ಗುಬ್ಬಚ್ಚಿ ಸತೀಶ್
ಗುಬ್ಬಚ್ಚಿ ಸತೀಶ್
ಗುಬ್ಬಚ್ಚಿ ಸತೀಶ್ ಅಪಾರ ಸಾಹಿತ್ಯ ಪ್ರೇಮಿಗಳು, ಪ್ರಕಾಶಕರು ಮತ್ತು ಬರಹಗಾರರು.
ಸತೀಶ್ 1977ರ ಸೆಪ್ಟ್ಟೆಂಬರ್ 25ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ಪ್ರೌಢಶಾಲೆಯವರೆಗೆ ಗುಬ್ಬಿಯಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ತುಮಕೂರಿನ ಶ್ರೀ ಸಿದ್ಧಗಂಗಾ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ ಫಾರ್ ಬಾಯ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಂಪ್ಯೂಟರ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಗುಬ್ಬಚ್ಚಿ ಸತೀಶ್ ಅವರು ಹದಿನೈದು ವರ್ಷಗಳ ಕಾಲ ತುಮಕೂರು ವೀರಶೈವ ಸಹಕಾರ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ತಮ್ಮಿಷ್ಟದ ಪ್ರವೃತ್ತಿ ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.
ಗುಬ್ಬಚ್ಚಿ ಸತೀಶ್ ತಮ್ಮ ಜೀವನ ಪ್ರೀತಿಯಿಂದಲೇ ಹೆಸರುವಾಸಿಯಾಗಿದ್ದು ಬಹುರೀತಿಯ ಬರಹ ಮಾಡುತ್ತ ಬಂದಿದ್ದಾರೆ. “ಮಳೆಯಾಗು ನೀ...” ಇವರ ಕವನ ಸಂಕಲನ. “ಮುಗುಳ್ನಗೆ” ಕಾದಂಬರಿ. "ಸ್ನೇಹ ಮಾಡಬೇಕಿಂಥವಳ...” (2012) ಲೇಖನಗಳ ಸಂಗ್ರಹ. ಹನ್ನೊಂದು ಕತೆಗಳ ‘ಉಘೇ ಉಘೇ’ ಇವರ ಮೊದಲ ಕಥಾಸಂಕಲನ ಬೇಂದ್ರೆ ಸಾಹಿತ್ಯ ಪುರಸ್ಕಾರ ಪಡೆದ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಶಿವು ಕೆ. ಅವರ ‘ವೆಂಡರ್ ಕಣ್ಣು’ ಎಂಬ ದಿನಪತ್ರಿಕೆ ಹಂಚುವವರ ಕುರಿತ ಲಲಿತ ಪ್ರಬಂಧಗಳ ಸಂಕಲನದ ಇಂಗ್ಲೀಷ್ ಅನುವಾದ "Boys of the Dawn" ಪ್ರಕಟಗೊಂಡಿವೆ. ತುಮಕೂರು ವಾರ್ತೆ ಪತ್ರಿಕೆಯಲ್ಲಿ ಅಂಕಣರೂಪದಲ್ಲಿ ಪ್ರಕಟವಾದ ಪುಸ್ತಕ ಸಂಸ್ಕೃತಿ ಮತ್ತು ಪುಸ್ತಕಗಳನ್ನು ಕುರಿತ ಲೇಖನಗಳ ಸಂಗ್ರಹ “ರೆಕ್ಕೆ ಪುಕ್ಕ ಬುಕ್ಕ” ಮತ್ತು ಸ್ನೇಹ ಕುರಿತು ಸಂಪಾದಿಸಿರುವ “ಮರೆಯಲಾಗದ ಸ್ನೇಹ” ಇವರ ಕೃತಿಗಳಲ್ಲಿ ಸೇರಿವೆ.
ಬರವಣಿಗೆಯ ಹಲವು ಶಿಬಿರಗಳು ಮತ್ತು ಕಮ್ಮಟಗಳಲ್ಲಿ ಭಾಗವಹಿಸಿರುವ ಗುಬ್ಬಚ್ಚಿ ಸತೀಶ್ ಅವರು ತುಮಕೂರಿನ ಕಣ್ಮುಚ್ಚಾಲೆ ಮಕ್ಕಳ ಗುಂಪಿನ 2011ನೇ ಸಾಲಿನ ರಾಜ್ಯಮಟ್ಟದ ಗಾಳಿಪಟ ಲೇಖನ ಸ್ಪರ್ಧಾ ವಿಜೇತರು. ತುಮಕೂರು ಜಿಲ್ಲಾ ಲೇಖಕಿಯರ ಸಂಘದವತಿಯಿಂದ ನಡೆದ 2011ನೇ ಸಾಲಿನ ಕಥಾಸ್ಪರ್ಧೆಯಲ್ಲಿ, 2013ರ ಅನನ್ಯ ಪ್ರಕಾಶನದ ಕಥಾಸ್ಪರ್ಧೆಯಲ್ಲಿ ಬಹುಮಾನ ಮತ್ತು 2015ರ ಡಾ|| ಹೇಮಲತಾ ಶಶಿಧರ್ ನೆನಪಿನ ಕಥಾಸ್ಪರ್ಧೆಯಲ್ಲಿ ಇವರಿಗೆ ಬಹುಮಾನ ಸಂದಿದೆ. 2014ರ ಅನನ್ಯ ಪ್ರಕಾಶನದ ‘ಗಾಂಧಿ ಜಯಂತಿ’ ಲೇಖನ ಸ್ಪರ್ಧೆಯಲ್ಲಿ, 2015ರ ಸುಧಾ ಯುಗಾದಿ ವಿಶೇಷಾಂಕದ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ (ದೋಭಿಘಾಟಿನ ಗೆಳೆಯರು) ಬಹುಮಾನ ಪಡೆದಿದ್ದಾರೆ. ಇವರ ಕವಿತೆಗಳು ಕೂಡ ಹಲವು ಬಹುಮಾನಗಳಿಗೆ ಭಾಜನವಾಗಿವೆ.
ಗುಬ್ಬಚ್ಚಿ ಸತೀಶ್ ಅವರು ತಮ್ಮ ಪತ್ನಿ ಚಂಪಾ ಸತೀಶ್ ಅವರ ಜೊತೆ ಮಗಳ ಹೆಸರಿನ ‘ಗೋಮಿನಿ ಪ್ರಕಾಶನ’ ದ ಮೂಲಕ ಪುಸ್ತಕ ಪ್ರಕಟಣೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಪುಸ್ತಕಗಳನ್ನು ಮಾತ್ರವಲ್ಲದೆ ಅನೇಕ ಗಣ್ಯ ಬರಹಗಾರರ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನೇಕ ಉದಯೋನ್ಮಖ ಬರಹಾರರ ಕೃತಿ ಪ್ರಕಟಿಸಿ ಪ್ರೋತ್ಸಾಹಿಸುತ್ತ ಮುನ್ನಡೆದಿದ್ದಾರೆ. ತಮ್ಮದೇ ಹೆಸರಿನ ಯೂ ಟ್ಯೂಬ್ ವಾಹಿನಿಯ ಮೂಲಕ ಅನೇಕ ಸಾಹಿತ್ಯಮುಖಿ ಕಾರ್ಯಕ್ರಮ ಪ್ರಸ್ತುತ ಪಡಿಸಿದ್ದಾರೆ. ಬ್ಲಾಗಿಗರಾಗಿ ಅನೇಕ ಚಿಂತನ ಮಂಥನ ನಡೆಸುತ್ತಿದ್ದಾರೆ. ಬರವಣಿಗೆಯ ಕೌಶಲ, ಪುಸ್ತಕ ಪ್ರೀತಿ ಮತ್ತು ಜೀವನ ಪ್ರೀತಿಯ ಉಪನ್ಯಾಸಗಳನ್ನೂ ಮಾಡುತ್ತ ಬಂದಿದ್ದಾರೆ.
ಸಾಧಕರಾದ ಗುಬ್ಬಚ್ಚಿ ಸತೀಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Gubbachchi Satish

ಕಾಮೆಂಟ್‌ಗಳು