ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾನ್ ಹ್ಯೂಬರ್ಟ್


 ಜಾನ್ ಹ್ಯೂಬರ್ಟ್ ಮಾರ್ಷಲ್


ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರು.  ಜೊತೆಗೆ ಅನೇಕ ಭಾರತೀಯರನ್ನು ಪುರಾತನ ಶಾಸ್ತ್ರದ ಕೆಲಸಕ್ಕೆ ನೇಮಿಸಿ ಮುನ್ನಡೆಸಿದವರು.

ಜಾನ್ ಹ್ಯೂಬರ್ಟ್ ಮಾರ್ಷಲ್ ಅವರು 1876 ಮಾರ್ಚ್ 19ರಂದು ಯುನೈಟೆಡ್ ಕಿಂಗ್ಡಂನ ಚೆಸ್ಟರ್ ಎಂಬಲ್ಲಿ ಜನಿಸಿದರು. ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ಇವರನ್ನು ಭಾರತದ ಪುರಾತತ್ವ ಸರ್ವೇಕ್ಷಣದ ಪ್ರಧಾನ ನಿರ್ದೇಶಕರಾಗಿ 1902ರಲ್ಲಿ ನೇಮಿಸಿದರು. ಆ ಹುದ್ದೆಯಲ್ಲಿ ಇವರು 1931ರ ತನಕ ಕಾರ್ಯನಿರ್ವಹಿಸಿದರು. 

ಜಾನ್ ಮಾರ್ಷಲ್ ಅವರ   ಅಧಿಕಾರಾವಧಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಗಣನೀಯ ಪ್ರಗತಿಯಾಯಿತು. ಹಲವು ಹುದ್ದೆಗಳಿಗೆ ಭಾರತೀಯರನ್ನೇ ನೇಮಕ ಮಾಡಿದರಲ್ಲದೆ ಭಾರತೀಯ ಪುರಾತತ್ವಜ್ಞರ ತರಬೇತಿಗಾಗಿ ಶಿಷ್ಯವೇತನಗಳನ್ನೂ ಸ್ಥಾಪಿಸಿದರು. ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಿದ ಮಾರ್ಷಲ್ ಅವರು ಅವುಗಳ ಯಾದಿಯನ್ನು ಸಿದ್ಧಪಡಿಸಿದರು. ವಸ್ತುಸಂಗ್ರಹಾಲಯ ಕಾರ್ಯದ ವಿಸ್ತರಣೆ, ಶಾಸನಗಳ ಪ್ರಕಟಣೆ ಹಾಗೂ ವ್ಯವಸ್ಥಿತ ರೀತಿಯಲ್ಲಿ ವಾರ್ಷಿಕ ವರದಿಗಳ ಪ್ರಕಟಣೆ ಇವರ ಸಾಧನೆಗಳಲ್ಲಿ ಸೇರಿವೆ.

ಜಾನ್ ಮಾರ್ಷಲ್ ಅವರ ನೇತೃತ್ವದಲ್ಲಿ ಪ್ರಾಚೀನ ಐತಿಹಾಸಿಕ ನಿವೇಶನಗಳಲ್ಲಿ ಉತ್ಖನನ ನಡೆಸುವ ವ್ಯಾಪಕ ಯೋಜನೆಯನ್ನು ಇಲಾಖೆ ಕೈಗೊಂಡಿತು. ಚಾರ್ಸದ, ಭೀಟಾ, ಪಾಟಲಿಪುತ್ರ (ಪಟಣ), ವೈಶಾಲಿ ಹಾಗೂ ತಕ್ಷಶಿಲಾ, ಬೌದ್ಧಕೇಂದ್ರಗಳಾಗಿದ್ದ ಸಾಂಚಿ, ಸಾರನಾಥ, ಕಸಿಯಾ ಮತ್ತು ಶ್ರಾವಸ್ತಿ ಇವು ಉತ್ಖನನಗೊಂಡ ನಿವೇಶನಗಳು. ಇವರ ನೇತೃತ್ವ ಮತ್ತು ನಿರ್ದೇಶನದಲ್ಲಿ ನಡೆಸಿದ ಉತ್ಖನನದಲ್ಲಿ ಹರಪ್ಪ (1921) ಮೊಹೆಂಜೊದಾರೊ (1922) ನಿವೇಶನಗಳು ಬೆಳಕಿಗೆ ಬಂದುವು. 

ಜಾನ್ ಮಾರ್ಷಲ್ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಸ್ಮಾರಕಗಳನ್ನು ರಕ್ಷಿಸುವ ವಿಧಾನವನ್ನು ಪರಿಚಯಿಸುವ ಕೈಪಿಡಿಯೊಂದನ್ನು ರಚಿಸಿದರು.  ಇದಲ್ಲದೆ ಗಾಂಧಾರ ವಾಸ್ತುಪಂಥದ ಉಗಮ, ಬೆಳವಣಿಗೆ ಹಾಗೂ ಅವನತಿಯನ್ನು ಚಿತ್ರಿಸುವ ಕೃತಿಯೊಂದನ್ನೂ ರಚಿಸಿದರು. ಸಾಂಚಿ ಹಾಗೂ ತಕ್ಷಶಿಲಾ ಕುರಿತ ಕಿರು ಪುಸ್ತಿಕೆಗಳು ಇವರ ಇನ್ನೆರಡು ಕೃತಿಗಳು. 

ಮಾರ್ಷಲ್ ಅವರ ಅತಿಪ್ರಮುಖ ಕಾಣಿಕೆಗಳೆಂದರೆ ಮೊಹೆಂಜೋದಾರೊ ಅಂಡ್ ದಿ ಇಂಡಸ್ ಸಿವಿಲೈಸೇಷನ್ ಕೃತಿಯ ಮೂರು ಸಂಪುಟಗಳು (1939) ಹಾಗೂ ತಕ್ಷಶಿಲಾ ಉತ್ಖನನ ಕುರಿತ ಮೂರು ಬೃಹತ್ ಸಂಪುಟಗಳು (1951).

ಪ್ರಾಚೀನ ಸ್ಮಾರಕಗಳತ್ತ ವಿಶೇಷ ಗಮನವಿತ್ತ ಮಾರ್ಷಲ್ 1958 ಆಗಸ್ಟ್ 17 ರಂದು ನಿಧನರಾದರು. 

Sir John Hubert Marshall, who oversaw many excavations including  Harappa and Mohenjodaro

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ