ಅಂಜಲಿ ದೇವಿ
ಅಂಜಲಿ ದೇವಿ
ಅಂಜಲಿ ದೇವಿ ದಕ್ಷಿಣ ಭಾರತ ಚನಚಿತ್ರರಂಗದ ಪ್ರಸಿದ್ಧ ಕಲಾವಿದೆಯರಲ್ಲಿ ಒಬ್ಬರು. ತೆಲುಗು, ತಮಿಳು, ಕನ್ನಡ ಸೇರಿದಂತೆ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಅವರು ಹಲವಾರು ಚಿತ್ರಗಳ ನಿರ್ಮಾಪಕಿಯೂ ಆಗಿದ್ದರು. ಇಂದು ಅವರ ಸಂಸ್ಮರಣೆ ದಿನ.
ಅಂಜಲಿ ದೇವಿ 1927ರ ಆಗಸ್ಟ್ 24ರಂದು ಜನಿಸಿದರು. ಆಂಧ್ರದ ಗೋದಾವರಿ ಜಿಲ್ಲೆಯ ಪೆದ್ದಾಪುರಂ ಮೂಲದ ಅಂಜಲಿ ದೇವಿ, ಮುಂದೆ ಚೆನ್ನೈನಲ್ಲಿ ನೆಲೆಸಿದ್ದರು.
ಅಂಜಲಿ ದೇವಿ 9 ವರ್ಷವಿರುವಾಗಲೇ
ರಂಗ ಕಲಾವಿದೆಯಾಗಿ ಬಣ್ಣದ ಬದುಕು ಪ್ರವೇಶಿಸಿದರು. ನಾಯಕಿಯಾಗಿ ಇವರ ಮೊದಲ ಚಿತ್ರ ‘ಕಷ್ಟಜೀವಿ’(1940). ಆದರೆ ಆ ಚಿತ್ರ ತೆರೆ ಕಾಣಲಿಲ್ಲ. ನಂತರ ನಿರ್ದೇಶಕ ಸಿ. ಪುಲ್ಲಯ್ಯ ಅವರು ಅಂಜಲಿ ಕುಮಾರ್ ಎಂಬ ಹೆಸರಿದ್ದ ಇವರನ್ನು ಅಂಜಲಿ ದೇವಿ ಎಂದು ಹೆಸರು ಬದಲಿಸಿ, ಚಿತ್ರರಂಗಕ್ಕೆ ಪರಿಚಯಿಸಿದರು.
ಅಂಜಲಿ ದೇವಿ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಮುಂತಾದ ಎಲ್ಲ ಖ್ಯಾತರೊಂದಿಗೆ ಅಭಿನಯಿಸಿದ್ದರು.
ಸೀತೆ, ಸಾವಿತ್ರಿ, ಸಕ್ಕೂಬಾಯಿ ಮತ್ತಿತರ ಪೌರಾಣಿಕ ಪಾತ್ರಗಳಲ್ಲಿ ಜನಮನ ಗೆದ್ದ ಅಂಜಲಿ ದೇವಿ ಅವರು ಅನೇಕ ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ್ದರು.
ಅಂಜಲಿ ದೇವಿ ಅವರು ನಿರ್ಮಾಪಕಿಯಾಗಿ ‘ಅಂಜಲಿ ಪಿಕ್ಚರ್ಸ್’ ಮೂಲಕ ಯಶಸ್ವಿ ಚಿತ್ರಗಳಾದ ‘ಅನಾರ್ಕಲಿ’, ‘ಪರದೇಶಿ’, ‘ಸುವರ್ಣ ಸುಂದರಿ’ ಸೇರಿದಂತೆ ಸುಮಾರು 20 ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಅಂಜಲಿ ದೇವಿ ಅವರ ಪ್ರಮುಖ ಚಿತ್ರಗಳಲ್ಲಿ ತೆಲುಗಿನ ‘ಲವ ಕುಶ’(ತೆಲುಗಿನ ಮೊದಲ ವರ್ಣಚಿತ್ರ), ‘ಭಕ್ತ ಪ್ರಹ್ಲಾದ’, ‘ಭಕ್ತ ತುಕಾರಾಂ’, ತಮಿಳಿನ ‘ನಿರಪರಾಧಿ’, ‘ಸರ್ವಾಧಿಕಾರಿ’, ಹಿಂದಿಯ ‘ದೇವತಾ’, ‘ಶ್ರೀ ರಾಮ್ ವನವಾಸ್’ ಮುಂತಾದವು ಸೇರಿವೆ. ಅಂಜಲಿ ದೇವಿ ಅವರು ಹಿಂದಿ ಚಿತ್ರರಂಗದಲ್ಲಿ ಹೆಸರಾದ ನಟಿ ರೇಖಾ ಅವರನ್ನು ತೆಲುಗು ಚಿತ್ರರಂಗಕ್ಕೆ ಬಾಲನಟಿಯಾಗಿ ‘ರಂಗುಲ ರತ್ನಂ’ ಚಿತ್ರದ ಮೂಲಕ ಪರಿಚಯಿಸಿದವರು.
ಲವ ಕುಶ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ನಾಲ್ಕು ಫಿಲಂಫೇರ್, ಡಾಕ್ಟೊರೇಟ್ ಸೇರಿದಂತೆ ಅವರಿಗೆ ಅನೇಕ ಗೌರವಗಳು ಸಂದಿದ್ದವು.
ಅಂಜಲಿ ದೇವಿ 2014ರ ಜನವರಿ 13ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.
On the birth anniversary of actress Anjali Devi
Good information to the scoity 🙏🙏
ಪ್ರತ್ಯುತ್ತರಅಳಿಸಿ