ಗೋಕುಲ ನಿರ್ಗಮನ 15
ಗೋಕುಲ ನಿರ್ಗಮನ 15
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ರಾಧೆ
ರಾಗ - ಅಸಾವೇರಿ
ಬಯಕೆಯೊಳೇ ಬಾಳ್ ಕಳೆವುದು ಬಯಕೆಯು ದೊರೆತ ಚಣ
ಬಯಸಿಕೆಯನೆ ಬಯಸುವ ತೆರವೇಕಹುದೆನ್ನ ಮನ
ತವಿಸಿತಹಾ ಬಹವರೆಗೂ ತೊಟ್ಟನೆ ಉಳಿವಂತೆ ಇನ ಬಂದರೆ ಮುಗಿವೀ ಎದೆ ಏನಿದರ ಅಹಂತೆ
ಕೃಷ್ಣ
ಸಖಿ ರಾಧೇ ನಾಣಂ ತೊರೆ ನೋಟದೊಳಾದರಿಸು
ಸವಿದನಿಯಿಂದಿನಿಯಾ ಎಂದೆನ್ನೆದೆಯಾವರಿಸು ಕ್ರೂರನೆ ನಾ ಕಾಮಿಯೆ ನಾ ಏಕಿಹೆ ಅಂಹಿದೊಲು
ಬೇಡನ ಕೈಯಿಂ ಬಿಡುಗಡೆಗೆಳೆಸುವ ಹಕ್ಕಿಯೊಲು
ರಾಧೆ
ನೆನೆದಂತಿಹೆ ದೂರದೊಳಿರೆ ಊಹೆಗೆ ನೀ ಮೇಲೆ
ಸನಿಯದೊಳೆಂತೋ ಅರಿಯೆನು ಈ ಬಗೆಯೇ ಬೇರೆ
ಇಬ್ಬರಿಗೂ ಮೈಯುಂಟೆಂಬೊಲವೊಪ್ಪುವ ತನಕ
ಭ್ರಮಿಸುವೆನಾಸೆಯ ಬೆಂಬಲ ಪ್ರೇಮಕೆ ದೊರೆವನಕ
ಕೃಷ್ಣ
ಸುತ್ತಿನ ದಳದಂದದಿ ನಾ-
ಕಂಪಂದದಿ ನೀನು
ಕಿರಣದ ತೆರ ನಾನಾಗಲು ಕಾಂತಿಯ ತೆರ ನೀನು
ಕೊಳಲ ಸರದಿ ಮನ್ಮನದೊಲು ಕಿವಿಯೊಳು ದನಿಯಂತೆ
ಬಿಂಕವನುಳಿದೊಲುಮೆಗೆ ಸಲು ನನ್ನೊಳು ನೀ ಕಾಂತೆ
ರಾಧೆ
(ಮುಖವೆತ್ತಿ ನೋಡುತ್ತಾ ಬೆರಗಿನ ಭಾವದಿಂದ )
ಸುಂದರ ನಾ ನೆನೆಯುತಲಿರೆ ಪರಿಯರಿವೆನು ನಿನ್ನ
ಬಳಿಯೊಳು ನೋಡುತ ನೋಡುತ ಬಳಿಯಳಿವೆನು ನನ್ನ
ನುಡಿಯಲು ಮನ ಸೋಕಲು ಮೈ ನೋಡುತ ನಗಲಿರವು.
ನೀನುಂಟೆನೆ ನಾನಿಲ್ಲಿನೆ ಎನಗಹುದುಳಿವಳಿವು
ಕೃಷ್ಣ
ನನ್ನೊಳು ನಾ ನಿನ್ನೊಳು ನೀ
ಒಲಿವ ಮುಂತಿಂತೆ ನಾ ನೀ
ನಿನ್ನೊಳು ನಾ ನನ್ನೊಳು ನೀ
ಒಲಿದಮೇಲಿಂತೆ ನಾ ನೀ
ಇದೆ ಒಲವಿನ ಸರಿಗಮಪದನೀ
ಒಲಿವ ಮುನ್ನ ಜಗಕೆಲ್ಲಕು ನಾ
ಒಲಿದ ಮೇಲೆ ಜಗಕೆಲ್ಲಕು ನೀ
( ಬೇಕಾದವರು ಇದೆ ಒಲವಿನ ಬೆರಗಿನ ಸರಣಿ ಎಂದು ಹೇಳಿಕೊಳ್ಳಬಹುದು.)
ಹಿನ್ನೆಲೆ ನಾ ಮುನ್ನೆಲೆ ನೀ
ಒಲಿದ ಮೇಲಿಂತೆ ನಾನೀ - ಇದೆ
ಚೆಲುವು ಮುನ್ನ ಹೊಳಲಿಟ್ಟಿತು ನನ್ನ
ಇಂದು ಚೆಲುವು ಹೊಳಲಿಡುವುದು ನಿನ್ನ ಬಯಕೆ ನಾ ಸಲಿಕೆ ನೀ
ಒಲಿದ ಮೇಲಿಂತ ನಾನೀ - ಇದೆ
ರಾಧೆ
ಹಾಡು : ರಾಗ - ಸಿಂಧುಭೈರವಿ
'ಮುಟ್ಟಿಕೊಂಡರೂ ದೂರದೊಳಿಹನು ಕಟ್ಟಿನಿಂದರೂ ಬಿಟ್ಟಿಹನಿವನು'
ಇಂತದೇಕೊ ಸದಯ - ಹೃದಯ
ಶಂಕೆಗೊಂಬುದಿನಿಯ
ಬಿಸಿಲುಕೋಲು ಕೈಗೈತರುವಂತೆ
ನಿನ್ನ ರೂಪವೆನಗೆಟಕಿಹುದಿಂತೆ
ಎನುತದೇಕೊ ಹೃದಯ - ಸದಯ ಶಂಕೆಗೊಂಬುದಿನಿಯ
ನಲಿವೊಲು ಹನಿ ತಾವರೆಯೆಲೆಯೊಳಗೆ ನಿನ್ನೊಲವಾಡುವುದೆನ್ನೆದೆಯೊಳಗೆ ಎಂದದೇಕೊ ಸದಯ - ಹೃದಯ
ಶಂಕೆಗೊಂಬುದಿನಿಯ
ಅರಿಯೆ ಅರಿಯೆ ಹರಿ ಎನ್ನೀ ಪರಿಯ
'ಮರುಳ ಹೆಣ್ಣೆ ಬಿಡು ನಿನಗಿವ ದೊರೆಯ' ಇಂತೇಕೊ ಕಾಣೆ ಹೃದಯ – ಸದಯ -
ಶಂಕೆಗೊಂಬುದಿನಿಯ
***********
ರಾಧೆಯ ಮನದ ಮಾತುಗಳು ಇಲ್ಲಿ ಮೂಡಿವೆ. ಬಯಕೆಯಲ್ಲಿಯೇ ಬಾಳು ಮುಗಿಯುವುದು. ಅಕಸ್ಮಾತ್ ಬಯಸಿದ್ದು ದೊರೆತರೂ ಬಯಕೆ ಪಡುವುದರಲ್ಲಿರುವ ಸುಖವೇ ಸೊಗಸು. ಆ ರೀತಿ ನನ್ನ ಮನಕ್ಕೆ ಅನಿಸುತ್ತಿಹುದು. ಇನಿಯನ ಬರವನ್ನೇ ಹಾರೈಸುತ್ತಿದ್ದ ಮನಸ್ಸಿಗೆ ಅವನು ಬಂದ ಈ ಕ್ಷಣ ಎಲ್ಲ ಮರೆತಂತೆ. ಏನಿದರ ಅಹಂ ಎಂದು ಯೋಚಿಸುವಳು.
ಕೃಷ್ಣನು ರಾಧೆಯನ್ನು ಕುರಿತು ನಾಚಿಕೆಯನ್ನು ಬಿಟ್ಟು ನೋಟದಲ್ಲಿ ನನ್ನನ್ನು ಆದರಿಸು, ಸವಿಮಾತುಗಳಿಂದ ಇನಿಯಾ ಎಂದು ನನ್ನೆದೆಯನ್ನು ಆವರಿಸು. ನಾನೇನು ಕ್ರೂರಿಯೆ? ಕಾಮಿಯೆ? ಏಕೆ ಹೆದರಿದಂತಿರುವೆ? ಬೇಡನ ಕೈಗೆ ಸಿಕ್ಕ ಹಕ್ಕಿಯಂತೆ ಹೆದರಿರುವೆ ಎನ್ನುವನು.
ಅದಕ್ಕೆ ರಾಧೆಯು ದೂರದಲ್ಲಿದ್ದರೆ ಒಂದು ಬಗೆ. ಹತ್ತಿರದಲ್ಲಿದ್ದಾಗ ಇನ್ನೊಂದು ಬಗೆ. ಅರ್ಥವೇ ಆಗದು. ಇಬ್ಬರೂ ಎಲ್ಲವನ್ನೂ ಮರೆತು ಒಂದಾಗುವತನಕ ಹೀಗೆಯೇ ಎನ್ನುವಳು.
ಕೃಷ್ಣನು ಅವಳಿಗೆ ಪ್ರೀತಿಯ ಮಾತುಗಳಿಂದ ರಮಿಸುವನು. ಹೂವಿನ ದಳ ನಾನಾದರೆ ಅದರ ಸುಗಂಧ ನೀನು. ಕಿರಣ ನಾನಾದರೆ ಅದರ ಕಾಂತಿಯು ನೀನು. ಕೊಳಲಿನ ಧ್ವನಿಯು ಕಿವಿಯಲ್ಲಿ ಬೆರೆತಂತೆ ನನ್ನಲ್ಲಿ ನೀನು ಬಿಂಕವನ್ನು ಬಿಟ್ಟು ಒಂದಾಗು ಎನ್ನುವನು.
ರಾಧೆಯು ಬೆರಗಿನಿಂದ ಅವನನ್ನು ನೋಡುತ್ತ ನಿನ್ನನ್ನು ನೆನಪಿಸಿಕೊಳ್ಳುತ್ತ ನಿನ್ನನ್ನು ನೆನೆಯುವೆನು. ಮಾತನಾಡಲು, ಸ್ಪರ್ಶಿಸಲು, ನೋಡಲು, ನಗಲು ನೀನಿದ್ದರೆ ಅಷ್ಟೇ ನಾನು. ನೀನಿಲ್ಲದೆ ನಾನಿಲ್ಲವೆನ್ನುವಳು.
ಕೃಷ್ಣನು ರಾಧೆಗೆ ನಾವು ಒಲಿಯುವ ಮೊದಲು ನಾವು ಪರಸ್ಪರ ಬೇರೆ ಬೇರೆಯಾಗಿದ್ದರೂ ಒಲಿದ ನಂತರ ನಾವು ಒಂದೇ ಆದೆವು. ಒಲವಿನ ಸರಿಗಮಪದನೀ ಇದೇ ಆಗಿದೆ. ಒಲಿಯುವ ಮುನ್ನ ಜಗತ್ತಿಗೆಲ್ಲ ನಾನು ಇದ್ದರೆ ಒಲಿದ ನಂತರ ನೀನು ಅವರಿಸಿರುವೆ. ಮುಂದೆ ನೀನಾದರೆ ನಿನ್ನ ಹಿಂದೆ ನಾನು. ಬಯಕೆ ನಾನಾದರೆ ಅದರ ಸಲ್ಲಿಸುವಿಕೆ ನೀನು. ನಾವಿಬ್ಬರಲ್ಲ. ಒಬ್ಬರೇ ಎಂದು ರಮಿಸುವನು.
ರಾಧೆಯು ತನ್ನ ಹೃದಯದಲ್ಲಿ ಏನೋ ಶಂಕೆ ಮೂಡುತ್ತಿಹುದು ಎಂದು ಕಳವಳಗೊಳ್ಳುವಳು. ಹತ್ತಿರವಿದ್ದರೂ ದೂರದಲ್ಲಿರುವ ಭಾವ, ಇವನು ನನಗಿನ್ನು ದೊರೆಯನು ಎಂಬ ಭಾವ, ಕೃಷ್ಣನ ರೂಪವು ಇನ್ನು ಕೈಗೆ ಎಟುಕದಂತಹ ಭಾವ...ಏನೋ ಶಂಕೆ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು