹೊನಲು

ಕಡಲ ಸೇರಿ ವೇಗವಳಿದು

 ಕಡಲಿನ ವೇಗದೊಳೇ ತೆರೆತೆರೆಯಾಗಲೆಯುವ ತೆರ-

ನಂದನಂದನಾ

ನಿನ್ನಾನಂದದಿ ನಮ್ಮನು  ತೆರವಲೆಸಲು ಬೇಳ್ವೆವು ಗೋಕುಲಾನಂದನಾ


ರಾಗತೋಡಿ

ನಿದ್ದೆ ಬರದೆ ಉದ್ದವಾದ

ಇರುಳಿನಂತೆ ಹಗಲ ಕಳೆದು

ನೀನೆದ್ದಿಹ ಇರುಳಿನೊಳೇ ನಾವೆಂದಿಗು ಎಚ್ಚರುವೊಲು - ನಂದನಂದನಾ

ವರವನಿತ್ತು ನಲವು ಮತ್ತು ನಮಗೆಂದಿಗು ಇರೆ ಹರಸೈ ಗೋಕುಲಾನಂದನಾ


ರಾಗ : ನೀಲಾಂಬರಿ

ಕಂಪನಿಡುವ ಕಲ್ಪತರುವೋ

ಎನಲು ನೀನು ಕೊಳಲನೂದಿ 

ಬೇಡಿಕೆಯೇ ಬೇಡೆನಿಸುವ ತೇಜದಿಂದ ನಾವೆಸೆವೊಲು-ನಂದನಂದನಾ

ಹೊಗೆಯನ್ನೇರುವಗ್ನಿಯಂತೆ ನಮ್ಮಾಸೆಯನೇರು ನೀನು ಗೋಕುಲಾನಂದನಾ


ರಾಗ ಸಾವೇರಿ

ನಿನ್ನ ಪ್ರೇಮದುದಯವನ್ನು

ತೋರುವ ಮುಂಬೆಳಗಿನಂತೆ 

ಮಂಗಳದರ್ಶನೆ ರಾಧೆಯ ಸಂಗಡ ನೀ ಕಳೆಯ ತೀವಿ-ನಂದನಂದನಾ

ಬೃಂದಾವನದೊಳು ನಮ್ಮನು ನಲಿವಿನಿಂದ ಬೆಳಬೆಳಗಿಸು ಗೋಕುಲಾನಂದನಾ

ಮತ್ತೆ ಭೈರವಿಯಲ್ಲಿ ಪಲ್ಲವಿ ಅನುಪಲ್ಲವಿ ಹೇಳಿ ನೃತ್ಯ ನಿಲ್ಲುತ್ತದೆ )


**********

 ಭಾಗದಲ್ಲಿ ರಾಸನೃತ್ಯದ ಪರಾಕಾಷ್ಠೆಯ ರೂಪ ಬಂದಿದೆಹತ್ತು ಹಲವು ರಾಗಗಳು ಇಲ್ಲಿಆಲಾಪಗೈದಿವೆರಾಧಾಕೃಷ್ಣರೊಂದಿಗೆ ಗೋಪಿಯರುಗೋಪರು ಕುಣಿಯುವರು.

ಇವಳೇ ರಾಧೆಅಲ್ಲಿ ಶ್ಯಾಮಅವರು ಬೇರೆ ಬೇರೆಯಲ್ಲ ನೋಡಿರಿ.


ಸೋಬಾನೆ ಹಾಡಿದಂತೆ ಯಮುನೆಯ ಧ್ವನಿಬಾನಿನಿಂದ ಅಮೃತವೇ ಇಳಿದಂತಹ ಬೆಳದಿಂಗಳುಕಂಪು ಬೀರುವ ಸುಮಗಳಂತೆ ಸುತ್ತ ಸೇರಿ ಕುಣಿಯುವಾ ಬನ್ನಿಕಡಗ ಕಂಕಣಗಳು ಘಲ್ಲೆನುತ್ತಿರಲುಹೆಜ್ಜೆಯ ತಾಳಕ್ಕೆ  ಇರುಳು ಕುಣಿಯಲುಕೊಳಲನೂದಿ ಕುಣಿಯುತ್ತಿರುವನು ಕೃಷ್ಣನಮ್ಮಮನಸ್ಸುಗಳನ್ನು ಪೋಣಿಸಿ ಮಾಲೆ ಮಾಡಿ ಮುಡಿದಿಹನುನೋಡಿದಷ್ಟೂ ಸಾಲದುಹಾಡಿದಷ್ಟೂಸಾಲದು ಕುಣಿದಷ್ಟೂ ದಣಿವಾಗದುಸುಗ್ಗಿಯಲ್ಲಿನ ಸಂಭ್ರಮದಂತೆ ಉಕ್ಕುತ್ತಿರುವ  ಸಂತಸದಲ್ಲಿನಲ್ಮೆಯೇ ಒಲುಮೆಯಾಗಿದೆ.

ರಾಧೆಯು ರಾಸನೃತ್ಯ ಆರಂಭಿಸುವಳುಎಂದಿನಂತಲ್ಲ  ದಿನಕೃಷ್ಣ ನನ್ನೊಬ್ಬಳಿಗಲ್ಲನಮ್ಮೆಲ್ಲರಿಗೂ ದೈವವೆನ್ನುವಳು.


ನಂದನ ಕಂದಾಗೋಕುಲದ ಕಂದಾಕೃಷ್ಣಾನಮ್ಮನ್ನು ಗೆಲ್ಲುಸಖಿಯರೊಡನೆ ನಾನು ಎತ್ತುವಆರತಿಯನ್ನು ಸ್ವೀಕರಿಸು ಬೃಂದಾವನದಲ್ಲಿ ಸದಾ ನೀನಿರುನಾವು ತಂದಿರುವ  ಮಾಲೆಗಳನ್ನುಸ್ವೀಕರಿಸು.

ಆತುರವೇ ಕೆಂಡವಾಗಿಆಸೆಯೇ ಧೂಪವಾಗಿ ನಲವೇ ಗಂಧವಾಗಿ ನಲಿವೇ ಪೂಜೆಯಾಗಿಹುದುಇದನ್ನು ಒಪ್ಪಿಸಿಕೋಹಾಲ್ಗಡಲಿನಲ್ಲಿ ಹರಿಯಂತೆ ನಮ್ಮನ್ನು ಎಂದೆಂದಿಗೂ ರಕ್ಷಿಸುನಲಿಯುತ್ತಿರು.

ಹಿತ್ತಿಲ ಸೀಬೆಗಿಣಿ ಕಚ್ಚಿದ ದಾಳಿಂಬೆಬಾಳೆಸಿಹಿನಿಂಬೆನಿನ್ನನ್ನೇ ನೆನೆಯುತ್ತ ಕಡೆದ ಹೊಸಬೆಣ್ಣೆಕಜ್ಜಾಯಗಳು ಇವೆಲ್ಲವನ್ನೂ ಮನೆಯವರ ಕಣ್ತಪ್ಪಿಸಿ ತಂದಿರುವೆವು ನೈವೇದ್ಯಗಳನ್ನುಸ್ವೀಕರಿಸುಮನದ ಹಸಿವೆಯೆಲ್ಲ ನೀಗುವಂತೆ ಹರಸು ನಂದನ ಕಂದ.


ಗೋಪಾಲಕರು ಹಾಹಾ ಹೂಹೂ ಅಹಹಹಾ ಎಂದೆಲ್ಲ ಹಾಡುವರು.ಲಲ್ಲೆಯಿಂದ ಸ್ತುತಿಸುವರುವಿವಿಧ ವಾದ್ಯಗಳ ಶಬ್ದದೊಂದಿಗೆತಾಳಬದ್ಧವಾಗಿ ಹೆಜ್ಜೆಯಿಟ್ಟು ಮುದಗೊಂಡು  ಹಕ್ಕಿಗಳಂತೆಕುಣಿಯುವರು ಎಲ್ಲರೂ ಸೇರಿ ಕೃಷ್ಣನನ್ನು ಸ್ತುತಿಸುತ್ತ ಕಡಲಿನ ತೆರೆಗಳಂತೆ ಆನಂದದಿಂದನರ್ತಿಸುವರು.

 ಇರುಳು ಮುಗಿಯದಿರಲಿನಿದ್ರೆಯು ನಮ್ಮನ್ನು ಆವರಿಸದಿರಲಿನಮಗೆ ಸದಾ ನಲವಿರಲಿಎನ್ನುವರುಕೃಷ್ಣ ಕಲ್ಪತರು ಇದ್ದಂತೆನಿನ್ನ ಕೊಳಲಿನ ನಾದವೊಂದೇ ಸಾಕುಬೇರೇನನ್ನೂಬಯಸೆವುಯಾವ ಬೇಡಿಕೆಯೂ ಬೇಡವಾಗಿದೆನಿನ್ನ ಪ್ರೇಮದ ಮುಂಬೆಳಗು ಒಂದೇ ಸಾಕುಮಂಗಳಕರಳಾದ ರಾಧೆಯೊಂದಿಗೆ ಒಳ್ಳೆಯ ಕಳೆಯಿಂದ ಕೂಡಿದವನಾಗಿ ನಮ್ಮೆಲ್ಲರಿಗೂಸಂತಸವನ್ನು ನೀಡು ಎನ್ನುವರುಹೀಗೆ ಹಾಡುತ್ತಾ ಹಾಡುತ್ತಾ ನೃತ್ಯವನ್ನು ಮುಗಿಸುವರು.


ಭಾವಾರ್ಥಸುಬ್ಬುಲಕ್ಷ್ಮಿ



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ