ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾಗವತ


 ಭಾಗವತ


ಭಾಗವತ ಹದಿನೆಂಟು ಪುರಾಣಗಳ ಪೈಕಿ ಒಂದು. ಇದು ಪುರಾಣಗಳಿಗಿಂತಲೂ ದೊಡ್ಡ ಗ್ರಂಥ ಮಾತ್ರವಲ್ಲ, ಅತಿ ಮುಖ್ಯವಾದ ಗ್ರಂಥವೂ ಹೌದು. ಈ ಮಹಾಗ್ರಂಥಕ್ಕೆ ಹಲವರು ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಆದಿಶಂಕರಾಚಾರ್ಯ ಪರಂಪರೆಯ ಚಿತ್ಸುಖಾಚಾರ್ಯ, ಹನ್ನೊಂದನೆಯ ಶತಮಾನದ ಶ್ರೀಧರಸ್ವಾಮಿ, ವೈಷ್ಣವ ಪಂಥದ ವಲ್ಲಭಾಚಾರ್ಯ, ಶ್ರೀವೈಷ್ಣವ ಪಂಥದ ವೀರರಾಘವಾಚಾರ್ಯ, ಚೈತನ್ಯ ಪಂಥದ ಜೀವಗೋಸ್ವಾಮಿ, ಮಾಧ್ವ ಸಂಪ್ರದಾಯದ ವಿಜಯಧ್ವಜತೀರ್ಥ, ಉತ್ತರಾಧಿಮಠದ ಸತ್ಯಧರ್ಮತೀರ್ಥ ಮೊದಲಾದವರು ಮುಖ್ಯರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ವೈಷ್ಣವ, ಚೈತನ್ಯ ಮೊದಲಾದ ಕೆಲವು ಪಂಥಗಳ ಹಲವು ಯತಿಗಳು, ಪಂಡಿತರು, ವಿದ್ವಾಂಸರು ಭಾಗವತವನ್ನು ಅತಿ ಶ್ರೇಷ್ಠ ಪುರಾಣ ಗ್ರಂಥ ಎಂದು ಹೇಳಿ ವ್ಯಾಖ್ಯಾನಿಸಿದ್ದಾರೆ.

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಎಂಬ ನಾಲ್ಕು ವೇದಗಳು ಭಾರತೀಯ ತತ್ತ್ವಜ್ಞಾನದ ಮೂಲ ಗ್ರಂಥಗಳು. ಅದನ್ನು ಅರ್ಥವಿಸಲು ಸಾಮಾನ್ಯರಿಗೆ ಕಷ್ಟ. ಹಾಗಾಗಿ ವೇದಾಂತರ್ಗತ ರಹಸ್ಯಗಳನ್ನು ಸಾಮಾನ್ಯ ಜನವರ್ಗಕ್ಕೆ ತಿಳಿಸಲು ಸಾಧ್ಯವಾಗಿಸುವ ಸಲುವಾಗಿ ವೇದೋಕ್ತ ತತ್ತ್ವಗಳನ್ನು ಅನುಸರಿಸಿ, ಅರ್ಥವಿಸಿ, ಸರಳವಾಗಿಸಿ ರಚಿತವಾದ ಗ್ರಂಥಗಳೇ ಪುರಾಣಗಳು. ಪುರಾಣಗಳ ಸಂಖ್ಯೆ ಹದಿನೆಂಟು. ಬ್ರಹ್ಮ, ಪದ್ಮ, ವಿಷ್ಟು, ಶಿವ, ಲಿಂಗ, ಗರುಡ, ನಾರದ, ಭಾಗವತ, ಅಗ್ನಿ, ಸ್ಕಂದ, ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಂಡೇಯ, ವಾಮನ, ವರಾಹ, ಮತ್ಸ್ಯ, ಕೂರ್ಮ, ಬ್ರಹ್ಮಾಂಡ. ವೇದರಹಸ್ಯ ಸ್ಫುಟತೆಗಾಗಿ ರಚಿತವಾದ ಇವು ಪಂಚಮವೇದವೆಂದು ಪ್ರಸಿದ್ಧವಾಗಿವೆ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ದ್ವಾಪರಯುಗದ ಕೊನೆಯ ಭಾಗದಲ್ಲಿದ್ದ ಮಹರ್ಷಿ ವೇದವ್ಯಾಸರು ವೇದಗಳನ್ನು ನಾಲ್ಕಾಗಿ ವಿಂಗಡಿಸಿದರು ಮತ್ತು ವೇದಾರ್ಥಗಳು ಸುಲಭವಾಗಿ ತಿಳಿಯುವ ಸಲುವಾಗಿ ಪುರಾಣಗಳನ್ನು ರಚಿಸಿದರು ಎಂಬುದು ಹೇಳಿಕೆ.

ಇತಿಹಾಸ ಗ್ರಂಥಗಳಲ್ಲಿ ಮಹಾಭಾರತ ಶ್ರೇಷ್ಠವಾದುದು; ಹಾಗೆಯೇ ಪುರಾಣಗ್ರಂಥಗಳಲ್ಲಿ ಭಾಗವತಕ್ಕೆ ಮಿಗಿಲಾದುದಿಲ್ಲ. ಇತಿಹಾಸ ಮತ್ತು ಪುರಾಣಗಳಿಗೆ ವ್ಯತ್ಯಾಸವಿದೆ. ಇವೆರಡೂ ಕಥಾರೂಪದಲ್ಲೇ ಇದ್ದರೂ ಇತಿಹಾಸ ಹಿಂದೆ ನಡೆದ ಘಟನೆಗಳನ್ನು ದಾಖಲಿಸುವ ದೃಷ್ಟಿಯಿಂದ ರಚಿತವಾಗಿದೆ. ಪುರಾಣಗಳಲ್ಲಿ ಹಿಂದೆ ನಡೆದ ಘಟನೆಗಳಿದ್ದರೂ ಅಲ್ಲಿ ದಾಖಲೆಗಳಿಗಿಂತ ಆ ಕತೆಗಳ ಅಥವಾ ಘಟನೆಗಳ ಹಿಂದಿರುವ ತತ್ತ್ವ, ನೀತಿದರ್ಶನ, ಭಗವಂತನ ಸಂದೇಶ ಇವುಗಳಿಗೆ ಪ್ರಾಧಾನ್ಯ. ತತ್ತ್ವದರ್ಶನ, ನೀತಿ ಸಂಹಿತೆಗಳನ್ನು ಹೊರತಾಗಿಸಿದರೆ ಪುರಾಣಕಥೆಗಳೆಲ್ಲ ಹಲವಾರು ಅದ್ಛುತಗಳಿಂದ ಕೂಡಿದ ಕಾಲ್ಪನಿಕ ಕಥೆಗಳಂತೆಯೇ ಇವೆ.
ಭಾಗವತದಲ್ಲಿ ಪರಮಾತ್ಮನ ವಿವಿಧ ಅವತಾರಗಳ, ದೇಶವನ್ನಾಳಿದ ಸಾರ್ವಭೌಮರ, ರಾಜ ಮಹಾರಾಜರ, ದೇವತೆ ರಾಕ್ಷಸ, ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ಮಾನವ, ವಾನರ, ಪಶುಪಕ್ಷಿಗಳ ಕಥಾನಕಗಳಿದ್ದರೂ ಅಲ್ಲಿ ಭಗವಂತನ ಕಥೆ-ಮುಖ್ಯವಾಗಿ ಶ್ರೀ ಕೃಷ್ಣನಕಥೆ. ಆತನ ಅಲೌಕಿಕ ಮಹಿಮೆಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಭಾಗವತದಲ್ಲಿ ಹನ್ನೆರಡು ಸ್ಕಂಧಗಳು, 342 ಅಧ್ಯಾಯಗಳು ಇವೆ. ಅಧ್ಯಾಯಗಳ ಸಂಖ್ಯೆ ಬೇರೆ ಬೇರೆ ಮೂಲಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಇಡೀ ಭಾಗವತದಲ್ಲಿ ಹದಿನೆಂಟು ಸಾವಿರ ಗ್ರಂಥಗಳಿವೆ. ಒಂದು ಗ್ರಂಥ ಎಂದರೆ ಮೂವತ್ತೆರಡು ಅಕ್ಷರಗಳು. ಹಾಗಾಗಿ ಭಾಗವತದಲ್ಲಿ ಐದು ಲಕ್ಷ ಎಪ್ಪತ್ತಾರು ಸಾವಿರ ಅಕ್ಷರಗಳಿವೆ.

ಮೊದಲನೆಯ ಸ್ಕಂಧದಲ್ಲಿ ವೇದವ್ಯಾಸರಿಗೆ ನಾರದರು ಭಾಗವತವನ್ನು ರಚಿಸುವಂತೆ ಹೇಳಿದ ಸಂದರ್ಭ. ಮಹಾಭಾರತದ ಯುದ್ಧಾನಂತರ ಧರ್ಮರಾಯನ ರಾಜ್ಯಭಾರ, ಪಾಂಡವ ನಿರ್ಗಮನ, ಪರೀಕ್ಷಿತ ಮಹಾರಾಜನ ಕಥೆ, ಆತನಿಗೊದಗಿದ ಮುನಿಶಾಪ, ಶುಕಮುನಿಯ ಆಗಮನ, ಪರೀಕ್ಷಿತನಿಗೆ ಶುಕಮುನಿಯಿಂದ ಭಾಗವತ ಉಪದೇಶ ಇವುಗಳ ವಿವರಣೆ ಇದೆ.

ಎರಡನೆಯ ಸ್ಕಂಧದಲ್ಲಿ ಪ್ರಪಂಚಸೃಷ್ಟಿಯ ಕ್ರಮ, ಭಗವಂತನ ಅವತಾರಗಳ ಸಂಕ್ಷಿಪ್ತ ವರ್ಣನೆ, ಅವತಾರ ಸಂದರ್ಭದಲ್ಲಿ ನಡೆಯುವ ಕಾರ್ಯಗಳು, ಅವತಾರ ಪ್ರಯೋಜನಗಳು, ಪರಮಾತ್ಮ ಸ್ವರೂಪ ವಿವರಣೆ ಮೊದಲಾದವು ಇದೆ.

ಮೂರನೆಯ ಸ್ಕಂಧದಲ್ಲಿ ಪರಮಾತ್ಮನಿಂದ ತತ್ತ್ವಗಳ ಸೃಷ್ಟಿ, ಚತುರ್ಮುಖೋತ್ಪತ್ತಿ, ಕಾಲಸ್ವರೂಪ, ಪ್ರಪಂಚ ಸೃಷ್ಟಿ, ಹಿರಣ್ಯಾಕ್ಷ ಹಿರಣ್ಯಕಶಿಪು ರಾಕ್ಷಸರ ವೃತ್ತಾಂತ, ಕಪಿಲಾವತಾರ, ಪುಣ್ಯಕರ್ಮಗಳನ್ನು ಆಚರಿಸಿದವರಿಗೆ ದೊರೆಯುವ ಸದ್ಗತಿ ಮೊದಲಾದವುಗಳ ಸವಿವರ ವರ್ಣನೆ ಇದೆ.

ನಾಲ್ಕನೆಯ ಸ್ಕಂಧದಲ್ಲಿ ದಕ್ಷನ ಕಥೆ, ಧ್ರುವನ ಕಥೆ, ಪೃಥು ಚಕ್ರವರ್ತಿಯ ಕಥೆಗಳಿವೆ. ಅಲ್ಲದೆ ಪುರಂಜನೋಪಾಖ್ಯಾನ ಎಂಬ ಸ್ವಾರಸ್ಯವಾದ ಕಥೆಯೊಂದಿದೆ. ಶರೀರವನ್ನೇ ಪುರವೆಂದೂ ಅದರೊಳಗಿರುವಾತನನ್ನು ಪುರಣಜನನೆಂದೂ ಹೇಳಿ, ಶರೀರ ಮತ್ತು ಅದರ ಸಮಸ್ತ ಅವಯವಗಳ, ಬುದ್ಧಿ ಮನಸ್ಸುಗಳ ಕ್ರಿಯೆಗಳನ್ನು ಪಟ್ಟಣ, ಅದರ ಜನ, ವ್ಯವಹಾರಗಳಿಗೆ ಹೋಲಿಸಿದ ಕಥೆ ಇದು.

ಐದನೆಯ ಸ್ಕಂಧದಲ್ಲಿ ವೃಷಭಾವತಾರ ಚರಿತ್ರೆ, ಭರತಚರಿತ್ರೆ, ಜಡಭರತ ವೃತ್ತಾಂತ, ಧ್ರುವ ಮಂಡಲ, ಸೂರ್ಯ ಮಂಡಲ, ಗ್ರಹಗಳಗತಿ, ಭೂಮಿಯ ಕೆಳಗಿನ ಲೋಕಗಳ ಸ್ಥಿತಿ, ಆದಿಶೇಷ ಸ್ವರೂಪ ಮೊದಲಾದವುಗಳ ವಿವರಣೆ ಇದೆ.

ಆರನೆಯ ಸ್ಕಂಧದಲ್ಲಿ ಅಜಾಮಿಳನ ಕಥೆ, ವಿಶ್ವರೂಪನ ಕಥೆ, ಇಂದ್ರ ವಜ್ರಾಯುಧವನ್ನು ಪಡೆದ ಕಥೆ, ವೃತ್ರಾಸುರ ವಧೆ, ಚೆತ್ರಕೇತುವಿನ ಕಥೆ ಮೊದಲಾದವುಗಳಿವೆ.

ಏಳನೆಯ ಸ್ಕಂಧದಲ್ಲಿ ನೃಸಿಂಹಾವತಾರದ ಕಥೆ, ಪ್ರಹ್ಲಾದನ ಕಥೆ, ತ್ರಿಪುರ ಸಂಹಾರದ ಕಥೆಗಳಲ್ಲದೆ ಭಕ್ತಿಯೋಗಕ್ಕೆ ಅಂಗಭೂತಗಳಾದ ವರ್ಣಾಶ್ರಮ ಧರ್ಮ ಗೃಹಸ್ಥಧರ್ಮದ ಮಹತ್ತ್ವ, ಮೋಕ್ಷಧರ್ಮ ಮೊದಲಾದವುಗಳ ವಿವರಣೆಯೂ ಇದೆ. 

ಎಂಟನೆಯ ಸ್ಕಂಧದಲ್ಲಿ ನಾಲ್ಕು ಮನ್ವಂತರ ವೃತ್ತಾಂತ, ಗಜೇಂದ್ರ ಮೋಕ್ಷ ಕಥೆ, ಸಮುದ್ರಮಥನಕಥೆ, ಮೋಹಿನಿಯಿಂದ ದೇವತೆಗಳಿಗೆ ಅಮೃತ ವಿತರಣೆ, ದೇವದಾನವ ಯುದ್ಧ, ಬಲಿಯ ಕಥೆ, ವಾಮಾನವಾತಾರ ಮತ್ತು ಮತ್ಸ್ಯಾವತಾರದ ಕಥೆಗಳಿವೆ.

ಒಂಬತ್ತನೆಯ ಸ್ಕಂಧದಲ್ಲಿ ಚ್ಯವನೋಪಾಖ್ಯಾನ, ಅಂಬರೀಷೋಪಾಖ್ಯಾನ, ಗಂಗಾವತರಣ ಕಥೆ, ರಾಮಾವತಾರ ಕಥೆ, ಲವಕುಶರ ಕಥೆ, ಪರಶುರಾಮನ ಕಥೆ, ಯಯಾತಿಯ ಕಥೆಗಳೂ ಪಾಂಚಾಲ, ಕುರುವಂಶ ಮತ್ತು ಯದುವಂಶಗಳ ವೃತ್ತಾಂತಗಳೂ ಇವೆ.

ಹತ್ತನೆಯ ಸ್ಕಂಧ ಪೂರ್ತಿಯಾಗಿ ಶ್ರೀಕೃಷ್ಣ ಕಥೆಗೇ ಮೀಸಲಾಗಿದೆ. ಉಳಿದೆಲ್ಲ ಸ್ಕಂಧಗಳಿಗಿಂತಲೂ ದೀರ್ಘವಾಗಿರುವ ಈ ಸ್ಕಂದದಲ್ಲಿ ಶ್ರೀಕೃಷ್ಣ ಜನನದಿಂದ ತೊಡಗಿ, ಕುರುಕ್ಷೇತ್ರ ಯುದ್ಧಾವಸಾನದವರೆಗಿನ ವೃತ್ತಾಂತಗಳನ್ನು ವಿಸ್ತಾರವಾಗಿ ವರ್ಣಿಸಲಾಗಿದೆ.

ಹನ್ನೊಂದನೆಯ ಸ್ಕಂಧದಲ್ಲಿ ಮನುಷ್ಯನಿಗೆ ಸಂಬಂಧಿಸಿದಂತೆ ಉತ್ತಮ ಶ್ರೇಯಸ್ಸಿನ ಸಾಧನಗಳು, ಭಗವದ್ಭಕ್ತರ ಲಕ್ಷಣಗಳನ್ನು ನಿರೂಪಿಸಿಲಾಗಿದೆ, ಅಲ್ಲದೆ ಆತ್ಮ ಪರಮಾತ್ಮನ ಸ್ವರೂಪ, ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ, ಜ್ಞಾನಯೋಗಗಳು, ಸಾಂಖ್ಯತತ್ತ್ವ, ಭಗವದಾರಾಧನಾಕ್ರಮ, ಐಲಗೀತೆ, ಸೃಷ್ಟಿಲಯ ಕ್ರಮಗಳ ವಿವರಣೆ ಇದ್ದು ಶ್ರೀಕೃಷ್ಣನ ದೇಹತ್ಯಾಗದೊಂದಿಗೆ ಕೊನೆಗೊಳ್ಳುತ್ತದೆ.

ಹನ್ನೆರಡನೆಯ ಹಾಗೂ ಕೊನೆಯ ಸ್ಕಂಧದಲ್ಲಿ ಚಂದ್ರವಂಶದ ಭವಿಷ್ಯದ ರಾಜರು, ಕಲಿಯುಗ ಲಕ್ಷಣಗಳು, ಕಲ್ಕ್ಯವತಾರ, ಪರೀಕ್ಷಿತ ಮಹಾರಾಜನನ್ನು ಸರ್ಪರಾಜ ತಕ್ಷಕ ಕಡಿಯುವುದು, ಮಾರ್ಕಂಡೇಯ ಚರಿತ್ರ ಇವುಗಳಲ್ಲದೆ ಚತುರ್ವೇದ ವಿಭಾಗ ಕ್ರಮಗಳೂ ಭಾಗವತ ಪುರಾಣ ಮಾಹಾತ್ಮ್ಯವೂ ವರ್ಣಿತವಾಗಿದೆ.

ವೇದವ್ಯಾಸ ಮಹರ್ಷಿ ತಾವು ರಚಿಸಿದ ಭಾಗವತಪುರಾಣವನ್ನು ತಮ್ಮ ಪುತ್ರ ಶುಕಮುನಿಗೆ ಮೊದಲು ಉಪದೇಶಿಸುತ್ತಾರೆ. ಶುಕಮುನಿ ಭಾಗವತವನ್ನು ಪರೀಕ್ಷಿತ ಮಹಾರಾಜನಿಗೆ ಉಪದೇಶಿಸಿದ ಸಂದರ್ಭ ಹೀಗಿದೆ: ಮಹಾಭಾರತ ಯುದ್ಧ ಮುಗಿದ ರಾತ್ರಿ ದ್ರೋಣಪುತ್ರನಾದ ಅಶ್ವತ್ಥಾಮ ಪಾಂಡವರ ಶಿಬಿರಕ್ಕೆ ಕಿಚ್ಚಿಡುತ್ತಾನೆ. ಸುಖನಿದ್ರೆಯಲ್ಲಿದ್ದ ಪಾಂಡವಪುತ್ರರೂ ಅಸಂಖ್ಯ ಸೈನಿಕರೂ ಆಹುತಿಯಾಗುತ್ತಾರೆ. ತನ್ನ ಆಪ್ತನಾಗಿದ್ದ ಕೌರವನ ಸಾವಿಗೆ ಕಾರಣರಾದ ಪಾಂಡವರ ಮೇಲಿನ ಮಹಾದ್ವೇಷವೇ ಅಶ್ವತ್ಥಾಮನ ಈ ಅಮಾನುಷ ವರ್ತನೆಗೆ ಕಾರಣ. ವಿಷಯ ಅರಿತ ಪಾಂಡವರು ಅಶ್ವತ್ಥಾಮನ ಬೆನ್ನಟ್ಟುತ್ತಾರೆ. ಅಶ್ವತ್ಥಾಮ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಂದಾಲೋಚನೆ ಮಾಡದೆ ಪಾಂಡವಕುಲನಾಶವನ್ನು ಆರೋಪಿಸಿ ಬಹ್ಮಾಸ್ತ್ರ ಎಸೆಯುತ್ತಾನೆ. ಕೃಷ್ಣನ ಸಹಾಯದಿಂದ ಪಾಂಡವರಿಗೊದಗಿದ ಈ ವಿಪತ್ತು ದೂರವಾಗುತ್ತದೆ. ಆದರೆ ಬ್ರಹ್ಮಾಸ್ತ್ರದ ಪರಿಣಾಮ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದ ಮೇಲಾಗುತ್ತದೆ. ಈ ಕಂಟಕವೂ ಕೃಷ್ಣನ ಕೃಪೆಯಿಂದ ದೂರವಾಗುತ್ತದೆ. ಉತ್ತರೆಯ ಗರ್ಭದಲ್ಲಿ ಹುಟ್ಟಿದ ಈ ಶಿಶುವೇ ಮುಂದೆ ಪಾಂಡವರ ಅನಂತರ ರಾಜ್ಯವಾಳಿದ ಪರೀಕ್ಷಿತ.

ಒಂದು ದಿನ ಬೇಟೆಗೆಂದು ಕಾಡಿಗೆ ತೆರಳಿದ್ದ ಪರೀಕ್ಷಿತ ಮಹಾರಾಜ ನೀರಡಿಕೆಯಿಂದ ಬಳಲಿ ನೀರನ್ನರಸುತ್ತ ಶಮೀಕ ಮುನಿಯ ಆಶ್ರಮ ಸೇರುತ್ತಾನೆ. ಧ್ಯಾನದಲ್ಲಿದ್ದ ಮುನಿಗೆ ಮಹಾರಾಜನ ಆಗಮನದ ಅರಿವಾಗುವುದಿಲ್ಲ. ಮುನಿಯ ಮೌನವನ್ನು ಉಪೇಕ್ಷೆ ಎಂದು ತಿಳಿದ ಪರೀಕ್ಷಿತ ಕೋಪಗೊಳ್ಳುತ್ತಾನೆ. ಅಲ್ಲೇ ಸಮೀಪದಲ್ಲಿ ಸತ್ತುಬಿದ್ದಿದ್ದ ಹಾವೊಂದನ್ನು ತನ್ನ ಬಿಲ್ಲಿನ ತುದಿಯಿಂದ ಮೇಲೆತ್ತಿ ಮುನಿಯ ಕೊರಳಿಗೆ ಹಾರದಂತೆ ತೊಡಿಸಿ ಅಲ್ಲಿಂದ ತೆರಳುತ್ತಾನೆ. ಶಮೀಕ ಪುತ್ರ ಶೃಂಗಿಗೆ ಈ ಘಟನೆ ತಿಳಿಯುತ್ತದೆ. ಆತ ಕೆಂಡವಾಗಿ ಇನ್ನೊಂದು ವಾರದ ಅವಧಿಯಲ್ಲಿ ಪರೀಕ್ಷಿತ ಮಹಾರಾಜ ಸರ್ಪದಂಶನದಿಂದ ಸಾಯಲಿ ಎಂದು ಶಪಿಸುತ್ತಾನೆ. ಶಾಪದ ವಾರ್ತೆ ತಿಳಿದ ಪರೀಕ್ಷಿತ ತನ್ನ ಜೀವನದಲ್ಲಿ ಉಳಿದ ಒಂದು ವಾರದ ಅವಧಿಯನ್ನು ಸಾರ್ಥಕವಾಗಿ ಕಳೆಯಲು ನಿಶ್ಚಯಿಸುತ್ತಾನೆ. ಗಂಗಾತೀರದಲ್ಲಿ ಪ್ರಾಯೋಪವೇಶಕ್ಕೆ ಸಿದ್ಧನಾಗುತ್ತಾನೆ. ಆಗ ಅಲ್ಲಿಗೆ ವೇದವ್ಯಾಸಪುತ್ರನಾದ ಶುಕಮುನಿಯ ಆಗಮನವಾಗುತ್ತದೆ. ಸಾವಿನ ಬಾಯಲ್ಲಿ ನಿಂತಿರುವ ಪರೀಕ್ಷಿತನಿಗೆ ಶುಕಮುನಿ ಜೀವನ ಸಾರ್ಥಕ್ಯದ ಸಲುವಾಗಿ ಭಾಗವತವನ್ನು ಉಪದೇಶಿಸುತ್ತಾರೆ.

ಶುಕಮುನಿ ಪರೀಕ್ಷಿತನಿಗೆ ಭಾಗವತವನ್ನು ಉಪದೇಶಿಸುತ್ತಿದ್ದಾಗ ಆ ಸಭೆಯಲ್ಲಿದ್ದು ಅದನ್ನು ಕೇಳಿದ ಸೂತಪುರಾಣಿಕರು ಮುಂದೆ ಅದನ್ನು ಶೌನಕಮುನಿ ನೈಮಿಶಾರಣ್ಯದಲ್ಲಿ ನಡೆಸಿದ ಯಾಗ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಮುನಿಗಳಿಗೆ ಹೇಳುತ್ತಾರೆ.

ಬದುಕು ಎಂದರೇನು? ನಮಗೂ ಬದುಕಿಗೂ ಸಂಬಂಧವೇನು? ನಾವು ಏಕೆ ಮತ್ತು ಹೇಗೆ ಹುಟ್ಟಿದ್ದೇವೆ? ಏಕೆ ಮತ್ತು ಹೇಗೆ ಸಾಯುತ್ತೇವೆ? ಹುಟ್ಟುಸಾವುಗಳ ಮಧ್ಯದ ಬದುಕಿಗೆ ಯಾರು ನಿಮಿತ್ತ? ಈ ಮಧ್ಯಾಂತರದ ಅವಧಿಯಲ್ಲಿ ಮನುಷ್ಯ ಸ್ವತಂತ್ರನೆ? ಬದುಕು ರೂಪುಗೊಳ್ಳುವುದು ಏತರಿಂದ? ಭಗವಂತ ಯಾರು? ನಮಗೂ ಆತನಿಗೂ ಏನು ಸಂಬಂಧ? ಭಗವದಾರಾಧನೆ ಏಕೆ ಬೇಕು? ಆರಾಧನೆಯ ಕ್ರಮಗಳೇನು? ಫಲವೇನು? ಮೊದಲಾದ ಹಲವು ಪಾರಮಾರ್ಥಿಕ ಜಟಿಲ ವಿಷಯಗಳ ವಿವರಣೆಗೆಲ್ಲ ಸೋದಾಹರಣವಾಗಿ ಭಾಗವತದಲ್ಲಿ ಮೂಡಿ ಬಂದಿವೆ. ಕಥಾಸಂದರ್ಭಗಳಲ್ಲೆಲ್ಲ ತತ್ತ್ವದರ್ಶನ, ನೀತಿಚಿಂತನಗಳು ಹಾಸು ಹೊಕ್ಕಾಗಿ ಜನಜೀವನಕ್ಕೆ ಸುಸಂಬದ್ಧವಾಗಿ ಪ್ರಕಟಗೊಂಡಿವೆ.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

Great Bhagavatha Purana 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ