ಅನನ್ಯಾ ಭಟ್
ಅನನ್ಯಾ ಭಟ್
"ಸೋಜುಗದ ಸೂಜು ಮಲ್ಲಿಗೆ" ಎಂಬ ಗೀತೆಯ ಗಾಯನ ಅಂತರಜಾಲದಲ್ಲಿ ಜನಮನ ಸೆಳೆದ ರೀತಿ ಅನನ್ಯ. ಆ ಗೀತೆಯನ್ನು ಹಾಡಿದ ಗಾಯಕಿಯೂ ಅನನ್ಯಾ! ಅವರೇ ಅನನ್ಯಾ ಭಟ್.
ಇಂದು ಅನನ್ಯಾ ಭಟ್ ಅವರ ಹುಟ್ಟು ಹಬ್ಬ ಎಂದು ಗೆಳೆಯರೊಬ್ಬರು ಸಂದೇಶ ಕಳಿಸಿದ್ದಾರೆ. ಬೆಳಗಾವಿಯ ಅಂಕಲಿಯಲ್ಲಿ ಜನಿಸಿದ ಅನನ್ಯಾ ಮೈಸೂರಿನಲ್ಲಿ ಓದಿ ಬೆಳೆದರು. ತಂದೆ ವಿಶ್ವನಾಥ ಭಟ್. ತಾಯಿ ರೇವತಿ ಪುರಾಣಿಕ್. ಅನನ್ಯಾ ಅವರು ಪ್ರಾಥಮಿಕ ಶಿಕ್ಷಣವನ್ನು ವಿಶ್ವೇಶ್ವರ ನಗರದ ಸೈಂಟ್ ಥಾಮಸ್ ಶಾಲೆಯಲ್ಲಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿಜಯ ವಿಠಲಶಾಲೆಯಲ್ಲಿ ಪೂರೈಸಿ, ಪಿಯು ಮರಿಮಲ್ಲಪ್ಪ ಕಾಲೇಜು, ಬಿಕಾಂ ಪದವಿಯನ್ನು ಮಹಾಜನ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಪ್ರಸ್ತುತ ಅವರು ಬೆಂಗಳೂರು ನಿವಾಸಿ.
ಗಾಯನದಲ್ಲಿ ಆಸಕ್ತಿ ಮೂಡಿಸಿಕೊಂಡ ಅನನ್ಯಾ ಅವರು ಅನನ್ಯಾ ಭಟ್ ಕನ್ಸರ್ಟ್ಸ್ (ABC) ಎಂಬ ಸಂಗೀತ ತಂಡವನ್ನು ಕಟ್ಟಿ ಜನಪದ ಗೀತೆಗಳ ಗಾಯನಕ್ಕೆ ಪ್ರಾಧಾನ್ಯತೆ ನೀಡಿದರು. 'ನಿಂಬಿಯಾ', 'ಎಲ್ಲಿ ಕಾಣೆ', 'ಸೋಜುಗಾದ' ಮುಂತಾದ ಅವರ ಗೀತಗಾಯನಗಳು ಅಪಾರ ಜನಮನಸೆಳೆದವು. ಜನಪದ ಗೀತೆಗಳ ಗಾಯನಕ್ಕೆ ಬ್ಲೂಸ್, ಜಾಸ್ ಮುಂತಾದ ಆಧುನಿಕ ಸ್ಪರ್ಷ ತಂದ ಇವರ ಗಾಯನ ಜನರನ್ನು ಆಕರ್ಷಿಸಿತು.
ಅನನ್ಯಾ ಭಟ್ ಅವರ ಗಾಯನ ಜನಪ್ರಿಯತೆ, ಕನ್ನಡ ಚಿತ್ರರಂಗವನ್ನು ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗವನ್ನೂ ಆಕರ್ಷಿಸಿತು. ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯನ್ನು ಒಳಗೊಂಡಂತೆ ಹಲವು ಭಾಷೆಗಳನ್ನು ಇವರ ಧ್ವನಿ ತಲುಪಿದೆ. "ಸಂಸ್ಕೃತ ಶ್ಲೋಕಗಳ ಸುಶ್ರಾವ್ಯ ಪಠಣ ನನಗೆ ವಿವಿಧ ಭಾಷೆಗಳಿಗೆ ಹೊಂದಿಕೊಳ್ಳಲು ಸಹಕಾರಿಯಾಗಿದೆ, ಆ ಭಾಷೆಗಳನ್ನು ಕಲಿಯಲು ಶ್ರಮವಹಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
ಅನನ್ಯಾ ಭಟ್ 14ನೇ ವಯಸ್ಸಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ, ‘ಒಲವೇ ಜೀವನ ಲೆಕ್ಕಾಚಾರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು ಯಶ್ ಅಭಿನಯದ `ಕೆಜಿಎಫ್' ಸೇರಿದಂತೆ ಅನೇಕ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕೆಜಿಎಫ್ ಚಿತ್ರದ ಗೀತೆಗಾಗಿ ಸೈಮಾ ಅತ್ತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಪಡೆದರು. 2016 ರಲ್ಲಿ ತೆರೆಕಂಡ ‘ರಾಮ ರಾಮ ರೇ’ ಚಿತ್ರದ ‘ನಮ್ಮ ಕಾಯೋ ದೇವನೆ’ ಗೀತೆಗಾಗಿ ೬೪ ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದರು. ತಮಿಳಿನ ‘ಕರುಪ್ಪನ್’ ತೆಲುಗಿನ ‘ಆಟಗದರ ಸಿವ’ ಚಿತ್ರಗಳ ಹಿನ್ನೆಲೆ ಗಾಯನಕ್ಕೆ ಅವಕಾಶ ಬಂತು. ಮುಂದೆ ‘ಟಗರು’ ಚಿತ್ರದ ‘ಮೆಂಟಲ್ ಹೋ ಜಾವೋ’ ಗೀತೆ ಇನ್ನಷ್ಟು ಜನಪ್ರಿಯತೆ ತಂದಿತು. ಒಲವೇ ಜೀವನ ಲೆಕ್ಕಾಚಾರ, ಸಿದ್ದಗಂಗಾ, ಲೂಸಿಯಾ, ರಾಕೆಟ್, ಚತುರ್ಭುಜ, ಭಜುಂಗ, ಜಿಲ್ ಜಿಲ್, ಲೀ, ರಾಮ ರಾಮ ರೇ, ಮಾಫಿಯಾ, ಜೀಜಿಂಬೆ, ಡಾ. ಸುಕನ್ಯಾ, ಮೊಂಬತ್ತಿ, ಮಿಸ್ಟರ್ ಫರ್ಫೆಕ್ಟ್, ದಯವಿಟ್ಟು ಗಮನಿಸಿ, ಕಾಟಕ, ದಳಪತಿ, ಕಾನೂರಾಯಣ, ಟಗರು, ಕಾಂತಾರ ಮುಂತಾದ ಅನೇಕ ಚಿತ್ರಗಳಲ್ಲಿ ಅವರ ಗಾಯನವಿದೆ. ಕೆಲವು ಗೀತೆಗಳಿಗೆ ಸಂಯೋಜನೆಯನ್ನೂ ಮಾಡಿದ್ದಾರೆ.
ಅನನ್ಯಾ ಅವರು ಚೋರ ಚರಣದಾಸ ನಾಟಕದಲ್ಲಿ ಗಾಯಕಿಯಾಗಿ, ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಬೆನಕ ತಂಡದೊಡನೆ ಸೇರಿ ಹಯವದನ, ಗೋಕುಲ ನಿರ್ಗಮನ, ಹರಿಶ್ಚಂದ್ರ ಕಾವ್ಯ, ಜೋಕುಮಾರಸ್ವಾಮಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಊರ್ವಿ, ಭೂತಕಾಲ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ.
On the birthday of our Singer Ananya Bhat
ಕಾಮೆಂಟ್‌ಗಳು