ನಾ. ಮೊಗಸಾಲೆ
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ನಾರಾಯಣ ಮೊಗಸಾಲೆ ಅವರು ನಾ. ಮೊಗಸಾಲೆ ಎಂಬ ಹೆಸರಿನಿಂದ ಬಹುಮುಖಿ ಸಾಹಿತ್ಯ ಸೇವೆ
ಮಾಡುತ್ತಾ ಬಂದಿದ್ದಾರೆ. ಕಾಂತಾವರ ಕನ್ನಡ ಸಂಘದ ಸ್ಥಾಪಕರಾಗಿ ಅತ್ಯುತ್ತಮ ಸಾಹಿತ್ಯ ಚಟುವಟಿಕೆಗಳಿಗೂ ಕಾರಣರಾಗಿದ್ದಾರೆ.
ನಾ. ಮೊಗಸಾಲೆಯವರು ಕಾಸರಗೋಡು ತಾಲೂಕಿನ ಕೋಳ್ಯೂರು ಗ್ರಾಮದ ಮೊಗಸಾಲೆ ಎಂಬಲ್ಲಿ 1944ರ ಆಗಸ್ಟ್ 27ರಂದು ಜನಿಸಿದರು. ತಂದೆ ವಿಠಲ ಭಟ್ಟ. ತಾಯಿ ಸರಸ್ವತಿ. ಮೊಗಸಾಲೆಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಳ್ಯೂರು ಶಂಕರನಾರಾಯಣ ಶಾಲೆಯಲ್ಲಿ ಮತ್ತು ಮಾಧ್ಯಮಿಕದಿಂದ ಹೈಸ್ಕೂಲ್ ತನಕದ ಅಧ್ಯಯನವನ್ನು ಕನ್ಯಾನದ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದರು. ಅನಂತರ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಡಿ.ಎಸ್.ಎ.ಸಿ. ಆಯುರ್ವೇದ ಡಿಪ್ಲೋಮಾ ಪದವಿ ಪಡೆದು 1965ರಲ್ಲಿ ಕಾರ್ಕಳ ತಾಲೂಕಿನ ಕಾಂತಾವರದ ಗ್ರಾಮೀಣ ಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಗಳಾಗಿ ನೇಮಕಗೊಂಡು ಅಲ್ಲಿಯೇ 2002ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.
ಮೊಗಸಾಲೆಯವರಿಗೆ ಎಳವೆಯಲ್ಲಿಯೇ ಸಾಹಿತ್ಯಾಸಕ್ತಿಯಿತ್ತು. ತಮ್ಮ ಹಿರಿಯರಿಂದ ಬಂದಿದ್ದ ಸಾಹಿತ್ಯ ಮತ್ತು ಯಕ್ಷಗಾನಾಸಕ್ತಿಗಳ ಪ್ರಭಾವ ಅವರಲ್ಲಿ ಸಾಹಿತ್ಯ ಕ್ಷೇತ್ರದ ಆಸಕ್ತಿ ಮೂಡಲು ಕಾರಣವಾಯಿತು.
ಮೊಗಸಾಲೆಯವರು ಕಾಂತಾವರದಲ್ಲಿ 'ರೈತ ಯುವಕ ವೃಂದ’ದ ಸ್ಥಾಪನೆಯ ರೂವಾರಿಯಾಗಿ ರೈತರನ್ನು ಸಂಘಟಿಸಿದರು. ಅಲ್ಲಿನ ಆಸಕ್ತರನ್ನು ಸಂಘಟಿಸಿ ಕಾಂತಾವರ ಕನ್ನಡ ಸಂಘದ ಸ್ಥಾಪಕರಾದರು. ಆ ಸಂಘದ ಮೂಲಕ ಮುದ್ದಣ ಕಾವ್ಯ ಪ್ರಶಸ್ತಿ, ಸುವರ್ಣರಂಗ ಸನ್ಮಾನ್ ಪ್ರಶಸ್ತಿ, ಕಾಂತಾವರ ಪುರಸ್ಕಾರ, ಕಾಂತಾವರ ಲಲಿತಕಲಾ ಪುರಸ್ಕಾರ ಎಂಬ ಪ್ರಶಸ್ತಿಗಳಿಗೆ ಚಾಲನೆ ನೀಡಿದರು. 'ನಾಡಿಗೆ ನಮಸ್ಕಾರ’ ಎಂಬ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಸಾಧಕರ ಪರಿಚಯ ಮಾಡುತ್ತಾ ಬಂದರು. ಸಂಘದ ಮೂಲಕ 'ನುಡಿನಮನ’ ಎಂಬ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ ನಡೆಸಿದ್ದೇ ಅಲ್ಲದೆ ಅಲ್ಲಿನ ಉಪನ್ಯಾಸಗಳನ್ನು 'ನುಡಿಹಾರ’ ಎಂಬ ಸಂಪುಟಗಳಾಗಿ ಪ್ರಕಟಿಸಿದರು. ಬೇರೆ ಬೇರೆ ಕಡೆಗಳಲ್ಲಿಯೂ ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಸರಕಾರದಿಂದ ನೆರವು ಪಡೆದು ಕಾಂತಾವರದಲ್ಲಿ 'ಕನ್ನಡ ಭವನ’ವನ್ನು ನಿರ್ಮಿಸಿದ್ದಾರೆ. ಮೂಡುಬಿದಿರೆಯ 'ವರ್ಧಮಾನ ಪ್ರಶಸ್ತಿ ಪೀಠ’ ಮತ್ತು ಕಾಂತಾವರದಲ್ಲಿ “ಅಲ್ಲಮ ಪ್ರಭು ಪೀಠ’ಗಳ ಪ್ರಧಾನ ನಿರ್ದೇಶಕ ಸ್ಥಾನದ ಹೊಣೆ ನಿರ್ವಹಿಸಿದ್ದಾರೆ.
ನಾ. ಮೊಗಸಾಲೆಯವರ ಕವನ ಸಂಗ್ರಹಗಳಲ್ಲಿ ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ ಇದಲ್ಲ, ಅರುವತ್ತರ ತೇರು, ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಪೂರ್ವೋತ್ತರ, ಕರಣ ಕಾರಣ ಮುಂತಾದವು ಸೇರಿವೆ.
ನಾ. ಮೊಗಸಾಲೆ ಅವರ ಕಾದಂಬರಿಗಳಲ್ಲಿ ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದ್ದು, ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ, ಮುಖಾಂತರ, ಧಾತು ಮುಂತಾದವು ಸೇರಿವೆ.
ಆಶಾಂಕುರ, ಹಸಿರು ಬಿಸಿಲು, ಸುಂದರಿಯ ಎರಡನೆ ಅವತಾರ, ಸೀತಾಪುರದ ಕಥೆಗಳು, ಸೀತಾಪುರದಲ್ಲಿ ಕತೆಗಳೇ ಇಲ್ಲ ಮುಂತಾದವು ಮೊಗಸಾಲೆ ಅವರ ಕಥಾ ಸಂಕಲನಗಳು. ಅವರ ಪ್ರಬಂಧ ಸಂಗ್ರಹಗಳಲ್ಲಿ ಮೊಗಸಾಲೆಯವರ ಒಲವು ನಿಲುವು, ಬಿಸಿಲು ಕೋಲು, ರೀತಿನೀತಿಗಳ ನಡುವಿನ ಪ್ರೀತಿ, ಅರಿವಿನೊಡನೆ ಅನುಸಂಧಾನ, ಶಬ್ದ ನಿಶಬ್ದಗಳ ನಡುವಿನ ಮಾತು ಮುಂತಾದವು ಸೇರಿವೆ. ವಾಣಿ, ಪ್ರಸ್ತುತ, ಮುದ್ದಣ, ಕಾಂತಶ್ರೀ, ಮನೋರಮ, ರತ್ನಾಕರ, ಸ್ವರ್ಣನಂದಾದೀಪ, ದರ್ಪಣ, ಕೋಳ್ಯೂರು, ನುಡಿಹಾರ ಮುಂತಾದವು ಅವರ ಸಂಪಾದನೆಗಳು.
ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ, ಆರೋಗ್ಯ ಅನಾರೋಗ್ಯದ ನಡುವೆ, ಆರೋಗ್ಯ ಅನಾರೋಗ್ಯಕ್ಕೆ ಆಯ್ಕೆ ಇದೆಯೇ, ದಾಂಪತ್ಯ ಯೋಗ, ಹೆಣ್ಣು ಹೆಣ್ಣನ್ನು ಅರಿಯುವ ಬಗ್ಗೆ, ಪ್ರತಿಕ್ಷಣವೂ ನಿಮ್ಮದೇ ಮುಂತಾದವು ಮೊಗಸಾಲೆ ಅವರ ವೈದ್ಯಕೀಯ ಬರಹಗಳು.
'ಪುರೂರವ' ಕೃತಿ ಮೊಗಸಾಲೆ ಅವರ ಗೀತನಾಟಕ. ಕನ್ನಡ ಜನಾಂತರಂಗ, ಕರಾವಳಿ ಅಲೆ ಪತ್ರಿಕೆಗಳಲ್ಲಿ ಆರೋಗ್ಯ ಸಲಹೆ, ಕನ್ನಡ ಪತ್ರಿಕೆಯಲ್ಲಿ ‘ಸಂಜೆ ಬಿಸಿಲಿನ ಅನುಭವ’ ಮುಂತಾದವು ಅವರ ಅಂಕಣ ಬರಹಗಳು . 'ಬಯಲು ಬೆಟ್ಟ’ ಮೊಗಸಾಲೆಯವರ ಆತ್ಮವೃತ್ತಂತ. ಅವರ ಅನೇಕ ಬರಹಗಳು ಇತರ ಭಾಷೆಗಳಲ್ಲಿ ಅನುವಾದಗೊಂಡಿವೆ.
ನಾ. ಮೊಗಸಾಲೆ ಅವರ 'ನನ್ನದ್ದಲ್ಲದ್ದು’ ಮತ್ತು ‘ಉಲ್ಲಂಘನೆ’ ಕಾದಂಬರಿಗಳಿಗೆ ಹಾಗೂ 'ಇದಲ್ಲ ಇದಲ್ಲ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿವೆ. 'ಮೊಗಸಾಲೆ-50′, 'ಆಯಸ್ಕಾಂತಾವರ’ ಅವರಿಗೆ ಅರ್ಪಿಸಲ್ಪಟ್ಟ ಅಭಿನಂದನ ಗ್ರಂಥಗಳಾಗಿವೆ. ಇದಲ್ಲದೆ ಡಾ. ಶಿವರಾಮ ಕಾರಂತ, ಬಿ.ಎಚ್. ಶ್ರೀಧರ, ಕಡೆಂಗೋಡ್ಲು ಶಂಕರ ಭಟ್ಟ, ಉಗ್ರಾಣ ಮಂಗೇಶರಾವ್, ದಿನಕರ ದೇಸಾಯಿ, ವಿಶುಕುಮಾರ್, ನಿರಂಜನ, ಡಿ.ಎಸ್. ಕರ್ಕಿ, ಡಾ. ಪಿ.ಎಸ್. ಶಂಕರ್, ಕುವೆಂಪು, ಸೂರ್ಯನಾರಾಯಣ ಚಡಗ, ಚದುರಂಗ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಪೆರ್ಲ ಕೃಷ್ಣ ಭಟ್, ಯುಗಪುರುಷದ ಉಡುಪ, ಸರ್ ಎಂ. ವಿಶ್ವೇಶ್ವರಯ್ಯ ಮೊದಲಾದವರ ಹೆಸರಿನಲ್ಲಿರುವ ಅನೇಕ ಪ್ರಶಸ್ತಿಗಳು ಮೊಗಸಾಲೆಯವರ ಕೃತಿಗಳಿಗೆ ಸಂದಿವೆ. ಇವುಗಳ ಜೊತೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ಸರಕಾರದ ಗಳಗನಾಥ ಕಾದಂಬರಿ ಪ್ರಶಸ್ತಿಗಳೂ ಅವರ ಒಟ್ಟು ಸಾಹಿತ್ಯ ಸೇವೆಗೆ ಸಂದಿವೆ. ಮೂಡಬಿದಿರೆಯಲ್ಲಿ ಜರುಗಿದ 71ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ಮಡಿಕೇರಿಯಲ್ಲಿ ಜರುಗಿದ 80ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯಗಾಯನ ಕವಿಗೋಷ್ಠಿಯ ಅಧ್ಯಕ್ಷತೆ, 2016ರ ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ, ಕಾಸರಗೋಡು ಜಿಲ್ಲಾ ಕನ್ನಡ ಸಮ್ಮೇಳನಾಧ್ಯಕ್ಷತೆ ಮುಂತಾದ ಅನೇಕ ಗೌರವಗಳೂ ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಸಂದಿದೆ.
ಪೂಜ್ಯರಾದ ಡಾ. ನಾ. ಮೊಗಸಾಲೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birth day of writer and organizer Dr. Narayana Mogasale
ಕಾಮೆಂಟ್‌ಗಳು