ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನಂತನಾರಾಯಣ



 ಎಸ್. ಅನಂತನಾರಾಯಣ


ಎಸ್. ಅನಂತನಾರಾಯಣ ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದವರು. ಇಂದು ಅವರ ಸಂಸ್ಮರಣಾ ದಿನ.

ಅನಂತನಾರಾಯಣ 1925ರ ನವೆಂಬರ್ 30ರಂದು ಮೈಸೂರಿನಲ್ಲಿ ಜನಿಸಿದರು.  ತಂದೆ ಆರ್. ಸದಾಶಿವಯ್ಯನವರು.  ತಾಯಿ ರಂಗಮ್ಮನವರು.  

ಅನಂತನಾರಾಯಣರ  ಶಿಕ್ಷಣವೆಲ್ಲ ಮೈಸೂರಿನಲ್ಲೆ ನೆರವೇರಿತು. ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾಲಯದ ಹಲವಾರು  ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ತಮ್ಮ  ಶಿಷ್ಯವೃಂದಕ್ಕೆ ಪ್ರೀತಿಪಾತ್ರರಾಗಿದ್ದರು.

ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ.  ಅನಂತನಾರಾಯಣರೂ ಸಹಾ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಸೆರೆಮನೆವಾಸ ಕಂಡರು. ಸೆರೆಮನೆಯೊಳಗಿದ್ದಾಗಲೇ ಕವಿತೆಗಳ ರಚನೆಗಾರಂಭಿಸಿದ ಅನಂತನಾರಾಯಣರು 1944ರಲ್ಲಿ ‘ಬಾಡದ ಹೂ’ ಎಂಬ ನೀಳ್ಗವಿತೆಗೆ ಬಿ.ಎಂ.ಶ್ರೀ.ಯವರಿಂದ ರಜತ ಮಹೋತ್ಸವದ ಸುವರ್ಣ ಪದಕ ಸ್ವೀಕರಿಸಿದರು.  ಹೀಗೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಅನಂತನಾರಾಯಣರು  ಹಲವಾರು ಕಥೆ, ಕಾದಂಬರಿ, ಸಾಹಿತ್ಯ ವಿಮರ್ಶೆಗಳ ಜೊತೆಗೆ  ಜೀವನ ಚರಿತ್ರೆಯನ್ನೂ ಪ್ರಕಟಿಸಿದರು.

ಅನಂತನಾರಾಯಣರ ಪ್ರಮುಖ ಕಾದಂಬರಿಗಳೆಂದರೆ ಪಯಣದ ಹಾದಿಯಲ್ಲಿ, ಮುರುಕು ಮಂಟಪ, ಆಲದ ಹೂ, ಹಣ್ಣು ಹಸಿರು, ತೀರದ ಬಯಕೆ, ಅತ್ತಿಗೆ, ರತ್ನ ಪರೀಕ್ಷೆ, ಸಪ್ತಸಮಾಲೋಕ; ಸಂಪಾದಿತ ಕೃತಿಗಳು-ಚಿಂತನ ಬಿಂದು, ಮೆಲಕು, ವಿಚಾರ ನಿಮಿಷ; ಪ್ರಬಂಧಗಳು: ಅರಣ್ಯ ಪರ್ವ, ಹರಿಶ್ಚಂದ್ರ ಕಾವ್ಯ ಸಾಂಗತ್ಯ; ಇಂಗ್ಲಿಷ್‌ನಿಂದ ಭಾಷಾಂತರ:  ಲಾರಾ ಇಂಗಲ್ಸ್ ವೈಲ್ಡರ್ ಅವರ ಜೀವನಾನುಭವದ 9 ಭಾಗಗಳಲ್ಲಿ 8 ಭಾಗಗಳು, ಡೇಗೆ ಹಕ್ಕಿ : ಇಟಲಿ ಆಸ್ಟ್ರಿಯಾ ಕಥೆಗಳು,  ಎಲಿಯಟ್ಟನ ಮೂರು ಉಪನ್ಯಾಸಗಳು;  ಸಂಸ್ಕೃತದಿಂದ: ಅಭಿಜ್ಞಾನ ಶಾಕುಂತಲ, ಕನ್ನಡ ಉತ್ತರ ರಾಮಚರಿತೆ, ಕನ್ನಡ ನಾಗಾನಂದ, ಭಾಸನ ಎರಡು ನಾಟಕಗಳು, ಸಂಗ್ರಹ ಭಾಗವತ, ಸಂಗ್ರಹ ಮಹಾಭಾರತ. ನಾಟಕಗಳು: ಪ್ರೇಮಬಲಿ, ಮಂಗಳಾರತಿ, ವಿಪರೀತಕ್ಬಂತೆ ವಿವಾಹ, ಸ್ವಪ್ನವಾಸವದತ್ತ, ಪ್ರತಿಜ್ಞಾ ಯೌಗಂಧರಾಯಣ, ಪೂರ್ಣಾಹುತಿ. ಕಾವ್ಯ: ಬಾಡದ ಹೂ, ಉಷಾ ಸ್ವಪ್ನ, ಬಣ್ಣಗಳು ಆಡಿದುವು; ಸಾಹಿತ್ಯ ವಿಮರ್ಶೆ: ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ. ಚಿಂತನೆಗಳು: ಕಲೆ ಎಂದರೇನು ? ಪಾಶ್ಚಾತ್ಯ ಕಾವ್ಯ ಚಿಂತನ, ಮಹತ್‌ಕಾವ್ಯ ಕಲ್ಪನೆ, ಸಾಹಿತ್ಯ ಪ್ರವೇಶ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ವಿಮರ್ಶೆಯ ತತ್ತ್ವಗಳು, ಸಾಹಿತ್ಯ ಮನನ.

ಅನಂತನಾರಾಯಣರಿಗೆ ಹಲವು ಪ್ರಶಸ್ತಿ ಗೌರವಗಳು ಸಂದವು. ಪುರಂದರ ಕಂಡ ಶ್ರೀರಾಮ ಸಂಗೀತ ರೂಪಕಕ್ಕೆ ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಬಿ.ಎಂ.ಶ್ರೀ. ರಜತ ಮಹೋತ್ಸವ ಪದಕ ಇವೇ ಮುಂತಾದುವು.

ಅನಂತನಾರಾಯಣರು 1992ರ ಆಗಸ್ಟ್ 25ರಂದು ನಿಧನರಾದರು.  ಅವರ ಪ್ರೀತಿಪಾತ್ರ ವಿದ್ಯಾರ್ಥಿಗಳಿಗೆ ಅವರು ಸದಾ ನೆನಪಿನಲ್ಲುಳಿದವರು.

On Remembrance Day of great teacher and writer S. Ananta Narayana 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ