ತೇಜಸ್ವಿ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಕನ್ನಡದ ಪ್ರಖ್ಯಾತ ಲೇಖಕರ ಸಾಲಿನಲ್ಲಿ ಸಾರ್ವಕಾಲಿಕವಾಗಿ ಪೂರ್ಣಚಂದ್ರನಂತೆ ಶೋಭಿತರು ಪೂರ್ಣಚಂದ್ರ ತೇಜಸ್ವಿ.
ಪೂರ್ಣಚಂದ್ರ ತೇಜಸ್ವಿಯವರು 1938ರ ಸೆಪ್ಟೆಂಬರ್ 8ರಂದು ಜನಿಸಿದರು. ರಾಷ್ಟ್ರಕವಿ ಕುವೆಂಪು ಅವರ ಮಗನಾಗಿ ಹುಟ್ಟಿದ ತೇಜಸ್ವಿಯವರು, ತಂದೆಯ ಚಿಂತನೆ, ದರ್ಶನ, ಸಾಹಿತ್ಯ-ಕಲೆಯ ಮಾರ್ಗದ ಪ್ರಭಾವಲಯದಿಂದ ಹೊರಬಂದು ತಮ್ಮದೇ ಭಿನ್ನ ಚಿಂತನೆ, ಆದರ್ಶ, ಅನುಭವ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡು ಅನನ್ಯತೆಯನ್ನು ಮೆರೆದವರು.
ತೇಜಸ್ವಿಯವರು ಕಥೆಗಾರರಾಗಿ ಪಡೆದ ಪ್ರಸಿದ್ಧಿಯ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಕಾಲಿಟ್ಟು ಪರಿಸರ ಜ್ಞಾನದ ಬಗ್ಗೆ ಅನನ್ಯ ಕಾಳಜಿ ತೋರಿದವರು. ಕನ್ನಡದಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ ಪದವಿಗಳನ್ನು ಪಡೆದ ನಂತರ ಸ್ವತಂತ್ರ ಪ್ರವೃತ್ತಿಯ ಅವರು ಅಧ್ಯಾಪಕರಾಗಲು ಇಚ್ಛಿಸದೆ ಚಿಕ್ಕಮಗಳೂರಿನ ಮೂಡಿಗೆರೆಯ ಪರಿಸರದ ಕೃಷಿ ತೋಟದಲ್ಲಿ ಆಸಕ್ತಿ ತಳೆದು ನೆಲೆಸಿದರು.
‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕಲನದ ‘ಹೊಸ ದಿಗಂತದ ಕಡೆಗೆ’ ಎಂಬ ಪೀಠಿಕೆಯಲ್ಲಿ ತೇಜಸ್ವಿಯರು ಹೀಗೆ ಹೇಳುತ್ತಾರೆ. “ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನಲ್ಲಿ ಪ್ರಯೋಗಶೀಲತೆ – ಈ ಮೂರೇ ನನ್ನ ಈಚಿನ ಸಾಹಿತ್ಯರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂತಹವು”. ಈ ಮಾತುಗಳು ಅವರ ವಿಶಿಷ್ಟ ನಿಲುವುಗಳನ್ನು ಸ್ಪಷ್ಟ ಪಡಿಸುತ್ತವೆ.
‘ಸ್ವಗತ ಲಹರಿ ಮತ್ತು ಇತರ ಕವನಗಳು’ ಕವಿತೆಗಳ ಸಂಗ್ರಹವಾದರೆ, ‘ಹುಲಿಯೂರಿನ ಸರಹದ್ದು’, ‘ಅಬಚೂರಿನ ಪೋಸ್ಟಾಫೀಸು’, ‘ಕಿರಗೂರಿನ ಗಯ್ಯಾಳಿಗಳು’, ‘ಏರೋಪ್ಲೇನ್ ಚಿಟ್ಟೆ’, ‘ಮಿಸ್ಸಿಂಗ್ ಲಿಂಕ್’, ‘ಮಿಲೇನಿಯಂ ಸರಣಿ’, 'ಪರಿಸರದ ಕತೆ' ಇವು ಕಥಾ ಸಂಗ್ರಹಗಳು. ‘ಯಮಳ ಪ್ರಶ್ನೆ’ ಏಕಾಂಕ ನಾಟಕ. ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’, ‘ಸ್ವರೂಪ’, ‘ನಿಗೂಢ ಮನುಷ್ಯರು’ ಇವು ವೈಚಾರಿಕ ಪ್ರಬಂಧಗಳ ಸಂಗ್ರಹ. ‘ಕರ್ವಾಲೋ’, ‘ಚಿದಂಬರ ರಹಸ್ಯ’, ‘ಕಾಡು ಮತ್ತು ಕ್ರೌರ್ಯ’, ‘ಜುಗಾರಿ ಕ್ರಾಸ್’ ಇವು ಕಾದಂಬರಿಗಳು.'ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್' ಪ್ರವಾಸ ಕಥನದ ಜೊತೆಗೆ ಒಂದು ನದಿಯ ಇತಿಹಾಸವನ್ನು ತೋರುತ್ತವೆ. ‘ಅಣ್ಣನ ನೆನಪು’ ತಂದೆ ಕುವೆಂಪು ಅವರ ಬಗೆಗಿನ ನೆನಪು ಮತ್ತು ಹಲವು ಚಿಂತನೆಗಳನ್ನು ಒಳಗೊಂಡಿದೆ. ಸಹಜ ಕೃಷಿಯಂತಹ ಸಣ್ಣ ಪುಸ್ತಕದಲ್ಲಿ, ಪ್ಹುಕೋಕನ ಸಹಜ ಕೃಷಿ ಪದ್ಧತಿಯ ಬಗ್ಗೆ ಬರೆದಿರುವ ಅವರ ಕಥನ, ಕೃಷಿಯ ಬಗ್ಗೆ ಯಾವುದೇ ಜ್ಞಾನ ಇಲ್ಲದವನಿಗೂ ಇಡೀ ಬದುಕಿನ ಬಗೆಗೆ ಹೊಸ ವ್ಯಾಖ್ಯಾನ ಓದಿದ ಅನುಭವ ನೀಡುತ್ತದೆ. ಅಂಕಣಕಾರರಾಗಿಯೂ ಅವರು ಕನ್ನಡಿಗರ ಹೃನ್ಮನಗಳನ್ನು ಸೆಳೆದವರು.
ಎಲ್ಲ ಮೂಢ ನಂಬಿಕೆಗಳನ್ನೂ ಸಾರಾ ಸಗಟಾಗಿ ತಿರಸ್ಕರಿಸುವ; ಸೊಗಸಾದ ಹಾಸ್ಯದ, ವೈಜ್ಞಾನಿಕ ಮನೋಭಾವನೆಯ; ಸತ್ಯವನ್ನು ಶೋಧಿಸುತ್ತೇನೆ ಆದರೆ, ಎಲ್ಲಾ ರಹಸ್ಯವನ್ನೂ ಭೇದಿಸಿ ಬಿಡುತ್ತೇನೆ ಎಂಬ ಅಹಂಕಾರ ಇಲ್ಲದ; ತಿಳಿದಷ್ಟೇ ಅರಿವು, ಅನ್ವೇಷಣೆಯ ಅನುಭವವೇ ಸಾರ್ಥಕ್ಯ; ರೋಗ ಗ್ರಸ್ಥ ಸಮಾಜ – ವ್ಯವಸ್ಥೆಗಳ ಗುರುತಿಸುವಿಕೆಯಲ್ಲಿ ಕೂಡ ಎಲ್ಲಕ್ಕೂ ಪರಿಹಾರ ಹೇಳಿಬಿಡುತ್ತೇನೆ ಎಂಬ ಯಾವುದೇ ಆತುರತೆ ಇಲ್ಲದೆ, ಮನುಷ್ಯನ ಸಂಬಂಧಗಳ ಆಳದಲ್ಲಿ ಜೀವನದ ಬಗ್ಗೆ ಕಾಳಜಿ, ಪ್ರೀತಿ ಮತ್ತು ಆಶಯಗಳನ್ನು ಗುರುತಿಸುವ ಮನೋಭಾವಗಳನ್ನು ಅವರ ಎಲ್ಲ ಬರವಣಿಗೆಗಳು ಮತ್ತು ಅವರು ನಡೆಸಿದ ಬದುಕಿನ ರೀತಿಯಲ್ಲಿ ಕಾಣಬಹುದಾಗಿದೆ.
ಸ್ವಭಾವತಃ ತೇಜಸ್ವಿಯವರು ಸನ್ಮಾನ ಪ್ರಶಸ್ತಿಗಳ ಬಗ್ಗೆ ನಿರಾಸಕ್ತರಾಗಿದ್ದವರು. ಆದರೂ ಪ್ರಶಸ್ತಿ ಗೌರವಗಳು ಅವರ ಮನೆಯ ಬಾಗಿಲನ್ನು ಸದಾ ತಟ್ಟುತ್ತಲೇ ಇದ್ದವು. ಅವರ ಕಥೆ ‘ಅಬಚೂರಿನ ಪೋಸ್ಟಾಫೀಸು’ ಚಲನಚಿತ್ರವಾಗಿ ಅತ್ಯುತ್ತಮ ಪ್ರಾಂತೀಯ ಚಿತ್ರ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ಗಳಿಸಿತು. ಅತ್ಯುತ್ತಮ ಚಿತ್ರಕ್ಕೆ ಮೀಸಲಾದ ಸ್ವರ್ಣ ಕಮಲ ಪ್ರಶಸ್ತಿ ಅವರ ‘ತಬರನ ಕತೆ’ ಚಿತ್ರಕ್ಕೆ ದೊರೆಯಿತು. 1985ರಲ್ಲಿ ‘ಚಿದಂಬರ ರಹಸ್ಯ’ ಕಾದಂಬರಿಗೆ ಆ ವರ್ಷದ ಶ್ರೇಷ್ಠ ಕೃತಿಯೆಂದು ವಿಶೇಷ ಬಹುಮಾನ ನೀಡಲಾಯಿತು. ಅಲ್ಲದೆ, ‘ಚಿದಂಬರ ರಹಸ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ 1987ರಲ್ಲಿ ಲಭಿಸಿ, ತೇಜಸ್ವಿ ಅವರು ರಾಷ್ಟ್ರ ಮನ್ನಣೆಗೆ ಪಾತ್ರರಾದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರನ್ನು 1987ರ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿತು.
ತೇಜಸ್ವಿಯವರು ಈ ಲೋಕವನ್ನು ಅಗಲಿದ್ದು 2007ರ ಏಪ್ರಿಲ್ 5ರಂದು. ಎಲ್ಲಾ ರೀತಿಯ ನಾಟಕೀಯತೆ, ಅಸ್ವಾಭಾವಿಕ ರೀತಿಗಳ ಬದುಕಿನಿಂದ ಹೊರನಿಂದು ತಮ್ಮ ಜೀವನವನ್ನು ಸೃಜನಶೀಲವಾಗಿ ಬದುಕಿ ಬಾಳಿದ ಮಹತ್ವದ ಕನ್ನಡಿಗರಲ್ಲಿ ಅಪೂರ್ವರಾದ ಅವರು, ನಮ್ಮ ಹೃದಯಗಳಲ್ಲಿ ಪೂರ್ಣಚಂದ್ರರಾದ ತೇಜಸ್ವಿಯಾಗಿ ಚಿರಂತನರಾಗಿದ್ದಾರೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On the birth anniversary of great novelist K.P. Purnachandra Tejaswi
ಕಾಮೆಂಟ್‌ಗಳು