ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮಚಂದ್ರ ಕೊಟ್ಟಲಗಿ


 ರಾಮಚಂದ್ರ ಕೊಟ್ಟಲಗಿ


ರಾಮಚಂದ್ರ ಕೊಟ್ಟಲಗಿ ಕಳೆದ ಶತಮಾನದ ಸಾಹಿತ್ಯ ಸಾಧಕರಲ್ಲೊಬ್ಬರು. 

ರಾಮಚಂದ್ರ ಕೊಟ್ಟಲಗಿ ಅವರು ವಿಜಾಪುರ ಜಿಲ್ಲೆಯ ಮನಗೋಳಿ ಎಂಬ ಹಳ್ಳಿಯಲ್ಲಿ 1916ರ ಆಗಸ್ಟ್ 5ರಂದು ಜನಿಸಿದರು. ತಂದೆ ಕೃಷ್ಣರಾವ್ ಕೊಟ್ಟಲಗಿಯವರು ವೈದ್ಯರು ಮತ್ತು ಕೃಷಿಕರು. ರಾಮಚಂದ್ರ ಕೊಟ್ಟಲಗಿ ಅವರ ಪ್ರಾರಂಭಿಕ ಶಿಕ್ಷಣ ಹಳ್ಳಿಯಲ್ಲಿಯೇ ನಡೆಯಿತು. 

ರಾಮಚಂದ್ರ ಕೊಟ್ಟಲಗಿ  ಎಡಪಂಥೀಯ ಸಾಹಿತ್ಯ ಹಾಗೂ ಲೆನಿನ್, ಮಾರ್ಕ್ಸ್ ಮುಂತಾದ ಪ್ರಭಾವಕ್ಕೊಳಗಾಗಿದ್ದರು. ಬೇಂದ್ರೆ, ಗೋಕಾಕ್, ಮುಗಳಿಯವರ ಪ್ರಭಾವದಿಂದ ಕೃತಿ ರಚನೆಗಾರಂಭ ಮಾಡಿದರು ಇವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಭಾಗಿಯಾದರು. 

ರಾಮಚಂದ್ರ ಕೊಟ್ಟಲಗಿಯವರ ಮೊದಲ ಕಾದಂಬರಿ 'ದೀಪನಿರ್ವಾಣ'.  'ದೀಪ ಹತ್ತಿತು’ ಎರಡು ಭಾಗಗಳ ಕಾದಂಬರಿ.  ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಬದುಕಿನ ಕಥೆಯ ಅನಾವರಣ ಇದರಲ್ಲಿದೆ. ಉತ್ತರ ಕರ್ನಾಟಕದ ಬದುಕನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿ ಬಹು ಸಹಕಾರಿ. ಈ ಕಾದಂಬರಿಗಳು ಕೊಟ್ಟಲಗಿಯವರ ಸಹೋದರಿಯಿಂದ ಮರಾಠಿಗೂ ಅನುವಾದಗೊಂಡವು. ‘ವಿಲಾಪಿಕಾ’, ‘ವೈನಿ ಸತ್ತಾಗ ನಾನ್ಯಾ ಅತ್ತಾಗ’ ಮತ್ತು ‘ನಾನು ಬಾಳ್ಯಾ ಜೋಶಿ’ ಇವರ ಇನ್ನಿತರ ಪ್ರಸಿದ್ಧ ಕಾದಂಬರಿಗಳು.

‘ಪಿಪಾಸೆ’ ರಾಮಚಂದ್ರ ಕೊಟ್ಟಲಗಿ ಅವರ ಮೊದಲ ಕವನ ಸಂಕಲನ. ‘ಪ್ರತಿಮಾ’ ಮತ್ತೊಂದು ಕವನ ಸಂಕಲನ. ಎರಡು ಕಥಾ ಸಂಕಲನಗಳು 'ಗೀಚುಗೆರೆ' ಹಾಗೂ 'ಚೈತ್ರ ಪಲ್ಲವ'. ‘ಭಾಷಾ’ ಸಮನ್ವಯದ ಸಮಸ್ಯೆ’ ಮತ್ತೊಂದು ಪ್ರಮುಖ ಕೃತಿ. ಹಲವು ನಾಟಕಗಳನ್ನೂ  ರಚನೆ ಮಾಡಿದರು. ಇವರ ಕೆಲವು ನಾಟಕಗಳು ಪು.ಲ. ದೇಶಪಾಂಡೆ ಅವರು ಮರಾಠಿಗೆ ಅನುವಾದ ಮಾಡಿದ್ದರು. 

ರಾಮಚಂದ್ರ ಕೊಟ್ಟಲಗಿ  ಅವರು ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದರು. ಕನ್ನಡ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದರು. ಗೋಕಾಕರ 'ದ್ಯಾವಾ ಪೃಥವಿ' ಕೃತಿಯನ್ನು ಇವರೇ ಮುದ್ರಿಸಿದ್ದು. ಹಲವು ದೀಪಾವಳಿ ಸಂಚಿಕೆಗಳ ಸಂಪಾದಕತ್ವ ಮಾಡಿದರು. ‘ದೀಪದಾನ’ ಎಂಬ ಹೆಸರಿನಿಂದ ಸಂಚಿಕೆ ಬಿಡುಗಡೆಯಾಯಿತು. 

ರಾಮಚಂದ್ರ ಕೊಟ್ಟಲಗಿ ಅವರ ಪ್ರಥಮ ಕವನ ಸಂಕಲನ ‘ಪಿಪಾಸೆ’ಗೆ ಮತ್ತು ಕಥಾಸಂಕಲನ ‘ಗೀಚುಗೆರೆ’ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು. 

ರಾಮಚಂದ್ರ ಕೊಟ್ಟಲಗಿ 1975ರ ಸೆಪ್ಟಂಬರ್ 20ರಂದು ನಿಧನರಾದರು.

On birth anniversary of Ramachandra Kottalagi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ