ಕೆ. ಸೌಭಾಗ್ಯವತಿ
ಕೆ. ಸೌಭಾಗ್ಯವತಿ
ಡಾ. ಕೆ. ಸೌಭಾಗ್ಯವತಿ ಅವರು ಪ್ರಾಧ್ಯಾಪಕರಾಗಿ, ಬರಹಗಾರ್ತಿಯಾಗಿ ಮತ್ತು ಹಲವು ರೀತಿಯಲ್ಲಿ ಕ್ರಿಯಾಶೀಲರಾಗಿ ಹೆಸರಾಗಿದ್ದಾರೆ.
ಸೌಭಾಗ್ಯವತಿ ಅವರ ಜನ್ಮದಿನ ಸೆಪ್ಟೆಂಬರ್ 25. ಅವರು ಮೈಸೂರು ಜಿಲ್ಲೆಯ ಹೆಗ್ಗಡ ದೇವನ ಕೋಟೆ ತಾಲ್ಲೋಕಿನ ಚಕ್ಕೂರು ಗ್ರಾಮದವರು. ತಂದೆ ಕೆ.ಕೃಷ್ಣಯ್ಯ. ತಾಯಿ ಈರಮ್ಮ. ಸೌಭಾಗ್ಯವತಿ ಮೈಸೂರು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪಿಯುಸಿ, ಮತ್ತು ಬಿ.ಎ ಪದವಿಗೆ ಓದಿದ ನಂತರ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಎಂ.ಎ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದರು. ನಂತರ ನಾಲ್ಕು ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿನಿಯಾಗಿ "ಮೈಸೂರು ನಗರದ ಜಾನಪದ ಆಭರಣಗಳ ಅಧ್ಯಯನ" ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಪಿಎಚ್.ಡಿ ಗಳಿಸಿದರು.
ಸೌಭಾಗ್ಯವತಿ ಅವರು ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ, ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಹಾಗೂ ಮೈಸೂರು ಮಹಾರಾಣಿ ಕಾಲೇಜಿನ ಕನ್ನಡ ವಿಭಾಗಗಳಲ್ಲಿ ಸಹ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೌಭಾಗ್ಯವತಿ ಅವರು ವಿವಿಧ ನಿಯತಕಾಲಿಕೆ, ಅಭಿನಂಧನ ಗ್ರಂಥಗಳಲ್ಲಿ 300ಕ್ಕೂ ಹೆಚ್ಚು ಲೇಖನಗಳನ್ನು ಮೂಡಿಸಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಅವರ ಅಂಕಣ ಬರಹಗಳು ಮೂಡಿವೆ. ಕನ್ನಡ ವಿಕಿಪೀಡಿಯಾದಲ್ಲಿ ಹಲವು ನೂರು ವಿಷಯಗಳನ್ನು ಮೂಡಿಸಿದ್ದಾರೆ. ಸುಮಾರು ನೂರು ಬಾರಿ ವಿವಿಧ ವಿಷಯಗಳ ಮೇಲೆ, ವಿವಿಧ ಕ್ಷೇತ್ರಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ನೂರಾರು ವಿವಿಧ ಬಗೆಯ ಕಾರ್ಯಗಾರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಉಪನ್ಯಾಸ ನೀಡಿದ್ದಾರೆ. ಶಿಕ್ಷಣ ವಲಯದಲ್ಲಿನ ಹಲವು ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು, ದಲಿತ ಸಂಘರ್ಷ ಸಮಿತಿ ಮುಂತಾದವುಗಳಲ್ಲಿ ಸಕ್ರಿಯರಾಗಿದ್ದಾರೆ.
ಸೌಭಾಗ್ಯವತಿ ಅವರ ಪ್ರಕಟಿತ ಕೃತಿಗಳಲ್ಲಿ ಅಗಮ್ಯ, ಜೀವಧಾರೆ, ಜನಪದ ಆಭರಣಗಳು, ಆಯ್ದಕ್ಕಿ ಲಕ್ಕಮ್ಮ ಮತ್ತು ಮುಕ್ತಾಯಕ್ಕ, ಸಾಂಪ್ರದಾಯಿಕ ಅಡುಗೆಗಳು ತುಂಬಿ ಹರಿದಾಳು ಗಂಗಿ ಮುಂತಾದವು ಸೇರಿವೆ.
ಡಾ. ಕೆ. ಸೌಭಾಗ್ಯವತಿ ಅವರಿಗೆ ಮಿಥಿಕ್ ಸೊಸೈಟಿ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಯುವ ಸಾಹಿತ್ಯ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
Happy birthday Dr. K. Sowbhagyavathi 🌷🌷🌷
ಕಾಮೆಂಟ್‌ಗಳು