ಮಾಧವಿ
ಮಾಧವಿ
ಮಾಧವಿ ಕನ್ನಡ ಚಿತ್ರಗಳೂ ಸೇರಿದಂತೆ ಅನೇಕ ಭಾಷೆಗಳಲ್ಲಿ ಜನಪ್ರಿಯತೆ ಮತ್ತು ಬೇಡಿಕೆ ಹೊಂದಿದ್ದ ನಟಿ.
ಮಾಧವಿ 1962ರ ಆಗಸ್ಟ್ 12ರಂದು ಹೈದರಾಬಾದಿನಲ್ಲಿ ಜನಿಸಿದರು. ತಂದೆ ಗೋವಿಂದಸ್ವಾಮಿ. ತಾಯಿ ಶಶಿರೇಖಾ. ಮಾಧವಿ ಭರತನಾಟ್ಯವನ್ನು ಉಮಾ ಮಹೇಶ್ವರಿ ಮತ್ತು ಜಾನಪದ ನೃತ್ಯವನ್ನು ಭಟ್ ಅವರಲ್ಲಿ ಕಲಿತರು.
ರಾಜ್ಕುಮಾರ್, ಶಿವಾಜಿ ಗಣೇಶನ್, ಎನ್ಟಿಆರ್, ಅಮಿತಾಭ್ ಬಚ್ಚನ್, ರಜನೀಕಾಂತ್, ಕಮಲ ಹಾಸನ್, ವಿಷ್ಣುವರ್ಧನ್, ಚಿರಂಜೀವಿ, ಅನಂತನಾಗ್, ಮೋಹನ್ಲಾಲ್, ಮುಮ್ಮೂಟಿ ಹೀಗೆ ಎಲ್ಲ ಪ್ರಸಿದ್ಧರ ಜೊತೆ ಮಾಧವಿ ಅಭಿನಯಿಸಿದ್ದಾರೆ. 1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದ ಮಾಧವಿ ಸುಮಾರು 300 ಸಿನಿಮಾಗಳಲ್ಲಿ ನಟಿಸಿದ್ದಾರೆ.
ದಾಸರಿ ನಾರಾಯಣ ರಾವ್ ಅವರ 'ತೂರ್ಪು ಪಡಮರ' ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಮಾಧವಿ ಮುಂದೆ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಓರಿಯಾ, ಬಂಗಾಳಿ ಭಾಷೆಗಳಲ್ಲಿ ನಟಿಸಿದರು.
ಖೈದಿ, ಇಂಟ್ಲೊ ರಾಮಯ್ಯ ವೀದಿಲೊ ಕೃಷ್ಣಯ್ಯ, ರಾಜಪಾರ್ವೈ, ತಂಬಿಕ್ಕಿ ಇಂದ ಊರು, ಹಾಲು ಜೇನು, ಅಗ್ನಿಪಥ್ ಸಿನಿಮಾಗಳು ಮಾಧವಿಯ ಫೇವರಿಟ್ ಅಂತೆ. ಇವಲ್ಲದೆ ಮರೋಚರಿತ್ರ, ಏಕ್ ದೂಜೆ ಕೇ ಲಿಯೆ, ಜೀವನ ಚೈತ್ರ, ಭಾಗ್ಯಾದ ಲಕ್ಷ್ಮೀ ಬಾರಮ್ಮ, ಮಲಯ ಮಾರುತ ಮುಂತಾದ ಪ್ರಸಿದ್ಧ ಚಿತ್ರಗಳೂ ನೆನಪಾಗುತ್ತವೆ.
ಒಂದು ರೀತಿಯಲ್ಲಿ ಎಲ್ಲ ಹೀರೋಗಳೊಂದಿಗೆ ಸಮಾನವಾದ ಎತ್ತರ ಮತ್ತು ವರ್ಚಸ್ಸಿನಲ್ಲಿ ಅವರು ನಟಿಸಿದವರು. ಗಾಂಭೀರ್ಯ, ನಗೆ, ನೃತ್ಯ, ತುಂಟತನ ಹೀಗೆ ಹಲವು ಲಕ್ಷಣಗಳ ಸಂಮಿಶ್ರಿತ ಕಾಂತಿವಂತೆ.
ಮಾಧವಿ ಅಮೆರಿಕದಲ್ಲಿರುವ ರಾಲ್ಪ್ ಶರ್ಮಾ ಅವರನ್ನು ವರಿಸಿದ್ದಾರೆ. 2017ರಲ್ಲಿ 'ದಿ ಮಾಧವಿ ಚಾರಿಟೇಬಲ್ ಫೌಂಡೇಶನ್'ನ್ನು ಸ್ಥಾಪಿಸಿರುವ ಮಾಧವಿ ಅನೇಕ ಸಮಾಜಮುಖಿ ಕಾರ್ಯಗಳನ್ನೂ ನಡೆಸುತ್ತಿದ್ದಾರೆ.
On the birth day of actress Madhavi
ಕಾಮೆಂಟ್ಗಳು