ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ರಾಘವನ್


 ವಿ. ರಾಘವನ್


ಪ್ರೊ. ವಿ. ರಾಘವನ್ ಸಂಸ್ಕೃತ ಭಾಷೆ ಸಾಹಿತ್ಯಗಳ ಪ್ರಕಾಂಡ ಪಂಡಿತ ಹಾಗೂ ವಿದ್ವಾಂಸರು. ಅವರು ಮಾಹಿತಿಯ ಜಂಗಮ ವಿಶ್ವಕೋಶ ಎಂದು ಪ್ರಸಿದ್ಧರಾಗಿದ್ದವರು. 

ವೆಂಕಟರಾಮ ರಾಘವನ್ ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾರೂರಿನಲ್ಲಿ 1908ರ ಆಗಸ್ಟ್ 22ರಂದು ಜನಿಸಿದರು. ತಿರುವಾಂಕೂರಿನ ಬೋರ್ಡ್ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭದ ಶಾಲಾಭ್ಯಾಸ ನಡೆಸಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹಲವಾರು ಬಹುಮಾನ ಮತ್ತು ಪದಕಗಳೊಂದಿಗೆ ಬಿ. ಎ. ಪದವಿ ಪಡೆದರು. ಸಂಸ್ಕೃತ ಭಾಷೆ ಸಾಹಿತ್ಯಗಳೊಂದಿಗೆ ದರ್ಶನ, ತೌಲನಿಕ ಭಾಷಾವಿಜ್ಞಾನಗಳನ್ನು ವ್ಯಾಸಂಗಮಾಡಿ 1930ರಲ್ಲಿ ಪ್ರಥಮ ದರ್ಜೆಯಲ್ಲಿ ಎಂ. ಎ. ಪದವಿ ಗಳಿಸಿದರು.

ಮಹಾಮಹೋಪಧ್ಯಾಯ ಪ್ರೊಫೆಸರ್ ಎಸ್. ಕುಪ್ಪುಸ್ವಾಮಿಶಾಸ್ತ್ರೀ ಅವರ ಮಾರ್ಗದರ್ಶನದಲ್ಲಿ ಭೋಜನ ಶೃಂಗಾರ ಪ್ರಕಾಶ ಎಂಬ ಕೃತಿಯ ಬಗ್ಗೆ ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಪಡೆದರು. 

ರಾಘವನ್ ಅವರು ಆರಂಭದಲ್ಲಿ ಸ್ವಲ್ಪಕಾಲ ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಭಂಡಾರದಲ್ಲಿ ಕೆಲಸಮಾಡಿ, ಬಳಿಕ 1935ರಲ್ಲಿ ಮದರಾಸು ವಿಶ್ವವಿದ್ಯಾಲಯದ ಸಂಸ್ಕೃತ ಇಲಾಖೆಯಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡರು. 20ವರ್ಷಗಳ ಅನಂತರ ಆ ಇಲಾಖೆಯ ಮುಖ್ಯಸ್ಥರಾದರು. ತಮ್ಮ ಅಸದೃಶ್ಯವಾದ ವಿದ್ವತ್ತು, ತಲಸ್ಪರ್ಶಿಯೂ ವ್ಯಾಪಕವೂ ಆದ ವ್ಯಾಸಂಗ, ಅವಿರತವಾದ ಸಂಸ್ಕೃತ ಕಾಯಕ, ಹಲವಾರು ವಿದ್ವಾಂಸರ ಸಂಗ-ಸಂಪರ್ಕಗಳಿಂದ ಅಂತರರಾಷ್ಟ್ರೀಯ ಸಂಸ್ಕೃತಲೋಕದಲ್ಲಿ ಅಗ್ರಪಂಕ್ತಿಯ ಭಾರತೀಯ ವಿದ್ವಾಂಸರೆಂದು  ಖ್ಯಾತರಾದರು. ಆ ಕಾಲದಲ್ಲಿ ರಾಘವನ್ ಭಾಗವಹಿಸದಿದ್ದ ಸಂಸ್ಕೃತದ ವಿಚಾರ ಸಂಕೀರ್ಣ, ಸಮ್ಮೇಳನ, ಅಧಿವೇಶನಗಳೇ ಇರಲಿಲ್ಲವೆಂಬುದು ಅತಿಶಯೋಕ್ತಿಯಲ್ಲ. ಸಿಲ್ವಿಯನ್ ಲೆವಿ, ಎಫ್. ಡಬ್ಲೂ. ಥಾಮಸ್, ಎ.ಬಿ. ಕೀಥ್ ಮುಂತಾದ ಅಂತರರಾಷ್ಟ್ರೀಯ ವಿದ್ವಾಂಸರು ರಾಘವನ್‍ರ ಸಂಸ್ಕೃತ ವ್ಯಾಸಂಗ ವಿದ್ವತ್ತುಗಳನ್ನು ಮನಸಾರೆ ಹೊಗಳಿದ್ದಾರೆ. ಪೂರ್ಣರೂಪದ ಸಂಸ್ಕೃತ ವಿದ್ವತ್ ಪುರುಷ ಎಂಬುದು ಇವರ ಸಮಕಾಲೀನರು ಇವರಿಗಿತ್ತ ಪ್ರಶಸ್ತಿಯ ಮಾತು. 

ಸಂಸ್ಕೃತ ಸಾಹಿತ್ಯದಲ್ಲಿ ವಿಶೇಷವಾಗಿ ಅಲಂಕಾರಶಾಸ್ತ್ರ ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ಸೌಂದರ್ಯಮೀಮಾಂಸೆಗಳಲ್ಲಿ ರಾಘವನ್ ಅವರದು ವಿಶೇಷವಾದ ಪರಿಣಿತಿ. ದಿ ನಂಬರ್ ಆಫ್ ರಸಾಸ್ (1940), ಸಮ್‍ಕಾನ್‍ಸೆಪ್ಟ್ಸ್ ಆಫ್ ಅಲಂಕಾರಶಾಸ್ತ್ರ - ಇವು  ರಾಘವನ್ ಅವರ ಎರಡು ಜನಪ್ರಿಯ ಕೃತಿಗಳು. ಭಾರತೀಯ ಕಾವ್ಯ ಮೀಮಾಂಸೆಯ ವಿದ್ಯಾರ್ಥಿಗಳಿಗೆ ಈ ಕೃತಿಗಳು ಮೆಚ್ಚಿನವಾಗಿವೆ. 

ರಾಘವನ್ ಅವರ ಅಲಂಕಾರಶಾಸ್ತ್ರದಲ್ಲಿನ  ದೈತ್ಯಕೃತಿ 'ಭೋಜಾಸ್ ಶೃಂಗಾರ ಪ್ರಕಾಶ'. 1940 ಮತ್ತು 1945ರಲ್ಲಿ ಭಾಗಶಃ ಅಚ್ಚಾಗಿದ್ದ ಈ ಕೃತಿ 1963ರಲ್ಲಿ ಪೂರ್ಣವಾಗಿ (1009 ಪುಟಗಳು, 28 ಅಧ್ಯಾಯಗಳು) ಪ್ರಕಟಗೊಂಡಿತು. ರಾಘವನ್ ಅವರ ಬಹುಮುಖವಾದ ವಿದ್ವತ್ತು, ಸಂಸ್ಕೃತ ಕಾವ್ಯಮೀಮಾಂಸೆಯ ಇವರ ಆಳ-ಅಗಲಗಳ ಅರಿವು, ಶ್ರಮಸಹಿಷ್ಣವೂ ಕಠಿಣವೂ ಆದ ಇವರ ವ್ಯಾಸಂಗದ ಪರಿ ಇದರಲ್ಲಿ ಸುಪ್ರಕಟಗೊಂಡಿವೆ. ಎಂ. ಹಿರಿಯಣ್ಣ, ಎಲ್. ರೀನೊ ಮುಂತಾದ ಮಹಾನ್  ವಿದ್ವಾಂಸರು ಈ ಕೃತಿಯನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ. ವಿಶ್ವಕೋಶ ಸದೃಶವಾದ ಈ ಕೃತಿ ಪ್ರಕಟಣೆಯ ಬಳಿಕ ಸಂಸ್ಕೃತ ಕಾವ್ಯ ಮೀಮಾಂಸೆಯ ಅಧ್ಯಯನದ ಹಾದಿಯೇ ಬದಲಾಯಿತು. 

ರಾಘವನ್ ಬಹುಶ್ರುತ ವಿದ್ವಾಂಸರು. ಸಾಹಿತ್ಯದಂತೆ ಸಂಗೀತ, ನಾಟ್ಯ ಹಾಗೂ ತತ್ತ್ವಶಾಸ್ತ್ರಗಳಲ್ಲಿ ಕೂಡ ಇವರಿಗೆ ಆಸಕ್ತಿಯಿತ್ತು. 1964ರಲ್ಲಿ ಇವರು ಆಕಾಶವಾಣಿಯಲ್ಲಿ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸಗಳನ್ನು ಕೊಟ್ಟರು. 7ರಿಂದ 19ನೆಯ ಶತಮಾನದವರೆಗೆ ಭಾರತೀಯ ಸಂಸ್ಕೃತಿಯ ಏಕತೆಯನ್ನು ಪ್ರತಿಫಲಿಸಿದ, ಅದರ ನೇತಾರರಾಗಿ ಅದನ್ನು ಮುಂದಕ್ಕೆ ಕೊಂಡೊಯ್ದ ಸುಂದರಮೂರ್ತಿ, ತ್ಯಾಗರಾಜ, ಕಬೀರ, ಪುರಂದರದಾಸ ಮುಂತಾದ ಸಂತಕವಿ ಹಾಡುಗಾರರನ್ನು ಅದು ಕುರಿತಿತ್ತು. ದಿ ಗ್ರೇಟ್ ಇಂಟಿಗ್ರೇಟರ್ಸ್ ಎಂಬ ಶೀರ್ಷಿಕೆಯಲ್ಲಿ ಈ ಉಪನ್ಯಾಸಗಳು ಪುಸ್ತಕರೂಪದಲ್ಲಿ ಪ್ರಕಟಗೊಂಡಿವೆ. 

ನೃತ್ಯ ರತ್ನಾವಳಿ ಆಫ್ ಜಯಸೇನಿ ಎಂಬುದು ರಾಘವನ್ ಅವರ ನಾಟ್ಯಶಾಸ್ತ್ರದ ಆಸಕ್ತಿಯ ಮತ್ತೊಂದು ಕೃತಿ. ದಿ ಸ್ಪಿರಿಚುಯಲ್ ಹೆರಿಟೇಜ್ ಆಫ್ ತ್ಯಾಗರಾಜ ಎಂಬುದು ಇವರಿಗೆ ಕೀರ್ತಿಯನ್ನು ತಂದುಕೊಟ್ಟ ಮತ್ತೊಂದು ವಿದ್ವತ್‍ಕೃತಿ.

ರಾಘವನ್ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ಕೀರ್ತಿ ತಂದಿತ್ತ ಕೃತಿ 'ನ್ಯೂಕ್ಯಾಟಲಾಗಸ್ ಕ್ಯಾಟಲಾಗರಮ್'. ಪ್ರೊಫೆಸರ್ ವೂಲ್ನರ್ 1901ರಲ್ಲಿ ಸಿದ್ಧಪಡಿಸಿದ ಈ ಕೃತಿಯನ್ನು ಪರಿಷ್ಕರಿಸಿ ಆವರೆಗೂ ನಮೂದಾಗದಿದ್ದ 20,000 ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಪತ್ತೆ ಹಚ್ಚಿ ನಾಲ್ಕು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದರು. ಎರಡು ದಶಕಕ್ಕೂ ಹೆಚ್ಚು ಕಾಲದ ಪರಿಶ್ರಮದ ಫಲವಾದ ಈ ಸಂಪುಟಗಳು, ಹಸ್ತಪ್ರತಿಶಾಸ್ತ್ರದಲ್ಲಿ ರಾಘವನ್ ಅವರ ವಿದ್ವತ್ತಿನ ಕುರುಹುಗಳಾಗಿವೆ. ತಮಿಳು, ಸಂಸ್ಕೃತಗಳಲ್ಲಿ ಕೂಡ ರಾಘವನ್ ಬರೆದಿದ್ದಾರೆ. 

ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು. ಸಂಪಾದಿಸಿರುವ ರಾಘವನ್ ಅವರು ಸಾವಿರಾರು ಲೇಖನಗಳನ್ನೂ ಬರೆದಿದ್ದಾರೆ. ಇವರ ಗ್ರಂಥ-ಲೇಖಸೂಚಿ 370 ಪುಟಗಳ ವ್ಯಾಪ್ತಿಯದ್ದಾಗಿದೆ ಎಂದರೆ ಅದರ ಅಗಾಧತೆಯನ್ನು ನಾವು ಕಲ್ಪಿಸಿಕೊಳ್ಳಬಹುದು. ಹಲವಾರು ನಿಯತಕಾಲಿಕೆಗಳ ಸಂಪಾದಕರಾಗಿದ್ದ ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸಂಸ್ಕೃತಿ ಪ್ರತಿಭಾ ಎಂಬ ಅರ್ಧವಾರ್ಷಿಕ ಪತ್ರಿಕೆಗೆ ಅನೇಕ ವರ್ಷಗಳವರೆಗೆ ಸಂಪಾದಕರಾಗಿದ್ದರು. ಭಾರತೀಯ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಇವರದು ಆರದ ಉತ್ಸಾಹ, ನಿರಂತರ ಕೃಷಿ. ದಿ ಇಂಡಿಯನ್ ಹೆರಿಟೇಜ್ ಎಂಬ ಹೊತ್ತಗೆಯಲ್ಲಿ ಋಗ್ವೇದದಿಂದ ಕಾವ್ಯಸ್ಥ ಸಂಸ್ಕೃತ ಸಾಹಿತ್ಯದವರೆಗೆ ಭಾರತೀಯ ಸಂಸ್ಕೃತಿ ಮೂಲ ನೆಲೆಗಳನ್ನು ಬಿಂಬಿಸುವ ಸಂಸ್ಕೃತ ಸಾಹಿತ್ಯಭಾಗಗಳನ್ನು ಸಂಕಲಿಸಿ ಅನುವಾದಿಸಿದ್ದಾರೆ. ಸೆಮ್ ಓಲ್ಡ್ ಲಾಸ್ಟ್ ರಾಮ ಪ್ಲೇಸ್ ಎಂಬುದು ಅಲಬ್ಧ ರಾಮಾಯಣ ನಾಟಕಗಳನ್ನು ಕುರಿತ ಕೃತಿ. ಕಾಮಿಕ್ ಎಲಿಮೆಂಟ್ ಇನ್ ಸಂಸ್ಕೃತ ಲಿಟರೇಚರ್, ಕಂಪ್ಯಾರೆಟಿವ್ ಸ್ಟಡಿ ಆಫ್ ಅಲಂಕಾರಶಾಸ್ತ್ರ ಅಂಡ್ ವೆಸ್ಟೆರ್ನ್ ಲಿಟರರಿ ಕ್ರಿಟಿಸಿಸಂ _ ಇವು ಇವರ ಇತರ ಎರಡು ಗಣ್ಯ ಕೃತಿಗಳು. 

ಸೃಜನಶೀಲ ಸಾಹಿತ್ಯದಲ್ಲಿ ಕೂಡ ರಾಘವನ್ ಕೈಯಾಡಿಸಿದ್ದಾರೆ. ಮುತ್ತುಸ್ವಾಮಿ ದೀಕ್ಷಿತರ ಚರಿತ ಎಂಬ ಮಹಾಕಾವ್ಯವನ್ನು ಇವರು ಬರೆದಿದ್ದಾರೆ. 

ರಾಘವನ್ ಅವರು ಶೈಕ್ಷಣಿಕ ಕಾರಣಗಳಿಗಾಗಿ ಅನೇಕ ವಿದೇಶಿ ಪ್ರವಾಸ ಮಾಡಿದ್ದರು. ಯುರೋಪ್, ರಷ್ಯ, ಅಮೇರಿಕ, ಜಪಾನ್, ಆಸ್ಟ್ರೇಲಿಯ, ನೇಪಾಲಗಳಿಗೆ ಇವರು ಭೇಟಿಯಿತ್ತಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಿತಿಗಳಲ್ಲಿ ಇವರು ಭಾರತವನ್ನು ಪ್ರತಿನಿಧಿಸುತ್ತಿದ್ದ ವಿದ್ವಾಂಸರಾಗಿದ್ದರು. ಸಂಸ್ಕೃತ ಆಯೋಗ,  ಕೇಂದ್ರೀಯ ಸಂಸ್ಕೃತ ಮಂಡಳಿ, ಕೇಂದ್ರೀಯ ಸಂಸ್ಕೃತಿ ಸಂಸ್ಥೆ, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯನ್ ಪಿ.ಇ.ಎನ್, ಅಮೇರಿಕನ್ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ಮೊದಲಾದ ಸಂಸ್ಥೆಗಳಿಗೆ ಇವರು ಸದಸ್ಯರಾಗಿದ್ದರು. 

ರಾಘವನ್ ಅವರಿಗೆ ಅನೇಕ ಬಹುಮಾನ, ಗೌರವ ಪ್ರಶಸ್ತಿಗಳು ಸಂದಿದ್ದವು. ಕಂಚಿಯ ಕಾಮಕೋಟಿ ಪೀಠಾಧೀಶರು ರಾಘವನ್ ಅವರಿಗೆ ಕವಿ ಕೋಕಿಲ ಮತ್ತು ಸಕಲಕಲಾಪ ಎಂಬ ಬಿರುದುಗಳನ್ನು ನೀಡಿ ಗೌರವಿಸಿದ್ದರು. ಏಷಿಯಾಟಿಕ್ ಸೊಸೈಟಿಯ ಕಾನೆ ಚಿನ್ನದ ಪದಕ (1953), ಭಾರತ ಸರ್ಕಾರದ ಪದ್ಮಭೂಷಣ (1962), ಸಂಗೀತ ನಾಟಕ ಅಕಾಡೆಮಿಯ ಗೌರವ ಸದಸ್ಯತ್ವ (1964), ಶೃಂಗಾರ ಪ್ರಕಾಶ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ (1966), ಇದೇ ಕೃತಿಗೆ ಆಸ್ಟ್ರಿಯಾದ ಚಿನ್ನದ ಪದಕ (1967), ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯತ್ವ (1979) ಇವು ಇವರಿಗೆ ಪ್ರಾಪ್ತವಾದ ಗೌರವಗಳಲ್ಲಿ ಕೆಲವು. ರಾಘವನ್  21ನೆಯ ಅಖಿಲಭಾರತ ಓರಿಯಂಟಲ್ ಕಾನ್ಫ್‍ರೆನ್ಸಿನ ಸರ್ವಾಧ್ಯಕ್ಷರಾಗಿದ್ದರು.

ಕ್ಷೀಣವಾಗುತ್ತಿರುವ ಸಂಸ್ಕೃತ ಸಾಹಿತ್ಯದ ಪ್ರೀತಿಯನ್ನು, ಕುಸಿಯುತ್ತಿರುವ ಅದರ ವ್ಯಾಸಂಗವನ್ನು ಗಮನಿಸಿ ಶ್ರದ್ಧೋತ್ಸಾಹಗಳಿಂದ ಅದರ ಪ್ರಚಾರಕ್ಕೆ ರಾಘವನ್ ತಮ್ಮನ್ನು ತೇಯ್ದುಕೊಂಡಿದ್ದರು. 1979 ಏಪ್ರಿಲ್ 5ರಂದು ಮದರಾಸಿನಲ್ಲಿ ನಿಧನರಾದರು.

On the birth anniversary greatest scholar Dr. Venkataraman Raghavan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ