ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ಯಮಂತಕೋಪಾಖ್ಯಾನ


ಶ್ಯಮಂತಕೋಪಾಖ್ಯಾನ

ಒಮ್ಮೆ  ಗಣೇಶ ತನ್ನ ಹುಟ್ಟು ಹಬ್ಬದ ದಿನ ತಾಯಿ ಪಾರ್ವತಿಯು ಬಡಿಸಿದ ಕಜ್ಜಾಯಗಳನ್ನೆಲ್ಲ ತಿಂದು ತನ್ನ ವಾಹನ ಮೂಷಕನ ಮೇಲೇರಿ ಬರುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ಒಂದು ಹಾವು ಬಂತು ಅದನ್ನು ನೋಡಿದೊಡನೆ ಮೂಷಕವು ಹೆದರಿ ಗಣಪನನ್ನು ಬಿಟ್ಟು ಓಡಿ ಹೋಗಿ ಸನಿಹದಲ್ಲಿದ್ದ ಬಿಲವನ್ನು ಸೇರಿಕೊಂಡಿತು. ವಾಹನ ಸವಾರಿ ಮಾಡುತ್ತಿದ್ದ ವಿಶಾಲಕಾಯದ ಗಣಪ ತಕ್ಷಣ ನೆಲಕ್ಕುರುಳಿ ಬಿದ್ದ. ಈ ಸನ್ನಿವೇಶವನ್ನು ಆಕಾಶದಲ್ಲಿರುವ ಚಂದ್ರನು ನೋಡಿ ಗಹಗಹಿಸಿ ನಕ್ಕನು. ಇದರಿಂದ ಕೋಪಗೊಂಡ ಗಣಪತಿಯು ಚಂದ್ರನಿಗೆ  “ಯಾರು ನನ್ನ ಹುಟ್ಟು ಹಬ್ಬದ ದಿನ ನಿನ್ನನ್ನು ನೋಡುವರೋ ಅವರಿಗೆ ಕಳ್ಳತನದ ಅಥವಾ ಅವಮಾನಕರ ಆರೋಪಗಳು ಬರಲಿ” ಎಂದು ಶಾಪವಿತ್ತನು. ಇದರಿಂದ ದುಃಖಿತನಾದ ಚಂದ್ರ ಕ್ಷಮೆ ಬೇಡಲಾಗಿ ಶ್ಯಮಂತಖೋಪಾಖ್ಯಾನದಿಂದ ಅಪವಾದದಿಂದ ಮುಕ್ತರಾಗುವರೆಂದು ಅಭಯ ನೀಡಿದನು. ಹಾಗೇ ಮೂಷಕನ ಭಯಕ್ಕೆ ಕಾರಣವಾದ ಹಾವನ್ನು ತನ್ನ ಟೊಂಕಪಟ್ಟಿಯನ್ನಾಗಿ ಸುತ್ತಿಕೊಂಡು ಮೂಷಕನನ್ನು ಭಯಮುಕ್ತನನ್ನಾಗಿಸಿ ತನ್ನ ಲೋಕಕ್ಕೆ ಹೋದನು.

ಹಿಂದೂ ಪಂಚಾಂಗ ರೀತಿ ಬರುವ ಬಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನವನ್ನು ಶ್ರೀ ಗಣಪತಿಯ ಹುಟ್ಟು ಹಬ್ಬವನ್ನಾಗಿ ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಬ್ಬದ ಸನ್ನಿವೇಶದಲ್ಲಿ ಅಪವಾದವೆಂಬಂತೆ ಚತುರ್ಥಿಯ ದಿನ ಚಂದ್ರ ದರ್ಶನ ಮಾಡಿದರೆ, ಶ್ರೀ ಗಣೇಶನ ಕೋಪಕ್ಕೆ ಗುರಿಯಾಗಿ, ದೋಷಪ್ರಾಪ್ತಿಯಾಗಿ, ಕಳ್ಳತನದ ಅಪವಾದಗಳಿಂದ ಅವಮಾನಕ್ಕೊಳಗಾಗುವ ಸಂದರ್ಭಗಳು ಬಂದೊದಗುತ್ತವೆಂದು ನಂಬಿಕೆ ಇದೆ. ಶ್ಯಮಂತಕ ಮಣಿಯ ಕಥೆ ಓದುವುದು, ಕೇಳುವುದು ಹಾಗೂ ಹೇಳುವುದರಿಂದ ಶ್ರೀಗಣೇಶನ ಕೃಪೆಗೆ ಪಾತ್ರರಾಗಿ ಈ ದೋಷ ಪರಿಹಾರವಾಗುವದೆಂದೂ ಸಹ ತಿಳಿಸಿದೆ.

ದ್ವಾಪರಯುಗದಲ್ಲಿ ಯದುಕುಲದಲ್ಲಿ ಜನಿಸಿದ ಪರಮಾತ್ಮನ ಅವತಾರವಾದ ಶ್ರೀಕೃಷ್ಣನೂ ಕೂಡಾ ಈ ಅಪವಾದದಿಂದ ಹೊರತಾಗಿಲ್ಲ ಎನ್ನುವುದೇ ಈ ಕಥೆಯ ಅಂತರಾರ್ಥ.

ದ್ವಾರಕೆಯ ನಿರ್ಮಾಣ ನಂತರದ ಘಟನೆ. ಯದುಕುಲದಲ್ಲಿ ಸತ್ರಾಜಿತನೆಂಬ ರಾಜರ್ಷಿಯ ತಪಸ್ಸಿಗೆ ಮೆಚ್ಚಿ ಸೂರ್ಯದೇವನು ಶ್ಯಮಂತಕ ಹೆಸರಿನ ಮಣಿರತ್ನವನ್ನು ವರರೂಪದಲ್ಲಿ ದಯಪಾಲಿಸಿದ್ದನು. ಈ ಮಣಿಯು ನಿತ್ಯ ಹೊನ್ನರಾಶಿಯನ್ನು ಕೊಡುತ್ತಿತ್ತು. ಈ ವಿಷಯವು ದ್ವಾರಕೆಯ ನಿವಾಸಿಗಳ ಮೂಲಕ ಶ್ರೀಕೃಷ್ಣನಿಗೆ ತಲುಪಿ, ಸತ್ರಾಜಿತನನ್ನು ಆಸ್ಥಾನಕ್ಕೆ ಕರೆಸಿ ಸಾಮಾನ್ಯ ಪ್ರಜೆಗಳ ಬಳಿ ಅಮೂಲ್ಯರತ್ನವಿದ್ದರೆ ಅವರ ಜೀವಕ್ಕೆ ಅಪಾಯವೆಂದೂ, ಪ್ರಜೆಗಳ ಕಲ್ಯಾಣಕ್ಕಾಗಿ ಮಣಿಯನ್ನು ರಾಜಕೋಶಕ್ಕೊಪ್ಪಿಸುವಂತೆ ವಿನಂತಿಸಿಕೊಂಡನು. ಸತ್ರಾಜಿತನು ಶ್ರೀ ಕೃಷ್ಣನ ಮಾತನ್ನು ತಿರಸ್ಕರಿಸಿ ನನ್ನ ತಪಸ್ಸಿಗೆ ವರದಾನವಾಗಿ ಲಭಿಸಿದ್ದನ್ನು ನಾನು ಕೊಡಲಾರೆನೆಂದನು. ಶ್ರೀ ಕೃಷ್ಣನು ಮರುಮಾತನಾಡದೇ ಕಳಿಸಿಕೊಟ್ಟನು. ಇವರೀರ್ವರಲ್ಲಿ ನಡೆದ ಸಂವಾದ ದ್ವಾರಕೆಯಲ್ಲೆಲ್ಲ ತಿಳಿದಿತ್ತು. ಈ ಘಟನೆಯ ನಂತರ ಯಾರಾದರೂ ಅಪಹರಿಸಬಹುದೆಂದು ಸತ್ರಾಜಿತನು ಚಿಂತಿತನಾದನು. ಅದೇ ಸಮಯದಲ್ಲಿ ವೀರನೂ, ಶೂರನೂ ಆದ ಆತನ ಸಹೋದರ ಪ್ರಸೇನನು ಮಣಿಯನ್ನು ಕಂಠದಲ್ಲಿ ಧಾರಣ ಮಾಡಿಕೊಂಡು ಅದನ್ನು ಸಂರಕ್ಷಿಸುತ್ತೇನೆ ಎಂದು ಅಣ್ಣನಿಗೆ ಅಭಯ ನೀಡಿ ಕಂಠದಲ್ಲಿ ಧರಿಸಿ ಓಡಾಡಿಕೊಂಡಿದ್ದನು. ಸ್ವಲ್ಪ ದಿನದ ಬಳಿಕ ಗಣೇಶ ಚತುರ್ಥಿಯ ದಿನವೇ ಶ್ರೀಕೃಷ್ಣನಿಗೆ ನೀರಿನಲ್ಲಿ ಚಂದ್ರನ ಪ್ರತಿಬಿಂಬದ ದರ್ಶನವಾಯಿತು. ಸರ್ವಾಂತರ್ಯಾಮಿಯಾದ ಭಗವಂತನಿಗೆ ತಿಳಿಯದ್ದೇನಿದೆ. ಚೌತಿ ಚಂದ್ರ ದರ್ಶನದ ದೋಷದ ಬಗ್ಗೆ ಮನಸ್ಸಿನಲ್ಲಿ ಅಳುಕಿತ್ತು.

ಕೆಲ ಕಾಲದ ನಂತರ ಎಂದಿನಂತೆ ಪ್ರಸೇನನು ಬೇಟೆಗಾಗಿ ಕಾಡಿಗೆ ತೆರಳಿದಾಗ ಈತನ ಕಂಠದಲ್ಲಿರುವ ಮಣಿರತ್ನ ಕಣ್ಣಕುಕ್ಕಿದಂತಾಗಿ ಒಂದು ಸಿಂಹವು ಇವನನ್ನು ಕೊಂದು ಮಣಿಯನ್ನು ತಾನು ಕಂಠದಲ್ಲಿ ಧರಿಸಿತು. ಈ ಸಿಂಹದ ಕೊರಳಲ್ಲಿರುವ ಮಣಿಯನ್ನು ಜಾಂಬವಂತನು (ತ್ರೇತಾಯುಗದ ರಾಮವತಾರದಲ್ಲಿ ಬರುವ ಜಾಂಬವಂತ) ಸಿಂಹದೊಡನೆ ಕಾದಾಡಿ ಕೊಂದು ಮಣಿಯನ್ನು ತನ್ನದಾಗಿಸಿಕೊಂಡು, ತನ್ನ ಮಗಳಿಗೆ ಉಡುಗೊರೆಯ ರೂಪದಲ್ಲಿ ನೀಡಿದನು. ಅದು ಅವಳ ಕಂಠವನ್ನಲಂಕರಿಸಿತು. ಈ ಎಲ್ಲಾ ವಿದ್ಯಮಾನಗಳು ದ್ವಾರಕಾವಾಸಿಗಳಿಗೆ ತಿಳಿದಿರಲಿಲ್ಲ. ಬೇಟೆಗೆ ಹೋದ ಪ್ರಸೇನನು ಮರಳದಿದ್ದದನ್ನು ನೋಡಿ ಶ್ರೀ ಕೃಷ್ಣನ ಮೇಲೆ ಸಂಶಯ ವ್ಯಕ್ತಪಡಿಸಿ ಶ್ಯಮಂತಕ ಮಣಿಗಾಗಿ ಹತ್ಯಗೈದಿರಬಹುದೆಂದು ಜನ ಆಡಿಕೊಳ್ಳಹತ್ತಿದರು. ಈ ವಿಷಯವನ್ನು ಗುಪ್ತಚರರ ಮೂಲಕ ತಿಳಿದ ಶ್ರೀಕೃಷ್ಣ ಪ್ರಸೇನನನ್ನು ಹುಡುಕುವದಕ್ಕಾಗಿ ಆತ ಹೋದ ಮಾರ್ಗವನ್ನನುಸರಿಸಿ ಆಪ್ತ ಸೈನಿಕರೊಂದಿಗೆ ಕಾಡಿಗೆ ತೆರಳಿದನು.  ಅನತಿ ದೂರದಲ್ಲಿ ಜೀರ್ಣಾವಸ್ತೆಯಲ್ಲಿದ್ದ ಶವವನ್ನು ಪ್ರಸೇನನದೆಂದು ಗುರುತಿಸಿದರು. ಆದರೆ ಕಂಠದಲ್ಲಿ ಮಣಿ ಇಲ್ಲದ್ದನ್ನು ಕಂಡರು, ಶವದ ಮೇಲೆ ಸಿಂಹದ ಉಗುರಿನಿಂದಾದ ಗಾಯವನ್ನು ಗುರ್ತಿಸಿದರು. ಕಾದಾಡುವಾಗ ಮಣಿಯು ಎಲ್ಲಿಯಾದರೂ ಬಿದ್ದಿರಬಹುದೆಂದು ಸುತ್ತಲೆಲ್ಲ ಸೈನಿಕರೊಂದಿಗೆ ಹುಡುಕಾಡಿದಾಗ, ಸಿಂಹದ ಶವವೂ ಸಿಕ್ಕಿತು ಅದರ ದೇಹದಲ್ಲಿಯೂ ಕೂಡಾ  ಮಣಿ ಸಿಗಲಿಲ್ಲ. ಸಿಂಹದ ದೇಹದಲ್ಲಾದ ಕರಡಿಯ ಗುರುತನ್ನು ಗ್ರಹಿಸಿ ಕರಡಿಯೇ ಮಣಿಯನ್ನು ಅಪಹರಿಸಿರಬಹುದೆಂದು ಉಹಿಸಿದರು ಮತ್ತು ಕರಡಿಯ ಪಾದದ ಹೆಜ್ಜೆಯ ಗುರುತನ್ನನುಸರಿಸಿ ಹುಡುಕುತ್ತಾ ಸಾಗಿದರು. ಆ ಪಾದದ ಗುರುತುಗಳು ಗುಹೆಯ ಒಳತನಕ ಇದ್ದುದನ್ನು ಗಮನಿಸಿದರು.

ಶ್ರೀಕೃಷ್ಣನು ತನ್ನ ಸಹಚರರನ್ನೆಲ್ಲಾ ಗುಹೆಯ ದ್ವಾರದ ಬಳಿ ನಿಲ್ಲಿಸಿ, ತಾನೊಬ್ಬನೇ ಗುಹೆಯೊಳಗೆ ಕರಡಿಯನ್ನು ಹುಡುಕುತ್ತಾ ನಡೆದನು. ಸ್ವಲ್ಪ ದೂರ ಕ್ರಮಿಸಿದ ನಂತರ ಒಂದು ಕನ್ಯೆಯ ಕೊರಳಲ್ಲಿ ಶ್ಯಮಂತಕ ಮಣಿಯು ರಾರಾಜಿಸುತ್ತಿರುವದನ್ನು ಕಂಡನು. ಅವಳು ಜಾಂಬವಂತನ ಮಗಳು ಜಾಂಬವತಿಯಾಗಿದ್ದಳು. ಅವಳ ಬಳಿ ಬಂದು ಮಣಿರತ್ನವನ್ನು ತನಗೊಪ್ಪಿಸುವಂತೆ ಬೇಡಿಕೊಂಡನು. ಆ ಕನ್ಯೆಯು ಕೂಡಲೇ ತಂದೆಯನ್ನು ಕೂಗಿದಳು. ಯಾವುದೋ ನರಮಾನವನನ್ನು ಗುಹೆಯಲ್ಲಿ ಕಂಡ ಜಾಂಬವಂತನು ಕುಪಿತನಾಗಿ ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ಪ್ರತಿಯಾಗಿ ಕೃಷ್ಣನೂ ಸಹ ಯುದ್ಧ ಮಾಡಹತ್ತಿದನು. ಇಬ್ಬರಲ್ಲಿಯೂ ಘನಘೋರ ಯುದ್ಧವು ಬಹು ದಿನಗಳ ಕಾಲ ನಡೆಯಿತು. ಒಬ್ಬರೂ ಸೋಲುವ ಲಕ್ಷಣಗಳಿರಲಿಲ್ಲ ಆದರೂ ಜಾಂಬವಂತನ ಶೌರ್ಯ ಮತ್ತು ಉತ್ಸಾಹದಿಂದ ಆತನೇ ಗೆಲ್ಲುವನೆಂದು ಭಾಸವಾಗುತ್ತಿತ್ತು. ಇದು ಭಕ್ತನ ಮತ್ತು ಭಗವಂತನ ನಡುವಿನ ಯುದ್ಧ. ಜಾಂಬವಂತನು ರಾಮಭಕ್ತ, ಶ್ರೀಕೃಷ್ಣನೂ ರಾಮನೇ, ಎಂದು ಜಾಂಬವಂತನಿಗೆ ತಿಳಿಯದಿದ್ದುದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಇದನ್ನರಿತ ಶ್ರೀಕೃಷ್ಣನು ಜಾಂಬವಂತನಿಗೆ ರಾಮನ ರೂಪದಲ್ಲಿ ಕಾಣಿಸಿಕೊಂಡನು. ಆಗ ಜಾಂಬವಂತನು ಯುದ್ಧವನ್ನು ನಿಲ್ಲಿಸಿ ಕೃಷ್ಣನಲ್ಲಿ ಕ್ಷಮೆಯಾಚಿಸಿ ಶ್ಯಮಂತಕ ಮಣಿಯನ್ನು ಕೊಟ್ಟು, ತನ್ನ ಮಗಳನ್ನೂ ಧಾರೆಯೆರೆದು ಕೊಟ್ಟನು. ಜಾಂಬವಂತನು ಆರಾಧ್ಯ ದೈವನಲ್ಲಿ ಪ್ರಾರ್ಥಿಸಿ ದೀರ್ಘಾಯಸ್ಸಿನಿಂದ ಮುಕ್ತಿಯನ್ನು ಬಯಸಿ, ಮೋಕ್ಷವನ್ನು ಪಡೆದನು. ತದನಂತರ ಶ್ಯಮಂತಕ ಮಣಿ, ಪತ್ನಿ ಜಾಂಬವತಿ ಮತ್ತು ಸಹಚರರಿಂದೊಡಗೂಡಿ ದ್ವಾರಕೆಗೆ ಹಿಂತಿರುಗಿ ನಡೆದ ವೃತ್ತಾಂತವನ್ನೆಲ್ಲಾ ಪ್ರಜೆಗಳಿಗೆ ತಿಳಿಸಿದನು. ತನ್ನ ಮೇಲೆ ಬಂದ ಕಳ್ಳತನದ ಆರೋಪದಿಂದ ಮುಕ್ತನಾದನು. ನಂತರ ಸಂದರ್ಭದಲ್ಲಿ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ಶ್ರೀಕೃಷ್ಣನು ವರಿಸಬೇಕಾಗಿ ಬಂತು. 

ಈ ಯುದ್ಧದಲ್ಲಾಗಿದ್ದು ಭಕ್ತಿಗೆ ಜಯ, ಸರ್ವಶಕ್ತನಾದ ಭಗವಂತನಿಗಲ್ಲ. ಇದಕ್ಕಾಗಿಯೇ ಪುರಂದರ ದಾಸರು “ನಿನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ ….” ಎಂದಿದ್ದು.

ನಿರೂಪಣೆ: ಕೃಷ್ಣ ಪದಕಿ  

ಕೃಪೆ: www.sahityanidhi.com

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ