ಛಾಯಾ ಭಗವತಿ
ಛಾಯಾ ಭಗವತಿ
ಛಾಯಾ ಭಗವತಿ ಬಹುಮುಖಿ ಪ್ರತಿಭೆ. ಶಿಸ್ತು, ಸಂಯಮ, ಶ್ರದ್ಧೆ, ಪರಿಶ್ರಮ, ಪ್ರತಿಭೆಗಳ ಸಂಗಮ. ಅಕ್ಟೋಬರ್ 7 ಛಾಯಾ ಭಗವತಿ ಅವರ ಜನ್ಮದಿನ.
ಛಾಯಾ ಭಗವತಿ ಎಂಬುದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಯ ದಂಡೆ ಮೇಲೆ ಉಪಸ್ಥಿತೆಯಾಗಿರುವ ದೇವತೆಯ ಹೆಸರು. ಆ ಊರಿನವರೇ ಆದ ಛಾಯಾ ಭಗವತಿ ಅವರಿಗೆ ಅವರ ತಂದೆ-ತಾಯಿ, ತಮ್ಮ ದೇವತೆಯ ಹೆಸರನ್ನೇ ಇರಿಸಿದ್ದಾರೆ. ಛಾಯಾ ಭಗವತಿ ಕಷ್ಟಪಟ್ಟು ಓದಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದವರು.
ವೃತ್ತಿ ಜೀವನದಲ್ಲಿ ಶಿಕ್ಷಕಿಯಾಗಿ, ಐಟಿ ಕ್ಷೇತ್ರದಲ್ಲಿ ತಾಂತ್ರಿಕ ವಿಷಯ ದಾಖಲೆಗಾರ್ತಿಯಾಗಿ ಸೇವೆ ಸಲ್ಲಿಸಿದ ಛಾಯಾ ಮುಂದೆ ತಮ್ಮ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳತ್ತ ಒಲವು ಹರಿಸುತ್ತಾ ಬಂದಿದ್ದಾರೆ.
ಛಾಯಾ ಭಗವತಿ ಅವರ ವಿವಿಧ ರೀತಿಯ ಬರಹಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ. ವಿವಿಧ ಸಂಕಲನಗಳಲ್ಲಿ ಸೇರ್ಪಡೆಯಾಗಿವೆ.
ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಜನಪ್ರಿಯ ಕಾರ್ಯಕ್ರಮ ನಿರೂಪಣೆಗಳಿಗೆ ಹೆಸರು ಮಾಡಿದ್ದ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್ ಸಂಸ್ಥೆಯಲ್ಲಿ ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಪಡೆದ ಛಾಯಾ ಹಲವು ರಂಗಪ್ರಯೋಗಗಳಲ್ಲಿ ರಾಜ್ಯಾದ್ಯಂತ ಪಾಲ್ಗೊಂಡರು. ಅವರ ವೈವಿಧ್ಯಪೂರ್ಣ ಆಸಕ್ತಿಗಳಲ್ಲಿ ನಟನೆ, ಛಾಯಾಗ್ರಹಣ, ಪ್ರವಾಸ, ಸಂಗೀತ, ಅನುವಾದ, ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಣೆ ಮುಂತಾದ ಬಹುಮುಖಿ ಕ್ಷೇತ್ರಗಳಿವೆ.
ಬರಹಗಾರ್ತಿಯಾಗಿ ಛಾಯಾ ಭಗವತಿ ವೈಕಂ, ರಸ್ಕಿನ್ ಬಾಂಡ್, ಥಾಮಸ್ ಹಾರ್ಡಿ ಮುಂತಾದವರ ಕತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. 'ಪುಟಾಣಿ ಕೆಂಪು ಶೂ’ ಹಾಗೂ ’ಚಂದ್ರನಿಗೆ ಟ್ಯಾಟೂ’ ಮುಂತಾದ ಕವನ ಸಂಕಲನ, ’ಹಿಮಗಿರಿಯಾನ’ ಎಂಬ ಪ್ರವಾಸ ಕಥನ, 'ನೀನಿಲ್ಲದೆ ನನಗೇನಿದೆ’ ಪ್ರಬಂಧ ಸಂಗ್ರಹ ಮುಂತಾದವು ಛಾಯಾ ಅವರ ಇತರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ಇದಲ್ಲದೆ ಅವರ ಬರಹಗಳು ಅನೇಕ ವಿಶೇಷ ಸಂಕಲನಗಳಲ್ಲಿ ಮೂಡಿವೆ.
ಛಾಯಾ ಭಗವತಿ ಅವರ ಕವಿತೆ ಮತ್ತು ಕಥೆಗಳು ರಾಜ್ಯಮಟ್ಟದ ಅನೇಕ ಬಹುಮಾನ ಗಳಿಸಿವೆ.
ಸದಾ ಕ್ರಿಯಾಶೀಲರಾದ ಛಾಯಾ ಭಗವತಿ ಅವರು ಹಲವು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಸಕ್ರಿಯ ಒಡನಾಟ ಹೊಂದಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿ ಸೇವೆ ಸಲ್ಲಿಸಿದವರು.
ಆತ್ಮೀಯರಾದ ಛಾಯಾ ಭಗವತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday Chaya Bhagavathi
ತಿರುಶ್ರೀಧರ್ ಸರ್, ನಿಮ್ಮ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು 😊🙏
ಪ್ರತ್ಯುತ್ತರಅಳಿಸಿಜನ್ಮದಿನದ ಶುಭಾಶಯಗಳು ಛಾಯಾ ಭಗವತಿ ಅಕ್ಕ ..
ಪ್ರತ್ಯುತ್ತರಅಳಿಸಿಹುಟ್ಟು ಹಬ್ಬದ ಶುಭಾಶಯಗಳು ಛಾಯಾ.
ಪ್ರತ್ಯುತ್ತರಅಳಿಸಿ