ಸತ್ಯಾಜಿರಾವ್
ಬಿ. ಸತ್ಯಾಜಿರಾವ್ ಇನ್ನಿಲ್ಲ
ಕ್ರಿಕೆಟ್ ಲೋಕದ ಹೆಸರಾಂತ ಅಂಪೈರ್ ಕನ್ನಡಿಗರಾದ ಬಿ. ಸತ್ಯಾಜಿರಾವ್ ಇಂದು (2021ರ ಸೆಪ್ಟೆಂಬರ್ 28ರಂದು) ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಬಾದಾಮಿ ಸತ್ಯಾಜಿರಾವ್ 1929ರ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಜನಿಸಿದರು.
ಸತ್ಯಾಜಿ ರಾವ್ 1956ರಿಂದ 1981 ಅವಧಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಅಂಪೈರ್ ಆಗಿದ್ದರು. 1963ರಿಂದ 1976 ಅವಧಿಯಲ್ಲಿ ರಣಜಿ ಟ್ರೋಫಿಯ ಫೈನಲ್ನಲ್ಲಿ ಐದು ಬಾರಿ, ದುಲೀಪ್ ಟ್ರೋಫಿ ಫೈನಲ್ನಲ್ಲಿ ನಾಲ್ಕು ಬಾರಿ ಸೇರಿದಂತೆ ನೂರಾರು ಪಂದ್ಯಗಳಲ್ಲಿ ಅಂಪೈರ್ ಆಗಿದ್ದರು.
ಸತ್ಯಾಜಿರಾವ್ 1960 ಮತ್ತು 1979ರ ನಡುವೆ 17 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಅಂದಿನವರೆಗಿನ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿನ ಭಾರತೀಯ ಅಂಪೈರಿಂಗ್ ದಾಖಲೆ ಸ್ಥಾಪಿಸಿದ್ದರು. ಮುಂದೆ 1984ರಲ್ಲಿ ಸ್ವರೂಪ್ ಕಿಶನ್ ಈ ದಾಖಲೆಯನ್ನು ಸರಿಗಟ್ಟಿದರಲ್ಲದೆ ಮುಂದೆ ಪಂದ್ಯಗಳ ಸಂಖ್ಯೆ ಏರುತ್ತಿರುವ ಯುಗದಲ್ಲಿ ವಿಕೆ ರಾಮಸ್ವಾಮಿ, ಶ್ರೀನಿವಾಸರಾಘವನ್ ವೆಂಕಟರಾಘವನ್ ಮುಂತಾದವರು ಹೆಚ್ಚು ಪಂದ್ಯಗಳ ಅಂಪೈರ್ಇಂಗ್ ದಾಖಲೆ ಮಾಡಿದ್ದಾರೆ.
ಸತ್ಯಾಜಿರಾವ್ ಅವರು ಅಂಪೈರ್ ಆಗಿದ್ದ ಎಲ್ಲಾ ಟೆಸ್ಟ್ ಪಂದ್ಯಗಳೂ ಭಾರತದಲ್ಲೇ ನಡೆದವು. ಸತ್ಯಾಜಿರಾವ್ 1960ರ ಡಿಸೆಂಬರ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ 3ನೇ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್ ಅಂಪೈರ್ ಆದರು. 1979ರ ಫೆಬ್ರವರಿಯಲ್ಲಿ ಕಾನ್ಪುರದ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 6 ನೇ ಟೆಸ್ಟ್ ಅವರು ಅಂಪೈರ್ ಆಗಿದ್ದ ಕೊನೆಯ ಟೆಸ್ಟ್ ಪಂದ್ಯ.
ಬಿ. ಸತ್ಯಾಜಿರಾವ್ ಅವರ ಪತ್ನಿ ನಾಗಮಣಿ ಎಸ್ ರಾವ್ ಆಕಾಶವಾಣಿ, ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಮಹತ್ವದ ಸಾಧಕರು. ಬಿ. ಸತ್ಯಾಜಿರಾವ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
Respects to departed soul popular cricket umpire B. Sathyaji Rao
ಕಾಮೆಂಟ್‌ಗಳು